ಕೋಲಾರ

ಬಿತ್ತನೆ ಬೀಜ ಖರೀದಿಗೆ ಬಿಲ್ ಕಡ್ಡಾಯವಾಗಿ ಪಡೆಯಿರಿ

Published On :

ಕೋಲಾರ: ಬಿತ್ತನೆ ಬೀಜ ಖರೀದಿ ಮಾಡುವ ರೈತರು ತಕ್ಷಣ ವ್ಯಾಪಾರಿಗಳಿಂದ ಬಿಲ್ಗಳನ್ನು ಪಡೆದುಕೊಂಡಲ್ಲಿ, ಕಳಪೆ ಬೀಜ ವಿತರಿಸಿದ ಕಂಪನಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ರೈತರಿಗೆ ಸೂಚಿಸಿದರು.
 ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಬೀಜ ಕಾಯ್ದೆ ಕುರಿತು ರೈತರಿಗೆ, ನರ್ಸರಿ ಮತ್ತು ಬೀಜ ಕಂಪನಿಗಳ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ರೈತರು ತಾವು ಖರೀದಿಸುವ ಬಿತ್ತನೆ ಬೀಜಗಳು ಕಳಪೆಯಾಗಿದ್ದಲ್ಲಿ ಬೀಜ ಕಾಯ್ದೆ ಅನ್ವಯ ಕಂಪನಿಗಳ ಮೇಲೆ ದೂರು ನೀಡಿ ನ್ಯಾಯ ಪಡೆಯಲು ಅವಕಾಶವಿದೆ. ಆದರೆ, ಬಿಲ್ ಇಲ್ಲದೆ ದೂರು ದಾಖಲಿಸಲು ಕಷ್ಟವಾಗುತ್ತದೆ ಎಂದರು.
ಕಾರ್ಯಾಗಾರ: ಕಳೆದ ವರ್ಷ ಜಿಲ್ಲೆಯಲ್ಲಿ ಸಾಕಷ್ಟು ರೈತರು ನಕಲಿ ಬೀಜಗಳನ್ನು ಪಡೆದು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಯಾರನ್ನು ಹೊಣೆಗಾರಿಕರನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
 ಕೃಷಿ ಸಮಾಜದ ಅಧ್ಯಕ್ಷ ಡಿ.ಎಲ್.ನಾಗರಾಜ್ ಮಾತನಾಡಿ, ಪ್ರತಿ ವರ್ಷ ರೈತರು ನಕಲಿ ಬೀಜಗಳನ್ನು ಪಡೆದು ಬೆಳೆಗಳನ್ನು ಹಾಳು ಮಾಡಿಕೊಳ್ಳುತ್ತಿರುವುದರಿಂದ ರಾಜ್ಯ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ನೀಡುವುದರ ಜತೆಗೆ ಕಾಯ್ದೆಯನ್ನು ಬಲಗೊಳಿಸಬೇಕಾಗಿದೆ ಎಂದು ತಿಳಿಸಿದರು.
ಪರವಾನಗಿ ಕಡ್ಡಾಯ: ಬೆಂಗಳೂರಿನ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಜುಳಾ ಬೀಜ ಕಾಯ್ದೆಯ ಬಗ್ಗೆ ಪ್ರಾತ್ಯಕ್ಷಿತೆ ನೀಡಿ ಮಾತನಾಡಿ, ಬೀಜಗಳನ್ನು ಮಾರಾಟ ಮಾಡುವ ನರ್ಸರಿ, ಏಜನ್ಸಿಗಳು ಕಡ್ಡಾಯವಾಗಿ ಪರವಾನಗಿಯನ್ನು ಪಡೆದುಕೊಂಡಿರಬೇಕು, ಮತ್ತು ಬೀಜಗಳ ಸಂಪೂರ್ಣ  ಮಾಹಿತಿಯನ್ನು ಒಳಗೊಂಡ ಕಡತಗಳನ್ನು ಇಟ್ಟಿಕೊಂಡಿರಬೇಕೆಂದು ತಿಳಿಸಿದರು.
 ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಆನಂದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಮಾಚೇಗೌಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಇದ್ದರು.


ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಸಹಕರಿಸಿ


ಕೋಲಾರ: ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ನಿಷೇಧಕ್ಕೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಿ.ಕೆ. ರವಿ ನಗರದ ವ್ಯಾಪಾರಿಗಳಿಗೆ ಮನವಿ ಮಾಡಿದರು.
 ನಗರಸಭೆಯು ಪ್ಲಾಸ್ಟಿಕ್ ನಿಷೇಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಗುರುವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ 40ಮೈಕ್ರಾನ್ ಪ್ಲಾಸ್ಟಿಕ್ ಬಳಕೆಗೆ ಹಾಗೂ ಮಾರಾಟಕ್ಕೆ ಅವಕಾಶ ನೀಡುವಂತೆ ಮನವಿ ನೀಡಿದಾಗ, ನಗರ ವ್ಯಾಪಾರಿಗಳ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಅವಕಾಶಕ್ಕೆ ಮನವಿ: ಪ್ಲಾಸ್ಟಿಕ್ಮುಕ್ತ ನಗರ ಮಾಡುವ ಸದುದ್ದೇಶಕ್ಕೆ ನಮ್ಮೆಲ್ಲರ ಸಹಕಾರವಿದೆ. ಆದರೆ ಸುಪ್ರಿಂ ಕೋರ್ಟ್ ಮತ್ತು ಪರಿಸರ ಇಲಾಖೆಯು 18 ರಿಂದ 20 ಮೈಕ್ರಾನ್ ಕವರುಗಳನ್ನು ನಿಷೇಧಿಸಿ 40 ಮೈಕ್ರಾನ್ ಪ್ಲಾಸ್ಟಿಕ್ ಉಪಯೋಗಿಸುವಂತೆ ತಿಳಿಸಿದೆ. ಗ್ರಾಹಕರು ಕೊಳ್ಳುವ ಪದಾರ್ಥಗಳನ್ನು ಕೊಂಡೊಯ್ಯಲು 40 ಮೈಕ್ರಾನ್ ಪ್ಲಾಸ್ಟಿಕ್ ಬಳಕೆ ಮಾಡುವುದಕ್ಕೂ ಈಗ ಅವಕಾಶ ಸಿಗುತ್ತಿಲ್ಲವೆಂದು ವ್ಯಾಪಾರಿಗಳು ತಿಳಿಸಿದರು.
ಕವರ್ಗಳಿಗೆ ಪ್ರರ್ಯಾಯವಾಗಿ ಬೇರೊಂದು ವ್ಯವಸ್ಥೆಬರುವವರೆಗೂ ನಮಗೆ 40 ಮೈಕ್ರಾನ್ ಕವರ್ಗಳನ್ನು ಬಳಸಲು ಅವಕಾಶ ಮಾಡಿಕೊಡುವಂತೆ ಮಾಲೀಕರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವ್ಯಾಪಾರಿಗಳಾದ ತಿಪ್ಪರಾಜು, ಶ್ರೀಧರ್, ಶ್ರೀನಿವಾಸ್, ಸುಧಾಕರ್, ಸೋಮಶೇಖರ್, ಪ್ರಭಾಕರ್, ಬದ್ರಿನಾಥ್, ಮನೋಹರ್ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.