ಕೋಲಾರ

ಕಳ್ಳನ ಬಂಧನ

Published On :

ಕೋಲಾರ: ನಗರದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಬೆಲೆ ಬಾಳುವ ಎಲೆಕ್ಟ್ರಾನಿಕ್ ಪರಿಕರಗಳನ್ನು ಕಳವು ಮಾಡಿದ್ದ ಚೋರನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯ ಜಿ.ವಿ. ಸೂರ್ಯಪ್ರಕಾಶ್(20) ಬಂಧಿತ ಆರೋಪಿಯಾಗಿದ್ದು ಶ್ರೀನಿವಾಸಪುರ ರಾಮಕೃಷ್ಣ ಪಾಲಿಟೆಕ್ನಿಕ್ ಕಾಲೇಜಿನ 2ನೇ ವರ್ಷದ ಸಿವಿಲ್ ಕೋರ್ಸ್ ಡಿಪ್ಲಮೋ ವಿದ್ಯಾರ್ಥಿಯಾಗಿದ್ದಾನೆ.ಆರೋಪಿ ಜು.13ರ ರಾತ್ರಿ ನಗರದ ಬಂಗಾರಪೇಟೆ ವೃತ್ತದ ಸಮೀಪದ ವಂದನ ಡಯಾಗ್ನಸ್ಟಿಕ್ ಕ್ಯಾನ್ಸರ್‌ಂಟರ್‌ಗೆ ನುಗ್ಗಿ 40ಸಾವಿರ ಬೆಲೆ ಬಾಳುವ ಲ್ಯಾಪ್‌ಟಾಪ್, ಎಲ್‌ಸಿಡಿ ಮಾನಿಟರ್, ಕೀ ಬೋಡ್, 2 ಕ್ಯಾಮೆರಾ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದ. ಪೊಲೀಸರು ಯುವಕನ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಿದ್ದಾರೆ.



ಎಸಿ ಶಾಂತಲಾ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಚಿಕ್ಕಬಳ್ಳಾಪುರ: ಒಂದೂವರೆ ವರ್ಷ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಬೆಂಗಳೂರಿನ ಹಿಂದುಳಿದ ವರ್ಗಗಳ ಇಲಾಖೆಗೆ ವರ್ಗಾವಣೆಗೊಂಡಿರುವ ಕೆ.ಟಿ. ಶಾಂತಲರವರನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿ ಸನ್ಮಾನಿಸಿ ಬೀಳ್ಕೊಟ್ಟಿತ್ತು. ಜನರ ಪರವಾಗಿ ದಿಟ್ಟ ನಿರ್ಧಾರಗಳನ್ನು ಕೈಗೊಂಡ ಉಪ ವಿಭಾಗಾಧಿಕಾರಿಗಳು ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಇವರ ಸೇವೆ ಇಲ್ಲಿ ಇನ್ನೂ ಅಗತ್ಯವಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಬಡ್ತಿ ಸಿಕ್ಕಿ ಒಳ್ಳೆಯ ಹೆಸರು ಬರಲಿ ಎಂದು ಆಶಿಸಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಶಾಂತಲಾ, ಈ ಭಾಗದ ಜನರು ನೀಡಿರುವ ಸಹಕಾರ, ಬೆಂಬಲವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾವುದೇ ಅಧಿಕಾರಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಜನರ ಸಹಕಾರವೂ ಮುಖ್ಯವಾಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ರೇಷ್ಮೆ ಕೃಷಿ ಹಿತ ರಕ್ಷಣಾ ವೇದಿಕೆ ಸಂಚಾಲಕ ಯಲುವಹಳ್ಳಿ ಸೋಣ್ಣೆಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೆಗೌಡ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂ.ಕಾರ್ಯದರ್ಶಿ ಚಲಪತಿ ಅಗಲಗುರ್ಕಿ, ಮಳ್ಳೂರು ಹರೀಶ್, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಮಂಜುನಾಥ್, ಗಿಡ್ನಹಳ್ಳಿ ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಮೆಗಾಡೇರಿ: ಅನುದಾನ ಕೋರಿ ಸಿಎಂ ಬಳಿ ನಿಯೋಗ
ಚಿಕ್ಕಬಳ್ಳಾಪುರ: ಗುಣಮಟ್ಟದ ಹಾಲು ಸರಬರಾಜಿನಲ್ಲಿ ಜಿಲ್ಲೆ ಮಾಡಿರುವ ಹೆಸರನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಹೆಚ್ಚಿಗೆ ಶ್ರಮಿಸಬೇಕೆಂದು ಶಾಸಕ ಕೆ.ಸುಧಾಕರ್ ಸಲಹೆ ನೀಡಿದರು.  ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ವಿಶ್ವೇಶ್ವರಯ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ವಿವಿಧೋದ್ಧೇಶ ಸಹಕಾರ ಸಂಘದ ಆಡಳಿತ ಕಚೇರಿ ಉದ್ಘಾಟನೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.  ಕೋಚಿಮುಲ್ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ನೀರಾವರಿ ಸೌಲಭ್ಯದ ಕೊರತೆಯ ನಡುವೆಯೂ ಅನೇಕ ರೈತರು ಹೆಚ್ಚಿಗೆ ಹಾಲು ಉತ್ಪಾದನೆ ಮಾಡುತ್ತಿದ್ದಾರೆ ಎಂದರು. ಮೆಗಾಡೇರಿಗಾಗಿ ಅಂದಾಜು ವೆಚ್ಚ ರು. 90 ಕೋಟಿಗಳಾಗಿದ್ದು, ಇದುರವೆಗೆ ಕೇವಲ 4 ಕೋಟಿ ಬಿಡುಗಡೆಯಾಗಿದೆ. 2014 ರ ಅನುದಾನದಲ್ಲಿ ಇದನ್ನು ಸೇರಿಸಿಲ್ಲ. ಆದ್ದರಿಂದ ನಾನು ಜಿಲ್ಲೆಯ ಶಾಸಕರೊಂದಿಗೆ ನಿಯೋಗ ಹೊರಟು ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇವೆ ಎಂದರು.  ಕೆಎಂಎಫ್ ನಿರ್ದೇಶಕ ಕೆ.ವಿ.ನಾಗರಾಜ್  ಮಾತನಾಡಿ, ಜಿಲ್ಲಾ ಕೇಂದ್ರದ ಹೊರ ವಲಯದಲ್ಲಿರುವ ನಂದಿ ಕ್ರಾಸ್ ಬಳಿ ನಿರ್ಮಿಸಲಾಗುತ್ತಿರುವ ಮೆಗಾ ಡೇರಿಗೆ ಇನ್ನೂ ಹೆಚ್ಚಿಗೆ ಅನುದಾನ ಬಿಡುಗಡೆ ಮಾಡಬೇಕು. ಅನುದಾನ 6 ರಿಂದ 10 ಕೋಟಿ ಅನುದಾನ ಬಂದರೆ ತುಂಬಾ ಅನುಕೂಲವಾಗುತ್ತದೆ ಎಂದರು. ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ಯಾವುದೇ ಸಂಘಟನೆಯ ಚುನಾವಣೆಗಳಿಗೆ ಹಣದ ವ್ಯವಹಾರ ನಡೆಯದೇ, ಆಸೆ ಆಮಿಷಗಳನ್ನು ತೋರದೇ ಆಡಳಿತ ಮಂಡಳಿ ರಚನೆಯಾಗುವುದು ಮುಖ್ಯ ಎಂದು ಶ್ಲಾಘಿಸಿದರು.  ಕಾರ್ಯಕ್ರಮದಲ್ಲಿ ಕೋ.ಚಿ.ಮಲ್‌ನ ವ್ಯವಸ್ಥಾಪಕ ಜಿ.ಟಿ.ಗೋಪಾಲ್, ಅಧ್ಯಕ್ಷ ಜೆ.ಕಾಂತರಾಜ್ ಮುಂತಾದವರು ಉಪಸ್ಥಿರಿದ್ದರು.
ಎಲ್.ಐ.ಸಿ ಪ್ರತಿನಿಧಿಗಳ ಪ್ರತಿಭಟನೆ
ಕೋಲಾರ: ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳ ಶೇ. 49 ಕ್ಕೆ ಹೆಚ್ಚಿಸಿ ವಿಮಾ ಮಸೂದೆ 2008 ನ್ನು ಜಾರಿಗೆ ಮುಂದಾಗುತ್ತಿರುವುದನ್ನು ವಿರೋಧಿಸಿ ನಗರದ ಎಲ್.ಐ.ಸಿ ಕಚೇರಿ ಬಳಿ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.ಪ್ರತಿನಿಧಿಗಳಿಗೆ ಸಂವಿಧಾನಾತ್ಮಕವಾಗಿ ರಕ್ಷಣೆ ನೀಡುತ್ತಿರುವ ವಿಮಾ ಕಾಯ್ದೆ 40,40ಎ ಮತ್ತು 44 ಇವುಗಳನ್ನು ಹೊಸ ವಿಮಾ ಮಸೂದೆ 2008ರ ತಿದ್ದುಪಡಿ ವಿಮಾ ಕಾಯ್ದೆ 2008 ಸಂಸತ್‌ನಲ್ಲಿ ಮಂಡನೆ ಮಾಡುತ್ತಿರುವುದನ್ನು ವಿರೋಧಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಾಖೆಯ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಬಿ.ರವಿಪ್ರಕಾಶ್, ಕಾರ್ಯದರ್ಶಿ ಹರಿಶಂಕರ್, ವಲಯ ಕಾರ್ಯಕಾರಿ ಸಮಿತಿ ಸದಸ್ಯ ನಂಜುಂಡಪ್ಪ, ವಿಭಾಗ ಮಟ್ಟದ ಉಪಾಧ್ಯಕ್ಷ ಮದ್ವೇಶ್, ಸಹಕಾರ್ಯದರ್ಶಿ  ರಾಮು, ಖಜಾಂಚಿ ವಿಶ್ವನಾಥ್, ಆರ್ಥಿಕ ಸಲಹೆಗಾರ ದೇವರಾಜ್, ರಾಜೇಂದ್ರ ಪ್ರಸಾದ್, ಇಂದ್ರ ಪ್ರಕಾಶರೆಡ್ಡಿ, ಮುನಿರಾಜ್, ರಾಜ್ ಕುಮಾರ್, ಮುನಿಯಪ್ಪ,ಹೋಳೂರು ನಾರಾಯಣಸ್ವಾಮಿ, ನಾಗರಾಜಜ್ಮುಂತಾದವರು ಭಾಗವಹಿಸಿದ್ದರು.
ಕೆರೆಗಳಿಗೆ ಹರಿಸಲು ಆಗ್ರಹಿಸಿ ಪ್ರತಿಭಟನೆ
ಟೇಕಲ್: ಬೆಂಗಳೂರು ನಾಗರಿಕರು ಬಳಸಿದ ನೀರನ್ನು ಎಲೆಮಲ್ಲಪ್ಪಶೆಟ್ಟರ ಕೆರೆಯಿಂದ ಶುದ್ಧೀಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆಯಲ್ಲಿ ಮಾಲೂರು ತಾಲೂಕಿನ ಕೆರೆಗಳನ್ನು ಬಿಟ್ಟಿರುವ ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಕರವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್ ಅಧ್ಯಕ್ಷತೆಯಲ್ಲಿ ರಸ್ತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಎನ್. ರಾಮಕೃಷ್ಣಪ್ಪ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಅಂತರ್ಜಲಮಟ್ಟ ಕುಸಿದಿದೆ. ಅಂತರ್ಜಲ ವೃದ್ಧಿಸಲು ಜಿಲ್ಲಾಧಿಕಾರಿ ಡಿ.ಕೆ. ರವಿ ರವರು 1,110 ಕೋಟಿ ಕ್ರಿಯಾ ಯೋಜನೆ ಸಲ್ಲಿಸಿದ್ದಾರೆ. ಆದರೆ ತಾಲೂಕನ್ನು ಕಡೆಗಣಿಸಲಾಗಿದೆ ಎಂದು ತಿಳಿಸಿದರು. ತಾಲೂಕು ಕರವೇ ಬಡಿಗಿ ಶ್ರೀನಿವಾಸ್ ಮಾತನಾಡಿದರು. ಜಿಲ್ಲಾಧ್ಯಕ್ಷ ಚಂಬೆ ರಮೇಶ್, ಕಾರ್ಯದರ್ಶಿ ಎ.ಎನ್. ದಯಾನಂದ್, ಆರ್. ಶ್ರೀರಾಮುಲು ಇದ್ದರು.
ಜೂಜುಕೋರರ ಬಂಧನ
ನಿವೃತ್ತ ಶಿಕ್ಷಕರೊಬ್ಬರ ಮನೆಯಲ್ಲಿ ಜೂಜಾಡುತ್ತಿದ್ದ 9 ಮಂದಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಪ್ರಶಾಂತ ನಗರದಲ್ಲಿರುವ ನಿವೃತ್ತ ಶಿಕ್ಷಕ ವೆಂಕಟರಾಮರೆಡ್ಡಿ ಮನೆಯಲ್ಲಿ ಜೂಜಾಟ ನಡೆಯುತ್ತಿತ್ತು. ಖಚಿತ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸಿದ್ದಾರೆ. ಪಣಕ್ಕಿಟ್ಟಿದ್ದ ಹಣ ಮತ್ತು ಮೊಬೈಲ್  ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.