ಶಾಶ್ವತ ನೀರಾವರಿಗೆ ಆಗ್ರಹಿಸಿ ನಾಳೆ ವಕೀಲರ ಸಭೆ
ಕೋಲಾರ: ಶಾಶ್ವತ ನೀರಾವರಿ ಯೋಜನೆ ಒತ್ತಾಯಿಸಿ ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಫೆ.26ರಂದು ಬುಧವಾರ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ.
ಇದುವರೆಗಿನ ಸರ್ಕಾರಗಳು ಅವಕಾಶ ಇದ್ದರೂ ಕೋಲಾರ ಒಳಗೊಂಡಂತೆ ಬಯಲುಸೀಮೆ ಭಾಗದ ಜಿಲ್ಲೆಗಳಿಗೆ ಜೀವ ಜಲವನ್ನು ಹರಿಸುವ ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ. ಬದಲಾಗಿ ಇದನ್ನು ತಮ್ಮ ರಾಜಕೀಯ ಬೆಳವಣಿಗೆಗೆ ದಾಳವಾಗಿ ಬಳಸಿಕೊಂಡಿದ್ದು ಇದನ್ನು ವಕೀಲರ ಸಂಘವು ಖಂಡಿಸುತ್ತದೆ. ಅಲ್ಲದೆ ಮುಂದಿನ ಹೋರಾಟಕ್ಕೆ ಜನರನ್ನು ಜಾಗೃತಗೊಳಿಸಲು ಫೆ.26 ರಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದೆಂದು ವಕೀಲರ ಸಂಘದ ಪತ್ರಿಕಾ ಕಾರ್ಯದರ್ಶಿ ನರೇಂದ್ರ ಬಾಬು ತಿಳಿಸಿದ್ದಾರೆ.
ಜಿಲ್ಲೆಗೆ ನೀರು ಹರಿಸುವ ಶಾಶ್ವತ ಯೋಜನೆಯನ್ನು ಸಕಾಲದಲ್ಲಿ ಹಮ್ಮಿಕೊಳ್ಳದೇ ನಿರ್ಲಕ್ಷಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಕೋಲಾರ ಹಾಗೂ ಇದರ ಸೋದರ ಜಿಲ್ಲೆಗಳು ರಾಜಸ್ಥಾನದ ರೀತಿ ಮರುಭೂಮಿಯಾಗುವಲ್ಲಿ ಸಂದೇಹವಿಲ್ಲ. ಈಗಾಗಲೇ ಇಲ್ಲಿನ ಅಂತರ್ಜಲ ಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿದಾಗಿದೆ. ಇದನ್ನು ಇದುವರೆಗೂ ಕಳೆದ ಎಲ್ಲಾ ಆಡಳಿತ ಸರ್ಕಾರಗಳ ಗಮನಕ್ಕೆ ತಂದಿದ್ದಾಗಿದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಜೊತೆಗೆ ಸಾಮಾಜಿಕ ನ್ಯಾಯ ಕೂಡ ಈ ಭಾಗದ ಜನತೆಗೆ ಸಿಗಲಿಲ್ಲವೆಂದು ತಿಳಿಸಿದ್ದಾರೆ.
ಇನ್ನಾದರೂ ಜಿಲ್ಲೆಯ ಜನತೆ ಎಚ್ಚೆತ್ತು ಈ ವಿಷಯವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳುವಲ್ಲಿ ಕೈಜೋಡಿಸುವುದು ಒಳಿತು. ಈ ಹೋರಾಟದ ಪ್ರಯತ್ನವಾಗಿ ಕೋಲಾರದಿಂದ ವಿಧಾನಸೌಧಕ್ಕೆ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಇನ್ನಷ್ಟು ಸಲಹೆ, ಸೂಚನೆಗಳಿಗೆ ವಕೀಲರ ಸಂಘ ಸಭೆ ಕರೆದಿದ್ದು, ಆಸಕ್ತರೆಲ್ಲರೂ ಪೂರ್ವಭಾವಿ ಸಭೆಗೆ ಹಾಜರಾಗಿ ನಮ್ಮ ಈ ಹೋರಾಟ ಬಲಪಡಿಸಬೇಕೆಂದು ಕೋರಿದ್ದಾರೆ.
ಮಾಹಿತಿಗಾಗಿ ವಕೀಲರ ಸಂಘದ ಪತ್ರಿಕಾ ಕಾರ್ಯದರ್ಶಿ ಹಾಗೂ ವಕೀಲ ಕೆ.ನರೇಂದ್ರಬಾಬು, 9480421145 ಇವರನ್ನು ಸಂಪರ್ಕಿಸಲು ಕೋರಿದೆ.
ಶಾಶ್ವತ ನೀರಾವರಿ: ಸಭೆ
ಬಂಗಾರಪೇಟೆ: ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಜಾರಿಗೆ ತರುವಲ್ಲಿ ಜನಪ್ರತಿನಿಧಿಗಳಲ್ಲಿನ ಬದ್ಧತೆ ಕೊರತೆಯಿಂದಾಗಿ ಇನ್ನೂ ಜಾರಿಗೆ ಬಂದಿಲ್ಲ ಎಂದು ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಬಯಲುರಂಗಮಂದಿರದಲ್ಲಿ ದಲಿತ ಮಹಾ ಸಭಾವತಿಯಿಂದ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಯಾವುದೇ ಕಾರ್ಯ ಅನುಷ್ಠಾನಕ್ಕೆ ಬದ್ಧತೆ ಮುಖ್ಯ. ನಾಯಕರಲ್ಲಿ ಅದು ಕೊರತೆ ಇರುವುದು ಎದ್ದು ಕಾಣುತ್ತಿದೆ ಎಂಬುದಕ್ಕೆ ಹಲವು ದಶಕಗಳಿಂದ ಎದ್ದಿರುವ ಶಾಶ್ವತ ನೀರಾವರಿ ಕೂಗು ಇನ್ನೂ ಕಾರ್ಯಗತವಾಗದೇ ಇರುವುದೇ ಸಾಕ್ಷಿ ಎಂದರು.ಇದೆ ವೇಳೆ ಬುದ್ದಿ ಮಾಂಧ್ಯ ಮಕ್ಕಳಿಗೆ ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು. ಸಂಘಟನೆಯ ರಾಜು, ಗಣೇಶ್, ಶ್ರೀರಾಮ್, ಹುಣಸನಹಳ್ಳಿ ವೆಂಕಟೇಶ್, ನಾರಾಯಣಪ್ಪ ಇದ್ದರು.
ಆರೋಗ್ಯ ಸಚಿವ ಖಾದರ್ ಕೆಡಿಪಿ ಸಭೆ
ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಮಾ.1ರಂದು ಮಧ್ಯಾಹ್ನ 3 ಗಂಟೆಗೆ ಕೋಲಾರ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದಡಿ 2013-14ನೇ ಸಾಲಿನ ಜನವರಿ ಅಂತ್ಯದವರೆಗಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಕರೆಯಲಾಗಿದೆ ಎಂದು ಜಿಪಂ ಸಿಇಒ ವಿನೋತ್ ಪ್ರಿಯ ತಿಳಿಸಿದ್ದಾರೆ.
ಸವಿತಾ ಸಮಾಜದ ಫಲಾನುಭವಿಗಳಿಗೆಇಂದು ಸಾಲ ವಿತರಣೆ ಕಾರ್ಯಕ್ರಮ
ಕೋಲಾರ: ಸವಿತಾ ಸಮಾಜದ ಕ್ಷೌರಿಕ ವೃತ್ತಿಯ ಮತ್ತು ಕಲಾವಿದರಿಗೆ ಸಂಘದ ವತಿಯಿಂದ ಕಿರು ಸಾಲ ಯೋಜನೆ ನೀಡುವ ಕಾರ್ಯಕ್ರಮವನ್ನು ಫೆ.25 ರಂದು ಮಧ್ಯಾಹ್ನ 12 ಗಂಟೆಗೆ ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದ ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಏರ್ಪಡಿಸಲಾಗಿದೆ. ಅತಿಥಿಗಳಾಗಿ ಸವಿತಾ ಸಮಾಜದ ಜಿಲ್ಲಾ ಸಂಚಾಲಕ ಹಾಗೂ ಕೋಲಾರ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್. ಮಂಜುನಾಥ್, ಜಿಲ್ಲಾಧ್ಯಕ್ಷ ಎಸ್.ವಿ. ಮರಿಸ್ವಾಮಿ, ಪ್ರಗತಿ ಗ್ರಾಮೀಣ ಬ್ಯಾಂಕಕ್ ವ್ಯವಸ್ಥಾಪಕ ಟಿ.ಪಿ. ಜಗದೀಶ್, ಶ್ರೀನಿವಾಸಲು, ಎಂ. ಶ್ರೀನಿವಾಸ್, ಶಂಕರಪ್ಪ, ದುರ್ಗಾಪ್ರಸಾದ್, ಎಸ್. ಪ್ರಸಾದ್, ಎಂ.ನಾರಾಯಣಸ್ವಾಮಿ, ರವಿ, ಮುರಳಿ ಮುಂತಾದವರಿರುವರು. ಬಡ ಜನಾಂಗದದವರನ್ನು ಗುರ್ತಿಸಿ 40 ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ತಲಾ 10 ಸಾವಿರ ರು.ಗಳಂತೆ ಸಂಘದ ವತಿಯಿಂದ ಕಿರು ಸಾಲ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

