ಕೋಲಾರ

ಹಸಿರಿದ್ದರೆ ಉಸಿರು ಹುಚ್ಚಪ್ಪಗಳಿರಾ!

Published On :

ಪ್ರಕೃತಿ ಮೇಲೆ ದಬ್ಬಾಳಿಕೆ: ನ್ಯಾಯಾಧೀಶರ ಕಳವಳ



ಕ.ಪ್ರ. ವಾರ್ತೆ ಟಿ ಕೋಲಾರ ಟಿ ಜೂ. 5
ಪ್ರಕೃತಿ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಿಂದಾಗಿ ಜಗತ್ತಿನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್. ರೇಣುಕಾಪ್ರಸಾದ್ ವಿಷಾದಿಸಿದರು.
ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಹೊರ ವಲಯದ ಗಾಜಲದಿನ್ನೆ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವವಸತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಕೃತಿಯ ಸದ್ಬಳಕೆ ಬದಲಿಗೆ ದುರ್ಬಳಕೆ ಹೆಚ್ಚಾಗುತ್ತಿದೆ.  ನಮ್ಮ ಜೀವನ ಮಟ್ಟವನ್ನು ಉತ್ತಮಗೊಳಿಸುವಲ್ಲಿ ಪರಿಸರ ಹೆಚ್ಚು ಸಹಕಾರಿಯಾಗುತ್ತದೆ. ಆದರೆ, ದುರಾಸೆಯಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದರು. ಅರಣ್ಯದಲ್ಲಿ ಗಣಿಗಾರಿಕೆ, ಮರಳುಗಾರಿಕೆ, ಕೆರೆಗಳ ಒತ್ತುವರಿ, ಅತಿಯಾಗಿ ಪ್ಲಾಸ್ಟಿಕ್ ಬಳಕೆ ಇನ್ನಿತರ ಕಾರಣಗಳಿಂದಾಗಿ ಮಳೆ ಕಡಿಮೆ ಆಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳದಿಂದ ಮಾನವ-ಪಶು, ಪಕ್ಷಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶರಾದ ಎಸ್.ವಿ. ಶ್ರೀಕಾಂತ್ ಮಾತನಾಡಿ, ಮುಂದಿನ ಜನಾಂಗದ ಉಳಿವಿಗಾಗಿ ಪರಿಸರ ಬೆಳೆಸುವ ವಾತಾವರಣ ಸೃಷ್ಟಿಸದಿದ್ದರೆ ಸಕಲ ಜೀವರಾಶಿಗಳಿಗೂ ತೊಂದರೆ. ಪರಿಸರವನ್ನು ರಕ್ಷಿಸೋಣ ಎಂದು ತಿಳಿಸಿದರು. ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವವಸತಿ ಕಾಲೇಜು ಪ್ರಾಂಶುಪಾಲ ಜಿ.ಎಂ. ವೆಂಕಟರವಣಪ್ಪ ಮಾತನಾಡಿ, ಕಾಲೇಜು ಆವರಣದಲ್ಲಿ 300 ಸಸಿಗಳನ್ನು ನೆಟ್ಟು ಒಂದು ಗಿಡವೂ ಹಾಳಾಗದಂತೆ ಬೆಳೆಸುವುದಾಗಿ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ. ಸಿಇಒ ಆರ್. ವಿನೋತ್ ಪ್ರಿಯಾ, ಪ್ರಕೃತಿ ಸಂಪತ್ತು ಮಿತಿಮೀರಿ ಬಳಕೆಯಾಗುತ್ತಿದೆ. ಇದರಿಂದ ಆಗುವ ದುಷ್ಪರಿಣಾಮವನ್ನು ಜಿಲ್ಲೆಯಲ್ಲಿ ಕಾಣುತ್ತಿದ್ದೇವೆ. ಅರಣ್ಯ ಉಳಿಸಿ ಸಂರಕ್ಷಿಸಬೇಕು ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗದೀಶ್ ಮಾತನಾಡಿದರು. ಡಿವೈಎಸ್ಪಿ ಎ. ಅಶೋಕ್‌ಕುಮಾರ್, ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಿಣಕೇರಿ, ಕೆ.ಜಿ. ಚಿಂತಾ, ಜಿ. ಕುಮಾರ್, ಎಸ್. ಶಕುಂತಲಾ, ಚಿನ್ನಸ್ವಾಮಿ, ಕೆ.ಎನ್. ಜಗದೀಶ್ ಇದ್ದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ  ಅಧಿಕಾರಿ ಮರಿಮಾದಯ್ಯ ಸ್ವಾಗತಿಸಿ, ಸಂಕಲ್ಪ ಸಂಸ್ಥೆಯ ಶಾರದ ನಿರೂಪಿಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗದೀಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.