ಕೋಲಾರ

ಬಾಣಸಿಗರಾದ ನಗರಸಭೆ ಸದಸ್ಯರು

Published On :

ಕೋಲಾರ: ನಗರಸಭೆಯ 20ಕ್ಕೂ ಹೆಚ್ಚು ಸದಸ್ಯರು ಕುಡಿಯುವ ನೀರು ಮತ್ತು ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಲು ಒತ್ತಾಯಿಸಿ ಸೋಮವಾರ ನಗರಸಭೆ ಕಚೇರಿ ಮುಂದೆ ಧರಣಿ ನಡೆಸಿದರಲ್ಲದೆ, ಅಧಿಕಾರಿಗಳು ಸ್ಪಂಧಿಸುತ್ತಿಲ್ಲವೆಂದು ಪ್ರತಿಭಟನಾ ಸ್ಥಳದಲ್ಲೇ ಅಡುಗೆ ತಯಾರಿಸುವ ಬಾಣಸಿಗರಾಗಿ ಎಲ್ಲರ ಗಮನ ಸೆಳೆದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ಸಮಸ್ಯೆ ನಿವಾರಿಸಬೇಕೆಂದು ಸದಸ್ಯರು ಪಟ್ಟು ಹಿಡಿದು ಸಂಜೆ ತನಕ ಧರಣಿ ಮುಂದುವರೆಸಿದ್ದರು. ರಾತ್ರಿ 7.15ರವೇಳೆಗೆ ನಗರಸಭೆಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತು ಜಿಲ್ಲಾಧಿಕಾರಿ ಡಿ.ಕೆ.ರವಿಯವರು, ಸಮಸ್ಯೆ ನಿವಾರಣೆ ಮಾಡಲು ಬದ್ಧ, ಧರಣಿ ಹಿಂದಕ್ಕೆ ಪಡೆಯರಿ ಎಂದು ಹೇಳಿದರು.
ಇದಕ್ಕೆ ಒಪ್ಪದಿದ್ದಾಗ, ಸದಸ್ಯರ ಜೊತೆ ಮಾತನಾಡಿದ ಸಚಿವರು, ಮಂಗಳವಾರ ಜಿಲ್ಲಾಧಿಕಾರಿಗಳು ಸದಸ್ಯರೊಂದಿಗೆ ಸಭೆ ನಡೆಸಿ ಕುಡಿಯುವ ನೀರು ಹಾಗೂ ಇನ್ನಿತರ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿಸಿದರು. ಇದರಿಂದ ಸಮಾಧಾನಗೊಂಡ ಸದಸ್ಯರು, ನಾಳೆ ಜಿಲ್ಲಾಧಿಕಾರಿಗಳು ಸಮಸ್ಯೆ ನಿವಾರಿಸದಿದ್ದರೆ ಧರಣಿ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.
ಬೇಡಿಕೆಗಳು ಏನು?: ನಗರದ ಪ್ರತಿ ವಾರ್ಡ್ಗೆ ನಾಲ್ಕು ಕೊಳವೆ ಬಾವಿ ಕೊರೆಸಬೇಕು, ನಗರೋತ್ಥಾನ-2ರ ಕಾಮಗಾರಿಯನ್ನು ಬಾಕಿ ಇರುವ ಎಲ್ಲಾ ವಾರ್ಡುಗಳಲ್ಲಿ ಆರಂಭಿಸಬೇಕೆಂದು ಆಗ್ರಹಿಸಿ ಸದಸ್ಯರು ಗಾಂಧಿ ಫೋಟೋ ಇಟ್ಟು ಬೆಳಿಗ್ಗೆ 11ಗಂಟೆಗೆ ಧರಣಿ ಆರಂಭಿಸಿದರಲ್ಲದೆ, ಮಧ್ಯಾಹ್ನ 2 ಗಂಟೆಯಾದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಅಲಿಸದಿದ್ದರಿಂದ ಕುಪಿತರಾಗಿ ನಗರಸಭೆ ಕಚೇರಿಯ ಮುಂದೆಯೇ ಅಡುಗೆ ಮಾಡಿ ಧರಣಿ ಮುಂದುವರೆಸಿದರು.
ನಗರದಲ್ಲಿ ಸ್ವಚ್ಛತೆ ಅಲ್ಲದೆ ಜನತೆ ಪರದಾಡುತ್ತಿದ್ದಾರೆ. ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ, ಪ್ರತಿ ವಾರ್ಡ್ಗೆ ತಲಾ ನಾಲ್ಕು ಕೊಳವೆ ಬಾವಿ ಕೊರೆಯಿಸುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿದ್ದರೂ ಬೇಡಿಕೆ ಈಡೇರಿಲ್ಲವೆಂದು ಸದಸ್ಯರು ದೂರಿದರು.
ನಗರಸಭೆಗೆ ಚುನಾವಣೆ ನಡೆದು ಒಂದು ವರ್ಷ ಕಳೆದರೂ ಕೌನ್ಸಿಲ್ ರಚನೆಯಾಗಿಲ್ಲ. ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದು ಕೆಲಸದ ಒತ್ತಡದಿಂದ ನಗರಸಭೆಯ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿಲ್ಲವೆಂದು ತಮ್ಮ ಅಳಲು ತೋಡಿಕೊಂಡರು.
ನೀರಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಪೌರಾಯುಕ್ತರ ಕಡೆ ಬೆರಳು ತೋರಿಸುತ್ತಾರೆ. ಪೌರಾಯುಕ್ತರು ಜಿಲ್ಲಾಧಿಕಾರಿಗಳ ಮೇಲೆ ದೂರುತ್ತಾರೆ. ಎಂಜನಿಯರ್ಗಳು ಜನತೆ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ನಗರೋತ್ಥಾನ-2ರ ಅಡಿಯಲ್ಲಿ ನಗರಸಭೆಗೆ 30 ಕೋಟಿ ರು. ಬಿಡುಗಡೆ ಆಗಿದೆ. ಕೆಲ ವಾರ್ಡ್ಗಳಲ್ಲಿ ಮಾತ್ರ ಕಾಮಗಾರಿ ಆರಂಭವಾಗಿ ಇನ್ನುಳಿದ ವಾರ್ಡ್ಗಳಲ್ಲಿ ಇನ್ನೂ ಕೆಲಸ ಆರಂಭಿಸಿಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ ಎಂದರು. ನಗರಸಭೆ ಸದಸ್ಯರಾದ ಎಸ್.ಆರ್. ಮುರಳೀಗೌಡ, ಪ್ರಸಾದ್ ಬಾಬು, ರವೀಂದ್ರ, ರಮೇಶ್, ಸಲಾವುದ್ದೀನ್ ಬಾಬು, ಸೋಮಶೇಖರ್, ನದೀಂ, ಷಫೀವುಲ್ಲಾ, ಗಾಂಧೀನಗರ ನಾರಾಯಣಸ್ವಾಮಿ, ಕಾಶಿ ವಿಶ್ವನಾಥ, ಮಂಜುನಾಥ್ ಸೇರಿದಂತೆ 20ಕ್ಕೂ ಹೆಚ್ಚು ಸದಸ್ಯರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.