ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಕೋಲಾರ: ನಮ್ಮ ಯುವಕರು ವಲಸೆ ಹೋಗುತ್ತಿರುವುದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ಅಭಿಪ್ರಾಯಪಟ್ಟರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಕರ್ನಾಟಕ ರೈತರ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ವೈವಿಧ್ಯಮಯ ಉತ್ಸವ-2014 ಅನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮೀಕ್ಷೆಯೊಂದರ ಪ್ರಕಾರ ನಮ್ಮ ದೇಶದ 1 ಕೋಟಿ ಯುವಕರು ವಿಶ್ವದಲ್ಲೇ ಅತಿ ಹೆಚ್ಚು ಬುದ್ಧಿವಂತರು ಎಂದು ಸಾಬೀತಾಗಿದೆ. ಹಳ್ಳಿಗಳ ಅಭಿವೃದ್ಧಿ, ಕೃಷಿ ಮತ್ತು ರೈತರ ಪ್ರಗತಿಗೆ ಯುವ ಜನಾಂಗ ಶ್ರಮಿಸದಿದ್ದರೆ ಆಹಾರ ಭದ್ರತೆಗೆ ಅಪಾಯ ಎದುರಾಗಬಹುದೆಂದು ಆತಂಕ ವ್ಯಕ್ತಪಡಿಸಿದರು. ದೇಶದಲ್ಲಿಂದು ಆಹಾರ ಭದ್ರತಾ ಕಾಯಿದೆ ಜಾರಿ ಆಗಿರುವುದಕ್ಕೆ ರೈತರೇ ಕಾರಣ. ನೀರಿನ ಸಮಸ್ಯೆಯ ನಡುವೆಯೂ ರೈತರು ಆಹಾರ ಉತ್ಪಾದಿಸುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಅನ್ನಬಾಗ್ಯ ಯೋಜನೆ ಜಾರಿಗೆ ತರಲು ಸಹಾಯವಾಗಿದೆ. ಕೃಷಿ ಕ್ಷೇತ್ರದಲ್ಲಿ ಸ್ಥಿರತೆ, ಭದ್ರತೆ ಇಲ್ಲದಿದ್ದರೆ ಆಹಾರ ಸಮಸ್ಯೆ ಒಂದೇ ಅಲ್ಲ ರಾಜಕಾರಣಗಳಿಗೂ ಭದ್ರತೆ ಸಿಗಲಾರದು ಎಂದು ಮಾರ್ಮಿಕವಾಗಿ ನುಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಸುರೇಂದ್ರಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ.ಪ್ರಭಾಕರ್, ಎಂ.ವಿ.ರಾಜಶೇಖರನ್, ಜಿಪಂ ಸದಸ್ಯ ಅಲುವೇಲಮ್ಮ, ಎಪಿಎಂಪಿ ಮಾಜಿ ಅಧ್ಯಕ್ಷೆ ರಾಜರಾಜೇಶ್ವರಿ, ಚಿಕ್ಕಬಳ್ಳಾಪುರ ಜಿಲ್ಲಾ ಕುರುಬರ ಸಂಘದ ನಿರ್ದೇಶಕಿ ಎಂ.ಸಾವಿತ್ರಮ್ಮ, ಪತ್ರಕರ್ತ ಗೋಪಿನಾಥ್, ಸಿ.ಆರ್.ಐ ಪಂಪ್ ಕಂಪನಿಯ ಏರಿಯಾ ಮಾರ್ಕೇಟಿಂಗ್ ಮ್ಯಾನೇಜರ್ ಎನ್.ಸತೀಶ್, ರೈತ ಮುಖಂಡ ಕೆ.ಶ್ರೀನಿವಾಸಗೌಡ, ಅನಂತರಾಮಚಾರ್ಯ, ವಿಜಯಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಕೆ.ವಿ.ರೆಡ್ಡಿ ಇದ್ದರು. ರವಿ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

