ಕೋಲಾರ

ಪೋಡಿ ವೀಕ್ಷಣೆಗೆ 22ಕ್ಕೆ ಕಂದಾಯ ಸಚಿವರ ಭೇಟಿ

Published On :

ಕೋಲಾರ: ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಿರುವ ಪೋಡಿ ಆದಾಲತ್ ವೀಕ್ಷಣೆಗಾಗಿ ಜು.22ರಂದು ಕೋಲಾರ ತಾಲೂಕಿನ ನರಸಾಪುರಕ್ಕೆ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದ್ದಾರೆ.
ನಗರದ ವಾರ್ತಾ ಇಲಾಖೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಂದಾಯ ಅದಾಲತ್ ರೀತಿಯಲ್ಲೇ ಪೋಡಿ ಅದಾಲತ್ ಯಶಸ್ವಿಗೊಳಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಂದಾಯ ಅದಾಲತ್ ನಡೆಸಿ ಸುಮಾರು 43 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. 47 ಸಾವಿರ ಆರ್‌ಟಿಸಿ ಪ್ರಕರಣಗಳು ಬಾಕಿಯಿವೆ. 46 ಸಾವಿರ ಪೋಡಿ ಆಗಬೇಕಾಗಿರುವುದರಿಂದ ಆರ್‌ಟಿಸಿಗಳನ್ನು ಸರ್ವೆ ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಕೋಲಾರ ಜಿಲ್ಲೆಯಲ್ಲಿ ಕಂದಾಯ ಅದಾಲತ್ ನಡೆಸಿ ರೈತರಿಗೆ ಅನುಕೂಲ ಮಾಡಲಾಗಿದೆ. ಇದೇ ರೀತಿ ಪೋಡಿ ಅದಾಲತ್ ಸಹ ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆಸಲಾಗುತ್ತಿದ್ದು ಅದಾಲತ್ ನಂತರ ಎಲ್ಲಾ ದಾಖಲೆಗಳನ್ನು ಭೂಮಿ ಯೋಜನೆಯಡಿ ದಾಖಲಿಸಿಡಲಾಗುತ್ತದೆ. ಕಂದಾಯ ಅದಾಲತ್‌ನಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳನ್ನು ಕಂಪ್ಯೂಟರ್‌ಗೆ ದಾಖಲು ಮಾಡಲಾಗಿದ್ದು, ಶೇ.60ರಷ್ಟು ಕೆಲಸ ಮುಗಿದಿದೆ. ಬಾಕಿ ಶೇ.40ರಷ್ಟು ಕೆಲಸ ಸದ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಜು.21ರಿಂದಲೇ ಪ್ರಾರಂಭ: ಪೋಡಿ ಅದಾಲತ್ ಜು.21ರಂದು ಮಾಲೂರು ತಾಲೂಕಿನ ಮಾಸ್ತಿಯಲ್ಲಿ ಆರಂಭವಾಗಲಿದೆ. ಜು.22ರಂದು ಕೋಲಾರ ತಾಲೂಕಿನ ನರಸಾಪುರ, ಬಂಗಾರಪೇಟೆ ತಾಲೂಕಿನ ಬೂದಿಕೋಟಿ, ಮುಳಬಾಗಿಲು ತಾಲೂಕಿನ ನೆಲವೆಂಕಿ, ಶ್ರೀನಿವಾಸಪುರ ತಾಲೂಕು ಬೈರಕೂರಿನಲ್ಲಿ ಪ್ರಥಮ ಹಂತದ ಅದಾಲತ್ ನಡೆಸಲಾಗುವುದು. ಪೋಡಿ ಅದಾಲತ್ ನಡೆಸುವ ಉದ್ದೇಶದಿಂದ ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ ಎಂದರು.
ನರಸಾಪುರಕ್ಕೆ ಜು.22ರಂದು ಕಂದಾಯ ಸಚಿವ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಅಧಿಕಾರಿಗಳಿಗೆ ಈ ಹೋಬಳಿಗೆ ಸಂಬಂಧಿಸಿದಂತೆ ಹದ್ದುಬಸ್ತು, ದರಕಾಸ್ತು, ಭೂಸ್ವಾಧೀನ, ಅಲಿನೇಷನ್‌ಗಳ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ವಿದ್ಯಾರ್ಥಿ ವೇತನಕ್ಕೆ ಹಣ: ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ಬಾಕಿಯಿದ 10ರಿಂದ 11 ಕೋಟಿ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಿ ವಿದ್ಯಾರ್ಥಿಗಳ ಖಾತೆಗೆ ಆನ್‌ಲೈನ್ ಮೂಲಕ ನೇರವಾಗಿ ಜಮಾವಣೆ ಮಾಡವಾಗಿದೆ. ವಿದ್ಯಾರ್ಥಿ ವೇತನ ನೇರವಾಗಿ ವಿದ್ಯಾರ್ಥಿಗಳ ಖಾತೆಗಳಿಗೆ ಜಮಾ ಆಗುವುದರಿಂದ ಯಾವುದೇ ಅಕ್ರಮ ನಡೆಯಲು ಅವಕಾಶವಿಲ್ಲ. ಬಾಕಿಯಿದ್ದ ವಿದ್ಯಾರ್ಥಿ ವೇತನವನ್ನು ಸಂಪೂರ್ಣ ಬಿಡುಗಡೆ ಮಾಡಲಾಗಿದೆ ಎಂದರು.


ಅಂಗನವಾಡಿ ಕಾರ್ಯಕರ್ತೆಯರ ನೇಮಕವೂ ಆನ್‌ಲೈನ್


ಅಂಗನವಾಡಿ ಸಹಾಯಕಿಯರ ಮತ್ತು ಕಾರ್ಯಕರ್ತೆಯರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅನ್‌ಲೈನ್ ಮಾಡಲಾಗಿದ್ದು, ಆ.13ರೊಳಗೆ ಅರ್ಜಿಯನ್ನು ಕಾರ್ಯಕರ್ತೆಯರು ಸಲ್ಲಿಸಬೇಕು. ಅಂಗನವಾಡಿ ಸಹಾಯಕಿಯರ 195 ಮತ್ತು ಕಾರ್ಯಕರ್ತೆಯರ 87 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಯಾವುದೇ ಅಕ್ರಮಗಳಿಗೆ ಎಡೆ ಮಾಡದೆ ಸಂಪೂರ್ಣವಾಗಿ ಅನ್‌ಲೈನ್ ಮಾಡಲಾಗಿದೆ. ಕೇವಲ ಅರ್ಜಿಯನ್ನು ಅನ್‌ಲೈನ್‌ನಲ್ಲಿ ಭರ್ತಿ ಮಾಡಿ ಕಳುಹಿಸಬೇಕು. ಆ.16ರಂದು ಪರಿಶೀಲನೆ ಸಂದರ್ಭದಲ್ಲಿ ಎಲ್ಲಾ ದಾಖಲೆಗಳನ್ನು ಕಾರ್ಯಕರ್ತೆಯರು ತರಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೂ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದ್ದು, ಕಾರ್ಯಕರ್ತೆಯರು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಲು ಬಯಸಿದ್ದರೆ ಅಂಥವರಿಗೆ ವರ್ಗಾವಣೆ ಕೌನ್ಸೆಲಿಂಗ್ ನಡೆಸುವಂತೆ ಸಲಹೆ ನೀಡಲಾಗಿದೆ ಎಂದರು. ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗೆ ಭೇಟಿ ನೀಡಿ ಪೋಡಿ ಅದಾಲತ್ ಸಿದ್ಧತೆಗಳ ಬಗ್ಗೆ ಪರಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.