ಕೋಲಾರ

ರೈತರ ಪರ ಕೆಲಸ ಮಾಡದಿದ್ದರೆ ರಾಜಿನಾಮೆ ನೀಡಿ: ಬ್ಯಾ.ಗೋ.

Published On :

ಕೋಲಾರ: ರೈತರ ಪರವಾಗಿ ಬದ್ಧತೆಯಿಂದ ಕೆಲಸ ಮಾಡಲು ಆಗದಿದ್ದರೆ ರಾಜಿನಾಮೆ ನೀಡಿ ಮನೆಗೆ ಹೋಗಿ, ಯುವಕರಿಂದ ಸೂಸೈಟಿಗಳನ್ನು ನಡೆಸುತ್ತೇವೆ ಎಂದು ನಿಷ್ಕ್ರೀಯರಾಗಿರುವ ವ್ಯವಸಾಯ ಸೇವಾ ಸಹಕಾರ ಸಂಘಗಳ ಎಂಡಿಗಳು ಮತ್ತು ಕಾರ್ಯದರ್ಶಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದೇಗೌಡ ತಾಕೀತು ಮಾಡಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಅಧ್ಯಕ್ಷರು, ನಿರ್ದೇಶಕರಿಗೆ 97ನೇ ಸಂವಿಧಾನ ತಿದ್ದುಪಡಿ ಹಾಗೂ ವೈದ್ಯನಾಥನ್ ವರದಿ ಅನ್ವಯ ಸಂಘಗಳ ಪುನಶ್ಚೇತನ, ಯಶಸ್ವಿನಿ ಯೋಜನೆ ಅನುಷ್ಠಾನದ ಕುರಿತಂತೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡದಿದ್ದರೆ, ರೈತರಿಗೆ ಮೋಸ ಮಾಡಿದಂತಾಗುತ್ತದೆ. ರೈತರು ಮೀಟರ್ ಬಡ್ಡಿಗೆ ಸಿಕ್ಕಿ ಹಾಳಾಗುವುದನ್ನು ತಪ್ಪಿಸಿ, ಸಹಕಾರ ಸಂಘಗಳ ಮೂಲಕ ಸಾಲ ನೀಡಲು ಕಾರ್ಯಕ್ರಮ ಹಾಕಿಕೊಳ್ಳುವುದರ ಜೊತೆಗೆ ಸಂಘದ ಆಡಿಟ್ ಮಾಡಿಸಿ ಡಿಸಿಸಿ ಬ್ಯಾಂಕ್‌ಗೆ ಸಲ್ಲಬೇಕಾದ ಸಾಲವನ್ನು ಮರು ಪಾವತಿಸಲು ಮುಂದಾಗುವಂತೆ ಸೂಚಿಸಿದರು.
ಸಂಘಗಳು ಬಂದ್; ಎಚ್ಚರಿಕೆ: ರಾಜ್ಯ ಸರ್ಕಾರ ಮತ್ತು ಸಹಕಾರ ಇಲಾಖೆ ಸೂಚನೆಯಡಿ ವೈದ್ಯನಾಥನ್ ವರದಿಯಂತೆ 2004ಕ್ಕೆ ಶೇ.30 ಮರುಪಾವತಿ ಇಲ್ಲದೆ ಅನರ್ಹಗೊಂಡಿರುವ ಸಹಕಾರ ಸಂಘಗಳ ಮಾನದಂಡ ಮರು ಪರಿಶೀಲನೆಗೆ ಒಪ್ಪಿಗೆ ನೀಡಲಾಗಿದೆ. ಈ ಸಂದರ್ಭದಲ್ಲಿ ಸುಧಾರಣೆಗೊಂಡಿರುವ ಸಂಘಗಳು ಅರ್ಹತೆ ಪಟ್ಟಿಗೆ ಬಂದಲ್ಲಿ ಆ ಭಾಗದ ರೈತರಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯಗಳು ದೊರಕುತ್ತವೆ. ಮೂರು ದಿನದೊಳಗೆ ಆಡಿಟ್ ಮಾಡಿ ವರದಿ ನೀಡದಿದ್ದರೆ ಸಂಘಗಳು ಬಂದ್ ಆಗುತ್ತವೆ ಎಂದು ಎಚ್ಚರಿಕೆ ನೀಡಿದರು.
ಸಹಕಾರಿ ಯೂನಿಯನ್ ನಿರ್ದೇಶಕ ಹೊಳಲಿ ಪ್ರಕಾಶ್, ಕಾರ್ಯಾಗಾರಕ್ಕೆ ತಡವಾಗಿ ಬಂದ ಸಹಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸಹಕಾರಿಗಳಲ್ಲಿ ಸಮಯಪ್ರಜ್ಞೆ ಇಲ್ಲದಿದ್ದರೆ ಸಂಘಗಳು ಹೇಗೆ ಪ್ರಗತಿ ಸಾಧಿಸಲು ಸಾಧ್ಯವೆಂದು ಪ್ರಶ್ನಿಸಿದರು.
ಕಿರುಕುಳ ನೀಡಿದರೆ ನೇರವಾಗಿ ಪತ್ರ ಬರೆಯಿರಿ ಎಂದು ಸಲಹೆ ನೀಡಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಡಿಸಿಸಿ ನಿರ್ದೇಶಕ ನಾಗನಾಳ ಸೋಮಣ್ಣ ಮತ್ತಿತರರು ಮಾತನಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.