ಶಾಲೆಗೆ ಬೀಗ ಹಾಕಲು ಹೋಗಿ ಬರಿಗೈಯಲ್ಲಿ ವಾಪಸ್ ಆದರು!
ಕೋಲಾರ: ಅನಧಿಕೃತ ಶಾಲೆ ಎಂಬ ಆರೋಪ ಹೊತ್ತಿರುವ ನಗರದ ಬಾಲ್ಡ್ವಿನ್ ಶಾಲೆಯನ್ನು ಮುಚ್ಚಿಸಲು ಬಂದಿದ್ದ ಡಿಡಿಪಿಐ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೆಲವು ಸಂಘಟನೆಗಳ ವಿರೋಧದಿಂದಾಗಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪೊಲೀಸ್ ರಕ್ಷಣೆಯಲ್ಲಿ ನಿರ್ಗಮಿಸಿದ ಘಟನೆ ಮಂಗಳವಾರ ನಡೆಯಿತು.
ನಗರದ ಮೆಥೋಡಿಸ್ಟ್ ಶಾಲಾ ಆವರಣದಲ್ಲಿ ಬಾಲ್ಡ್ವಿನ್ ವಿದ್ಯಾಸಂಸ್ಥೆಯೂ ತನ್ನ ಶಾಖಾ ಶಾಲೆಯನ್ನು ತೆರೆದು, ಎಲ್ಕೆಜಿಯಿಂದ 5ನೇ ತರಗತಿವರಗೆ ಸುಮಾರು 270 ಮಕ್ಕಳನ್ನು ದಾಖಲು ಮಾಡಿಕೊಂಡು ಶಾಲೆಯನ್ನು ಪ್ರಾರಂಭಿಸಿದೆ. ಆದರೆ, ಈ ಶಾಲೆಗೆ ಶಿಕ್ಷಣ ಇಲಾಖೆಯಿಂದ ಅನುಮತಿ ಇಲ್ಲದಿರುವುದರಿಂದ ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಬಾರೆದಂದು ಕೆಲವು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನಲೆಯಲ್ಲಿ ಖಾಸಗಿ ಶಾಲೆಯನ್ನು ಮುಚ್ಚಲು ಜಿಲ್ಲಾ ಶಿಕ್ಷಣ ಇಲಾಖೆಯು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಡಿಡಿಪಿಐ ಪದ್ಮನಾಭ್, ಬಿಇಒ ಜಗದೀಶ್ ಶಾಲೆಗೆ ಬಂದಾಗ ಕೆಲವು ಪೋಷಕರು, ಸಂಘಟನೆಗಳ ಮುಖಂಡರು ವಿಷಯ ತಿಳಿದು ಅಲ್ಲಿ ಜಮಾಯಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ನೀವು ಯಾವ ಆಧಾರದ ಮೇಲೆ ಈ ಶಾಲೆಯನ್ನು ಮುಚ್ಚಲು ಬಂದಿದ್ದಿರಾ, ಬೇರೆ ಶಾಲೆಗಳ ಮೇಲೆ ಕ್ರಮ ಏಕಿಲ್ಲ, ನೀವು ಅಲ್ಪಸಂಖ್ಯಾತ ವಿರೋಧಿಯಾಗಿದ್ದೀರಾ ಎಂದು ಪ್ರತಿಭಟನಾಕಾರರು ಡಿಡಿಪಿಐ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಪ್ರಕರಣದ ಬಗ್ಗೆ ಶಿಕ್ಷಣಾಧಿಕಾರಿಗಳು ಶಾಲೆ ಪ್ರಾರಂಭದ ಕಾನೂನು-ನಿಯಮದ ನಡಾವಳಿಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿದರೂ ಅದಕ್ಕೊಪ್ಪದ ಶಾಲಾ ಬೆಂಬಲಿತರು ತಮ್ಮ ವಾದವನ್ನು ಮುಂದಿಟ್ಟು ಅಧಿಕಾರಿಗಳ ಮೇಲೆ ಒತ್ತಡ ಹೇರ ತೊಡಗಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಶಾಲಾ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.
ನಗರ ಸಿಪಿಐ ಪಿ.ಶಿವಕುಮಾರ್ ಸ್ಥಳಕ್ಕೆ ಆಗಮಿಸಿ ಶಿಕ್ಷಣ ಇಲಾಖೆಯ ವಿರುದ್ಧ ಪ್ರತಿಭಟಿಸುತ್ತಿದ್ದ ಜನರಿಗೆ ಶಾಂತಿಯಿಂದ ವರ್ತಿಸಿ ಸಮಸ್ಯೆ ನಿವಾರಣೆ ಮಾಡಿಕೊಳ್ಳಿ. ಗಲಾಟೆ-ಗದ್ದಲ ಬೇಡವೆಂದು ತಿಳಿ ಹೇಳಿದರು. ಶಾಲಾ ಬೆಂಬಲಿಗರು ಶಾಲೆಗೆ ಬೀಗ ಹಾಕಲು ಅವಕಾಶ ನೀಡಲಿಲ್ಲ. ಇದರಿಂದ ಡಿಡಿಪಿಐ ಮತ್ತು ಬಿಇಒ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪೊಲೀಸ್ ರಕ್ಷಣೆಯಲ್ಲಿ ನಿರ್ಗಮಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

