ಕೋಲಾರ

ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ: ಯೋಗಾನಂದ ಪುರಿ ಸ್ವಾಮಿ

Published On :

ಗೌರಿಬಿದನೂರು: ಮಂಚೇನಹಳ್ಳಿಯ ಮಿಣಕನಗುರ್ಕಿ ಗ್ರಾಮದಲ್ಲಿ ಮಡಿವಾಳ ಮಾಚಿದೇವರ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವವನ್ನು ಯೋಗಾನಂದ ಪುರಿ ಸ್ವಾಮಿ ನೆರವೇರಿಸಿದರು. ನಂತರ ಆಶೀರ್ವಚನ ನೀಡಿ, ಎಲ್ಲ ಸಮುದಾಯಗಳ ಶುಭ ಕಾರ್ಯಕ್ರಮಗಳಿಗೆ ಮುಂದೆ ಇದ್ದು, ರಾಜಕೀಯವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯದ ಬಂಧುಗಳನ್ನು ಎಚ್ಚರಗೊಳಿಸಿ ಸುಶಿಕ್ಷಿತರನ್ನಾಗಿ ಮಾಡಿ ಎಂದು ಕರೆ ನೀಡಿದರು. ರಾಜ್ಯಾಧ್ಯಕ್ಷ ನಂಜಪ್ಪ ಮಾತನಾಡಿ, ಸಮುದಾಯದವರು ರಾಜಕೀಯ ಹಕ್ಕು ಪಡೆಯಲು ಮುಂದೆ ಬನ್ನಿ ಎಂದರು. ಐಎಎಸ್ ಅಧಿಕಾರಿ ಎಚ್.ಎಸ್. ವೆಂಕಟೇಶ್ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಕೊಡಿಸುವುದರೊಂದಿಗೆ ಉತ್ತಮ ಹುದ್ದೆಗಳನ್ನು ಅಲಂಕರಿಸಿ ಸಮಾಜನವನ್ನು ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎದರು. ತಾಪಂ ಸದಸ್ಯೆ ಪ್ರಭ ನಾರಾಯಣಗೌಡ, ವಿಧಾನಸಭಾ ಕಾರ್ಯದರ್ಶಿ ಎಚ್.ಎಸ್. ರುದ್ರಪ್ಪ, ಜಿ.ಟಿ. ಗೋಪಾಲ್, ಪ್ರಧಾನಕಾರ್ಯದರ್ಶಿ ಪುಟ್ಟರಂಗಯ್ಯ, ಗೌರವಾಧ್ಯಕ್ಷ ಚಿಕ್ಕಣ್ಣ, ಶಾಂತಕುಮಾರ್ ಇದ್ದರು.

ಬೇತಮಂಗಲದಲ್ಲಿ ಹಬ್ಬದ ವಾತಾವರಣ
ಬಂಗಾರಪೇಟೆ: ಬೇತಮಂಗಲದಲ್ಲಿ ನಡೆದ 4ನೇ ತಾಲೂಕು ಕನ್ನಡ ಸಾಹಿತ್ಯ  ಸಮ್ಮೇಳನದ ಅಂಗವಾಗಿ ಸಮ್ಮೇಳನ ಅಧ್ಯಕ್ಷ ಹಾಗೂ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್‌ರನ್ನು ಬೇತಮಂಗಲ ಗ್ರಾಮದಲ್ಲಿ ಭವ್ಯವಾಗಿ ತೆರೆ ಹೂವಿನ ಪಲ್ಲಕಿಯಲ್ಲಿ ಮೆರವಣಿಗೆ ಮಾಡಲು ಕಾರ್ಯಕ್ರಮ ಆಯೋಜಕರು ಸಿದ್ಧತೆ ಮಾಡಿದ್ದರು. ಆದರೆ, ಅವರು ಪಲ್ಲಕ್ಕಿಯಲ್ಲಿ ಕೂರದೆ ಎಲ್ಲರೊಂದಿಗೆ ನಡೆದುಕೊಂಡೇ ವೇದಿಕೆ ವರೆಗೆ ಬಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.  ಮೆರವಣಿಗೆಗೆ ಕೆಜಿಎಫ್ ಶಾಸಕಿ ವೈ.ರಾಮಕ್ಕ ಚಾಲನೆ ನೀಡಿದರು. ಗ್ರಾಮದಲ್ಲಿ ಯಾವ ಗಲ್ಲಿ ನೋಡಿದರು ಹಸಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಕನ್ನಡ ದ್ವಜಗಳು ರಾರಾಜಿಸುತ್ತಿದ್ದವು. ಇಷ್ಟು ದಿನ ಬರೀ ಸಾಹಿತ್ಯ ಸಮ್ಮೇಳನಗಳು ಪಟ್ಟಣ ಮಟ್ಟಕ್ಕೆ ಸೀಮಿತವಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಸಮ್ಮೇಳನ ಆಯೋಜಿಸಿದ್ದು ಇಷ್ಟೆಕ್ಕೆಲ್ಲ ಕಾರಣ. ಒಟ್ಟಿನಲ್ಲಿ ಬೇತಮಂಗಲ್ಲಿ ಶುಕ್ರವಾರ ಹಬ್ಬದ ವಾತಾರವಣ ನಿರ್ಮಾಣವಾಗಿತ್ತು.

'ರಾಮಾಯಣದಿಂದ ಮಾನಸಿಕ ತೃಪ್ತಿ'
ಚಿಂತಾಮಣಿ: ಸನಾತನ ಧಾರ್ಮಿಕ ಪರಂಪರೆಯಲ್ಲಿ ರಾಮಾಯಣಕ್ಕೆ ಮಹತ್ತರ ಸ್ಥಾನವಿದೆ. ರಾಮಾಯಣ ಪಠಣದಿಂದ ಮಾನಸಿಕ ತೃಪ್ತಿ ದೊರೆಯುತ್ತದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅವರು ಅಭಿಪ್ರಾಯಪಟ್ಟರು. ಕೈವಾರ ಯೋಗಿನಾರೇಯಣ ಮಠದಲ್ಲಿ ನಡೆದ ಹುಣ್ಣಿಮೆ ವಿಶೆಷ ಕಾರ್ಯಕ್ರಮದಲ್ಲಿ ರಾಮಾಯಣದ ಮಹತ್ವ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ರಾಮಾಯಣ ಬದುಕಿನ ದೃಷ್ಟಿಕೋನವನ್ನು ಬದಲಾಯಿಸುತ್ತದೆ. ಬದುಕುವ ಕಲೆಯನ್ನು ರಾಮಾಯಣ ಕಲಿಸುತ್ತದೆ ಎಂದರು. ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಮತ್ತು ಅಷ್ಟಾವಧಾನ ಸೇವೆ  ನೆರವೇರಿಸಿ, ರಥೋತ್ಸವ ನಡೆಸಲಾಯಿತು. ರಥೋತ್ಸವದಲ್ಲಿ ಭಕ್ತಾಧಿಗಳು ಭಾಗವಹಿಸಿದ್ದರು. ಹುಣ್ಣಿಮೆ ಪ್ರಯುಕ್ತ ನಾದಸುಧಾರಸ ವೇದಿಕೆಯಲ್ಲಿ ಅಖಂಡ ಸಂಕೀರ್ತನೆ ಏರ್ಪಡಿಸಲಾಗಿತ್ತು.

ಸಂತೆಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ರಾಜೇಶ್ವರಿ
ಚಿಂತಾಮಣಿ: ಸಂತೆಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿಗಾಗಿ ನೀಡಿರುವ ಅಧ್ಯಕ್ಷ ಸ್ಥಾನವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆಂದು ನೂತನ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಸಂತೆಕಲ್ಲಹಳ್ಳಿ ಗ್ರಾಪಂ 2ನೇ ಅವಧಿಗೆ ಸಾಮಾನ್ಯ ಮಹಿಳೆ ಮೀಸಲು ಸ್ಥಾನಕ್ಕೆ ಬೀರ್ಜೇನಹಳ್ಳಿ ಗ್ರಾಮದ ಸದಸ್ಯೆ ರಾಜೇಶ್ವರಿ ಕೋಂ ವೆಂಕಟರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ತಾಪಂ ಇಒ ವಸಂತ್‌ಕುಮಾರ್ ಘೋಷಿಸಿದರು. ನಂತರ ಮಾತನಾಡಿದ ಅಧ್ಯಕ್ಷೆ ರಾಜೇಶ್ವರಿ, ಸಂತೆಕಲ್ಲಹಳ್ಳಿ ಸರ್ವೊತೋಮುಖ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ, ಅವರು, ಮಾಜಿ ಶಾಸಕ ಎಂ.ಸಿ.ಸುಧಾಕರ್ ಹಾಗೂ ಗ್ರಾಪಂ ಸದಸ್ಯರು, ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ನೂತನ ಅಧ್ಯಕ್ಷರಿಗೆ ಹೂಮಾಲೆ ಹಾಕಿ ಸಿಹಿ ಹಂಚಲಾಯಿತು. ಈ ವೇಳೆ, ಪಿಡಿಒ ಮಹೇಂದ್ರ ಯಾದವ್, ಕಾರ್ಯದರ್ಶಿ ಬೈರೆಪ್ಪ, ಬಿಲ್ ಕಲೆಕ್ಟರ್ ರವಿಕುಮಾರ್, ಗ್ರಾಪಂ ಉಪಾಧ್ಯಕ್ಷೆ ಈಶ್ವರಮ್ಮ, ಗೋವಿಂದಪ್ಪ, ಮುನಿರೆಡ್ಡಿ, ಜೆ.ಕೆ.ಶ್ರೀನಿವಾಸ್, ಚಂದ್ರಶೇಖರ್, ಆಂಜನಪ್ಪ, ಹರಿನಾಥ್, ಮುನಿನಾರಾಯಣಮ್ಮ, ಕೃಷ್ಣಪ್ಪ, ಬೈರಪ್ಪ, ಆಂಜನೇಯರೆಡ್ಡಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಅಕ್ರಮ ಮರಳು ಸಾಗಾಣೆ ಲಾರಿಗಳ ವಶ
ಕೋಲಾರ: ನಗರದ ಸಂಚಾರಿ ಠಾಣೆ ಪೋಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಮರಳು ಸಾಗಣೆಯ 10 ಲಾರಿಗಳನ್ನು ಹಿಡಿದು ವಶಕ್ಕೆ ತೆಗೆದುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪವನ್ ಕಾಲೇಜು ಸಮೀಪ ಮುಂಜಾನೆಯಿಂದ ಡಿ.ವೈ.ಎಸ್.ಪಿ ಅಶೋಕ್‌ಕುಮಾರ್, ಸಂಚಾರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದರು. ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಅಕ್ರಮ ಮರಳು ದಂಧೆ ತಡೆಯಲು ಅನೇಕ ಸಾರಿ ಕಾರ್ಯಾಚರಣೆ ನಡೆಸಿದರೂ ದಂಧೆ ನಿಲ್ಲದಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳೇ ಖುದ್ಧು ದಾಳಿಗೆ ಮುಂದಾಗಿರುವುದಲ್ಲದೆ ಸರ್ಕಾರದಿಂದ ಟೀಕೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ
ಕೋಲಾರ: ರೋಟರಿ ಸಂಸ್ಥೆಯ ಸಾಮಾಜಿಕ ಕಾಳಜಿ ಹಾಗೂ ಜನಪರ ಕಾರ್ಯಕ್ರಮಗಳ ಕುರಿತು ಅರಿತು ನೀವು ಸಮಾಜಕ್ಕೆ ನೆರವಾಗಿ ಎಂದು ವಿದ್ಯಾರ್ಥಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೇಣುಕಾಪ್ರಸಾದ್ ಕರೆ ನೀಡಿದರು.
ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆಯಿಂದ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡುತ್ತಿದ್ದರು. ಶಿಕ್ಷಣದಿಂದ ಮಾತ್ರವೇ ಸ್ವಾತಂತ್ರ್ಯ, ಸಮಾನತೆ, ಉದ್ಯೋಗ, ಉತ್ತಮ ಬದುಕು ಸಾಧ್ಯವಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆಯತ್ತ ಮುಖಮಾಡಿ ಸಾಗಬೇಕೆಂದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಿಣಿಕೇರಿ, ಇಂದು ದೇಶದಲ್ಲಿ ಕೆಲವು ದುಷ್ಟ ಶಕ್ತಿಗಳು ಭಯೋತ್ಪಾದನೆ,  ಹಿಂಸೆಯನ್ನು ಪ್ರೋತ್ಸಾಹಿಸುವ ಮೂಲಕ ವಿದ್ಯಾರ್ಥಿ, ಯುವ ಶಕ್ತಿಯನ್ನು ದಿಕ್ಕು ತಪ್ಪಿಸುತ್ತಿವೆ ಎಂದರು.
ಇಂತಹ ಶಕ್ತಿಗಳಿಗೆ ಮಣಿಯದೇ ದೇಶ ಪ್ರೇಮ ಬೆಳೆಸಿಕೊಳ್ಳಿ, ಸತ್ಪ್ರಜೆಗಳಾಗಿ ರೂಪುಗೊಳ್ಳಿ, ಭಯೋತ್ಪಾದನೆ ವಿರುದ್ದ ಸಿಡಿದೆದ್ದು, ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲಸಲು ಕೊಡುಗೆ ನೀಡಿ ಎಂದರು. ಅಧ್ಯಕ್ಷತೆ ವಹಿಸಿ ಸ್ವಾಗತಿಸಿದ ರೋಟರಿ ಸಂಸ್ಥೆ ಅಧ್ಯಕ್ಷ ಗೋಪಾಲರೆಡ್ಡಿ, ರೋಟರಿ ಸಂಸ್ಥೆ ಅನೇಕ ಜನಪರ, ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್ ನಿಘಂಟು ವಿತರಿಸಿದೆ, ಶಾಲೆಗಳಿಗೆ ಡೆಸ್ಕ್, ಕಂಪ್ಯೂಟರ್, ಸೋಲಾರ್ ದೀಪಗಳು ಸೇರಿದಂತೆ ಅನೇಕ ರೀತಿಯ ಕೊಡುಗೆಗಳನ್ನು ನೀಡಿದೆ ಎಂದರು.
ರೋಟರಿ ಸಂಸ್ಥೆಯ ಸದಸ್ಯರಾಗುವ ಮೂಲಕ ಪ್ರತಿಯೊಬ್ಬರೂ ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳಿ, ನಿಮ್ಮಿಂದಾಗುವ ಸಹಾಯವನ್ನು ಕಷ್ಟದಲ್ಲಿರುವವರಿಗೆ ಮಾಡಿ ಎಂದರು. ಸತೀಶ್‌ಕುಮಾರ್, ರೋಟರಿ ಸಂಸ್ಥೆಯ ಭಾವಿ ಅಧ್ಯಕ್ಷ ನಾಗಶೇಖರ್ ಇದ್ದರು.

ಕರವೇ ಪದಾಧಿಕಾರಿಗಳ ಆಯ್ಕೆ
ಟೇಕಲ್: ಗಡಿನಾಡ ಭಾಗದಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ತಮ ಯುವ ಪಡೆ ರೂಪಿಸಲಾಗುತ್ತಿದೆ ಎಂದು ಕೋಲಾರ ಜಿಲ್ಲಾ ಕರವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್ ತಿಳಿಸಿದರು.
ಟೇಕಲ್ ಮತ್ತು ಮಾಸ್ತಿ ಘಟಕಗಳ ನೂತನ ಅಧ್ಯಕ್ಷರ ಆಯ್ಕೆಮಾಡಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಟೇಕಲ್ ಘಟಕಕ್ಕೆ ಅಗರ ಸುನಿಲ್, ಮಾಸ್ತಿ ಘಟಕಕ್ಕೆ ಬೆಡಶೆಟ್ಟಹಳ್ಳಿ ಬಿ.ಎಂ. ವೆಂಕಟೇಶ್‌ರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಿಂದ ನೂತನ ಅಧ್ಯಕ್ಷರನ್ನು ಅಭಿನಂದಿಸಲಾಯಿತು. ಕರವೇ ಜಿಲ್ಲಾ ಉಪಾಧ್ಯಕ್ಷ ಆರ್. ಶ್ರೀರಾಮುಲು, ತಾಲೂಕು ಅಧ್ಯಕ್ಷ ಎನ್. ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಎ.ಎನ್. ದಯಾನಂದ್, ಕಾರ್ಯದರ್ಶಿ ಎಸ್.ಕೆ. ಶಿವಕುಮಾರ್ ಇದ್ದರು. ಇದೇ ಸಂದರ್ಭದಲ್ಲಿ ಟೇಕಲ್ ಮತ್ತು ಮಾಸ್ತಿ ಘಟಕಗಳ ಕರವೇ ಪದಾಧಿಕಾರಿಗಳ ಪಟ್ಟಿಯನ್ನು ಆದಷ್ಟೂ ಬೇಗ ಆಯ್ಕೆ ಮಾಡಲಾಗುವುದೆಂದು ನೂತನ ಅಧ್ಯಕ್ಷರು ತಿಳಿಸಿದರು.

ಮುಳಬಾಗಲು ಪುರಸಭೆಗೆ ನಾಮ ನಿರ್ದೇಶನ
ಮುಳಬಾಗಲು: ಪಟ್ಟಣದ ಪುರಸಭೆಗೆ ನಾಮನಿರ್ದೇಶಕ ಸದಸ್ಯರನ್ನಾಗಿ ಆರ್.ವಿ.ಆಂಜನೇಯರೆಡ್ಡಿ, ಸುಬ್ರಮಣ್ಯಂ,( ಬಾಬು,) ಮಹಮದ್ ಸಮೀ ಉಲ್ಲಾ, ಮೆಕಾನಿಕ್ ಶ್ರೀನಿವಾಸ್, ಜಿ.ಶ್ರೀನಿವಾಸಮೂರ್ತಿ ಅವರನ್ನು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಸಿದ್ದೀಕ್ ಪಾಷ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಶಾಸಕ ಕೊತ್ತೂರು ಮಂಜುನಾಥ್ ಅವರ ಶಿಫಾರಸು ಮೇರೆಗೆ ಸದಸ್ಯರನ್ನು ನಾಮಕರಣ ಮಾಡಿರುವುದಕ್ಕೆ ಸದಸ್ಯರು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ಸದಸ್ಯರು ಪಕ್ಷಾತೀತವಾಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚಿಸಿದರು.
ಆವಣೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಹಬಾಜ್ ಖಾನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ, ಆರ್.ಎಸ್.ಕೃಷ್ಣಯ್ಯಶೆಟ್ಟಿ, ಪುರಸಭೆ ಮಾಜಿ ಸದಸ್ಯ, ಯುವ ಮುಖಂಡ ಕಲ್ಲುಪಲ್ಲಿ ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.

ಶಿಕ್ಷಕ ಅಭ್ಯರ್ಥಿಗೆ ಗ್ರಹಿಕೆ ಶಕ್ತಿ ಇರಬೇಕು
ಶಿಡ್ಲಘಟ್ಟ: ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಿಗೆ ಗ್ರಹಿಸುವ ಶಕ್ತಿ ಹೆಚ್ಚಾಗಿರಬೇಕು ಎಂದು ಸಿಟಿಜನ್ ಕಾಲೇಜಿನ ಪ್ರಾಂಶುಪಾಲ  ಶಿವಣ್ಣ ಹೇಳಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಡಯಟ್ ವತಿಯಿಂದ ಟಿಇಟಿ ಅರ್ಹತಾ ಪರೀಕ್ಷೆಗೆ ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಿದ ಅವರು,  ಸರ್ಕಾರ ಸಿಇಟಿ ಸೇರಿದಂತೆ ಅನೇಕ ಇತರ ಪರೀಕ್ಷೆಗಳನ್ನು ನಡೆಸುವಾಗ ಅಭ್ಯರ್ಥಿಗಳಲ್ಲಿ ಗೊಂದಲಗಳನ್ನು ಮೂಡಿಸುತ್ತಿದೆ. ಟಿಇಟಿ ಪರೀಕ್ಷೆಗಳಿಗೆ ಸಿದ್ಧರಾದರೆ ಅಲ್ಲಿ ಬೇರೆಯ ಪ್ರಶ್ನೆಗಳು ಬಂದಿರುತ್ತವೆ ಎಂದರು. ಕಾರ್ಯಗಾರದಲ್ಲಿ ಅಭ್ಯರ್ಥಿಗಳಿಗೆ ಟಿಇಟಿ ಪರೀಕ್ಷೆಯ ಸಿದ್ಧತೆಗಳ ಬಗ್ಗೆ ತರಬೇತಿಯನ್ನು ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ ರೆಡ್ಡಿ, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಕೆ. ಸುಮಾ, ಹಿರಿಯ ಉಪನ್ಯಾಸಕಿ ಸುಮಿತ್ರಭಾಯಿ, ಚೌಡರೆಡ್ಡಿ, ಮುಂತಾದವರು ಹಾಜರಿದ್ದರು.

ಹಳೇ ದ್ವೇಷದ ಹಿನ್ನೆಲೆ: ಹೆಂಚಿನ ಮನೆಗೆ ಬೆಂಕಿ
ಕೆಜಿಎಫ್: ಹಳೇ ದ್ವೇಷದ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಹೆಂಚಿನ ಮನೆ ಸಂಪೂರ್ಣ ಸುಟ್ಟುಹೋದ ಘಟನೆ ಕೆಜಿಎಫ್ ಕ್ಷೇತ್ರದ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೇತಮಂಗಲ ಹಾಗೂ ಸುಂದರಪಾಳ್ಯ ಗ್ರಾಮಗಳ ನಡುವೆ ಇರುವ ಗೆನ್ನೇರನಹಳ್ಳಿ ಗ್ರಾಮದ ನಿವಾಸಿ ಗೋಪಾಲರೆಡ್ಡಿ ಎಂಬುವರ ಮನೆಗೆ ಹಳೆ ದ್ವೇಷದ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದು ಮನೆ ಸಂಪೂರ್ಣ ಸುಟ್ಟು ಹೋಗಿದೆ. ಅಲ್ಲದೆ ಪಕ್ಕದ ಮನೆ ನಿವಾಸಿ ಕೋದಂಡರೆಡ್ಡಿ ಎಂಬುವರ ಮನೆಗೂ ಸಹ ಬೆಂಕಿ ಬಿದ್ದು ಲಕ್ಷಾಂತರ ರು. ಮೌಲಿಯದ ವಸ್ತುಗಳು ಸುಟ್ಟು ಹೋಗಿದೆ. ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರಾದರೂ,  ಅಷ್ಟರಲ್ಲಿ ಮನೆಯಲ್ಲಿದ್ದ ಗೃಹ ಉಪಯೋಗ ವಸ್ತುಗಳು, ಬಟ್ಟೆಗಳು, ಹನಿ ನೀರಾವರಿ ಪೈಪ್‌ಗಳು, ತಂತಿ, ಮನೆಯ ಚಾವಣಿ ಸೇರಿದಂತೆ ಇತರೆ ವಸ್ತುಗಳು ಸಂಪೂರ್ಣ ಸುಟ್ಟು ಸುಮಾರು ರು. 8 ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಬೇತಮಂಗಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಗೋಪಾಲರೆಡ್ಡಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಾವಿ ಇದ್ದ ಸ್ಥಳ ಸರ್ಕಾರಿ ಸೊತ್ತಲ್ಲ: ಸ್ಪಷ್ಟನೆ
ಬಾಗೇಪಲ್ಲಿ: ಸರ್ಕಾರದ ಸ್ವಾಧೀನದಲ್ಲಿರುವ ತೆರೆದ ಬಾವಿಯನ್ನು ಮುಚ್ಚಲಾಗಿದೆ ಎಂದು ಜಿ.ಎಸ್. ಚೌಡರೆಡ್ಡಿ ನೇತೃತ್ವದಲ್ಲಿ ಕೆಲವರು ತಿಮ್ಮಂಪಲ್ಲಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ತಮ್ಮ ವಿರುದ್ಧ ಆರೋಪಿಸಿರುವುದು ಸತ್ಯಕ್ಕೆ ದೂರವಾದುದು ಎಂದು ಮಾಜಿ ಜಿ.ಪಂ. ಸದಸ್ಯ ಶ್ರೀರಾಮಪ್ಪ ಟೀಕಿಸಿದ್ದಾರೆ. ತಮ್ಮ ಮನೆಯ ಮುಂಭಾಗದಲ್ಲಿರುವ ಸ್ವಂತ ನಿವೇಶನದಲ್ಲಿ ಇದ್ದ ಹಳೆಯ ಬಾವಿ ಹಲವಾರು ವರ್ಷಗಳಿಂದ ನೀರಿಲ್ಲದೇ ಬತ್ತಿಹೋಗಿದ್ದು ಇದರಿಂದ ಮಹಿಳೆಯರು, ಮಕ್ಕಳು, ವೃದ್ದರು ಸೇರಿದಂತೆ ಕುರಿ, ಮೇಕೆ ಹಸು ಮುಂತಾದವುಗಳಿಗೆ ಅಪಾಯವಿರುವ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  ಜಿ.ಎಸ್. ಚೌಡರೆಡ್ಡಿ ಸೇರಿದಂತೆ ಅವರ ಕುಟುಂಬದವರು ತಿಮ್ಮಂಪಲ್ಲಿ ಗ್ರಾಮದ ಶ್ರೀ ಭಗವತಮ್ಮ ದೇವರ ದೇವಸ್ಥಾನಕ್ಕೆ ಸೇರಿದ ಸರ್ವೆ.ನಂ 4ರಲ್ಲಿ ಸುಮಾರು 3.11ಕುಂಟೆ ಜಮೀನನ್ನು ಆಕ್ರಮವಾಗಿ ಆಕ್ರಮಿಸಿಕೊಂಡು ಗ್ರಾಮಕ್ಕೂ ಹಾಗೂ ದೇವಸ್ಥಾನಕ್ಕೂ ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಯ್ಯರ್‌ಗೆ ಬೀಳ್ಕೊಡುಗೆ
ಕೋಲಾರ: ಇತ್ತೀಚೆಗೆ ನಿವೃತ್ತಿಗೊಂಡ ರಾಜ್ಯ ಗುಪ್ತಚರ ಇಲಾಖೆಯ ಕೋಲಾರದ ಪ್ರಭಾರ ಸಬ್ ಇನ್ಸೆಪೆಕ್ಟರ್ ಎಂ.ಎನ್. ಸುಬ್ರಮಣ್ಯ ಅಯ್ಯರ್ ಅವರಿಗೆ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಆತ್ಮೀಯ ಬೀಳ್ಕೊಡುಗೆ ನೀಡಿದರು. ಮೇ 31 ರಂದು ಅಯ್ಯರ್ ಸೇವೆಯಿಂದ ನಿವೃತ್ತಿಯಾಗಿದ್ದಾರೆ. 1975ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಇವರು 39 ವರ್ಷಗಳ ಸಂಪೂರ್ಣ ಸೇವಾವಧಿಯನ್ನು ಗುಪ್ತಚರ ಇಲಾಖೆಯಲ್ಲಿಯೇ ಸಲ್ಲಿಸಿರುವುದು ವಿಶೇಷ. ಅಲ್ಲದೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ 8 ಬಾರಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ನಿವೃತ್ತರಾದ ಎಂ.ಎನ್. ಸುಬ್ರಮಣ್ಯ ಅಯ್ಯರ್ ಅವರನ್ನು ಕೋಲಾರ, ಕೆಜಿಎಫ್ ಹಾಗೂ ಚಿಕ್ಕಬಳ್ಳಾಪುರ ಗುಪ್ತಚರ ಇಲಾಖೆಗಳು  ಜಂಟಿಯಾಗಿ ಬೀಳ್ಕೊಟರು. ಈ ಸಂದರ್ಭದಲ್ಲಿ ಇನ್ಸೆಪೆಕ್ಟರ್ ರಮೇಶ್, ಸಬ್ ಇನ್ಸೆಪ್ಪೆಕ್ಟರ್ ಹರೀಶ್, ಡಿ.ಸಿ.ಆರ್.ಬಿ ಇನ್ಸೆಪೆಕ್ಟರ್ ನಂದಕುಮಾರ್ ಇದ್ದರು.

ನಮೋ ಟಿಫನ್ ಸೆಂಟರ್ ಶುರು
ಕೋಲಾರ: ನಮೋ ಟಿ ಸ್ಟಾಲ್ ವತಿಯಿಂದ ಜೂ.14 ರಂದು ಶನಿವಾರ ಸಂಜೆ 4 ಗಂಟೆಗೆ ನಮೋ ಟಿಫನ್ ಸೆಂಟರ್ ಮತ್ತು ನಮೋ ಟಿಸ್ಟಾಲ್‌ಅನ್ನು ನಗರದ ಬ್ರಾಹ್ಮಣರ ಬೀದಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ದೇವಾಲಯದ ಬಳಿ ಪ್ರಾರಂಭಿಸಲಾಗುವುದು ಎಂದು ಸ್ಟಾಲ್ ಮಾಲೀಕ ನವೀನ್ ತಿಳಿಸಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಬೇಕೆಂದು ಕನಸ್ಸು ಕಂಡು ಚುನಾವಣೆಯ ಮೊದಲಿನಿಂದಲು ನಮೋ ಟೀ ಸ್ಟಾಲ್‌ನ್ನು ನಡೆಸಲಾಗುತ್ತಿದೆ. ನರೇಂದ್ರ ಮೋದಿಯವರ ಸರ್ಕಾರ ಜನಪರ ಆಡಳಿತ ನಡೆಸಿ ಜನ ಸಾಮಾನ್ಯ ಸಮಸ್ಯೆಗಳನ್ನು ಬಗೆಹರಿಸಿ ಕೋಲಾರ ಜಿಲ್ಲೆಯಲ್ಲಿ ತೀವ್ರವಾಗಿ ಎದುರಾಗಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತಾರೆ ಎಂಬ ನಂಬಿಕೆ ಇದೆ. ಅವರ ಸರ್ಕಾರ ಯಶಸ್ಸು ಕಾಣಲಿ ಎಂಬ ಸದಾಶಯದಿಂದ ಟೀ ಸ್ಟಾಲ್ ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತಿಷ್ಠಾ ವರ್ಧಂತಿ ಇಂದು
ಕೋಲಾರ: ನಗರದ ಶಂಕರಮಠದಲ್ಲಿ ಜೂ.14ರ ಶನಿವಾರ ಶ್ರೀಶಾರದಾ ಪರಮೇಶ್ವರಿ ಪ್ರತಿಷ್ಠಾ ವರ್ಧಂತಿ ಮಹೋತ್ಸವವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 8ರಿಂದ ವಿಶೇಷ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಮತ್ತು ಮಹಾಪ್ರಸಾದ ವಿನಿಯೋಗ ಮತ್ತು ಸಂಜೆ 6.30ರಿಂದ ವೇದ-ನಾದ, ಭಜನೆ-ಸ್ತೋತ್ರಗಾಯನಗಳೊಂದಿಗೆ ನಗರದ ರಾಜಬೀದಿಗಳಲ್ಲಿ ಶ್ರೀಶಾರದಾ ಮಾತೆಯ ಪುಷ್ಪಾಲಂಕೃತ ರಥೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೋಲಾರಕ್ಕೆ ಸದಾನಂದಗೌಡ ನಾಳೆ
ಕೋಲಾರ: ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಹಾಗೂ ಕಾರ್ಯಕರ್ತರ ಸಭೆಯನ್ನು ಜೂ.15 ರಂದು ಭಾನುವಾರ ಮಧ್ಯಾಹ್ನ 2.30ಕ್ಕೆ ನಗರದ ಹೊರವಲಯದಲ್ಲಿರುವ ಗೋಕುಲ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಕಾರ್ಯಕ್ರಮವನ್ನು ಉದ್ಘಾಟಸುವರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಲಿಂಬಾವಳಿ, ಅಭ್ಯರ್ಥಿ ಶಿವಯೋಗಿಸ್ವಾವು, ಡಿ.ಎಸ್. ವೀರಯ್ಯ, ವೈ.ಎ. ನಾರಾಯಣಸ್ವಾಮಿ, ನಿರ್ಮಲಕುಮಾರ್ ಸುರಾನ, ಶಾಸಕಿ ರಾಮಕ್ಕ, ಎಂ. ನಾರಾಯಣಸ್ವಾಮಿ, ವೈ. ಸಂಪಂಗಿ, ವೆಂಕಟಮುನಿಯಪ್ಪ, ಎಂ.ಎಸ್. ನಾಗೇಂದ್ರ ಇನ್ನಿತರ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಗೇರಿ ಎಂ.ಪಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.

ಪ್ರೋತ್ಸಾಹ ಧನ ನೇರ ಜಮಾವಣೆ
ಕೋಲಾರ: ರಾಜ್ಯದ ಹಾಲು ಉತ್ಪಾದಕರಿಗೆ ಸರ್ಕಾರ ನೀಡುತ್ತಿರುವ ಪ್ರತಿ ಲೀಟರ್‌ಗೆ 4 ರು. ಪ್ರೋತ್ಸಾಹ ಧನವನ್ನು ನೇರವಾಗಿ ಫಲಾನುವಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜೂನ್ ತಿಂಗಳ ಹಣವನ್ನು ಬ್ಯಾಂಕಿಗೆ ಜಮಾ ಮಾಡಲಿರುವುದರಿಂದ ಹಾಲು ಉತ್ಪಾದಕರು ಕೂಡಲೇ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬೇಕೆಂದು ತಿಳಿಸಿದ್ದಾರೆ. ಜಿಲ್ಲೆಯ 1696 ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯವರು ಸಂಘಕ್ಕೆ ಹಾಲು ಸರಬರಾಜು ಮಾಡುತ್ತಿರುವ ರೈತರ ಬ್ಯಾಂಕಕ್ವಿವರಗಳನ್ನು ಸಂಗ್ರಹಿಸಿ ಕೋಚಿಮುಲ್ ಲೆಕ್ಕ ವಿಭಾಗಕ್ಕೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.