ಕೋಲಾರ

ಇಂದು ಕಾಮಗಾರಿ ಬಂದ್

Published On :

ರಾಜ್ಯಾದ್ಯಂತ ಮಹಿಳೆ, ಮಕ್ಕಳು, ವಯೋವೃದ್ಧರ ಮೇಲೂ ಕಾಮುಕರ ಕಾಕದೃಷ್ಟಿ ಬೀರುತ್ತಿದ್ದಾರೆ. ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ದುಸ್ಥಿತಿ ಎದುರಾಗಿದೆ. ಕಾಮರಾಜ್ಯದಲ್ಲಿ ನಿರ್ಭೀತಿಯಿಂದ ಬದುಕುವ ವಾತಾವರಣವೇ ಇಲ್ಲ. ಇದಕ್ಕೆ ಅಂತ್ಯ ಹಾಡಲೇಬೇಕು. ಅದಕ್ಕಾಗಿ ಒಕ್ಕೊರಲಿನ ಧ್ವನಿಗಾಗಿ ಇಂದು ಬೀದಿಗಿಳಿದು ಸರ್ಕಾರದ ಕಣ್ತೆರೆಸಿ..

ಕಾನೂನು ಕೈಗೆತ್ತಿಕೊಳ್ಳಬೇಡಿ
ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಗುರುವಾರ ಕೋಲಾರ ಬಂದ್ ಕರೆ ನೀಡಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿವೆ. ಬಲವಂತವಾಗಿ ಅಂಗಡಿಗಳು, ಸರ್ಕಾರಿ ಕಚೇರಿಗಳು,ಶಾಲಾ-ಕಾಲೇಜುಗಳನ್ನು ಮುಚ್ಚಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಪ್ರಗತಿಪರ ಸಂಘಟನೆಗಳ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಜಿಲ್ಲೆಯಲ್ಲಿ ಕೆಲ ಪರೀಕ್ಷೆಗಳು ನಡೆಯುತ್ತಿರುವುದರಿಂದ ಪರೀಕ್ಷಾರ್ಥಿಗಳಿಗೆ ತೊಂದರೆ ಉಂಟು ಮಾಡಬಾರದು, ಹಾಲು, ನೀರು ಹಾಗೂ ಆಸ್ಪತ್ರೆ ಸೇರಿದಂತೆ ತುರ್ತು ಕಾರ್ಯಗಳಿಗೆ ಬಂದ್‌ನಿಂದ ತೊಂದರೆ ಆಗದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿಗಳ ಪರವಾಗಿ ಉಪ ವಿಭಾಗಾಧಿಕಾರಿಯೂ ಆಗಿರುವ ಪ್ರಭಾರ ಜಿಲ್ಲಾಧಿಕಾರಿ ಮಂಜುನಾಥ್ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ಹೆದ್ದಾರಿ ಬಂದ್ ಮಾಡುವಂತಿಲ್ಲ, ರಸ್ತೆಗಳಲ್ಲಿ ಟೈರ್‌ಗಳನ್ನು ಸುಡುವಂತಿಲ್ಲ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿದಲ್ಲಿ ಬಂದ್ ನೇತೃತ್ವ ವಹಿಸುವ ಮುಖಂಡರನ್ನು ಹೊಣೆ ಮಾಡುವುದಾಗಿ ತಿಳಿಸಲಾಗಿದೆ.

ಪರೀಕ್ಷೆಗೆ ತೊಂದರೆ ಮಾಡಲ್ಲ
ಗುರುವಾರ ನಡೆಯುವ ಪರೀಕ್ಷೆಗಳಿಗೆ ತೊಂದರೆ ಮಾಡುವುದಿಲ್ಲ, ಆಸ್ಪತ್ರೆಗೆ ಹೋಗುವ ಜನರನ್ನು ಅಡ್ಡಗಟ್ಟುವುದಿಲ್ಲ, ಸಾರ್ವಜನಿಕರ ಸಹಕಾರದಿಂದಲೇ ಬಂದ್ ಆಚರಿಸುತ್ತಿರುವುದಾಗಿ ಮುಖಂಡರು ತಿಳಿಸಿದರು. ಸಭೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ, ಸಿಪಿಐಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಮಹಿಳಾ ವಿಮೋಚನಾ ಸಂಘಟನೆಯ ಶಾಂತಮ್ಮ, ಖಾಸಗಿ ಶಾಲಾ ಆಡಳಿತ ಮಂಡಳಿಯ ಪರವಾಗಿ ಮುನಿಯಪ್ಪ, ದಲಿತ ಮುಖಂಡ ವಿಜಯಕುಮಾರ್, ವಕೀಲರ ಸಂಘದ ಅಧ್ಯಕ್ಷ ಆನಂದ್, ಕಾರ್ಯದರ್ಶಿ ಸತೀಶ್, ರೈತ ಸಂಘದ ಮುಖಂಡರಾದ ಕೆ. ಶ್ರೀನಿವಾಸಗೌಡ, ಹೂವಳ್ಳಿ ನಾಗರಾಜ್ ಇನ್ನಿತರ ಸಂಘಟನೆಗಳ ಮುಖಂಡರು ಇದ್ದರು. ಸಭೆ ನಂತರ ನಗರದ ಗಾಂಧಿ ವನದಿಂದ ಬೈಕ್ ರ್ಯಾಲಿ ನಡೆಸಿ ಬಂದ್‌ಗೆ ಸಹಕಾರ ನೀಡುವಂತೆ ಮನವಿ ಮಾಡಲಾಯಿತು.


ಜಿಲ್ಲಾಡಳಿತದ ಮನವಿ ತಿರಸ್ಕಾರ
ಗುರುವಾರ ಕೋಲಾರ ಬಂದ್‌ಗೆ ಪ್ರಗತಿಪರ ಸಂಘಟನೆಗಳು ಕರೆ ನೀಡಿರುವ ಹಿನ್ನಲೆಯಲ್ಲಿ ಬುಧವಾರ ಸಂಜೆ ಕೋಲಾರ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ಕರೆಯಲಾಗಿತ್ತು. ಜಿಲ್ಲೆಯಲ್ಲಿನ ಅತ್ಯಾಚಾರ ಪ್ರಕರಣಗಳನ್ನು ತಹಬದಿಗೆ ತರಲು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಈಗಾಗಲೇ ಜಿಲ್ಲಾ ಆಡಲಿತ ಮತ್ತು ಪೊಲೀಸ್ ಇಲಾಖೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಗ್ಗೆ ಪ್ರಗತಿಪರ ಸಂಘಟನೆಗಳ ಮುಖಂಡರಿಗೆ ಮಂಜುನಾಥ್ ಅವರು ಮನವರಿಕೆ ಮಾಡಿ ಬಂದ್ ಕೈಬಿಡುವಂತೆ  ಇಲಾಖೆಯಿಂದ ಆಗಿರುವ ಕ್ರಮಗಳನ್ನು ವಿವರಿಸಿ ಬಂದ್ ಅಗತ್ಯವಿಲ್ಲವೆಂದು ಹೇಳಿದರು. ಇದಕ್ಕೆ ಒಪ್ಪದ ಮುಖಂಡರು, ಪೊಲೀಸರು ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಆರೋಪಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವ ವಿಚಾರದಲ್ಲಿ ವಿಫಲರಾಗಿದ್ದಾರೆ. ಜನತೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಪ್ರಗತಿಪರ ಸಂಘಟನೆಗಳ ಮುಖಂಡರನ್ನು ಆಹ್ವಾನಿಸದೆ ತಾತ್ಸಾರ ಮಾಡಲಾಗುತ್ತಿದೆ. ನಾವು ಸಹ ಜನತೆಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದಲೇ ಕೋಲಾರ ಬಂದ್ ಆಚರಿಸುತ್ತಿರುವುದರಿಂದ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ಸಹಕಾರ ನೀಡಬೇಕೆಂದು ಆಗ್ರಹಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.