ಕೋಲಾರ

ಸ್ವಚ್ಛತಾ ಆಂದೋಲನದ ಯಶಸ್ಸಿಗೆ ಸಹಕರಿಸಿ

Published On :

ಕೋಲಾರ: ಕೋಲಾರ ನಗರಸಭೆ ವತಿಯಿಂದ ಹಮ್ಮಿಕೊಂಡಿರುವ ಸ್ವಚ್ಛತಾ ಆಂದೋಲನದ ಯಶಸ್ಸಿಗೆ ಪತ್ರಕರ್ತರು ಮತ್ತು ಸಾರ್ವಜನಿಕರು ಕೈಜೋಡಿಸುವಂತೆ ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್ ಮನವಿ ಮಾಡಿದರು.
ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಕರ್ತರ ಜತೆ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಗರಸಭೆ ವತಿಯಿಂದ ಮೊದಲ ಹಂತವಾಗಿ ಸ್ವಚ್ಛತಾ ಅಂದೋಲನವನ್ನು ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದ್ದು, ಕೇವಲ ನಗರಸಭೆ ಒಂದು ಕೈಯಿಂದ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದರು.
ನಗರದ ಸಮಸ್ಯೆಗಳು ಮತ್ತು ನಗರಸಭೆ ಆಡಳಿತ ಮಂಡಳಿಯ ಲೋಪಗಳನ್ನು ಗಮನಿಸುವ ಪತ್ರಕರ್ತರು ಈ ಬಗ್ಗೆ ತಮ್ಮ ಸಲಹೆ-ಸೂಚನೆಗಳನ್ನು ನೀಡಿದರೆ ಅದನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದೆಂದರು.
ಟ್ಯಾಕರ್‌ಗಳಿಗೆ ಕಡಿವಾಣ ಹಾಕಿ: ಕೋಲಾರ ನಗರದಲ್ಲಿ ನೀರಿನ ಕೊರತೆಯಿಲ್ಲ, ಸಿಗುವ ನೀರನ್ನು ಸಮರ್ಪಕವಾಗಿ ಎಲ್ಲರಿಗೂ ಸಿಗುವಂತಹ ಕೆಲಸ ಆಗಬೇಕಾಗಿದೆ, ಟ್ಯಾಂಕರ್‌ಗಳಿಗೆ ಸಂಪೂರ್ಣ ಕಡಿವಾಣ ಹಾಕುವಂತೆ ಪತ್ರಕರ್ತರ ಸಲಹೆ ನೀಡಿದರು.
ಪ್ರತಿ ತಿಂಗಳು ವಿದ್ಯುತ್ ಬಿಲ್ ನೀಡುವ ಮಾದರಿಯಲ್ಲಿ ನಗರಸಭೆ ಪ್ರತಿ ತಿಂಗಳು ನಗರದಲ್ಲಿರುವ ಮನೆ, ವಾಣಿಜ್ಯ ಮಳಿಗೆಗಳ ಬಳಿ ತೆರಳಿ ಕರ ವಸೂಲಿ ಮಾಡುವಂತಹ ಕಾರ್ಯ ಆಗಬೇಕಾಗಿದೆ, ಕೋಲಾರ ನಗರಸಭೆಯನ್ನು ವಿಕೇಂದ್ರಿಕರಣಗೊಳಿಸಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗಗಳಾಗಿ ವಿಂಗಡಿಸಿ ಯೋಜನೆಗಳನ್ನು ರೂಪಿಸಬೇಕೆಂದರು.
ನಗರದಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಸಾಕಷ್ಟು ಮರಗಳನ್ನು ಕಡಿದು ಹಾಕಿರುವುದರಿಂದ ಅರಣ್ಯ ಇಲಾಖೆಯ ಸಹಯೋಗದಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ಬೆಳಸಬೇಕು, ಜಯನಗರದಲ್ಲಿ ಕಳೆದ 4 ತಿಂಗಳಿನಿಂದ ರಸ್ತೆ ಡಾಂಬರೀಕರಣವಾಗುತ್ತಿದೆ, ಕೋಲಾರಮ್ಮ ಮತ್ತು ಕೋಡಿಕಣ್ಣೂರು ಕೆರೆಯಲ್ಲಿ ಕಸವನ್ನು ಹಾಕಲಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ನಾಯಿಗಳ ಹಾವಳಿ, ಶುದ್ಧ ನೀರು ಘಟಕ, ಫುಟ್ಪಾತ್ ಅಂಗಡಿಗಳ ತೆರವು, ಏಕಪಕ್ಷೀಯ ಏಕಮುಖ ಸಂಚಾರಗಳು, ನಾಲ್ಕೈದು ವಾರ್ಡಗಳನ್ನು ಸೇರಿಸಿಕೊಂಡು ನಾಗರೀಕರ ಸಮಸ್ಯೆಗಳನ್ನು ತಿಳಿದುಕೊಂಡು ಹಂತ, ಹಂತವಾಗಿ ಬಗೆಹರಿಸಬೇಕೆಂದು ತಿಳಿಸಿದರು. ಪತ್ರಕರ್ತರ ಸಲಹೆಗಳನ್ನು ಪಡೆದು ಮಾತನಾಡಿದ ಅಧ್ಯಕ್ಷ ಬಿ.ಎಂ. ಮುಬಾರಕ್ ಪತ್ರಕರ್ತರ ಒಳ್ಳೆ ಸಲಹೆಗಳನ್ನು ನೀಡಿದ್ದು, ಇದನ್ನು ಹಂತ ಹಂತವಾಗಿ ಕಾರ್ಯ ರೂಪಕ್ಕೆ ತರುವುದಾಗಿ ಭರವಸೆ ನೀಡಿದರು.
ನಗರಸಭೆ ಉಪಾಧ್ಯಕ್ಷ ಸಾಕಮ್ಮ, ಹೆಲ್ತ್ ಇನ್ಸ್‌ಪೆಕ್ಟರ್ ರಮೇಶ್, ಪತ್ರಕರ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.