ಮತ್ತೆ ಕೈ ಕೊಟ್ಟ ಮಳೆ, ರೈತರಲ್ಲಿ ಹೆಚ್ಚಿದ ಆತಂಕ
ಪಾ.ಶ್ರೀ.ಅನಂತರಾಮ್
ಕೋಲಾರ: ಎರಡು ದಿನಗಳ ಹಿಂದೆ ಸುರಿದ ಮಳೆಯನ್ನು ನಂಬಿ, ಸಾಲ ಮಾಡಿ ಜಮೀನುಗಳನ್ನು ಹದ ಮಾಡಿ ವಿವಿಧ ಬೆಳೆಗಳನ್ನು ಬೆಳೆಯಲು ಬಿತ್ತನೆ ಮಾಡಿದ ರೈತರು, ಮತ್ತೆ ಮಳೆ ಕೊಟ್ಟಿರುವುದು ಶಾಪವಾಗಿದೆ. ಮೊಳಕೆಯೊಡೆದಿರುವ ರಾಗಿ, ನೆಲಗಡಲೆ, ತೊಗರಿ, ಬತ್ತವನ್ನು ಕಾಪಾಡಿಕೊಳ್ಳಲು ಪರದಾಡುತ್ತಿದ್ದಾರೆ.
ರಾಜ್ಯದ ಅನೇಕ ಕಡೆ ಮುಂಗಾರು ಮಳೆಯಿಂದ ರೈತರು ಸಂಭ್ರಮಿಸುತ್ತಿದ್ದರೆ, ಬರಪೀಡಿತ ಕೋಲಾರ ಜಿಲ್ಲೆಯ ರೈತರು ಗರ ಬಡೆದವರ ರೀತಿಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಜಿಲ್ಲೆಯ ಒಟ್ಟಾರೆ ಬಿತ್ತನೆ ಪ್ರದೇಶ 1.02 ಲಕ್ಷ ಹೆಕ್ಟೇರ್. ಆದರೆ, ಪ್ರಸ್ತುತ ಜಿಲ್ಲೆಯಾದ್ಯಂತ ಬಿತ್ತನೆ ಆಗಿರುವುದು ಕೇವಲ 45002 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ. ವರುಣ ಕೃಪೆ ತೋರದಿದ್ದರೆ ಈಗಾಗಲೇ ಬಿತ್ತನೆಯಾಗಿ ಮೊಳಕೆಯೊಡೆದಿರುವ ಬೆಳೆಯು ಸಹ ಒಣಗಿ ಹೋಗುವುದರಿಂದ ರೈತರು ಸಾಲದ ಶೂಲಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಯಾವುದೇ ನದಿ, ನಾಲೆ ಇಲ್ಲದ ಬಯಲು ಸೀಮೆಗೆ ಸೇರಿದ ಕೋಲಾರ ಜಿಲ್ಲೆಯ ರೈತರು ಮಾತ್ರವಲ್ಲ, ಜನ-ಜಾನುವಾರುಗಳು ಮಳೆಯನ್ನು ಆಶ್ರಯಿಸಿ ಬದುಕುತ್ತಿದ್ದಾರೆ. ಕಳೆದ 15-20 ವರ್ಷಗಳಿಂದ ಶಾಶ್ವತ ನೀರಾವರಿಗಾಗಿ ನೂರಾರು ಹೋರಾಟಗಳು ನಡೆದರೂ ಫಲಶೃತಿ ಕಂಡಿಲ್ಲ.
ಬಿತ್ತನೆ ವಿವರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಏಕದಳ-72 ಸಾವಿರ ಹೆಕ್ಟೇರ್, ದ್ವಿದಳ ಧಾನ್ಯ-15500 ಹೆಕ್ಟೇರ್ ಹಾಗೂ ಎಣ್ಣೆಕಾಳು -14100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದೆ.
ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ-63 ಸಾವಿರ ಹೆಕ್ಟೇರ್ ಗುರಿಗೆ ಈವರೆಗೆ ಕೇವಲ 27008 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ನೆಲಗಡಲೆಯ ಬಿತ್ತನೆಯ ಗುರಿ 13700 ಹೆಕ್ಟೇರ್, ಬಿತ್ತನೆ ಆಗಿರುವುದು 9478 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ. ಉಳಿದಂತೆ ಮುಸುಕಿನ ಜೋಳ- 704 ಹೆಕ್ಟೇರ್ ಗುರಿಗೆ 163 ಹೆಕ್ಟೇರ್, ಮೇವಿನ ಜೋಳ-368 ಹೆಕ್ಟೇರ್ಗೆ 500 ಹೆಕ್ಟೇರ್, ತೃಣ ಧಾನ್ಯ-150 ಹೆಕ್ಟೇರ್ಗೆ 59 ಹೆಕ್ಟೇರ್ ಬಿತ್ತನೆಯಾಗಿದೆ.
ತೊಗರಿ- 4500 ಹೆಕ್ಟೇರ್ ಗುರಿಗೆ 3719 ಹೆಕ್ಟೇರ್, ಅಲಸಂದೆ-2 ಸಾವಿರ ಹೆಕ್ಟೇರ್ಗೆ 598 ಹೆಕ್ಟೇರ್, ಅವರೆ-9 ಸಾವಿರ ಹೆಕ್ಟೇರ್ಗೆ 2774 ಹೆಕ್ಟೇರ್ನಲ್ಲಿ ಬಿತ್ತನೆ ನಡೆದಿದೆ. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಈವರೆಗೆ 2330 ಹೆಕ್ಟೇರ್, ಮಾಲೂರಿನಲ್ಲಿ 4040 ಹೆಕ್ಟೇರ್, ಮುಳಬಾಗಲು-13107 ಹೆಕ್ಟೇರ್, ಕೋಲಾರದಲ್ಲಿ 11366 ಹಾಗೂ ಬಂಗಾರಪೇಟೆ ತಾಲೂಕಿನಲ್ಲಿ 14159 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಮಳೆ ಕೊರತೆ: ಜೂನ್ನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತಾದರೂ ಜುಲೈನಲ್ಲಿ ವರುಣನ ಕೃಪೆ ಸಿಕ್ಕಿಲ್ಲ. ಜೂನ್ ವಾಡಿಕೆ ಮಳೆ 269 ಮಿಮೀ. (ಈ ಬಾರಿ ಸರಾಸರಿ 112 ಮಿಮೀ) ಮಳೆಯಾಗಿತ್ತು. ಕಳೆದ ವರ್ಷ ಜುಲೈ ತಿಂಗಳಲ್ಲಿ 225.2 ಮಿಮೀ ಮಳೆಯಾಗಿತ್ತು. ಈ ಬಾರಿ ವಾಡಿಕೆ ಮಳೆ ಪ್ರಮಾಣ 380 ಮಿಮೀ ಆಗಬೇಕಾಗಿತ್ತು. ಆದರೆ ಜುಲೈ ಅಂತ್ಯಕ್ಕೆ ಕೇವಲ 218 ಮಿಮೀ ಮಳೆಯಾಗಿದ್ದು, 161.5ಮಿಮೀ ಮಳೆ ಕೊರತೆಯಾಗಿದೆ.
ಜುಲೈನಲ್ಲಿ ಆದ ಕಡಿಮೆ ಮಳೆ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಮಳೆಯೇ ಇಲ್ಲದಿರುವುದರಿಂದ ರೈತರು ಬಿತ್ತನೆ ಮಾಡಿ, ಮೊಳಕೆಯೊಡೆದಿರುವ ಬೆಳೆಯನ್ನು ಸಂರಕ್ಷಣೆ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ.
ತೊಗರಿ 4500 ಹೆಕ್ಟೇರ್ ಗುರಿಗೆ 3719 ಹೆಕ್ಟೇರ್
ಅಲಸಂದೆ 2 ಸಾವಿರ ಹೆಕ್ಟೇರ್ಗೆ 598 ಹೆಕ್ಟೇರ್
ಅವರೆ 9 ಸಾವಿರ ಹೆಕ್ಟೇರ್ಗೆ 2774 ಹೆಕ್ಟೇರ್
ಶ್ರೀನಿವಾಸಪುರ ತಾಲೂಕಿನಲ್ಲಿ 2330 ಹೆಕ್ಟೇರ್
ಮಾಲೂರಿನಲ್ಲಿ 4040 ಹೆಕ್ಟೇರ್
ಮುಳಬಾಗಲು 13,107 ಹೆಕ್ಟೇರ್
ಕೋಲಾರದಲ್ಲಿ 11,366
ಬಂಗಾರಪೇಟೆ ತಾಲೂಕಿನಲ್ಲಿ 14,159 ಹೆಕ್ಟೇರ್
ಪ್ರದೇಶದಲ್ಲಿ ಬಿತ್ತನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

