ಅನಕೃ ಜೋಡಿ ರಸ್ತೆ ಅಂದು-ಇಂದು
ಪಾ.ಶ್ರೀ. ಅನಂತರಾಮ್
ಕೋಲಾರ: ನಗರದ ಮಹಾತ್ಮಾಗಾಂಧಿ ಉದ್ಯಾನವನದ ಹಿಂಭಾಗವಿರುವ ಅನಕೃ ಜೋಡಿ ರಸ್ತೆ ಕಡೆಗೂ ಅಭಿವೃದ್ಧಿಗೊಳ್ಳುತ್ತಿದೆ.
1992ರಲ್ಲಿ ಕನ್ನಡಪಕ್ಷದಿಂದ ಗಾಂಧಿ ಉದ್ಯಾನವನ ಹಿಂಭಾಗದ ಜೋಡಿ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಿದ್ದ ವೃತ್ತಕ್ಕೆ ಅನಕೃ ಹೆಸರಿಡಲಾಗಿತ್ತು. ಸಂಬಂಧಪಟ್ಟ ಇಲಾಖೆಯವರ ನಿರ್ಲಕ್ಷ್ಯದಿಂದಾಗಿ ವೃತ್ತದ ಅಭಿವೃದ್ಧಿ ಕ್ಷೀಣಿಸಿತ್ತು, ವೃತ್ತದಲ್ಲಿ ಅಳವಡಿಸಿದ್ದ ಬೀದಿ ದೀಪ ಕಳ್ಳರ ಪಾಲಾಗಿತ್ತು, ಅನೇಕ ವಾಹನಗಳ ಡಿಕ್ಕಿಯಿಂದ ವೃತ್ತ ಭಗ್ನಗೊಂಡಿತ್ತು. ನಾಡಿನ ಹೆಸರಾಂತ ಸಾಹಿತಿ, ಕನ್ನಡಪರ ಹೋರಾಟಗಾರ ಅನಕೃ ಹೆಸರಿನ ವೃತ್ತವನ್ನು ಅಭಿವೃದ್ಧಿಪಡಿಸಲು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಒತ್ತಾಯಿಸಿದ್ದರು. ಕನ್ನಡಪ್ರಭದಲ್ಲಿ ಜ.20ರಂದು ಹಾಗೂ ಇದಕ್ಕೂ ಮುನ್ನ ಅನಕೃ ವೃತ್ತದ ನಿರ್ಲಕ್ಷ್ಯ ಹಾಗೂ ಅಭಿವೃದ್ಧಿಗೆ ಸಂಬಂಧಿಸಿ ಸಂಬಂಧಪಟ್ಟವರ ಗಮನ ಸೆಳೆಯುವ ವರದಿ ಪ್ರಕಟವಾಗಿತ್ತು. ತಡವಾದರೂ ಅನಕೃ ಜೋಡಿ ರಸ್ತೆಯ ವೃತವನ್ನು ನವೀಕರಣಗೊಳಿಸಲಾಗಿದೆ. ಆದರೆ, ಈ ಕೆಲಸವನ್ನು ನಗರ ಪೊಲೀಸರು ಕೈಗೆತ್ತಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶತಮಾನ ಪೂರೈಸಿರುವ ಬ್ರಿಟಿಷರ ಕಾಲದ ನಗರ ಪೊಲೀಸ್ ಠಾಣೆಯನ್ನು ಇತ್ತೀಚೆಗಷ್ಟೆ ಕೆಇಬಿ ವಸತಿ ಸಮುಚ್ಚಯಕ್ಕೆ ಸ್ಥಳಾಂತರಿಸಲಾಗಿದೆ. ಹಳೆ ಕಟ್ಟಡವನ್ನು ಕೆಡವಿ ಹೊಸಗಾಗಿ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಅನಕೃ ಜೋಡಿ ರಸ್ತೆಯ ಮುಂದೆ ಇರುವ ಹಾಲಿ ಪೊಲೀಸ್ ಠಾಣೆಯ ಆಂದ ಹೆಚ್ಚಿಸಲು ಹಾಗೂ ಠಾಣೆ ಮುಂದೆ ಬೀದಿ ದೀಪದ ವ್ಯವಸ್ಥೆಗಾಗಿ ಅಲೋಚಿಸಿದ ನಗರ ಸಿಪಿಐ ಶಿವಕುಮಾರ್ ನಗರಸಭೆ ಅನುದಾನಕ್ಕೆ ಕಾಯದೆ ದಾನಿಗಳು ಮತ್ತು ಪೊಲೀಸ್ ಇಲಾಖೆಯ ಮಾನವ ಸಂಪನ್ಮೂಲವನ್ನು ಬಳಸಿ ವೃತ್ತವನ್ನು ಅಭಿವೃದ್ಧಿಪಡಿಸಿದ್ದಾರೆ. ಬೀದಿ ದೀಪ ಅಳವಡಿಸಿದ್ದಾರೆ. ನಗರಸಭೆ ಮಾಡಬೇಕಾಗಿದ್ದ ಕೆಲಸವನ್ನು ತಾವೇ ಆಸಕ್ತಿ ವಹಿಸಿ ಮಾಡಿಸಿ ಎಲ್ಲರ ಮೆಚ್ಚುಗೆ ಪಡೆದಿರುವ ಸಿಪಿಐ ಶಿವಕುಮಾರ್ ನವೀಕರಣಗೊಂಡಿರುವ ವೃತ್ತದ ಜೋಡಿ ರಸ್ತೆಗೆ ಅನಕೃ ಹೆಸರನ್ನು ಅಧಿಕೃತಗೊಳ್ಳುವಂತೆ ಮಾಡುವ ಮೂಲಕ ಕೋಲಾರ ನಗರದ ಜನತೆಯ ವಿಶ್ವಾಸ ಇನ್ನಷ್ಟು ಹೆಚ್ಚಿಸಕೊಳ್ಳಬೇಕೆಂಬುದು ಕನ್ನಡಪರ ಸಂಘಟನೆಗಳ ಒತ್ತಾಸೆಯಾಗಿದೆ. ಅನಕೃ ಜೋಡಿ ರಸ್ತೆಯಲ್ಲಿ ಪ್ರತಿದಿನ ನೂರಾರು ಜನರು ಬೆಳಿಗ್ಗೆ ಹೊತ್ತು ವಾಯು ವಿಹಾರ ನಡೆಸುವುದರಿಂದ ನವೀಕರಣಗೊಂಡಿರುವ ವೃತ್ತ ವಾಯು ವಿಹಾರಿಗಳಿಗೆ ಮುದ ನೀಡುವುದರಲ್ಲಿ ಅನುಮಾನವಿಲ್ಲ. ಪೊಲೀಸ್ ಇಲಾಖೆಯವರು ಜೋಡಿ ರಸ್ತೆಯಲ್ಲಿ ವಾಯು ವಿಹಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ರಸ್ತೆಯ ಇಕ್ಕಲೆಡೆಗಳಲ್ಲಿ ಫುಟ್ಪಾತ್ ನಿರ್ಮಿಸಿದರೆ ಕೋಲಾರ ನಗರದಲ್ಲೇ ಅನಕೃ ಜೋಡಿ ರಸ್ತೆ ಅತ್ಯಂತ ಮಾದರಿ ರಸ್ತೆ ಆಗುತ್ತದೆ. ಇದೇ ರೀತಿ ನಗರಸಭೆ ದಾನಿಗಳ ಹಾಗೂ ಸರ್ಕಾರದ ಅನುದಾನದಿಂದ ನಗರದ ವಿವಿಧ ವೃತ್ತಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕೋಲಾರ ದೊಡ್ಡ ಹಳ್ಳಿ ಎಂಬ ಅಪಕೀರ್ತಿಯಿಂದ ಮುಕ್ತಗೊಳಿಸಿ ಸುಂದರ ನಗರವೆಂಬ ಖ್ಯಾತಿ ಸಂಪಾದಿಸುವಂತೆ ಬದ್ಧತೆ ತೋರಬೇಕೆಂಬುದು ಜನತೆ ಸಲಹೆಯೂ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

