ಕೋಲಾರ

ಸರ್ಕಾರಿ ಶಾಲೆಯಲ್ಲಿ ಜಾತಿ ರಾಜಕೀಯ

Published On :

ಎನ್. ಬಾಬು
ಚಿಂತಾಮಣಿ: ಅಕ್ಷರ ದಾಸೋಹ ಅಡುಗೆ ಸಹಾಯಕಿ ನೇಮಕಾತಿ ವಿಷಯ ಕಟಮಾಚನಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾರಕಕ್ಕೇರಿದ್ದು ಸವರ್ಣೀಯರು ಹಾಗೂ ದಲಿತರ ನಡುವೆ ಜಾತಿ ಸಂಘರ್ಷ ಏರ್ಪಟ್ಟಿದೆ.
ದಲಿತರು ಮಾಡುವ ಅಡುಗೆ ನಮ್ಮ ಮಕ್ಕಳಿಗೆ ಹಾಕುವುದು ಬೇಡ. ಅಡುಗೆ ಸಹಾಯಕಿಯನ್ನು ಬದಲು ಮಾಡದಿದ್ದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಕೆಲವು ಪೋಷಕರು ಪಟ್ಟು ಹಿಡಿದು ಬಿಸಿಯೂಟ ಕೋಣೆಗೆ ಬೀಗ ಜಡಿದಿದ್ದರಿಂದ ಬಿಸಿಯೂಟವೇ ಇಲ್ಲದಂತಾಗಿದೆ.
ಚಿಂತಾಮಣಿ ನಗರದಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಕಟಮಾಚನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೀತಮ್ಮ ಹಾಗೂ ಶೋಭಮ್ಮ ಎಂಬವರು ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಿಂಗಳ ಹಿಂದೆ ಅನಾರೋಗ್ಯದಿಂದ ಇಬ್ಬರೂ ರಾಜಿನಾಮೆ ನೀಡಿದ್ದರಿಂದ ಎರಡೂ ಹುದ್ದೆಗಳು ಖಾಲಿಯಾಗಿವೆ. ತೆರವಾಗಿರುವ ಹುದ್ದೆಗಳಿಗೆ ಅಡುಗೆ ಸಹಾಯಕರನ್ನು ನೇಮಕ ಮಾಡಲು ಮುಂದಾದಾಗ ಗ್ರಾಮದ ಕೆಲವು ಮುಖಂಡರ ನಡುವೆ ಸ್ವಪ್ರತಿಷ್ಠೆಯಿಂದ ಜಾತಿಯನ್ನು ಎಳೆದು ತಂದಿದ್ದಾರೆ.
ಮೇಲ್ವರ್ಗದವರನ್ನೇ ಅಡುಗೆ ಸಹಾಯಕರನ್ನಾಗಿ ನೇಮಕ ಮಾಡಬೇಕೆಂದು ಕೆಲವರು ಪಟ್ಟು ಹಿಡಿದಿದ್ದರಿಂದ ಪರಿಸ್ಥಿತಿ ತಾರಕಕ್ಕೇರಿ ಅಡುಗೆ ಕೋಣೆಗೆಯೇ ಬೀಗ ಜಡಿಯಲಾಗಿದೆ. ದಲಿತರು ಮತ್ತು ಮೇಲ್ವರ್ಗದವರ ತಿಕ್ಕಾಟದಿಂದ ಶಾಲೆಯಲ್ಲಿನ ಮಕ್ಕಳಿಗೆ ಬಿಸಿಯೂಟ ಇಲ್ಲದಂತಾಗಿದೆ. ಶಾಲೆಯಲ್ಲಿರುವ 25 ಮಕ್ಕಳು ಜಾತಿ ತಿಕ್ಕಾಟದಲ್ಲಿ ಉಪವಾಸ ಬೀಳುವಂತಾಗಿದೆ. ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ ಹಾಗೂ ಸಹ ಶಿಕ್ಷಕಿಯರಾದ ಶೋಭ ಮತ್ತು ಭಾರತಿ ಅಸಹಾಯಕರಾಗಿ ಕೈ ಕಟ್ಟಿ ಕುಳಿತಿದಿದ್ದಾರೆ.
ಶಿಕ್ಷಕಿಯರಿಗೇ ಧಮಕಿ: ಕಟಮಾಚನಹಳ್ಳಿ ಗ್ರಾಮದಲ್ಲಿನ ಹಲವರು ಚಿಂತಾಮಣಿಯಿಂದ ಶಾಲೆಗೆ ಬರುವ ಮಹಿಳಾ ಶಿಕ್ಷಕಿಯರಿಗೆ ವಿನಾಕಾರಣ ಕಾಟ ಕೊಡುತ್ತಿದ್ದಾರೆ. ಅಕ್ಷರ ದಾಸೋಹ ಅಡುಗೆ ಸಹಾಯಕಿಯರಾಗಿ ದಲಿತರನ್ನು ನೇಮಿಸಿದರೆ ನಮ್ಮ ಮಕ್ಕಳು ಊಟ ಮಾಡುವುದಿಲ್ಲ. ಹಾಗೇನಾದರೂ ನೇಮಕಾತಿ ಮಾಡಿದರೆ ನಿಮ್ಮ ಮೇಲೆ ತಿರುಗಿ ಬಿದ್ದು ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಗ್ರಾಮದಲ್ಲಿ ಕ್ಷುಲ್ಲಕ ರಾಜಕೀಯ ಬೆರೆಸಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಭದ್ರತೆಯಿಲ್ಲದೆ ಭಯದ ವಾತಾವರಣದಿಂದ ಕೆಲಸ ಮಾಡುವ ಪರಿಸ್ಥಿತಿ ಒದಗಿದ್ದರೂ ಇಲ್ಲಿನ ವಿದ್ಯುಮಾನಗಳ ಬಗ್ಗೆ ತಲೆಕೆಡಿಸಿಕೊಳ್ಳದ ಮೇಲಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನವನ್ನು ಶಿಕ್ಷಕರು ವ್ಯಕ್ತಪಡಿಸಿದ್ದಾರೆ.
ಮಕ್ಕಳ ಪ್ರತಿಭಟನೆ: ಇದೆಲ್ಲ ಘಟನೆಗಳಿಂದ ಬೇಸತ್ತು ಉಪವಾಸ ಬೀಳುತ್ತಿರುವ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಡುಗೆ ಸಹಾಯಕರಿಲ್ಲದೆ ಇರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಶಾಲಾ ಆವರಣದಲ್ಲಿ ಕೈ ಮೇಲೆತ್ತಿ ಪ್ರತಿಭಟನೆ ನಡೆಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.