ಕೋಲಾರ

ಪೌರಕಾರ್ಮಿಕರಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲು ಕ್ರಮ

Published On :

ಕೋಲಾರ: ರಾಜ್ಯ ಸರ್ಕಾರ ಪೌರಕಾರ್ಮಿಕರಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಿದ್ದು, ಕೋಲಾರಕ್ಕೆ 100 ಮನೆಗಳನ್ನು ಮಂಜೂರು ಮಾಡುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ವಿಭಾಗದ ತಾಂತ್ರಿಕ ಘಟಕದ ಅಧೀಕ್ಷಕ ಅಭಿಯಂತರ ಎಂ.ಹೆಚ್.ಎಂ ಪ್ರಶಾಂತ್ ತಿಳಿಸಿದರು.
ನಗರದ ಉದ್ಯಾನವನ, ಕಲ್ಯಾಣಿಗಳು, ತ್ಯಾಜ್ಯ ಘಟಕದ ನಿವೇಶನ ಹಾಗೂ ನಗರಸಭೆ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಪ್ರದೇಶಗಳಿಗೆ ಭೇಟಿ ನೀಡಿ ಅವರು ಪರಿಶೀಲಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಹೊರವಲಯದ ಹೊದಲವಾಡಿ ಗ್ರಾಮದಲ್ಲಿನ 2.5 ಎಕರೆ ಜಮೀನಿನಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಚಿಂತಿಸಿದ್ದು ಸ್ಥಳ ಪರಿಶೀಲಿಸಲು ಭೇಟಿ ನೀಡಿರುವುದಾಗಿ ಹೇಳಿದರು.
ನಗರದ ಸರ್ವಜ್ಞ ಪಾರ್ಕಿಗೆ ಭೇಟಿ ನೀಡಿ ಉದ್ಯಾನವನದಲ್ಲಿರುವ ನೀರಿನ ಟ್ಯಾಂಕ್ ಬಗ್ಗೆ ಮಾಹಿತಿ ಪಡೆದ ಅವರು ವ್ಯರ್ಥವಾಗಿರುವ ಖಾಲಿ ಜಾಗವನ್ನು ಅಭಿವೃದ್ಧಿಪಡಿಸಲು ನಗರಸಭೆ ಅಧ್ಯಕ್ಷ ಮುಬಾರಕ್ ಮತ್ತು ಆಯುಕ್ತರಿಗೆ ಸಲಹೆ ನೀಡಿದರು, ಉದ್ಯಾನದಲ್ಲಿರುವ ರೇಡಿಯೋ ರೂಮ್ ದುರಸ್ತಿಗೊಳಿಸಿ ಬೆಳಿಗ್ಗೆ ಹಾಗೂ ಸಂಜೆ ಎಫ್.ಎಂ. ರೇಡಿಯೋ ಮೂಲಕ ಸಾರ್ವಜನಿಕರಿಗೆ ಸುದ್ದಿಗಳು ಹಾಗೂ ಸಂಗೀತವನ್ನು ಕೇಳುವ ಸೌಲಭ್ಯವನ್ನು ಕಲ್ಪಿಸಬೇಕೆಂದರು.
ಸರ್ವಜ್ಞ ಪಾರ್ಕಿನಲ್ಲಿ ರೇಡಿಯೋ ಹೌಸ್ ಮುಚ್ಚಿರುವ ಬಗ್ಗೆ ಕೆಲವು ತಿಂಗಳ ಹಿಂದೆ ಕನ್ನಡಪ್ರಭ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸರ್ವಜ್ಞ ಪ್ರತಿಮೆಯ ನಿರ್ವಹಣೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಕನಿಷ್ಠ ವಾರಕ್ಕೊಮ್ಮೆಯಾದರೂ ಪ್ರತಿಮೆಯನ್ನು ಸ್ವಚ್ಛಗೊಳಿಸಬೇಕು ಹಾಗೂ ಉದ್ಯಾನದಲ್ಲಿ ಕಸ ಬೀಳದಂತೆ ಸಿಬ್ಬಂದಿ ಗಮನಹರಿಸಬೇಕು, ಗಿಡಗಳನ್ನು ಉತ್ತಮ ರೀತಿಯಲ್ಲಿ ಪೋಷಿಸಬೇಕು, ನೀರಿನ ಹೊಂಡದಲ್ಲಿ ಸಂಜೆ ಕಾರಂಜಿ ನೀರು ಚಿಮ್ಮುವಂತೆ ಬಣ್ಣದ ದೀಪಗಳಿಂದ ಅಲಂಕರಿಸುವಂತೆ ಸಲಹೆ ನೀಡಿದರು.
ಜಿಲ್ಲಾ ಕೇಂದ್ರದಲ್ಲಿ ತ್ಯಾಜ್ಯ ವಿಲೇವಾರಿಗೆ ನಗರದ ಹೊರವಲಯದ ಯಡಹಳ್ಳಿ ಗ್ರಾಮದಲ್ಲಿ 4.5ಎಕರೆ ಜಮೀನು ಗುರುತಿಸಿದೆ ಇದಕ್ಕೆ ಗ್ರಾಮಸ್ಥರ ಸಮ್ಮತಿ ಪಡೆಯಲಾಗಿದೆ ಕಸವನ್ನು ಸಂರಕ್ಷಿಸಿ ಸುರಿಯುವುದರಿಂದ ಪರಿಸರಕ್ಕೆ ಆಗಲಿ ಅಥವಾ ಸಾರ್ವಜನಿಕರಿಗೆ ಯಾವುದೇ ಅಡಚಣೆ ಆಗದು ಎಂದರು.
ಜಮೀನು ಖರೀದಿಸಲು ಈಗಾಗಲೇ 50 ಲಕ್ಷ ರು. ನೀಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತ್ಯಾಜ್ಯ ಘಟಕಗಳು ಇದ್ದು ಕೋಲಾರ, ಕುಮಟ ಹಾಗೂ ದಾಂಡೇಲಿಯದಲ್ಲಿ ಮಾತ್ರ ಬಾಕಿ ಉಳಿದಿದೆ ಎಂದರು.
ಪ್ರಥಮವಾಗಿ ತ್ಯಾಜ್ಯ ಘಟಕ ಸ್ಥಾಪಿಸಲು ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕಾಳಜಿ ಬೇಕು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ, ಭೂ ಸ್ವಾಧೀನ ಪಡಿಸಿಕೊಂಡು ಅಗತ್ಯವಾದ ಅಭಿವೃದ್ಧಿಗೆ ಅವಶ್ಯಕವಾದ ಪರಿಕರ ಹಾಗೂ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದರು.
ನಗರದಲ್ಲಿನ ಪುಷ್ಕರಿಣಿ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿದೆ, ಅವುಗಳ ಅಭಿವೃದ್ಧಿಗೂ ಸರ್ಕಾರವು ಹಣ ಬಿಡುಗಡೆ ಮಾಡಲಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್, ಪೌರಾಯುಕ್ತ ಕೆ.ಎನ್. ಜಗದೀಶ್, ನಗರಸಭೆ ಕಂದಾಯ ಅಧಿಕಾರಿ ಚಲಪತಿ, ಆರೋಗ್ಯ ಅಧಿಕಾರಿ ರಮೇಶ್, ವ್ಯವಸ್ಥಾಪಕ ಶಿವಪ್ರಕಾಶ್, ಇಂಜಿನಿಯರ್ ಕೊಟ್ರಪ್ಪ, ಶ್ರೀನಿವಾಸ್ ಹಾಗೂ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.