ಚಿಕ್ಕತಿರುಪತಿಯಲ್ಲಿ ವಿಶೇಷ ಪೂಜೆ
ಮಾಲೂರು: ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ಒಂದು ತಿಂಗಳ ಕಾಲ ಶ್ರಾವಣ ಮಾಸದ ಪ್ರಯುಕ್ತ ಮುಂದಿನ ನಾಲ್ಕು ಶನಿವಾರ ಶ್ರೀ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶ್ರಾವಣ ಮಾಸದ ಒಂದು ತಿಂಗಳು ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸಾರಿಗೆ ಸೌಲಭ್ಯ, ಕುಡಿಯುವ ನೀರು, ಮುಡಿಕೊಡುವ ಭಕ್ತರಿಗೆ ಸ್ನಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಶನಿವಾರ ಆಗಮಿಸುವ ಭಕ್ತಾದಿಗಳಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಶ್ರಾವಣ ಶನಿವಾರ ಬೆಳಗ್ಗೆ ನಾದಸ್ವರ ಕಛೇರಿ, ಭಜನೆ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಹಿರೇಮಠ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ರೈತ ಮೋರ್ಚಾ ಬರ ಅಧ್ಯಯನ
ಕೆಜಿಎಫ್: ಕೋಲಾರ ಜಿಲ್ಲಾ ಬಿಜೆಪಿ ರೈತಮೋರ್ಚಾ ನಿಯೋಗ ಕೆಜಿಎಫ್ಗ್ರಾಮೀಣ ಪ್ರದೇಶದ ವಿವಿಧ ಕೆರೆಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದರು. ಈ ವೇಳೆ ಮಾತನಾಡಿದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆಂಬೋಡಿ ನಾರಾಯಣಸ್ವಾಮಿ ಹಾಗೂ ನಗರಾಧ್ಯಕ್ಷ ಮುರಳೀಧರರಾವ್, ಇತ್ತೀಚೆಗೆ ತುಮಕೂರಿನಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಆರಗಜ್ಞಾನೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆ ನಡೆಸಿದ ಹಿನ್ನಲೆಯಲ್ಲಿ ಕ್ಷೇತ್ರದ ಯುವ ಮೋರ್ಚ ಕಾರ್ಯಕರ್ತರ ನಿಯೋಗ ಬೇತಮಂಗಲ, ಕ್ಯಾಸಂಬಳ್ಳ, ಪಾಲಾರ್ನದಿ, ರಾಮಸಾಗರ, ಸುಂದ್ರಪಾಳ್ಯ ಮುಂತಾದ ಹೋಬಳಿಯ ವಿವಿಧ ಕೆರೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಪರಿಶೀಲಿಸಿದೆ. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್, ಬಲರಾಮ್, ಸುರೇಶ್ನಾರಾಯಣ್, ಕಾರ್ಯದರ್ಶಿ ಬಾಟಾ ಗೋಪಾಲ್, ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಏಕಾಂತರೆಡ್ಡಿ, ಶಿವರಾಮರೆಡ್ಡಿ, ಶ್ರೀರಾಮ್, ಚಿನ್ನಪ್ಪ, ಶ್ರೀನಿವಾಸ್, ಹೇಮಾರೆಡ್ಡಿ ಇದ್ದರು.
ಹಣ ಬಿಡುಗಡೆ ಸ್ವಾಗತಾರ್ಹ
ಮಾಲೂರು: ತಾಲೂಕಿನ ಉರ್ದು ಶಿಕ್ಷಕರಿಗೆ ರಂಜಾನ್ ಹಬ್ಬದ ಪ್ರಯುಕ್ತ ಶಿಕ್ಷಕರಿಗೆ ಮುಂಗಡ ಹಣವನ್ನು ಹಬ್ಬದ ಮುನ್ನವೇ ಕ್ಷೇತ್ರಾಶಿಕ್ಷಣಾಧಿಕಾರಿಗಳು ಮಂಜೂರು ಮಾಡಿರುವುದನ್ನು ತಾಲೂಕು ಉರ್ದು ಶಿಕ್ಷಕರ ಸಂಘ ಅಭಿನಂದನೆ ಸಲ್ಲಿಸಿದೆ.
ಇತ್ತಿಚೀನ ವರ್ಷಗಳಲ್ಲಿ ರಂಜಾನ್ ಹಬ್ಬದ ಮುಂಗಡ ಅತವಾ ಹಬ್ಬದ ನಂತರ ಇಲ್ಲವೇ ಬಾರದೆ ಇರುವ ಪ್ರಸಂಗ ಇರುವಾಗ ಈ ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮುತುವರ್ಜಿ ವಹಿಸಿ ಉರ್ದು ಶಿಕ್ಷಕರಿಗೆ ರಂಜಾನ್ ಹಬ್ಬದ ಮುಂಗಡ ಹಣವನ್ನು ರಂಜಾನ್ ಹಬ್ಬದ ಮೊದಲೇ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ ಎಂದು ಉರ್ದು ಶಿಕ್ಷಕರ ಸಂಘದ ಸೈಯದ್ ಯಾಸೀನ್ ಹಾಗೂ ಉಪಾಧ್ಯಕ್ಷ ಮೌಲಾಖಾನ್ ತಿಳಿಸಿದ್ದಾರೆ.
ರಸಗೊಬ್ಬರ ಬೆಲೆ ಏರಿಕೆಗೆ ವಿರೋಧ
ಕೋಲಾರ: ರಸಗೊಬ್ಬರ ಬೆಲೆ ಏರಿಕೆ, ನಕಲಿ ಕೀಟನಾಶಕಗಳ ಹಾವಳಿ, ಕಳಪೆ ಬಿತ್ತನೆ ಬೀಜ ಸರಬರಾಜನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ದಲಿತ ಸಮಾಜ ಸೇನೆ ಆರೋಪಿಸಿದೆ.
ಸಂಘಟನೆಯ ಅಧ್ಯಕ್ಷ ಸೂಲಿಕುಂಟೆ ಆನಂದ್ ಅಧ್ಯಕ್ಷತೆಯಲ್ಲಿ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಬರಗಾಲದಿಂದ ರೈತರು ತತ್ತರಿಸುತ್ತಿದ್ದು, ಇತ್ತೀಚೆಗೆ ಬಿದ್ದ ಅಲ್ಪಸ್ವಲ್ಪ ಮಳೆಗೆ ಬಿತ್ತನೆಗೆ ಮುಂದಾಗಿರುವ ರೈತರಿಗೆ ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದರ ಏರಿಕೆಯಿಂದ ಬಿತ್ತನೆ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ಬಂದೊದಗಿದೆ ಕೆಲವರು ಬಿತ್ತನೆ ಮಾಡಿದ್ದು ಮಳೆಯಿಲ್ಲದೆ ಮೊಳಕೆ ಒಡೆಯದೆ ಭೂಮಿಯಲ್ಲೇ ನಾಶವಾಗಿವೆ ತಮ್ಮ ಅಳಲು ತೋಡಿಕೊಂಡರು. ಕಾಲುಬಾಯಿ ಜ್ವರದಿಂದ ಜಿಲ್ಲೆಯಲ್ಲಿ ಸಾವಿರಾರು ಹಸುಗಳು ಸಾವನ್ನಪ್ಪಿದ್ದು, ಕೂಡಲೇ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಲು ಪಶು ಸಂಗೋಪನಾ ಇಲಾಖೆಗೆ ಆದೇಶಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಹುಣಸನಹಳ್ಳಿ ರಮೆಶ್, ದೇವಗಾನಹಳ್ಳಿ ಯತೀಶ್, ನಾಗರಾಜ್, ಜಯರಾಂ ಇಲ್ಲಿದ್ದರು.
ಕರವಸೂಲಿಗಾರ ಹುದ್ದೆಗೆ ಆಹ್ವಾನ
ಮಾಲೂರು: ತಾಲೂಕಿನ ದೊಡ್ಡಶಿವಾರ ಗ್ರಾಪಂನಲ್ಲಿ ಖಾಲಿ ಇರುವ ಕರವಸೂಲಿಗಾರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 18ರಿಂದ 30ವರ್ಷದೊಳಗಿರುವ ಪ್ರಮಾಣ ಪತ್ರ, ಪದವಿ ಅಂಕ ಪಟ್ಟಿ, ಕಂಪ್ಯೂಟರ್ ಪದವಿಯಲ್ಲಿ ಉತ್ತೀರ್ಣವಾಗಿರುವ ಪ್ರಮಾಣ ಪತ್ರ, ಜಾತಿ ಪತ್ರ, ನಡೆ ಪ್ರಮಾಣ ಪತ್ರಗಳನ್ನು ಅರ್ಜಿಯೊಡನೆ ಸಲ್ಲಿಸಬೇಕು. ತಾತ್ಕಾಲಿಕ ಹುದ್ದೆಯಾಗಿರುವ ಈ ಕರವಸೂಲಿಗಾರ ಹುದ್ದೆಯನ್ನು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುಮೋದನೆ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಪಂಚಾಯ್ತಿ ಸಮಿತಿ ತೀರ್ಮಾನದಂತೆ ವೇತನ ನಿಗದಿಗೊಳಿಸಲಾಗುವುದು. ಅರ್ಜಿ ಸಲ್ಲಿಸಲು ಜು.30 ಕೊನೆಯ ದಿನ. ಸ್ಥಳೀಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ರಾಮಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಕಾಟಾಚಾರಕ್ಕೆ ನಡೆದ ಸಭೆ
ಕೋಲಾರ: ಜಿಲ್ಲೆಯ ಕೆರೆಗಳಿಗೆ ಕೋರಮಂಗಲ-ಚಲ್ಲಘಟ್ಟ ತ್ಯಾಜ್ಯ ಸಂಸ್ಕರಣ ಘಟಕದಿಂದ ನೀರು ಹರಿಸಲು ರೂಪಿಸಿರುವ ಯೋಜನೆಯ ಸಂಬಂಧ ಚರ್ಚಿಸಲು ಸೋಮವಾರ ಕರೆಯಲಾಗಿದ್ದ ತಾಪಂ ಸಭೆ ಸದಸ್ಯರ ಗೈರಿನಿಂದ ಬಣಗುಟ್ಟಿತು. ತಾಪಂನಲ್ಲಿ 23 ಸದಸ್ಯರಿದ್ದು ಇಂದಿನ ಸಭೆಗೆ ಕೇವಲ 10ರಿಂದ 12 ಮಂದಿ ಮಾತ್ರ ಭಾಗವಹಿಸಿದ್ದರು. ಬೆಳಿಗ್ಗೆ 11ಗಂಟೆಗೆ ಆರಂಭವಾಗಬೇಕಿದ್ದ ಸಭೆ ಸುಮಾರು ಒಂದೂವರೆ ಗಂಟೆ ತಡವಾಗಿ, ಅಂದರೆ ಮಧ್ಯಾಹ್ನ 12.30ಕ್ಕೆ ಶುರುವಾಯಿತು. ಶಾಸಕ ವರ್ತೂರ್ ಪ್ರಕಾಶ್, ಕೇವಲ ಅರ್ಧ ಗಂಟೆ ಸಭೆಯಲ್ಲಿದ್ದು ನಿರ್ಗಮಿಸಿದರು. ಸಭೆಯಲ್ಲಿದ್ದ ಅನೇಕ ಸದಸ್ಯರು, ಅಧಿಕಾರಿಗಳು ಮತ್ತು ಹಿಂಬಾಲಕರು ಸಹ ಸಭೆಯಿಂದ ಹೊರ ನಡೆದಿದ್ದರಿಂದ ಸಭಾಂಗಣ ಖಾಲಿ ಖಾಲಿ ಕಾಣಿಸಿತು. ಟೀಕೆ: ತಾಲೂಕಿನಲ್ಲಿ ಮಳೆ-ಬೆಳೆಗಳು ಇಲ್ಲದೆ ಜನರು ತತ್ತರಿಸುತ್ತಿರುವಾಗ ರೈತರ, ಕೂಲಿ ಕಾರ್ಮಿಕರ ಅಭಿವೃದ್ಧಿಗೆ ಪೂರಕವಾದ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕಾಗಿದ್ದ ತಾಪಂ ಕಟಾಚಾರಕ್ಕೆ ಸಭೆ ನಡೆಸಿದ್ದು ಟೀಕೆಗೆ ಗ್ರಾಸವಾಯಿತು. ಕೇವಲ ಅರ್ಧ ಗಂಟೆ ಸಭೆಯಲ್ಲಿದ್ದ ಶಾಸಕರು ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಒಪ್ಪಿಗೆ ಸೂಚಿಸಿದರಲ್ಲದೆ, ಕೃಷಿ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ವ್ಯವಸಾಯ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರಿಗೆ ಅನುಕೂಲವಾಗಲು ಬಜೆಟ್ನಲ್ಲಿ ಕೋಟ್ಯಂತರ ರುಪಾಯಿಗಳನ್ನು ವ್ಯವಸಾಯಕ್ಕೆ ಮೀಸಲಿಟ್ಟಿದೆ. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ರೈತರಿಗೆ ತಿಳಿಸದೆ ವಂಚಿಸುತ್ತಿದ್ದಾರೆಂದು ದೂರಿದರು. ನಾನು ಶಾಸಕನಾಗಿದ್ದರೂ ಕೃಷಿಗೆ ಸಂಬಂಧಪಟ್ಟ ಯೋಜನೆಗಳನ್ನು ತಿಳಿದುಕೊಳ್ಳಲು ಕಷ್ಟವಾಗಿತ್ತು. ಈಗ ನಾನೇ ವ್ಯವಸಾಯವನ್ನು ಪ್ರಾರಂಭಿಸಿದ ಮೇಲೆ ಸರ್ಕಾರದ ಯೋಜನೆಗಳು ಏನೆಂಬುದು ಗೊತ್ತಾಗುತ್ತಿದೆ ಎಂದರು. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ತಿಳಿಸಲು ಹಿಂದೇಟು ಹಾಕುತ್ತಾರೆ. ರೈತರು ಸುಮ್ಮನೆ ಇರಬಾರದು, ಕೃಷಿ ಕ್ಷೇತ್ರಕ್ಕೆ ಸರ್ಕಾರ ನೀಡಿರುವ ಅನುದಾನ, ಕಾರ್ಯಕ್ರಮಗಳ ಬಗ್ಗೆ ತಿಳಿದು ಮಂಜೂರು ಮಾಡಿಸಿಕೊಳ್ಳದಿದ್ದರೆ ಅಧಿಕಾರಿಗಳಿಗೆ ಲಾಭವಾಗುತ್ತದೆ ಎಂದು ಕಿಟಕಿಯಾಡಿದರು.
ಪುಸ್ತಕ ಅಧ್ಯಯನ ಅನಿವಾರ್ಯ
ಶಿಡ್ಲಘಟ್ಟ: ಸ್ಪರ್ಧಾತ್ಮಕ ಯುಗದಲ್ಲಿ ಜೀವನ ರೂಪಿಸಿಕೊಳ್ಳಲು ಪುಸ್ತಕ ಅಧ್ಯಯನ ಅನಿವಾರ್ಯ ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಏಕಾಂತಯ್ಯ ಹೇಳಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ, ಬಿಕಾಂ, ಬಿಎಸ್ಸಿ ತರಗತಿಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವುದರ ಕಡೆ ಹೆಚ್ಚು ಆಸಕ್ತರಾಗಿರಬೇಕು ಎಂದರು. ಉಪನ್ಯಾಸಕ ಚಂದ್ರನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಜೀವನದ ಬಗ್ಗೆ ನಿರ್ಧಿಷ್ಟ ಗುರಿ ಹೊಂದಿರಬೇಕು, ಹೆಚ್ಚು ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು. ಸಾಂಸ್ಕೃತಿಕ ವಿಭಾಗದ ರಾಜ್ಯಶಾಸ್ತ್ರ ಉಪನ್ಯಾಸಕ ಉಸ್ತುವಾರಿ ಡಾ. ವೆಂಕಟೇಶ್, ಉಪನ್ಯಾಸಕ ಕೆ. ಶ್ರೀಹರಿ, ರಾಮಚಂದ್ರಪ್ಪ, ಡಾ. ಮಹೇಶ್, ಎಸ್. ನಾಗರಾಜ್, ಟಿ.ಕೆ. ರಮೇಶ್, ಉಮೇಶ್ರೆಡ್ಡಿ ಇದ್ದರು.
ಕಡ್ಡಾಯವಾಗಿ ಶಿಕ್ಷಣ ಪಡೆಯಿರಿ
ಶಿಡ್ಲಘಟ್ಟ: ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಲು ಪೋಷಕರು ಗಮನ ಹರಿಸಬೇಕು ಎಂದು ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಹೇಳಿದರು. ಪಟ್ಟಣದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲಾ ಆವರಣದಲ್ಲಿ ಐಐಎಫ್ಎಲ್ ಸಂಸ್ಥೆಯಿಂದ ಏರ್ಪಡಿಸಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪಾಠೋಪಕರಣ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಖಾಸಗಿ ಶಾಲೆಗಳ ಹಾವಳಿ ಹಾಗೂ ಆಂಗ್ಲಮಾಧ್ಯಮದ ಪ್ರಭಾವದಿಂದಾಗಿ ಹೆಚ್ಚು ಜನರು ಖಾಸಗಿ ಶಾಲೆಗಳ ಕಡೆಗೆ ಒಲವು ತೋರಿಸುವುದು ಸಾಮಾನ್ಯವಾಗಿದೆ ಇದು ತಪ್ಪಬೇಕು ಎಂದರು. ಸಮನ್ವಯಾಧಿಕಾರಿ ಸುಮಾ ಮಾತನಾಡಿ, ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆದು ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಬೇಕು ಎಂದರು. ಶಿಕ್ಷಣ ಸಂಯೋಜಕ ಮನ್ನಾರಸ್ವಾಮಿ, ಐಐಎಫ್ಎಲ್ ಸಂಸ್ಥೆಯ ಚಂದಿಲ್ ಕುಮಾರ್, ಶಿವರಾಜ್, ವಿಜಯಕುಮಾರಿ, ಶ್ರೀನಿವಾಸ್ ಇದ್ದರು.
ಫಿಲ್ಟರ್ ಮರಳು ದಂಧೆ: ತಡೆಗೆ ಮುಂದಾಗದ ಅಧಿಕಾರಿಗಳು
ಬಂಗಾರಪೇಟೆ: ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲಗುಟ್ಲಹಳ್ಳಿ ರಾಜಾ ಕಾಲುವೆಯಲ್ಲಿ ಅಕ್ರಮವಾಗಿ ಫಿಲ್ಟರ್ ಮರಳು ದಂಧೆ ನಿರಂತರವಾಗಿ ನಡೆಯುತ್ತಿದ್ದರೂ ತಾಲೂಕು ಆಡಳಿತವಾಗಲಿ ಅಥವಾ ಪೊಲೀಸರಾಗಲಿ ತಡೆಗಟ್ಟಲು ಮುಂದಾಗಿಲ್ಲ ಎಂದು ಹಾರೋಹಳ್ಳಿ ಗ್ರಾಮದ ರೈತ ಸಂತೋಷ್ ಆರೋಪಿಸಿದ್ದಾರೆ.
ನಲ್ಲಗುಟ್ಲಹಳ್ಳಿ ಬಳಿ ಇರುವ ರಾಜಾ ಕಾಲುವೆಯಲ್ಲಿ ನಿರಂತರವಾಗಿ ಮರಳು ಲೂಟಿ ಹಾಗೂ ಫಿಲ್ಟರ್ ಮರಳು ಲೂಟಿ ಎಗ್ಗಿಲ್ಲದೆ ಸಾಗಿದೆ. ಅಧಿಕಾರಿಗಳು ಪ್ರಶ್ನಿಸುತ್ತಿಲ್ಲ. ಇದರಿಂದ ಕಾಮಸಮುದ್ರ ಹೋಬಳಿಯಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಕುಡಿಯಲು ನೀರಿಲ್ಲದೆ ಜನರೊಂದಿಗೆ ಜಾನುವಾರುಗಳು ಪರದಾಡುತ್ತಿದ್ದು, ಸರ್ಕಾರ ಮರಳು ಲೂಟಿಯನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು ಎಂದು ಆದೇಶ ನೀಡಿದೆ. ಆದರೆ, ಅಧಿಕಾರಿಗಳು ಮಾತ್ರ ನಿಯಂತ್ರಿಸುತ್ತಿಲ್ಲ. ದಂಧೆ ಕೋರರೊಂದಿಗೆ ಭಾಗಿಯಾಗಿದ್ದಾರೆಂದು ಸಂತೋಷ ನೇರವಾಗಿ ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

