ಮೂಲ ಸೌಕರ್ಯಗಳಿಗೆ ಕನಿಗಾನಹಳ್ಳಿ ದಲಿತರ ಪರದಾಟ
ಕೋಲಾರ/ಶ್ರೀನಿವಾಸಪುರ: ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ...ಎಂದು ದಲಿತ ಕವಿ ಸಿದ್ಧಲಿಂಗಯ್ಯನವರು ಮೂರು ದಶಕಗಳ ಹಿಂದೆ ಬರೆದ ಕವಿತೆ ಇಂದಿಗೂ ಪ್ರಸ್ತುತವಾಗಿದೆ ಎಂಬುದಕ್ಕೆ ಜಿಲ್ಲೆಯ ಕಾನಿಗಾನಹಳ್ಳಿಯ ದಲಿತರ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ.
ಮಾವಿನ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರ ತಾಲೂಕಿಗೆ ಸೇರಿದ ಪುಟ್ಟ ಗ್ರಾಮ ಕನಿಗಾನಹಳ್ಳಿ. ಮೇಲ್ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ದಲಿತರಿಗಾಗಿಯೇ ಗ್ರಾಮದ ಹೊರ ವಲಯದಲ್ಲಿ ಪ್ರತ್ಯೇಕ ಕಾಲೋನಿಯನ್ನು ನಿರ್ಮಿಸಲಾಗಿತ್ತು. ಇಲ್ಲಿ ಸುಮಾರು 18 ದಲಿತ ವರ್ಗಕ್ಕೆ ಸೇರಿದ ಕುಟುಂಬಗಳು ವಾಸವಾಗಿದ್ದವು.
2003ರಲ್ಲಿ ದಲಿತರಿಗೆ ಸೇರಿದ ಕುರಿಗಳು ಮೇಲ್ವರ್ಗದ ಜಮೀನುಗಳಿಗೆ ನುಗ್ಗಿದ್ದ ವಿಚಾರದಲ್ಲಿ ವರ್ಗ ಸಂಘರ್ಷವಾಗಿತ್ತು. ಗಲಭೆಯಲ್ಲಿ ಸಂತ್ರಸ್ಥರಾದ 18 ದಲಿತ ಕುಟುಂಬಗಳು ಗ್ರಾಮ ಬಿಡುವಂತಾಗಿತ್ತು. ಜೊತೆಗೆ ಮೇಲ್ವರ್ಗದವರು ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ದಲಿತರು ಕಾಲೊನಿಯಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.
ಕನಿಗಾನಹಳ್ಳಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಬಹಿಷ್ಕಾರದ ವಿಚಾರ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಂತ್ರಿ ಮಂಡಲದಲ್ಲಿ ಜಿಲ್ಲಾ ಉಸ್ತವಾರಿ ಸಚಿವರಾಗಿದ್ದ ವಿ. ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ವಿ.ಆರ್. ಸುದರ್ಶನ್ ಸ್ಥಳಕ್ಕೆ ಭೇಟಿ ನೀಡಿ ಬಹಿಷ್ಕಾರಕ್ಕೆ ಒಳಗಾಗಿದ್ದ ದಲಿತ ಕುಟುಂಬಗಳಿಗೆ ವಸತಿ,ಸೀಮೆ ಹಸು ಇನ್ನಿತರ ಪುನರ್ವಸತಿ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು.
ಪಾಳು ಬಿದ್ದಿರುವ ಕಾಲೊನಿ: ಸಮಾಜ ಕಲ್ಯಾಣ ಇಲಾಖೆಯಿಂದ ಸಂತ್ರಸ್ತರಿಗೆ ಸೀಮೆಹಸು ನೀಡಲು ಫಲಾನುಭವಿಗಳ ಪಟ್ಟಿಮಾಡಿ ತಯಾರಿಸಿ ಪ್ರತಿ ಕುಟುಂಬಕ್ಕೆ ಕೇವಲ 5 ಸಾವಿರ ರು. ನೀಡಲಾಗಿತ್ತು. ಉಳಿದ ಹಣ ಮಧ್ಯವರ್ತಿಗಳ ಪಾಲಾಗಿತ್ತು.
ಈ ಸೌಕರ್ಯ ಹೊರತುಪಡಿಸಿ ನೊಂದವರಿಗೆ ಬೇರೆ ಯಾವುದೇ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಿಲ್ಲ. ಹಾಗಾಗಿ ಗ್ರಾಮ ಬಿಟ್ಟ 18 ದಲಿತ ಕುಟುಂಬಗಳ ಪೈಕಿ ಬಹುತೇಕರು ಮತ್ತೆ ಗ್ರಾಮಕ್ಕೆ ಬರಲು ಧೈರ್ಯ ಮಾಡಿಲ್ಲ.
ಈ ನಡುವೆ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನೀಡಿದ ಭರವಸೆಯ ಮೇರೆಗೆ 18 ಕುಟುಂಬಗಳ ಪೈಕಿ 7 ಕುಟುಂಬಗಳು ಧೈರ್ಯ ಮಾಡಿ ಗ್ರಾಮಕ್ಕೆ ವಾಪಸ್ ಬಂದಿದ್ದರೂ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ, ದಲಿತ ಕಾಲೊನಿಯಲ್ಲಿ ವಾಸ ಮಾಡಲು ಭಯ ಭೀತರಾಗಿದ್ದಾರೆ. ಗ್ರಾಮದ ಕೆರೆ ಅಂಗಳದಲ್ಲಿ ಗುಡಿಸಲು ಹಾಕಿಕೊಂಡು ಕಷ್ಟದ ಜೀವನ ನಡೆಸುತ್ತಿದ್ದಾರೆ.
ಸ್ವಾತಂತ್ರ್ಯಕ್ಕೆ ಒತ್ತಾಯ: 2013ರಲ್ಲಿ ಕನಿಗಾನಹಳ್ಳಿ ದಲಿತ ಕುಟುಂಬಗಳು ನ್ಯಾಯಕ್ಕಾಗಿ ಶ್ರೀನಿವಾಸಪುರದ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡು ದಲಿತ ಕಾಲೋನಿ ಅಬಿವೃದ್ಧಿ ಪಡಿಸಬೇಕು, ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಬೇಕು, ಎಲ್ಲಾ ಕುಟುಂಬಗಳಿಗೂ ಬಿ.ಪಿ.ಎಲ್ ಕಾರ್ಡ್ಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿ ಆಹೋ ರಾತ್ರಿ ಧರಣಿ ಹಮ್ಮಿಕೊಂಡಿದ್ದರು. ಶಾಸಕ ರಮೇಶ್ಕುಮಾರ್ ಸಹ ದಲಿತರ ಪರವಾಗಿ ದನಿ ಎತ್ತಿದ್ದರು.
ಈ ಪ್ರತಿಭಟನೆಯಿಂದಾಗಿ ಕೆರೆ ಅಂಗಳದಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವ ಏಳು ದಲಿತ ಕುಟುಂಬಗಳಿಗೆ ಪ್ರತ್ಯೇಕ ಕೊಳವೆಬಾವಿ ಹಾಗೂ ಕೆಲವರಿಗೆ ಮಾತ್ರ ಪಡಿತರ ಚೀಟಿ ನೀಡಲಾಗಿದೆ.
ಹನ್ನೊಂದು ವರ್ಷಗಳಿಂದ ಸಂಕಷ್ಟದ ಜೀವನ ಸಾಗಿಸುತ್ತಿರುವ ದಲಿತರಿಗೆ ಸರ್ಕಾರ 2003ರಲ್ಲಿ ನೀಡಿದ್ಧ ಭರವಸೆ ಈಡೇರಿಸಬೇಕು. ಎಲ್ಲಾ 18 ದಲಿತ ಕುಟುಂಬಗಳಿಗೆ ಮತ್ತೆ ದಲಿತ ಕಾಲೊನಿಯಲ್ಲಿ ವಾಸ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು, ಗ್ರಾಮಕ್ಕೆ ಬರಲು ಅಂಜಿಕೊಂಡಿರುವವರಿಗೆ ರಕ್ಷಣೆ ನೀಡಿ ಕರೆ ತರಬೇಕು, ಆಗಸ್ಟ್ 15ರೊಳಗೆ ಸರ್ಕಾರದಿಂದ ಎಲ್ಲಾ ರೀತಿಯ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಸ್ವಾತಂತ್ರ್ಯದ ಬದುಕಿಗೆ ಅವಕಾಶ ನೀಡಬೇಕೆಂದು ಚಳಿ, ಮಳೆ, ಗಾಳಿಯ ರಬಸಕ್ಕೆ ಸಿಲುಕಿ ನಲುಗುತ್ತಿರುವ ದಲಿತರು ಜಿಲ್ಲಾ ಆಡಳಿತ ಹಾಗೂ ಕ್ಷೇತ್ರದ ಶಾಸಕರನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

