ಕ್ಯಾಪ್ಸಿಕಂ ಬೆಳೆಯಲ್ಲಿ ಬೂದಿ ರೋಗ ನಿಯಂತ್ರಣಕ್ಕೆ ಸಲಹೆ
ಕೋಲಾರ: ರೈತರ ಖಜಾನೆ ಭರ್ತಿ ಮಾಡುವ ಬೆಳೆಯಾದ ಕ್ಯಾಪ್ಸಿಕಂಗೆ ಕಂಟಕವಾಗಿರುವ ಬೂದಿ ರೋಗ ನಿಯಂತ್ರಣಕ್ಕೆ ಸೂಕ್ತ ಔಷಧೋಪಚಾರ ಮಾಡುವ ಮೂಲಕ ಗುಣಮಟ್ಟದ ಇಳುವರಿ ಪಡೆಯುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ರೈತರಿಗೆ ಸಲಹೆ ನೀಡಿದ್ದಾರೆ.
ಕ್ಯಾಪ್ಸಿಕಂ ಗಿಡಗಳಲ್ಲಿನ ಎಲೆಗಳ ಮೇಲ್ಭಾಗದಲ್ಲಿ ಹಳದಿ ಚುಕ್ಕೆಗಳು ಕಂಡು ಬಂದು, ಕೆಳಭಾಗದಲ್ಲಿ ಬೂದಿ ಹಚ್ಚಿದಂತೆ ರೋಗ ಪ್ರಾರಂಭವಾಗಿ ಎಲೆಗಳು ಎಲೆಗಳು ಒಣಗಿ ಉದುರಿ ಹೋಗುವುದರಿಂದ ಗಿಡ ಮತ್ತು ಕಾಯಿಗಳ ಬೆಳವಣಿಗೆ ಕುಂಠಿತವಾಗುತ್ತದೆ.
ಹತೋಟಿ ಕ್ರಮಗಳು: ಬೂದಿ ರೋಗದ ನಿಯಂತ್ರಣಕ್ಕೆ 7 ಮಿ.ಲೀ. ಹೊಂಗೆ ಅಥವಾ ಬೇವಿನ ಎಣ್ಣೆ ಜೊತೆಗೆ 2 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಎರಡನೇ ಸಿಂಪರಣೆಯಾಗಿ 1 ಮಿ.ಲೀ. ಹೆಕ್ಸಾಕೋನಾಜೋಲ್ ಅಥವಾ 0.5 ಮಿ.ಲೀ. ಡೈಪೆನ್‌ಕೋನಾಜೋಲ್ ಅನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಮೂರನೇ ಸಿಂಪರಣೆಯಾಗಿ 1 ಗ್ರಾಂ ಮೈಕ್ಲೋಬುಟಾನಿಲ್ ಅಥವಾ 1 ಮಿ.ಲೀ. ಡೈನೋಕಾಪ್‌ಅನ್ನು ಪ್ರತಿ ಲೀ.ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
ಪ್ರತಿ ಸಲ ಕೀಟನಾಶಕವನ್ನು ಸಿಂಪಡಿಸುವಾಗ ಸ್ಟಿಕರ್ ಮಾದರಿಯ ಅಂಟು ದ್ರಾವಣವನ್ನು ಉಪಯೋಗಿಸಬೇಕು. ಕೀಟನಾಶಕಗಳ ದ್ರಾವಣ ಗಿಡಗಳ ಎಲೆಹಳು ಸಂಪೂರ್ಣವಾಗಿ ನೆನೆಯುವಂತೆ ಗಿಡದ ಕೆಳಭಾಗದಿಂದ ತುದಿಯವರೆಗೂ ನೆನೆಯುವಂತೆ ಸಿಂಪಡಿಸಬೇಕು.
ರೈತರಿಗೆ ಸೂಚನೆ: ಔಷಧಿ ಸಿಂಪರಣೆ ಮಾಡುವವರು ತಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಬಟ್ಟೆ ಅಥವಾ ಗೌನ್ ಧರಸಿ ಮತ್ತು ಕೈಗೆ ಗ್ಲೌಸ್ ಹಾಕಿಕೊಳ್ಳಬೇಕು. ಮೊದಲು 2 ಕೆ.ಜಿ. ಬೆಲ್ಲದಿಂದ ದ್ರಾವಣವನ್ನು ಮಾಡಿಕೊಂಡು ಜೊತೆಗೆ 10 ಕೆ.ಜಿ. ಬೂಸವನ್ನು ಬೆರೆಸಿ ಸುಮಾರು 6 ರಿಂದ 8ಗಂಟೆ ಅವಧಿಯಷ್ಟು ಶೇಖರಿಸಿಡಬೇಕು. ಈ ಮಿಶ್ರಣದ ಜೊತೆ ಅರ್ಧ ಕೆ.ಜಿ. ಮಿಥೋಮೊಲ್ ಔಷಧಿಯನ್ನು ಬೆರೆಸಿ ಸಣ್ಣ ಸಣ್ಣ ಹುಂಡೆಗಳಾಗಿ ಮಾಡಿ ಗಿಡಗಳ ಬುಡದ ಬಳಿ ಸಾಲಾಗಿ ಹಾಕಬೇಕು. ಪಾಲಿಹೌಸ್ ಅಥವಾ ನೆಟ್‌ಹೌಸ್‌ಗಳಲ್ಲಿ ಸುತ್ತಲೂ ಹಾಗೂ ತುದಿಗಳಲ್ಲಿ ತೆಳುವಾಗಿ ಹರಡಬೇಕು. ಈ ಮಿಶ್ರಣವನ್ನು ಸಂಜೆಯ ವೇಳೆ ಉಪಯೋಗಿಸಿದಾಗ ಮಾತ್ರ ರಾತ್ರಿಯ ವೇಳೆ ಹಾನಿ ಮಾಡುವ ಕೀಟಗಳ ಬಾಧೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ ಎಂದು ವಿವರಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಾರ್ಟಿ ಕ್ಲಿನಿಕ್, ತೋಟಗಾರಿಕೆ ಇಲಾಖೆ, ಕೋಲಾರ. ದೂ.ಸಂ.7829512236 ಸಂಪರ್ಕಿಸಿ.
ಚುಕ್ಕೆ ರೋಗಕ್ಕೂ ಪರಿಹಾರ
ಕ್ಯಾಪ್ಸಿಕಂ ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಮತ್ತು ಮೈಟ್ ನುಸಿ ಕೀಟಗಳ ನಿಯಂತ್ರಣಕ್ಕೆ ರೈತರು ಗಮನ ನೀಡಬೇಕು. ನುಸಿ ಕೀಟಗಳು ಎಲೆಗಳು, ಚಿಗುರು ಮತ್ತು ಕಾಯಿಗಳಿಂದ ರಸ ಹೀರಿದಾಗ ಎಲೆಗಳು ಚಿಕ್ಕದಾಗಿ ತಿರುಚಿಕೊಂಡು ಕೆಳಮುಖವಾಗಿ ಮುದುಡಿಕೊಳ್ಳುವುದು. ಬಾಧೆಯ ತೀವ್ರತೆ ಹೆಚ್ಚಾದಾಗ ಗಿಡದ ಬೆಳವಣಿಗೆ ಕುಂಠಿತವಾಗಿ, ಹೂವು ಮತ್ತು ಕಾಯಿಗಳು ಮಾರುಕಟ್ಟೆಗೆ ಯೋಗ್ಯವಾಗಿರುವುದಿಲ್ಲ. ವಾತಾವರಣದ ಉಷ್ಣತೆ ಹೆಚ್ಚಾದಾಗ ಈ ಕೀಟಗಳ ಹಾವಳಿಯು ಹೆಚ್ಚಾಗುವುದರಿಂದ ತೋಟಗಾರಿಕೆ ಇಲಾಖೆಯ ತಜ್ಞರ ಸಲಹೆ ಪಡೆಯಬಹುದೆಂದು ಉಪ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ. ಕ್ಯಾಪ್ಸಿಕಂ ಎಲೆ ಚುಕ್ಕೆ ರೋಗವು ಎಲೆಗಳ ಮೇಲೆ ಸಣ್ಣ ಹಳದಿ ಚುಕ್ಕೆ ಆರಂಭವಾಗಿ, ನಂತರ ಕಂದು ಬಣ್ಣಕ್ಕೆ ತಿರುಗಿ ಚುಕ್ಕೆಯ ಗಾತ್ರ ಹೆಚ್ಚಾಗುತ್ತಾ ಎಲೆಯ ಮಧ್ಯಭಾಗ ಹಾಗೂ ತುದಿಗಳನ್ನು ಸಹ ಆಕ್ರಮಿಸಿದಾಗ ಎಲೆಗಳು ಒಣಗಿ ಉದುರಿ ಹೋಗುತ್ತವೆ. ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 2.5 ಮಿ.ಲೀ.ಕ್ಲೋರೋಥೆಲೋನಿಲ್ ಅಥವಾ 2 ಗ್ರಾಂ ಮ್ಯಾಂಕೊಜೆಬ್ ಅಥವಾ 1 ಗ್ರಾಂ ಕಾರ್ಬೆಂಡೈಜಿಮ್ ಅನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

