ಇಬ್ಬರು ಮನೆಗಳ್ಳರ ಬಂಧನ; ಲಕ್ಷಾಂತರ ಮೌಲ್ಯದ ವಸ್ತು ವಶ
ಕೆಜಿಎಫ್: ನಗರಾದ್ಯಂತ ಮನೆಗಳ ಬೀಗಗಳನ್ನು ಮುರಿದು ಚಿನ್ನಾಭರಣ ನಗದು ಸೇರಿ ಇತರೆ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿ ಅವರಿಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳ್ಳರ ಪತ್ತೆಗಾಗಿ ಡಿವೈಎಸ್ಪಿ ಎ.ಕೆ. ವಿವೇಕಾನಂದ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದು ತಮಿಳುನಾಡಿನ ಪೇರ್ನಂಬಟ್ ಮೂಲದವರಾದ ತಯೂಬ್ ಅಲಿಯಾಸ್ ಮುನ್ನಾ (28) ಹಾಗೂ ಪ್ರಕಾಶ್ ಅಲಿಯಾಸ್ ಪಾಂಡಿಯನ್(26) ಎಂಬ ಆರೋಪಿಗಳನ್ನು ಬಂಧಿಸಿ ಅವರಿಂದ 10 ಲಕ್ಷ ಬೆಲೆ ಬಾಳುವ ಚಿನ್ನದ ಒಡವೆಗಳು, ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ವೇಳೆ ಮಾತನಾಡಿದ ಡಿವೈಎಸ್ಪಿ ಎ.ಕೆ. ವಿವೇಕಾನಂದ ಸಾರ್ವಜನಿಕರು ಮದುವೆ ಸಮಾರಂಭಗಳಿಗೆ, ಪ್ರವಾಸಗಳಿಗೆ ಹಾಗೂ ಇನ್ನಿತರ ಕಾರಣಗಳಿಂದ ಮನೆಗೆ ಬೀಗ ಹಾಕಿಕೊಂಡು ಹೋಗುವ ನಾಗರಿಕರು ತಮ್ಮ ಮನೆಗೆ ಹೊರಗೆ ಕಾಣಿಸುವ ರೀತಿಯಲ್ಲಿ ಬೀಗಗಳನ್ನು ಹಾಕದೆ ಬರಿ ಡೋರ್ ಲಾಕ್ ಮಾಡಿ ಹೋಗಬೇಕು, ಮನೆಯಲ್ಲಿರುವ ಬೆಲೆ ಬಾಳುವ ಚಿನ್ನಾಭರಣಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿ ಇಲ್ಲಂದ್ರೆ ಲಾಕರ್ನಲ್ಲಿಡಿ, ಅಥವಾ ಮನೆಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಬಿಟ್ಟು ಹೋಗಿ ಈ ಮೂಲಕ ಇಂತಹ ಮನೆಗಳತನಗಳನ್ನು ತಡೆಯಬಹುದು ಎಂದು ಪೊಲೀಸ್ ಇಲಾಖೆಯ ಮೂಲಕ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಲಕ್ಷ್ಮಿನಾರಾಯಣ, ಪಿಎಸ್ಐಗಳಾದ ರಂಗಸಾಮಯ್ಯ, ಆಂಜಪ್ಪ, ಸೂರ್ಯಪ್ರಕಾಶ್, ಅಪರಾಧ ವಿಭಾಗ ಪಿಎಸಐ ನರಸಿಂಹಮೂರ್ತಿ, ಸಿಬಂಬದಿಗಳಾದ ಚೌಡಪ್ಪ, ಶ್ರೀರಾಮರೆಡ್ಡಿ, ಎನ್.ಪಿ. ಸಿಂಗ್, ಲಕ್ಷ್ಮಣ್ರಾವ್, ಗೋಪಾಲ್ಸಿಂಗ್, ಮಹೇಂದ್ರಕುಮಾರ್, ಶೇಷಾದ್ರಿ ಮತ್ತಿತರರು ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಿದ್ದರು.
ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ
ಕೋಲಾರ ಕಾಲೂಕಿನ ಕೂಟೇರಿ ಮಜರಾ ಲಕ್ಷ್ಮೀಸಾಗರ ಗ್ರಾಮದಲ್ಲಿ ಸಾಲ ಪಡೆದ 10 ಸಾವಿರ ರು.ವಾಪಸ್ ಕೇಳಿದ ಚಲಪತಿ ಎಂಬುವರಿಗೆ ಅದೇ ಗ್ರಾಮದ ವೆಂಕಟಪ್ಪ ಹಾಗೂ ಇನ್ನಿತರ ನಾಲ್ವರು ಸೇರಿ ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿದ್ದು ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಾಂತಿ ಸಭೆ
ಚಿಂತಾಮಣಿ: ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪೊಲೀಸ್ ಠಾಣೆಯಲ್ಲಿ ಸೋಮವಾರ ಶಾಂತಿ ಸಭೆ ನಡೆಯಿತು.
ನಗರಠಾಣೆ ವೃತ್ತ ನಿರೀಕ್ಷಕ ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಮನವಿ ಮಾಡಲಾಯಿತು.
ಯುವಕ ಸಾವು
ಚಿಂತಾಮಣಿ: ನಗರದ ಹೊರವಲಯದ ಕರಿಯಪ್ಪಲ್ಲಿ ಕೆರೆಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಪ್ರಶಾಂತ್(22) ಸಾವನ್ನಪ್ಪಿದ್ದಾನೆ. ಈತ ಶಿಡ್ಲಘಟ್ಟ ತಾಲೂಕಿನ ಮುದಿಮಡುಗು ಗ್ರಾಮದ ನಿವಾಸಿಯಾಗಿದ್ದು,ಕಳೆದ ಹಲವು ದಿನಗಳಿಂದ ಕರಿಯಪ್ಪಲ್ಲಿಯಲ್ಲಿ ವಾಸವಾಗಿದ್ದು, ಎಪಿಎಂಸಿ ಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗ, ನಾಣ್ಯ ಲೂಟಿ
ಕೆಜಿಎಫ್: ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ನಗದು ಹಾಗೂ ಚಿನ್ನದ ಉಂಗುರ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಉರಿಗಾಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಮೆಲ್ನಗರದ ಎ. ಟೈಪ್ ಬಡಾವಣೆ ನಿವಾಸಿ ಅನ್ಬಳಗನ್ ಎಂಬುವರು ಬೈಕಿನಲ್ಲಿ ಅಜ್ಜಪ್ಪನಹಳ್ಳಿ ರಸ್ತೆ ತಿರುವಿನಲ್ಲಿ ಬರುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ದೊಣ್ಣೆಯಿಂದ ತಲೆಗೆ ಹೊಡೆದು 2,800 ನಗದು, 10 ಗ್ರಾಂ ತೂಕದ ಚಿನ್ನದ ಉಂಗುರ ಸುಲಿಗೆ ಮಾಡಿ ಪರಾರಿಯಾಗಿದ್ದಾರೆ ಎಂದು ಅನ್ಬಳಗನ್ ಉರಿಗಾಂ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮನೆಯಲ್ಲಿ ಕಳವು
ಕೆಜಿಎಫ್: ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ ಬೀರುವಿನಲ್ಲಿಟ್ಟಿದ್ದ ನಗದು ಹಾಗೂ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕ್ಯಾಸಂಬಳ್ಳಿ ಗ್ರಾಮದ ನಿವಾಸಿ ಸಿದ್ದೇಗೌಡ ಎಂಬುವರು ತಮ್ಮ ಮನೆಗೆ ಬೀಗ ಹಾಕದೆ ಯಾವುದೋ ಕೆಲಸಕ್ಕೆ ಹೋಗಿ ಅರ್ಧ ಗಂಟೆ ಬಿಟ್ಟು ಬಂದು ನೋಡಿದಾಗ ಬಾಗಿಲನ್ನು ತೆಗೆದು ಒಳ ಪ್ರವೇಶಿಸಿದ ಕಳ್ಳರು ಬೀರುವಿನ ಕೀಲಿಯನ್ನು ತೆಗೆದು ಬೀರುವಿನಲ್ಲಿಟ್ಟಿದ್ದ ಸುಮಾರು 53 ಗ್ರಾಮ ಚಿನ್ನದ ಒಡವೆಗಳು, 490 ಗ್ರಾಂ ಬೆಳ್ಳಿ ಒಡವೆಗಳು, 90 ಸಾವಿರ ನಗದು ಸೇರಿದಂತೆ ಒಟ್ಟು 2.39 ಲಕ್ಷ ಬೆಲೆ ಬಾಳುವುದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಸಿದ್ದೇಗೌಡ ಬೇತಮಂಗಲ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಚಿಂತಾಮಣಿ: ಜೀವನದಲ್ಲಿ ಜಿಗ್ಗುಪ್ಸೆಗೊಂಡು ವ್ಯಕ್ತಿ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಗೋಪಸಂದ್ರ ಬಳಿ ಮಾವಿನ ತೋಪು ನಲ್ಲಿ ನಡಿದಿದೆ. ಮೃತನನ್ನು ಆಂಧ್ರಪ್ರದೇಶದ ಪಾಪಿರೆಡ್ಡಿಪಲ್ಲಿಯ ರಮೇಶ್ ಬಾಬು (30) ಎಂದು ಗುರಿತುಸಲಾಗಿದೆ. ಗೋಪಸಂದ್ರ ಬಳಿ ಆಂಜಪ್ಪ ಎಂಬರವರಿಗೆ ಸೇರಿದ ಮಾವಿನ ತೋಪು ನಲ್ಲಿ ಈತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿ: ಬೈಕ್ ಸವಾರ ಸಾವು:
ತಾಲೂಕಿನ ಕೈವಾರ ಕ್ರಾಸ್ ಬಳಿ ಭಾನುವಾರ ರಾತ್ರಿ ಶಿಡ್ಲಘಟ್ಟ ತಾಲೂಕಿನ ಅರಿಕೆರೆ ಗ್ರಾಮದ ಬಸವರಾಜು (25) ದ್ವಿಚಕ್ರ ವಾಹನದಲ್ಲಿ ಹೋಗಿರುತಿರುವಾಗ ರಸ್ತೆ ಬದಿಯ ಮೈಲುಗಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾಗಿ ಪೋಲೀಸರು ತಿಳಿಸಿದಾರೆ.
ಮಲಗಿದ್ದ ವ್ಯಕ್ತಿಯ ಕೊಲೆ
ಮುಳಬಾಗಲು: ತಾಲೂಕಿನ ವಿ.ಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ದಾಸಪ್ಪ(60) ಎಂಬುವರನ್ನು ಕೊಲೆ ಮಾಡಲಾಗಿದೆ. ಅವರು ಮಲಗಿದ್ದ ಸಮಯದಲ್ಲಿ ಅಪರಿಚಿತರು ತಲೆಯನ್ನು ಜಜ್ಜಿ ಕೊಲೆ ಮಾಡಿರುವುದಾಗಿ ಮುಳಬಾಗಲು ಪೊಲೀಸರು ತಿಳಿಸಿದ್ದಾರೆ. ತಮ್ಮ ತಂದೆಯ ಬಳಿ ಮಂಜುನಾಥ್ ಎಂಬುವರು ಬಂದು ಹೋಗುತ್ತಿದ್ದು ಅವರ ಮೇಲೆ ಅನುಮಾನವಿದೆ ಎಂದು ಮೃತನ ಮಗ ಡಿ.ವೆಂಕಟರವಣಪ್ಪ ಮುಳಬಾಗಲು ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ಯಾಂಪುರ ವಿಎಸ್ಎಸ್ಎನ್ನಿಂದ ರೈತರಿಗೆ ವಂಚನೆ
ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯ ಶ್ಯಾಂಪುರ ವಿಎಸ್ಎಸ್ಎನ್ ಸಂಘದ
ಕಾರ್ಯದರ್ಶಿ ಸುಮಾರು 60 ರಿಂದ 70 ಲಕ್ಷ ರು. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕಾರ್ಯದರ್ಶಿ ಎಂ.ನಾರಾಯಣಸ್ವಾಮಿ ನಾಪತ್ತೆಯಾಗಿದ್ದಾನೆ.
ವ್ಯವಸಾಯ ಸೇವಾ ಸಹಕಾರ ಸಂಘಗಗಳಲ್ಲಿ ರೈತರು ಕೃಷಿ ಮೇಳೆ ಮಾಡಿದ ಸಾಲವನ್ನು ಹಿಂದಿನ ಬಿಜೆಪಿ ಸರ್ಕಾರದ ಜಗದೀಶ್ ಶೆಟ್ಟರ್ ಆಡಳಿತ ಅವಧಿಯಲ್ಲಿ ಮನ್ನಾ ಮಾಡಿತ್ತು. ಆದರೆ ಅನಕ್ಷರಸ್ತ ಹಾಗೂ ಹಲವು ರೈತರಿಗೆ ಸಾಲ ಮನ್ನಾ ಯೋಜನೆಗೆ ಮುನ್ನಾ ಹಾಗೂ ನಂತರವು ನೂರಾರು ರೈತರ ಸಾಲವನ್ನು ಮರು ಪಾವತಿ ಮಾಡಿಸಿಕೊಂಡು ಕೇವಲ ರಸೀದಿ ನೀಡಿದ್ದರು. ಆದರೆ ಈ ಹಣವನ್ನು ಬ್ಯಾಂಕ್ಗೆ ಕಟ್ಟದೆ ವಂಚಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ರೈತರಿಗೆ ಆಮಿಷ: ಶ್ಯಾಂಪುರ ವಿಎಸ್ಎಸ್ಎನ್ ಕಾರ್ಯದರ್ಶಿ ರೈತರಿಗೆ ಪುಸಲಾಯಿಸಿ ಸಾಲ ಮನ್ನಾ ಬಳಿಕವೂ 25 ಸಾವಿರಕ್ಕೂ ಹೆಚ್ಚು ಸಾಲ ಇದ್ದ ಹಲವು ರೈತರಿಗೆ ಹಣ ಪಾವತಿಸಿದಲ್ಲಿ ಸುಮಾರು 2 ಲಕ್ಷದ ವರೆಗೆ ಸಾಲ ಕೊಡಿಸಿಸುವುದಾಗಿ ತಿಳಿಸಿ ಹಣ ಕಟ್ಟಿಸಿಕೊಂಡಿದ್ದ. ಆದರೆ ಹಣವನ್ನು ಸಂಸ್ಥೆಗೆ ಕಟ್ಟದೆ ವಂಚನೆ ಮಾಡಿದ್ದಾನೆ. ಈ ಬಗ್ಗೆ ಗೌರಿಬಿದನೂರು ತಾಲೂಕು ಕಚೇರಿಯಲ್ಲಿ ವಿಚಾರಿಸಿದೆ ಇದನ್ನು ಶ್ಯಾಪುರದಲ್ಲೆ ವಿಚಾರಿಸಿ ಬಗೆಹರಿಸಿಕೊಳ್ಳಿ ಎನ್ನುತ್ತಾರೆ ಎಂದು ರೈತರು ಆರೋಪಿಸಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದೇಗೌಡ, ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣದ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ತಿಳಿಸಿದರು.
ಕಡತಗಳು ನಾಪತ್ತೆ: ಶ್ಯಾಂಪುರ ವಿಎಸ್ಎಸ್ಎನ್ನಲ್ಲಿ ಸಾಲ ಪಡೆದಿರುವ ಹಾಗೂ ಮರು ಪಾವತಿಸಿರುವ ಯಾವುದೇ ದಾಖಲೆಗಳು ಸಿಗುತ್ತಿಲ್ಲ. ಬಹುಶಃ ದಾಖಲೆಗಳನ್ನು ನಾಪತ್ತೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಬಂಧನದಲ್ಲಿರುವವನಿಗೆ ರಕ್ಷಣೆ ನೀಡಲು ಆಗ್ರಹ
ಕೆಜಿಎಫ್: ಪೊಲೀಸ್ ವೃತ್ತ ನಿರೀಕ್ಷಕ ಪವನ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ತಮ್ಮ ಮಗನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ತೊಂದರೆ ನೀಡುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಕಲೈಅರಸನ್ ಎಂಬುವರು ನೂರಾರು ದಲಿತರ ಜತೆಗೆ ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಇನ್ಸ್ಪೆಕ್ಟರ್ ಪವನ್ಕುಮಾರ್ ಅವರು ತಮ್ಮ ಮಗನಾದ ಅನ್ಬರಸನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಎ.ಕೆ.ವಿವೇಕಾನಂದ ಅವರು ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಹಂದಿ ತಡೆಯಲು ಅಳವಡಿಸಿದ್ದ
ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು
ಶಿಡ್ಲಘಟ್ಟ: ಹಂದಿಗಳ ಉಪತಳ ತಡೆಯಲು ಅಳವಡಿಸಿದ್ದ ವಿದ್ಯುತ್ ತಂತಿಗಳಿಂದ ಶಾಕ್ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಗಂಭಿರವಾಗಿ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಜರುಗಹಳ್ಳಿ ಗ್ರಾಮ ನರಸಿಂಹಪ್ಪ (45) ಮೃತಪಟ್ಟ ದುರ್ದೈವಿ. ಚಿಕ್ಕಪಿಳ್ಳಪ್ಪ ಎಂಬ ವ್ಯಕ್ತಿ ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಭಾನುವಾರದ ಸಂಜೆ ವೇಳೆ ಅರಣ್ಯದ ಕಡೆಗೆ ಹೋಗಿದ್ದ ಮೃತ ನರಸಿಂಹಪ್ಪ ಮತ್ತು ಚಿಕ್ಕಪಿಳ್ಳಪ್ಪ ವಾಪಸ್ ಬರುವಾಗ ವಿದ್ಯುತ್ ತಂತಿಗಳನ್ನು ಗಮನಿಸದೆ ತುಳಿದಿದ್ದಾರೆ. 6 ಮಂದಿ ವಿರುದ್ಧ ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

