ರೇಷ್ಮೆ, ಕೃಷಿ ಇಲಾಖೆಗಳ ವಿಲೀನ; ರೈತರು ತಲ್ಲಣ
ಕೋಲಾರದಲ್ಲಿ ಪ್ರತಿಭಟನೆ
ಕೋಲಾರ: ಕೃಷಿ ಇಲಾಖೆಯಲ್ಲಿ ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಸರ್ಕಾರದ ನಿಲುವು ಕೈ ಬಿಡಬೇಕೆಂದು ಒತ್ತಾಯಿಸಿ ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘ ಹಾಗೂ ರೇಷ್ಮೆ ಬೆಂಬಲಿತ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ನಗರದ ಸರ್ಕಾರಿ ರೇಷ್ಮೆ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಇಲಾಖೆಗಳ ವಿಲೀನದಿಂದ ರೇಷ್ಮೆ ಉದ್ಯಮ ಅಭಿವೃದ್ಧಿಗೆ ಮಾರಕವಾಗಲಿದೆಯೆಂದು ಪ್ರತಿಭಟನಾಕಾರರು ದೂರಿದರು. ರೇಷ್ಮೆ ಇಲಾಖೆಯಲ್ಲಿ ಕೃಷಿ ಇಲಾಖೆಯನ್ನು ರಾಜ್ಯ ಸರ್ಕಾರ ವಿಲೀನಗೊಳಿಸಲು ಕೈಗೊಂಡಿರುವ ಕ್ರಮ ಅವೈಜ್ಞಾನಿಕವೆಂದು ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಮುಖಂಡ ಮತ್ತು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಚಿನ್ನಾಪುರ ಸಿ. ನಾರಾಯಣಸ್ವಾಮಿ ಟೀಕಿಸಿದರು.
ತಾಲೂಕು ಅಧ್ಯಕ್ಷ ಎ.ಅರ್ಜುನ ಮಾತನಾಡಿ, ರಾಜ್ಯ ಸರಕಾರ ರೇಷ್ಮೆ ಇಲಾಖೆಯ್ನು ಮತ್ತು ಕೃಷಿ ಇಲಾಖೆಯಲ್ಲಿ ವಿಲೀನ ಮಾಡುವುದರಿಂದ ಇತ್ತ ರೇಷ್ಮೆ ಇಲಾಖೆಗೂ ಇಲ್ಲದೆ ಅತ್ತ ಕೃಷಿ ಇಲಾಖೆಗೂ ಇಲ್ಲದೆ ಬಲಿಪಶುಗಳಾಗುವ ಮಟ್ಟಕ್ಕೆ ಹೊರಟಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ಈ ಅವೈಜ್ಞಾನಿಕ ಕ್ರಮ ಕೈಬಿಡದಿದ್ದರೆ ಮುಂದಿನ ವಾರ ರಾಜ್ಯಾದ್ಯಂತ ರೇಷ್ಮೆ ಮಾರುಕಟ್ಟೆಯನ್ನು 2 ಗಂಟೆಗಳ ಕಾಲ ಬಂದ್ ಮಾಡಲಾಗುವುದೆಂದು ಎಚ್ಚರಿಸಿದರು. ಜೆಡಿಎಸ್ ಮುಖಂಡ ಕೇಶವ ಮಾತನಾಡಿದರು. ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಋ ಸಂಘದ ಅಧ್ಯಕ್ಷ ಎಚ್.ಎನ್. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಎಲ್. ನಾಗರಾಜ, ಕೋಚಿಮುಲ್ ನಿರ್ದೇಶಕ ರಾಮಕೃಷ್ಣೇಗೌಡ, ಎಚ್.ಪಿ. ವೆಂಕಟೇಶ್ ಮತ್ತಿತರರು ಇದ್ದರು.
ಚಿಂತಾಮಣಿಯಲ್ಲಿ ರೈತರ ಆಕ್ರೋಶ
ಚಿಂತಾಮಣಿ: ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆ ಜತೆ ವಿಲೀನ ಮಾಡುತ್ತಿರುವ ರೈತ ವಿರೋಧಿ ನೀತಿಯನ್ನುಸರ್ಕಾರ ಈ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ, ನೂರಾರು ರೈತರು ಹಾಗೂ ರೇಷ್ಮೆ ರೀಲರ್ಗಳ ಸಂಯುಕ್ತಾಶ್ರಯದಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಲಕ್ಷ್ಮಿದೇವಕೋಟೆ ನಾರಾಯಣಸ್ವಾಮಿ ಮಾತನಾಡಿ, ರೈತರ ಹಾಗೂ ರೀಲರ್ ಕಾರ್ಮಿಕರ ಅಭಿಪ್ರಾಯ ಆಲಿಸದೇ, ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು. ಈ ವೇಳೆ, ಕೃಷಿಕ ಸಮಾಜದ ಸದಸ್ಯರಾದ ಕೆಂಪರೆಡ್ಡಿ, ಆಂಜನೇಯರೆಡ್ಡಿ, ರೈತಸಂಘದ ಸಂಚಾಲಕ ಗಂಗುಲಪ್ಪ, ಕೃಷ್ಣಪ್ಪ, ಮಂಜುನಾಥರೆಡ್ಡಿ, ರೆಡ್ಡೆಪ್ಪ, ನರಸಿಂಹರೆಡ್ಡಿ, ರಾಜಗೋಪಾಲ್, ಡಿ.ಕೆ.ಶ್ರೀರಾಮಪ್ಪ, ಮಲ್ಲಿಕಾರ್ಜುನರೆಡ್ಡಿ, ರಿಯಾಜ್ ಖಾನ್, ರೆಹಮಾನ್, ತೌಫಿಲ್ ಅಹಮದ್, ವೆಂಕಟರೆಡ್ಡಿ, ಸುಬ್ಬರೆಡ್ಡಿ ಸೇರಿದಂತೆ ಇನ್ನೂ ಹಲವು ರೈತರು ಉಪಸ್ಥಿತರಿದ್ದರು.
ಸರ್ಕಾರದ ಕ್ರಮಕ್ಕೆ ಆಕ್ಷೇಪ
ಶಿಡ್ಲಘಟ್ಟ: ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಅವೈಜ್ಞಾನಿಕ ತೀರ್ಮಾನ ಕೈಬಿಡಬೇಕು ಎಂದು ಶಾಸಕ ಎಂ. ರಾಜಣ್ಣ ಒತ್ತಾಯಿಸಿದರು. ಏಷ್ಯಾದಲ್ಲೆ ಪ್ರಖ್ಯಾತಿ ಪಡೆದಿರುವ ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆ ಆವರಣದಲ್ಲಿ ಶಾಸಕ ಎಂ. ರಾಜಣ್ಣ ನೇತೃತ್ವದಲ್ಲಿ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ರೇಷ್ಮೆ ಬೆಳೆಗಾರರು, ರೀಲರುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಿದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು. ಜಿಪಂ ಸದಸ್ಯ ಎಸ್.ಎಂ. ನಾರಾಯಣಸ್ವಾಮಿ, ವೇದಿಕೆ ಜಿಲ್ಲಾ ಸಂಚಾಲಕ ಯಲುವಹಳ್ಳಿ ಸೋಣ್ಣೇಗೌಡ ಮಾತನಾಡಿದರು. ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಲು ಹೊರಡಿಸಲಾಗಿದ ಆದೇಶದ ಪ್ರತಿಯನ್ನು ಸುಟ್ಟು ಪ್ರತಿಭಟಿಸಲಾಯಿತು. ಕೋಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಎ. ರಾಮಚಂದ್ರಪ್ಪ, ರಾಮಕೃಷ್ಣಪ್ಪ, ಮಳ್ಳೂರು ಹರೀಶ್, ಮಳ್ಳೂರು ಶಿವಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

