ಕೋಲಾರ

ಕಾಮದಹನವಾಗಲಿ

Published On :

ಕೋಲಾರ: ರಾಜ್ಯದಲ್ಲಿ ಸರಣಿಯೋಪಾದಿಯಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಧರಿಸಿದೆ. ಹೆಣ್ಣು ಮಕ್ಕಳು ಆತಂಕ ಪಡಬೇಕಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು.
ಜಿಲ್ಲೆಯಲ್ಲಿ ನಾಲ್ಕು ಅತ್ಯಾಚಾರ ಪ್ರಕರಣಗಳ ನಂತರ ಎಚ್ಚೆತ್ತು ಜಿಲ್ಲೆಗೆ ಶನಿವಾರ ಭೇಟಿ ನೀಡಿದ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಕೃತ ಸ್ವಭಾವ, ಉದ್ವೇಗ, ಮಾನಸಿಕ ಅಸ್ವಸ್ಥತೆ ಇನ್ನಿತರ ಕಾರಣಗಳಿಂದ ಬಾಲಕಿಯರಿಂದ ಹಿಡಿದು ವೃದ್ಧೆಯರ ತನಕ ಅತ್ಯಾಚಾರವೆಸಲಾಗುತ್ತಿದೆ. ಸರ್ಕಾರ ಕಾನೂನಿಗೆ ತಿದ್ದುಪಡಿ ತಂದು ಕಾಮುಕರನ್ನು ಮಟ್ಟ ಹಾಕಲು ತೀರ್ಮಾನಿಸಿದೆ. ಈ ಸಂಬಂಧ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಅನುಷ್ಠಾನಕ್ಕೆ ತರಲಿದೆ ಎಂದರು.
ಅತ್ಯಾಚಾರಕ್ಕೆ ಒಳಗಾದವರು ಹಾಗೂ ನೊಂದವರ ಪೋಷಕರು ದೂರು ನೀಡಲು ಠಾಣೆಗೆ ಬಂದಾಗ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ದೂರುದಾರರ ಕಷ್ಟ, ಸುಖ ವಿಚಾರಿಸಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲು ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ನೊಂದವರಿಗೆ ನ್ಯಾಯ ಸಿಗುವಂತೆ ಮಾಡಬೇಕೆಂದು ಸೂಚಿಸಿದರು.
ಅತ್ಯಾಚಾರಕ್ಕೆ ಒಳಗಾಗಿರುವ ಹೆಣ್ಣು ಮಕ್ಕಳಿಗೆ ಚಿಕಿತ್ಸೆ ವೆಚ್ಚವನ್ನು ಭರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬದ್ಧವಾಗಿದೆ. ನೊಂದವರಿಗೆ ಪುನರ್‌ವಸತಿ, ಸಮಾಜದಲ್ಲಿ ತಲೆ ಎತ್ತಿ ನಡೆಯುವಂತಾಗಲು ಬೇಕಾದ ಮಾನಸಿಕ ಸ್ಥೈರ್ಯ ಕಲ್ಪಿಸಲಾಗುತ್ತದೆ. ಇಂತಹ ಜನರು ನೆಮ್ಮದಿಯಿಂದ ಬಾಳ್ವೆ ಮಾಡಲು ಸಮಾಜದ ಸಹಕಾರ ಮುಖ್ಯವೆಂದರು.
ಗ್ರಾಮಸಭೆಗಳಿಗೆ ಸೂಚನೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಾದ್ಯಂತ ವಿಶೇಷ ಗ್ರಾಮ ಸಭೆಗಳನ್ನು ನಡೆಸುವ ಮೂಲಕ ಹೆಣ್ಣು ಮಕ್ಕಳಲ್ಲಿ ಧೈರ್ಯ ಹಾಗೂ ಅರಿವು ಮೂಡಿಸುವ ಕೆಲಸವಾಗಬೇಕು. ಈ ಸಭೆಗಳಿಂದ ಕಾಮುಕರಿಗೆ ಎಚ್ಚರಿಕೆ ಸಂದೇಶ ರವಾನೆ ಆಗಬೇಕು.
ಗ್ರಾಮ ಸಭೆಗಳಿಗೆ ಊರಿನ ಮುಖಂಡರನ್ನು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಹಾಗೂ ಎಲ್ಲಾ ಪಕ್ಷಗಳ ಮುಖಂಡರನ್ನು ಆಹ್ವಾನಿಸಿ ಸಮನ್ವಯತೆಯಿಂದ ಸಭೆಗಳನ್ನು ನಡೆಸಿ ಜನತೆಯಲ್ಲಿ ಉಂಟಾಗಿರುವ ಆತಂಕ ನಿವಾರಣೆಯ ಜೊತೆಗೆ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಯತ್ನಿಸಿದ ಕಿರಾತಕ
ಕೆಜಿಎಫ್: ಅಂಗವಿಕಲನೊಬ್ಬ ಬುದ್ದಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿರುವ ಘಟನೆ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಡಮಾಕನಹಳ್ಳಿ ಗ್ರಾಮದಲ್ಲಿ ಬುದ್ದಿಮಾಂದ್ಯೆ ಮೇಲೆ ಅದೇ ಗ್ರಾಮದ ನಿವಾಸಿ ಶ್ರೀರಂಗ ಎಂಬ ವಿವಾಹಿತ ಅಂಗವಿಕಲ ಸಹ ಕೆರೆಯ ಬಳಿ ಕುರಿಗಳನ್ನು ಮೇಯಿಸಲು ಬಂದಿದ್ದ ಬುದ್ದಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದನು. ಆಕೆ ಕಿರುಚಿಕೊಂಡಿದ್ದರಿಂದ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಯುವತಿಯ ಬಟ್ಟೆ ಹರಿದು ಹೋಗಿದ್ದನ್ನು ಕಂಡು ತಂದೆ ಕೆಂಚಪ್ಪ ವಿಚಾರಿಸಿದಾಗಿ ನಡೆದ ಸಂಗತಿ ತಿಳಿಸಿದ್ದಾಳೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶ್ರೀರಂಗನನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ವರಿಷ್ಠರಿಗೆ ತರಾಟೆ
ಕೋಲಾರ: ನಿಮ್ಮ ಮೇಲೆ ವಿಪರೀತ ದೂರುಗಳು ಕೇಳಿ ಬಂದಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ ಪಡಿಸಲು ಶ್ರದ್ಧೆಯಿಂದ ಕೆಲಸ ಮಾಡಿ, ನಿರ್ಲಕ್ಷ್ಯ ತೋರಿದರೆ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ. ಈ ರೀತಿ ಜಿಲ್ಲಾ ಎಸ್ಪಿ ಅಜಯ್ ಹಿಲೋರಿ ಅವರಿಗೆ ಎಚ್ಚರಿಕೆ ನೀಡಿದವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ. ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಶನಿವಾರ ಡಿಸಿ ಕಚೇರಿಗೆ ಭೇಟಿ ನೀಡಿದ್ದ ಸಚಿವರು ಸುಮಾರು 20 ನಿಮಿಷ ಕಾದರೂ ಯಾವುದೇ ಉನ್ನತ ಅಧಿಕಾರಿ ಕಾಣ ಬರಲಿಲ್ಲ. ಇದರಿಂದ ಕುಪಿತರಾಗಿದ್ದ ಸಚಿವರಿಗೆ ಕೆಲ ವಕೀಲರು ಜಿಲ್ಲಾ ಎಸ್ಪಿ ವಿರುದ್ಧ ನೀಡಿದ ದೂರುಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಕಣ್ಣಿಗೆ ಬಿದ್ದ ಎಸ್ಪಿಯರವನ್ನು ತರಾಟೆಗೆ ತೆಗೆದುಕೊಂಡರು. ಅಟ್ರಾಸಿಟಿ ಸಭೆ ಇತ್ತು ಎಂದು ಎಸ್ಪಿ ಸಮಜಾಯಿಷಿ ನೀಡಿದರು. ಡಿಸಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಗೂ ಪ್ರವೇಶಿಸಿ ಕೆಲ ವಕೀಲರು ಎಸ್ಪಿ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದಲ್ಲದೆ, ಎಲ್ಲಾ ಕೆಲಸ ಡಿಸಿ ಮಾಡುವುದಾದರೆ ಎಸ್ಪಿ ಏಕೆ ಬೇಕು ಎಂದು ಪ್ರಶ್ನಿಸಿದರು.



ಟಿವಿಗಳಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಅತ್ಯಾಚಾರ ನಿಲ್ಲಲ್ಲ
ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಂದ ನನ್ನ ಮನಸ್ಸಿಗೆ ನೋವಾಗಿದೆ. ನೊಂದವರಿಗೆ ಸಾಂತ್ವನದ ಜೊತೆಗೆ ಸಮಾಜದಲ್ಲಿ ಮತ್ತೆ ತಲೆ ಎತ್ತಿ ನಿಲ್ಲುವುದಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯದ ಅವಶ್ಯಕತೆ ಇದೆ.ಟಿವಿಗಳ ಮುಂದೆ ಕಾಣಿಸಿಕೊಂಡು ಹೇಳಿಕೆ ನೀಡುವುದರಿಂದ ಅತ್ಯಾಚಾರಗಳು ನಿಲ್ಲುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಉಮಾಶ್ರೀ ಉಪದೇಶ ನೀಡಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ  ಪ್ರತಿಭಟನೆ ನಡೆಸುತ್ತಿರುವವರು ತಾವು ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ದೂರಿದ್ದಾರೆ. ಆದರೆ ಇಂದು ಕೋಲಾರದಲ್ಲಿ ನಡೆದಿರುವ ಸರಣಿ ಅತ್ಯಾಚಾರ ಪ್ರಕರಣಗಳ ಕುರಿತು ತಿಳಿಯಲು ಬಂದಿದ್ದೇನೆ. ಬಳಿಕ ಅಲ್ಲಿನ ನೊಂದ ಬಾಲಕಿಯನ್ನು ಭೇಟಿ ಆಗುತ್ತೇನೆಂದು ತಿಳಿಸಿದರು.
ವ್ಯತಿರಿಕ್ತ ಹೇಳಿಕೆ  ನೀಡಿದ ಯುವತಿಗೆ ಇಂದು ಕೌನ್ಸೆಲಿಂಗ್
ಶಿಡ್ಲಘಟ್ಟ: ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಕಾಚರಾಕನಹಳ್ಳಿಯ 18 ವರ್ಷ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದ್ದು, ಆಕೆಯ ರಕ್ಷಣೆಗೆ ಬಂದ ಸಹೋದರನ ಮೇಲೆ ರಾಡಿನಿಂದ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜು.17ರ ಮುಂಜಾನೆ 5 ಗಂಟೆ ಸಮಯದಲ್ಲಿ ಯುವತಿ ಜೋಳದ ತೋಟಕ್ಕೆ ಶೌಚಕ್ಕೆ ಹೋದಾಗ ಪಕ್ಕದ ಮನೆಯ ರಾಜಶೇಖರ್ ಎಂಬ ಯುವಕ ಹಿಂದಿನಿಂದ ಬಂದು ಬಟ್ಟೆಯಿಂದ ಯುವತಿ ಮುಖ ಮುಚ್ಚಿ ಅತ್ಯಾಚಾರಕ್ಕೆ ಯತ್ನಿಸಿದನೆಂದು ಆರೋಪಿಸಲಾಗಿದೆ. ಆಕೆಯ ಕಿರುಚಾಟ ಕೇಳಿದ ಅವರ ಅಣ್ಣ ಬೈರಾರೆಡ್ಡಿ ರಕ್ಷಣೆಗೆ ಬಂದಾಗ ಆರೋಪಿ ಹಲ್ಲೆ ನಡೆಸಿರುವುದಾಗಿ ಯುವತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕಿ ಭಾಗ್ಯಮ್ಮರ ಮುಂದೆ ಮೊದಲು ಹೇಳಿಕೆ ನೀಡಿದರು. ನಂತರ ಬಂದ ಪೊಲೀಸರ ಮುಂದೆ ಯುವತಿ ವಿರುದ್ಧವಾದ ಹೇಳಿಕೆ ನೀಡಿ, ತನ್ನ ಮೇಲೆ ಯಾರೂ ಅತ್ಯಾಚಾರಕ್ಕೆ ಯತ್ನಿಸಿಲ್ಲವೆಂದು ನೀರಿಗಾಗಿ ಜಗಳ ನಡೆದು ಹಲ್ಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಗ್ರಾಮಸ್ಥರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಅತ್ಯಾಚಾರ ಯತ್ನ ನಡೆದಿರುವುದು ನಿಜ. ಗ್ರಾಮದಲ್ಲಿ ಪಂಚಾಯ್ತಿ ಮಾಡಿ ಗ್ರಾಮಕ್ಕೆ ಕೆಟ್ಟ ಹೆಸರು ಬರುವುದು ಬೇಡವೆಂದು ವಿಷಯವನ್ನು ಗೌಪ್ಯವಾಗಿಡಲು ತೀರ್ಮಾನಿಸಿದ್ದಾರೆಂದು ತಿಳಿಸಿದ್ದಾರೆ. ಈ ಬಗ್ಗೆ ಸ್ಥಳದಲ್ಲಿದ್ದ ವೃತ್ತ ನೀರಿಕ್ಷಕ ಶ್ರೀನಿವಾಸ್ ಮತ್ತು ಸಹಾಯಕ ನಿರೀಕ್ಷಕ ರಾಘವೇಂದ್ರರನ್ನು ಈ ಬಗ್ಗೆ ವಿಚಾರಿಸಿದಾಗ ಯುವತಿ ಕಡೆಯಿಂದ ಅತ್ಯಾಚಾರದ ಬಗ್ಗೆ ಯಾವುದೇ ದೂರು ಬಂದಿಲ್ಲವೆಂದು ಬೈರಾರೆಡ್ಡಿ ಮತ್ತು ರಾಜಶೇಖರ್ ಪರಸ್ವರ ಹೊಡೆದಾಡಿದ ಬಗ್ಗೆ ದೂರು ಬಂದಿದೆಯೆಂದು ತಿಳಿಸಿದ್ದಾರೆ. ಆದರೆ ಸಂಜೆ ನಡೆದ ಬೆಳವಣಿಗೆಯಲ್ಲಿ ಯುವತಿ ಮತ್ತೆ ಉಲ್ಟಾ ಹೊಡೆದಿದ್ದು, ಅತ್ಯಾಚಾರ ನಡೆದಿರುವುದು ಸತ್ಯ ಎಂದು ಪೊಲೀಸರ ಮುಂದೆ ಹೇಳಿದ್ದಾರೆ. ಆದರೆ ಪೊಲೀಸರು ಆ ವ್ಯತಿರಿಕ್ತ ಹೇಳಿಕೆಗಳಲ್ಲಿ ಗೊಂದಲಗಳಿದ್ದು, ಭಾನುವಾರ ಯುವತಿಗೆ ಕೌನ್ಸಲಿಂಗ್ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.