ಕೋಲಾರ

ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಬೀದಿಗಿಳಿದ ನಾಗರಿಕರು

Published On :

ಕೆಜಿಎಫ್: ನಗರದ ಇ.ಟಿ.ಬ್ಲಾಕ್ ವಾರ್ಡ್‌ನ ಪೂಸ್ವಾಮಿ ಬಡಾವಣೆಯಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲದೆ ನಾಗರಿಕರು ಪರದಾಡುತ್ತಿದ್ದರೂ ನಗರಸಭೆ ಹಾಗೂ ಇಲ್ಲಿನ ಸದಸ್ಯರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಬಡಾವಣೆಯ ನಾಗರಿಕರು ಮತ್ತು ಮಹಿಳೆಯರು ನಗರಸಭೆ ಕಚೇರಿ ಎದುರು ಪ್ರತಿಭಟಿಸಿದರು. ಬಡಾವಣೆಯಲ್ಲಿ ಸರಿಯಾದ ರಸ್ತೆ, ಚರಂಡಿ, ಕುಡಿಯುವ ನೀರು ಸಾರ್ವಜನಿಕ ಶೌಚಾಲಯ ಮುಂತಾದ ಮೂಲ ಸೌಕರ್ಯಗಳಿಲ್ಲದೆ ಜನ ಪರದಾಡುವಂತಾಗಿದೆ. ಬಿಜಿಎಂಎಲ್ ಚಿನ್ನದ ಗಣಿ ಪ್ರದೇಶಕ್ಕೆ ಒಳಗೊಂಡಿರುವ ಈ ಬಡಾವಣೆಯಲ್ಲಿ ನಗರಸಭೆಯಾಗಲೀ ಅಥವಾ ಜನಪ್ರತಿನಿಧಿಗಳಾಗಲೀ ಯಾವುದೇ ಸೌಕರ್ಯಗಳನ್ನು ಕಲ್ಪಿಸಲು ಮತ್ತು ತಮ್ಮ ಸಂಕಷ್ಟಗಳನ್ನು ಆಲಿಸಲು ಮುಂದಾಗುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಜನತೆ ಕಳೆದ ಆರು ತಿಂಗಳಿಂದ ಕುಡಿಯಲು ನೀರಿಲ್ಲದೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಖಾಸಗಿ ಟ್ಯಾಂಕ್ ಮೂಲಕ ಒಂದು ಬಿಂದಿಗೆಗೆ 3ರಿಂದ 4 ರೂಗಳು ನೀಡಬೇಕಾಗುತ್ತದೆ.ಇಲ್ಲಿ ವಾಸಿಸುವ ಬಹುತೇಕ ಚಿನ್ನದ ಗಣಿ ಕಾರ್ಮಿಕರ ಕುಟುಂಬಗಳು ಜೀವನ ನಡೆಸಲು ಪರದಾಡುತ್ತಿದ್ದು ಕುಡಿಯುವ ನೀರಿಗಾಗಿ ಹಣವನ್ನು ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ನಗರಸಭೆ ಅಧ್ಯಕ್ಷ ಎಂ. ಭಕ್ತವತ್ಸಲಂ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ನಗರಸಭೆ ವತಿಯಿಂದ ಕೊಳವೆಬಾವಿಯನ್ನು ಕೊರೆಸಿ ರಸ್ತೆ ಹಾಗೂ ಚರಂಡಿಯ ಸ್ವಚ್ಛತೆಗೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.  ಈ ವೇಳೆ ಪೂಸ್ವಾಮಿ ಬಡಾವಣೆಯ ನಿವಾಸಿಗಲಾದ ರಾಜು, ಸತ್ಯಬಾಮ, ಕುಮುದ, ಸೆಲ್ವಕುಮಾರ್, ಜಗನಾಥನ್, ಪಿಲೋಮಿನಾ, ದೇವದಾಸ್ ಮತ್ತಿತರರು ಹಾಜರಿದ್ದರು.
ಸಿಇಟಿ ಗೊಂದಲ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಬೀದಿಗಿಳಿದ ವಿದ್ಯಾರ್ಥಿಗಳು
ಬಾಗೇಪಲ್ಲಿ: ರಾಜ್ಯ ಸರ್ಕಾರ ಸಿಇಟಿ ಸೀಟು ಹಂಚಿಕೆ ವಿಚಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು  ಕಾಲೇಜುಗಳನ್ನು ಬಹಿಷ್ಕರಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪಟ್ಟಣದ ಎಚ್.ಎನ್. ವೃತ್ತದಿಂದ ಹೊರಟ ವಿದ್ಯಾರ್ಥಿಗಳು ಮುಖ್ಯರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಬಂದು ಸಿಇಟಿ ಗೊಂದಲವನ್ನು ತಕ್ಷಣ ನಿವಾರಿಸುವಂತೆ ಒತ್ತಾಯಿಸಿದರು. ಪತ್ರಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ತಾಲೂಕು ಸಂಚಾಲಕ ಕೆ.ಎನ್. ಬಾಬುರೆಡ್ಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನಗೆ ನೀಡಿರುವ ಜವಾಬ್ದಾರಿ ಹಾಗೂ ಪಾರದರ್ಶಕ ನ್ಯಾಯಯುತ ಕೌನ್ಸೆಲಿಂಗ್ ಮೂಲಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದ ಸೀಟ್ ಹಂಚಿಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ನಿದೇರ್ಶಕರು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜೊತೆಗೂಡಿ ಮೆಡಿಕಲ್, ಡೆಂಟಲ್  ಮತ್ತು ಪಿ.ಜಿ. ಸಿ.ಇ.ಟಿ.ಯನ್ನು ನಡೆಸಿರುವ ಸೀಟು ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಬಂದಿರುವ ನಿಟ್ಟಿನಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದರು. ಮನವಿ ಪತ್ರವನ್ನು ತಹಸೀಲ್ದಾರ್ ನಾಗರಾಜ್‌ಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ  ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ನಗರ ಕಾರ್ಯದರ್ಶಿ ಶ್ರೀಕಾಂತ್ ಹೆಚ್ . ಎಸ್, ಬಿಜೆಪಿ ಮಂಡಲಾಧ್ಯಕ್ಷ ಗೂಳೂರು ಲಕ್ಷ್ಮೀನಾರಾಯಣ ಸೇರಿದಂತೆ ಅನೇಕ ಮುಖಂಡರು ಇದ್ದರು.
ಶಾಪೂರು ಗ್ರಾಪಂ ವ್ಯಾಪ್ತಿಗೆ ಮೂಲಸೌಲಭ್ಯ ಒದಗಿಸಿ
ಕೋಲಾರ: ತಾಲೂಕಿನ ಶಾಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಬಾಕಿ ಇರುವ ಬಿಲ್‌ಗಳನ್ನು ಶೀಘ್ರವಾಗಿ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಡಿವೈಎಫ್‌ಐ, ಜೆಎಂಎಸ್, ಪ್ರಾಂತ ರೈತ ಸಂಘದ ವತಿಯಿಂದ ಶಾಪೂರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆನಡೆಸಲಾಯಿತು. ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಜಾರಿ ಮಾಡಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ ದನದ ಕೊಟ್ಟಿಗೆಯನ್ನು ಹಲವು ಮಂದಿ ನಿರ್ಮಿಸಿಕೊಂಡಿದ್ದು, ಇವರಿಗೆ ನೀಡಬೇಕಾದ ಬಿಲ್‌ಗಳನ್ನು ಶೀಘ್ರವಾಗಿ ನೀಡಬೇಕು, ರಾಜೀವ್‌ಗಾಂಧಿ ಹೌಸಿಂಗೆ ಬೋರ್ಡಿಂದ ಮನೆಗಳು ಮಂಜೂರಾಗಿರುವ ಫಲಾನುಭವಿಗಳಿಗೆ ಸಮರ್ಪಕವಾಗಿ ಬಿಲ್‌ಗಳನ್ನು ಪಾವತಿ ಮಾಡಬೇಕು. ಶೌಚಾಲಯ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಬಿಲ್‌ಗಳನ್ನು ಶೀಘ್ರವಾಗಿ ಪಾವತಿ ಮಾಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಊರುಗಳಲ್ಲಿ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕು, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಬೀದಿ ದೀಪಗಳನ್ನು ಅಳವಡಿಸಬೇಕು, ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ಮಶಾನ ಮತ್ತು ಗುಂಡುತೋಪುಗಳನ್ನು ಶೀಘ್ರವಾಗಿ ಸರ್ವೇ ಮಾಡಿಸಿ ಅವುಗಳನ್ನು ಅಭಿವೃದ್ಧಿಪಡಿಸಬೇಕು. ಮನೆ ನಿವೇಶನ ರಹಿತರಿಗೆ ಶೀಘ್ರವಾಗಿ ಮನೆ ನಿವೇಶನಗಳನ್ನು ನೀಡಬೇಕು, ಪಡಿತರ ಚೀಟಿ ಇಲ್ಲದಿರುವವರಿಗೆ ಪಡಿತರ ಚೀಟಿ ನೀಡಬೇಕು ಮತ್ತು ಹಾಲಿ ಇರುವ ಪಡಿತರ ಚೀಟಿಗಳಿಗೆ ತುರ್ತಾಗಿ ಭಾವಚಿತ್ರಗಳನ್ನು ತೆಗೆಯಬೇಕು, ಶಾಪೂರು ಗ್ರಾಮದಲ್ಲಿರುವ ಪಶು ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ, ಸ್ಥಳಕ್ಕೆ ಆಗಮಿಸಿದ್ದ ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆ ನೇತೃತ್ವವನ್ನು ಡಿವೈಎಫ್‌ಐ ಮುಖಂಡರಾದ ಟಿ. ಸುಬ್ರಮಣಿ, ಬಿ.ಪಿ. ನಾಗರಾಜ್, ಡಿ.ಎಸ್. ವೆಂಕಟರಮಣಪ್ಪ, ಪ್ರಾಂತ ರೈತ ಸಂಘದ ಮುಖಂಡರಾದ ಹೊಲ್ಲಂಬಳ್ಳಿ ವೆಂಕಟೇಶಪ್ಪ, ಅಪ್ಪಯ್ಯಣ್ಣ, ಜೆಎಂಎಸ್. ಮುಖಂಡರಾದ ಕೆ.ಎಂ. ಸುಶೀಲ, ಬೈರಮ್ಮ ಮತ್ತಿತರರು ವಹಿಸಿದ್ದರು.
ಶಿಕ್ಷಕರ ಸಂಘಕ್ಕೆ ಆಯ್ಕೆ
ಚಿಂತಾಮಣಿ: ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಚುನಾವಣೆಗೆ 8 ಜನ ಸಹ ಶಿಕ್ಷಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಓಬಯ್ಯ ತಿಳಿಸಿದ್ದಾರೆ. ನಗರದ ಗುರುಭವನ ಮುಂಭಾಗದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಚುನಾವಣೆ ನಡೆಯಿತು. ಕಾರ್ಯಕಾರಿ ಸಮಿತಿ ಚುನಾವಣೆಗೆ ಹಲವಾರು ಶಿಕ್ಷಕರು ನಾಮಪತ್ರ ಸಲ್ಲಿಸಿದ್ದರೂ ಸಹ ಅಂತಿಮವಾಗಿ ನಾಮಪತ್ರ ಹಿಂಪಡೆದ ನಂತರ ಉಳಿದ 8 ಜನ ಪ್ರೌಢಶಾಲಾ ಸಹಶಿಕ್ಷಕರು ಅವಿರೋಧವಾಗಿ ಆಯ್ಕೆಯಾದರು.
ಸದಸ್ಯರು: ಸಿ.ಓಂಕಾರಪ್ಪ ವೆಂಕಟಗಿರಿಕೋಟೆ ಶಾಲೆ, ನಾರಾಯಣಮೂರ್ತಿ ವಿ.ಎಸ್. ಗಂಜೂರು ಶಾಲೆ, ಆರ್.ನಾರಾಯಣರೆಡ್ಡಿ ಬೂರಗಮಾಕಲಹಳ್ಳಿ ಶಾಲೆ, ಬಿ.ಎಚ್.ಮಂಜುನಾಥ್ ನಗರ ಬಾಲಕಿಯರ ಪ್ರೌಢಶಾಲೆ, ರಾಮಚಂದ್ರ ಸಿಂಗ್ ಡಿಲಿಜಿಯನ್ ಸಂಯುಕ್ತ ಪ್ರೌಢಶಾಲೆ, ಆರ್.ವೆಂಕಟರಮಣಾರೆಡ್ಡಿ ವೆಂಕಟಗಿರಿಕೋಟೆ ಶಾಲೆ, ವೆಂಕಟೇಶ್ವರರಾವ್.ಜೆ ಶ್ರೀರಾಮೇಶ್ವರ ಪ್ರೌಢಶಾಲೆ ಇರಗಂಪಲ್ಲಿ, ಶ್ರೀರಾಮ ನಗರ ಬಾಲಕರ ಶಾಲೆ. ಜುಲೈ 20ರಂದು ಅಧ್ಯಕ್ಷರ ಆಯ್ಕೆ ನಡೆಯಲಿದೆ. ಚುನಾವಣೆಯಲ್ಲಿ ಪ್ರಕಾಶ್ ರೆಡ್ಡಿ, ಎನ್.ವೆಂಕಟಾಚಲಪತಿ, ಎಂ.ರಾಜಣ್ಣ, ಸುಬ್ಬಾರೆಡ್ಡಿ, ಶ್ರೀಧರ್ ಬಾಬು, ಚಂದ್ರಶೇಖರ್, ನಾರಾಯಣಸ್ವಾಮಿ, ಮುನಿವೀರಪ್ಪ, ಆದಿನಾರಾಯಣ್, ಚಂದ್ರಪ್ಪ, ನಿರಂಜನ್ ಬಾಬು, ಗೋವಿಂದ್, ರಮೇಶ್, ವಿ.ಶಂಕರಪ್ಪ, ವೆಂಕಟರವಣಪ್ಪ, ವೈ.ಇ.ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಶಿಕ್ಷಕರು ಉಪಸ್ಥಿತರಿದ್ದರು.
ಬಿಜಿಎಂಎಲ್ ಅಭಿವೃದ್ಧಿಗೆ ಒತ್ತಾಯ
ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿ, ಹಟ್ಟಿ ಗೋಲ್ಡ್‌ಮೈನ್ಸ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಭಾರತ್ ಗೋಲ್ಡ್ ಮೈನ್ಸ್ ಯುನೈಟೆಡ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಬಳಗನ್ ನೇತೃತ್ವದಲ್ಲಿ ನಗರದ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅನ್ಬಳಗನ್, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗಣಿ ಸಚಿವ ನರೇಂದ್ರ ಸಿಂಗ್ ತೂಮರ್ ಅವರನ್ನು ಭೇಟಿ ಮಾಡಿ, ಬಿಜಿಎಂಎಲ್ ಹಸ್ತಾಂತರದ ಬಗ್ಗೆ ಮಾತನಾಡಿದ್ದಾರೆ. ಇದು ಸ್ವಾಗತಾರ್ಹ ಎಂದು ತಿಳಿಸಿದರು. ರಾಜ್ಯ ಸರ್ಕಾರ ಹಟ್ಟಿ ಚಿನ್ನದ ಗಣಿಯನ್ನು ಲಾಭದಾಯಕವಾಗಿ ಮುನ್ನಡೆಸಿಕೊಂಡು ಬರುತ್ತಿದ್ದು, ಕಳೆದ ಸಾಲಿನಲ್ಲಿ 130 ಕೋಟಿ ಆದಾಯ ಪಡೆದಿದೆ. ಅಲ್ಲದೆ ಗಣಿ, ಕಾರ್ಮಿಕರ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದೇ ರೀತಿಯಲ್ಲಿ ಬಿಜಿಎಂಎಲ್ ಚಿನ್ನದ ಗಣಿಯನ್ನು ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು. ಪ್ರಧಾನಿ ಮತ್ತು ಕೇಂದ್ರ ಗಣಿ ಸಚಿವರಿಗೆ ರಾಬರ್ಟ್‌ಸನ್ ಪೊಲೀಸ್ ಠಾಣೆಯ ನಿರೀಕ್ಷಕ ಲಕ್ಷ್ಮೀನಾರಾಯ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘದ ಮುಖಂಡರಾದ ಎಸ್.ಸಂಪತ್, ಪ್ರಭುರಾಮ್, ನೀಲಮೇಗನ್, ಪಾಂಡಿರಾಜ್, ಜೂನಿಯರ್ ಅಂತೋನಿ, ಮಹ್ಮದ್‌ಅಮೀರ್, ಗೋಪಿ, ವಿಜಯ, ರಾಮ್‌ಬಾಬು, ಜಾನ್ ಸೇರಿದಂತೆ ಇತರೆ ಮುಖಂಡರು ಹಾಗೂ ಕಾರ್ಮಿಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.