ಕೋಲಾರ

15 ಅಂಶ ಕಾರ್ಯಕ್ರಮ ಜಾರಿಗೆ ಗರ ಪಾ.ಶ್ರೀ.ಅನಂತರಾಮ್

Published On :

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಅನುಷ್ಠಾನಕ್ಕೆ ತಂದ 15 ಅಂಶಗಳ ಅಭಿವೃದ್ಧಿ ಕಾರ್ಯಕ್ರಮ ಬರ ಪೀಡಿತ ಕೋಲಾರ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಸಾಧನೆ ಸಾಧ್ಯವಾಗಿಲ್ಲ.
ನಮ್ಮೂರ ಕೆರೆ, ಮನೆಗೊಂದು ಶೌಚಾಲಯ, ಸ್ಮಶಾನ ಅಭಿವೃದ್ಧಿ, ನಮ್ಮ ಹೊಲ ನಮ್ಮ ದಾರಿ, ಆಟದ ಮೈದಾನ, ರೈತರ ಭೂ ಅಭಿವೃದ್ಧಿ, ಕರಿ, ದನದ ದೊಡ್ಡಿ, ರೈತರ ಕಣ, ನಮ್ಮ ಹಳ್ಳಿ ನಮ್ಮ ನೀರು, ಶುದ್ಧ ಕುಡಿಯುವ ನೀರಿನ ಘಟಕ, ಸಂಜೀವಿನಿ ಜೀವನೋಪಾಯ ಅಭಿಯಾನ ಸೇರಿದಂತೆ 15 ಕಾರ್ಯಕ್ರಮ ಜಾರಿಗೆ ಕಳೆದ ವರ್ಷ ಚಾಲನೆ ಸಿಕ್ಕಿತ್ತು. ಆದರೆ, ಕೋಲಾರದಲ್ಲಿ ಮಾತ್ರ ಈ ಯೋಜನೆಗಳ ಜಾರಿ ಗುರಿ ತಲುಪಿಲ್ಲ.ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ರೆಡ್ಡಿ ಕೋಲಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಸಿಎಂ ಘೋಷಿತ ಕಾರ್ಯಕ್ರಮಗಳಲ್ಲಿ ಕೆಲವನ್ನು ಜಾರಿಗೆ ತರಬಹುದೆಂದು ಸಲಹೆ ಸೂಚನೆ ನೀಡಿದ್ದರು.ಜಿಪಂ ಸಾಮಾನ್ಯ ಸಭೆಗಳಲ್ಲಿ ಈ ಯೋಜನೆಗಳ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕಾದ ಜನಪ್ರತಿನಿಧಿಗಳು ಕೊಳವೆ ಬಾವಿಗಳ ಕೊರೆತ, ಟ್ಯಾಂಕ್ ನೀರು, ಅಧಿಕ ಅನುದಾನ ಬರುವ ಇಲಾಖೆಗಳ ಮೇಲೆ ಹೆಚ್ಚಿನ ಗಮನ ನೀಡಿ, ಸಿಎಂ ರೂಪಿಸಿದ 15 ಕಾರ್ಯಕ್ರಮಗಳ ಪ್ರಗತಿ ಸಾಧನೆಯ ಬಗ್ಗೆ ಚಕಾರ ಎತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಗಳನ್ನು ನಡೆಸಿ ಪ್ರಗತಿ ಪರಿಶೀಲನೆ ಮಾಡದೆ ನಿರ್ಲಕ್ಷಿಸಿರುವುದು ಈ ಹಿನ್ನಡೆಗೆ ಕಾರಣ ಎನ್ನಬಹುದು.
ಗುರಿ ಮತ್ತು ಸಾಧನೆ
2013-14ನೇ ಸಾಲಿನ ನರೇಗಾ ಯೋಜನೆಯಡಿ ಸಿಎಂ ಕಾರ್ಯಕ್ರಮಗಳನ್ನು ಜಿಲ್ಲೆಯ ಐದು ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. 977 ಕೆರೆ-ಕಲ್ಯಾಣಿಗಳ ಅಭಿವೃದ್ಧಿ ಗುರಿಯಲ್ಲಿ 274 ಸಾಧನೆಯಾಗಿದೆ. ವೈಯುಕ್ತಕ ಶೌಚಾಲಯಗಳ ನಿರ್ಮಾಣಕ್ಕೆ 60646 ಪೈಕಿ 13118, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 1826ರಲ್ಲಿ 410, ಸ್ಮಶಾನ ಅಭಿವೃದ್ಧಿಗೆ 452ರಲ್ಲಿ 80, ಆಟದ ಮೈದಾನಗಳು 256ರಲ್ಲಿ 41,ಶುದ್ಧ ಕುಡಿಯುವ ನೀರಿನ ಘಟಕ 279ರಲ್ಲಿ 42, ಕಣಗಳ ನಿರ್ಮಾಣ 331ರಲ್ಲಿ 37, ವೈಯುಕ್ತಿಕವಾದ ಕಾಮಗಾರಿಗಳು 33868ರಲ್ಲಿ 4568, ಅರಣೀಕರಣ 1358ರಲ್ಲಿ 135 ಗುರಿ ಸಾಧಿಸಲು ಸಾಧ್ಯವಾಗಿದೆ.
ಈ ಯೋಜನೆಗಳ ಜಾರಿಗೆ ಹಣದ ಸಮಸ್ಯೆ ಇಲ್ಲ. ಫಲಾನುಭವಿಗಳು ಖರ್ಚು ಮಾಡುವ ಹಣವನ್ನು ನರೇಗಾ ಅನುಷ್ಠಾನಾಧಿಕಾರಿಗಳು ಗಣಕೀಕರಣ ಮುಖೇನ ದಾಖಲು ಮಾಡಿದಲ್ಲಿ ಆನ್‌ಲೈನ್ ಮೂಲಕ ಹಣ ಸಂದಾಯವಾಗುತ್ತದೆ. ಅದಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶದ ಜನತೆಗೆ ಅರಿವು ಮೂಡಿಸಿದಲ್ಲಿ ಸಿಎಂ ಕಾರ್ಯಕ್ರಮ ಜಿಲ್ಲೆಯಲ್ಲಿ ಗುರಿ ಸಾಧನೆ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ.ಇನ್ನು 2014-15ನೇ ಸಾಲಿನ ನರೇಗಾ ಕಾಮಗಾರಿಗಳ ಗುಚ್ಚವನ್ನು ಜಿಪಂ ಅಧಿಕಾರಿಗಳು ತಯಾರಿಸಿದ್ದಾರೆ. ವಾರ್ಷಿಕ ಕ್ರಿಯಾ ಯೋಜನೆ ಸಹ ಸಿದ್ಧವಾಗಿದ್ದು, ಜಿಲ್ಲೆಯಲ್ಲಿನ ಕಲ್ಯಾಣಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಿಎಂ 15 ಅಂಶಗಳ ಕಾರ್ಯಕ್ರಮಕ್ಕೂ ಆದ್ಯತೆ ನೀಡಲಾಗಿದ್ದು ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಸಹಾಯಕ ಯೋಜನಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.
ನರೇಗಾ ಕೂಲಿ ಏರಿಕೆ
ನರೇಗಾ ಯೋಜನೆಯಡಿ 174 ಇದ್ದ ಕೂಲಿಯನ್ನು 1.4.2014ರಿಂದ 191ಕ್ಕೇರಿಸಲಾಗಿದೆ. ಮಾನವ ಸಂಪನ್ಮೂಲ ಬಳಕೆಯಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಆಂಧ್ರ ಮೊದಲ ಸ್ಥಾನದಲ್ಲಿದೆ.
2013-14ನೇ ಸಾಲಿನಲ್ಲಿ 67403 ಜನರಿಂದ ಉದ್ಯೋಗ ಬೇಡಿಕೆ ಇದ್ದು 58947 ಜನರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಲಾಗಿದೆ. 4698 ಕಾಮಗಾರಿಗಳು ಮುಗಿದಿದ್ದು, 17875 ಕಾಮಗಾರಿಗಳು ಮುಂದುವರೆದಿದೆ. ಕಾಮಗಾರಿ ಕೂಲಿಗೆ 93.49 ಕೋಟಿ ಖರ್ಚು ಮಾಡಲಾಗಿದೆ. 2014-15ರಲ್ಲಿ 198460 ಜಾಬ್ ಕಾರ್ಡ್ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.