ಕೋಲಾರ

ಕೃಷಿಗೆ ಮುನ್ನುಡಿ ಬರೆದ ಮುಂಗಾರು

Published On :

-ಎನ್ .ವೆಂಕಟೇಶ್  
ಚಿಕ್ಕಬಳ್ಳಾಪುರ: ಜಿಲ್ಲೆಯ ಹಲವೆಡೆ ಸುರಿದ ಮಳೆಗೆ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಅನೇಕ ನಿರೀಕ್ಷೆಗಳನ್ನಿಟ್ಟುಕೊಂಡು ರೈತರು ತಮ್ಮ ತಮ್ಮ ಕೃಷಿ ಭೂಮಿಯನ್ನು ಹದಗೊಳಿಸಿ, ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಳೆದ ಮೂರು ವರ್ಷಗಳಲ್ಲೂ ಪ್ರಾರಂಭದಲ್ಲಿ ಮಳೆ ಒಳ್ಳೆಯ ಮುನ್ಸೂಚನೆಯನ್ನು ನೀಡಿದರೂ ಸಹ ಸೂಕ್ತ ಸಮಯದಲ್ಲಿ ಬೀಳದೇ ರೈತರನ್ನು ಕಂಗಾಲನ್ನಾಗಿಸಿತ್ತು. ಮಳೆ ಬಿದ್ದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯವನ್ನು ಕೈಗೊಂಡರೂ ಸಹ ಆ ನಂತರ ಅಸಮರ್ಪಕ ಮಳೆಗೆ ವ್ಯಾಪಕವಾಗಿ ಉಂಟಾದ ಬೆಳೆ ನಾಶದಿಂದ ಕೋಟ್ಯಂತರ ರುಪಾಯಿ ನಷ್ಟವಾಗಿತ್ತು. ಆದರೆ, ಈ ಬಾರಿ ಉತ್ತಮ ಮಳೆ ಸೂಚನೆ ರೈತರಲ್ಲಿ ಮತ್ತೆ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ(ವಾಡಿಕೆ ಮಳೆ 124.8 ಮೀ.ಮೀ) 113.2 ಮಿ.ಮೀ ಮಳೆಯಾಗಿದ್ದು, ಜೂನ್  ತಿಂಗಳಲ್ಲಿ ವಾಡಿಕೆ ಸರಾಸರಿ ಮಳೆ 66.1 ಮಿ.ಮೀ.ಯಾಗಬೇಕು. ಈಗಾಗಲೇ 35 ಮಿ.ಮೀ ಮಳೆಯಾಗಿದೆ. ಇದು ರೈತರನ್ನು ಜಮೀನುಗಳತ್ತ ಸೆಳೆದಿದೆ. ಕೃಷಿ ಕೂಲಿ ಕಾರ್ಮಿಕರನ್ನಿಟ್ಟುಕೊಂಡು ಭೂಮಿಯ ಉಳುಮೆ ಕಾರ್ಯವನ್ನು ಎಲ್ಲೆಡೆ ಕೈಗೊಳ್ಳಲಾಗುತ್ತಿದೆ.
ಹೊಡೆತವೂ ಉಂಟು: ಈ ಬಾರಿ ಮುಂಗಾರು ಮಳೆ ಕೆಲವು ರೈತರಿಗೆ ಹೊಡೆತ ನೀಡಿದೆ. ರಭಸದ ಗಾಳಿಯ ಸಮೇತ ಆಲಿಕಲ್ಲು ಮಳೆ ಬಿದ್ದ ಪರಿಣಾಮ ಜಿಲ್ಲೆಯಲ್ಲಿ ಹಲವು ಬೆಳೆಗಳು ನಾಶವಾಗಿವೆ. ಇನ್ನೇನು ಸಮೃದ್ಧಿಯಾಗಿ ಬೆಳೆದಿರುವ ದ್ರಾಕ್ಷಿ, ತರಕಾರಿ ಬೆಳೆಯಿಂದ ಒಳ್ಳೆಯ ಲಾಭ ಸಿಗಲಿದೆ ಎನ್ನುವಷ್ಟರಲ್ಲಿಯೇ ಕೋಟ್ಯಂತರ ರುಪಾಯಿ ನಷ್ಟ ಸಂಭವಿಸಿದೆ. ಹಿಂದಿನ ದಿನಗಳಲ್ಲಿದ್ದ ಬರದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗದೇ ಕೃಷಿ ಭೂಮಿಯಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ಹರಿಸುವಲ್ಲಿ ರೈತರು ತೊಂದರೆಯನ್ನು ಅನುಭವಿಸಿದ್ದು ಸಾಕಷ್ಟು ಕಡೆ ಬೆಳೆಗಳು ಒಣಗಿ ಹೋಗಿದ್ದವು. ಈಗ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಒಣಗಿದ ಭೂಮಿಯು ತಂಪಾಗಿದೆ. ಅಲ್ಲದೇ ಕೆರೆ ಕುಂಟೆಗಳಲ್ಲೂ ಸಹ ನೀರಿನ ಸಂಗ್ರಹ ಹೆಚ್ಚಳವಾಗುತ್ತಿರುವುದು ಸಂತಸ ತಂದಿದೆ.

ತಾಲೂಕು ವಾರು ಮಳೆ ವಿವರ ಹೀಗಿದೆ
ತಾಲೂಕು    ವಾಡಿಕೆ    ಮೇ    ಜೂನ್
ಚಿಕ್ಕಬಳ್ಳಾಪುರ    129.7    110.7    44.5
ಶಿಡ್ಲಘಟ್ಟ    139.1    109.9    20.2
ಚಿಂತಾಮಣಿ    136.8    123.2    18.8
ಬಾಗೇಪಲ್ಲಿ    110.1    111.8    37.2
ಗುಡಿಬಂಡೆ    120.6    140.2    38.2
ಗೌರಿಬಿದನೂರು    120.9    84.3    51.3
ಒಟ್ಟು    124.8    113.2    35

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.