ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ನೀಡಿ
ಚಿಕ್ಕಬಳ್ಳಾಪುರ: ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ಕೂಲಿ ಮತ್ತು ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಜಾರಿ ಮಾಡಿರುವ ಶಿಫಾರಸನ್ನು ಸರ್ಕಾರ ಕೂಡಲೇ ಜಾರಿ ಮಾಡಬೇಕೆಂದು ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ ಒತ್ತಾಯಿಸಿದರು.
ತಮ್ಮ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಸಿಐಟಿಯು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 66 ವರ್ಷಗಳು ಕಳೆದರೂ ಸರ್ಕಾರಗಳು ಕಾರ್ಮಿಕ ನೀತಿ ಜಾರಿಗೊಳಿಸುತ್ತಿಲ್ಲ.
ಅಕ್ಷರ ದಾಸೋಹ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ನೌಕರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇವರಿಗೆ ಕನಿಷ್ಠ ವೇತನ ನೀಡುತ್ತಿಲ್ಲ.
ಆರ್ಥಿಕ ತಜ್ಞರು ಒಂದು ಚಿಕ್ಕ ಕುಟುಂಬ ಗ್ರಾಮೀಣ ಪ್ರದೇಶದಲ್ಲಿ ಜೀವನ ನಡೆಸಬೇಕೆಂದರೆ ತಿಂಗಳಿಗೆ 13 ಸಾವಿರ ರು. ಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ ಜೀವನ ನಡೆಸಬೇಕಾದರೆ 15 ಸಾವಿರ ಬೇಕಾಗುತ್ತದೆ ಎಂದು ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಸರ್ಕಾರಗಳು ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ ನೀಡದೇ 1 ಸಾವಿರ ರು. ಗೌರವಧನ ನೀಡುತ್ತಿವೆ ಇದರಿಂದ ಅಸಂಘಟಿತ ಕಾರ್ಮಿಕರು ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದರು.
1948 ರಲ್ಲಿ ಕಾರ್ಮಿಕ ಕಾಯ್ದೆ ತಂದ ಸರ್ಕಾರ ಇಂದು ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರ ವ್ಯಾಪಕ ಭ್ರಷ್ಟಾಚಾರ, ದುರಾಡಳಿತ, ಕಾರ್ಮಿಕ ವಿರೋಧಿ ನೀತಿ ಅನುಸರಿಸಿದ್ದರಿಂದ ಈ ಸರ್ಕಾರವನ್ನು ತೊಲಗಿಸಿ ಮೋದಿ ಅವರು ಅಭಿವೃದ್ಧಿ ಮಾಡುತ್ತಾರೆ ಎಂದು ಅವರಿಗೆ ಅಧಿಕಾರವನ್ನು ಜನತೆ ನೀಡಿದ್ದಾರೆ.
ಆದರೆ ಅವರು ಅಧಿಕಾರಕ್ಕೆ ಬಂದ 1 ತಿಂಗಳಲ್ಲಿ ರೈಲ್ವೆ ಪ್ರಯಾಣ ದರ, ಡಿಸೇಲ್, ಪೆಟ್ರೋಲ್, ಅಗತ್ಯ ವಸ್ತುಗಳ ಬೆಲೆಗಳನ್ನು ದಿನೆದಿನೇ ಏರಿಕೆ ಮಾಡುತ್ತಿದ್ದಾರೆ. ಇದರಿಂದ ಅಸಂಘಟಿತ ಕಾರ್ಮಿಕರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ 1948 ರ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿದೆ. ಇದು ಕಾರ್ಮಿಕರ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು.
ಬಿಸಿಯೂಟ ಕಾರ್ಮಿಕರ ನೇಮಕಾತಿ ಕುರಿತು ನಿಯಮಾವಳಿ ರೂಪಿಸಬೇಕು. ಅಗತ್ಯ ಸೇವಾ ಸೌಲಭ್ಯಗಳನ್ನು ಕೊಡಬೇಕು. ಕ್ಲಸ್ಟರ್ ಮಟ್ಟದ ತಿಂಗಳ ಸಭೆ ನಡೆಯಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಿಲ್ಲಬೇಕು. ಸಾಮಾಜಿಕ ಭದ್ರತೆ ಭಾಗವಾಗಿ ಕೇಂದ್ರ ಸರ್ಕಾರ ಜನಶ್ರೀ ಯೋಜನೆಯನ್ನು ಎಲ್ಲಾ ನೌಕರರಿಗೂ ವಿಸ್ತರಿಸಬೇಕು. ಶಿಕ್ಷಕರಿಗೆ ನೀಡುವ ಹಾಗೆ ಬೇಸಿಗೆ ರಜಾ ವೇತನ, ದಸರಾ ರಜಾ ವೇತನ ಬಿಸಿಯೂಟದ ನೌಕರರಿಗೂ ನೀಡಬೇಕು ಎಂದು ಆಗ್ರಹಿಸಿದರು. ತಾಲೂಕು ಅಧ್ಯಕ್ಷೆ ಕೆ.ವಿ. ವೆಂಕಟಲಕ್ಷ್ಮಮ್ಮ ಮಾತನಾಡಿ, ಕಾರ್ಮಿಕರು ಹೋರಾಟ ಮಾಡಿದ ಫಲವಾಗಿ ಕಳೆದ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಶಿಕ್ಷಣ ಸಚಿವರು 500 ರು. ಕೇಂದ್ರ ಸರ್ಕಾರ 1 ಸಾವಿರ ರು. ಗೌರವ ಧನ ಹೆಚ್ಚಿಸಿದ್ದು ಏಪ್ರಿಲ್ ತಿಂಗಳಿಂದ ಜಾರಿ ಮಾಡುವುದಾಗಿ ತಿಳಿಸಿದ್ದರು. ಇದುವರೆಗೂ ಜಾರಿ ಮಾಡಿಲ್ಲ ಎಂದರು.
ಪ್ರತಿಭಟನೆಯಲ್ಲಿ ಅಕ್ಷರ ದಾಸೋಹದ ತಾಲೂಕು ಗೌರವಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ, ಕಾರ್ಯದರ್ಶಿ ಕೆ.ಆರ್. ಮಂಜುಳಾ, ಖಜಾಂಚಿ ಎನ್. ಭಾರತಿ, ಚನ್ನಮ್ಮ, ಗೋಪಮ್ಮ, ಭಾಗ್ಯಮ್ಮ, ಗಾಯಿತ್ರಿ, ಲಕ್ಷ್ಮೀದೇವಮ್ಮ. ಸಿಐಟಿಯು ಮುಖಂಡರಾದ ಮುನೀಂದ್ರ ಮುಂತಾದವರು ಭಾಗವಹಿಸಿದ್ದರು.
ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಮುಳಬಾಗಲು: ತಾಪಂ ಮೂರನೇ ಅವಧಿಗೆ ಅಧ್ಯಕ್ಷರಾಗಿ ಅರ್ಚನಾ ಮತ್ತು ಉಪಾಧ್ಯಕ್ಷರಾಗಿ ಭೈರಪ್ಪ ಅವಿರೋಧವಾಗಿ ಆಯ್ಕೆಯಾದರು. ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಮಂಜುನಾಥ್ ಕಾರ್ಯನಿರ್ವಹಿಸಿದರು. 11 ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾದರು. ತಹಶೀಲ್ದಾರ್ ಕೆ.ಏಕೇಶಬಾಬು ಚುನಾವಣೆ ಕಾರ್ಯಗಳಿಗೆ ಸಹಕರಿಸಿದರು. ಆವಣಿ ಬ್ಲಾಕ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ ಮಾತನಾಡಿ, ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದರು. ಜೆಡಿಎಸ್ ಮುಖಂಡ ಪೆದ್ದೂರು ವೆಂಕಟರಾಮ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

