ಕರ್ಮಕಾಂಡಕ್ಕೆ ಬ್ರೇಕ್ ಹಾಕಲು ಕೋಡಾ ತನಿಖೆ
ಕೋಲಾರ: ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿರುವ ಹೆಗ್ಗಣಗಳಿಗೆ ಕಡಿವಾಣ ಹಾಕಲು ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೂಡಾ ವ್ಯಾಪ್ತಿಗೆ ಸೇರಿದ ಟಮಕ ಬಡಾವಣೆಯಲ್ಲಿ ಬ್ಲೂ ಪ್ರಿಂಟ್ ನಕಾಶೆ ಆಧರಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬದಲು ಅನಧಿಕೃತವಾಗಿ ನಿವೇಶನಗಳನ್ನು ಮಾರಾಟ ಮಾಡಿರುವ ಬಗ್ಗೆ ಹಾಗೂ ಕೆಲ ಖಾಸಗಿ ಲೇಔಟ್ಗಳ ಮಾಲೀಕರು ಸಹ ನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳನ್ನು ಪರಭಾರೆ ಮಾಡಿರುವ ದೂರುಗಳ ಹಿನ್ನಲೆಯಲ್ಲಿ ನಗರ ಮತ್ತು ಗ್ರಾಮೀಣ ಯೋಜನಾ ನಿರ್ದೇಶನಾಲಯದ ಅಧಿಕಾರಿಗಳ ತಂಡ ಕೂಡಾ ಕಚೇರಿಯಲ್ಲಿ ತನಿಖೆ ಆರಂಭಿಸಲಿದ್ದು, ಕೆಲವು ಪ್ರಮುಖ ಕಡತಗಳನ್ನು ವಶಕ್ಕೆ ಪಡೆದಿದೆ ಎಂದರು.
ಟಮಕದಲ್ಲಿ ಕೂಡಾದಿಂದ ಅಭಿವೃದ್ಧಿಪಡಿಸಿರುವ 150 ಎಕರೆ ಭೂಮಿ ಇದ್ದು, ನಿವೇಶನಗಳ ವಿಂಗಡಣೆಗೆ ಸಂಬಂಧಿಸಿದ ಬ್ಲೂ ಪ್ರಿಂಟ್ ಇಲ್ಲದಿರುವುದು ಅಚ್ಚರಿ ಉಂಟು ಮಾಡಿದೆ. ಕೂಡಾ ಆಯುಕ್ತ ನಾಗರಾಜಗೌಡರನ್ನು ಕೇಳಿದರೆ ನುಣುಚಿಕೊಳ್ಳುತ್ತಿದ್ದಾರೆಂದು ಕಿಡಿಕಾರಿದರು.
ಟಮಕ ಬಡಾವಣೆಗೆ ಸಂಬಂಧಿಸಿದ ಬ್ಲೂ ಪ್ರಿಂಟ್ ಬೆಂಗಳೂರಿನಲ್ಲಿದೆ ಎಂದು ಒಮ್ಮೆ ಹೇಳುತ್ತಾರೆ, ಮತ್ತೊಮ್ಮೆ ಗೊತ್ತಿಲ್ಲವೆಂದು ಅನುಮಾನಸ್ಪದ ಉತ್ತರ ನೀಡುತ್ತಿದ್ದಾರೆ. ಒಂದು ವೇಳೆ ಬ್ಲೂ ಪ್ರಿಂಟ್ ಇಲ್ಲವೆಂದಾದರೆ ನಿವೇಶನಗಳ ಮಾರಾಟ ಹೇಗೆ ಸಾಧ್ಯವೆಂಬುದಕ್ಕೆ ನಾಗರಾಜಗೌಡರಿಂದ ಸಮರ್ಕಕವಾದ ಉತ್ತರ ಸಿಗದ ಕಾರಣ, ತಾವು ತನಿಖೆ ಕೈಗೊಳ್ಳಲು ನಗರ ಮತ್ತು ಗ್ರಾಮೀಣ ಯೋಜನಾ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಸಮಗ್ರ ತನಿಖೆ ನಡೆಸುತ್ತಿದ್ದೇವೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಟಮಕದಲ್ಲಿನ ಸಿಎ ಸೈಟ್ಗಳ ಬಗ್ಗೆಯೂ ಮಾಹಿತಿ ಇಲ್ಲ. ಕೆಲವರಿಗೆ ಸಿಎ ಸೈಟ್ ನೋಂದಣಿ ಮಾಡಿಕೊಡಲಾಗಿದೆ. ಅದೇ ರೀತಿ ನಗರದ ಕೆಲ ಖಾಸಗಿ ಬಡಾವಣೆಯಲ್ಲೂ ನಿಯಮ ಮೀರಿ ನಿವೇಶನಗಳನ್ನು ಮಾರಾಟ ಮಾಡಲಾಗಿದ್ದರೂ ಕೂಡಾ ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಪ್ರಕಾರ ಬಡಾವಣೆ ಅಧಿಕೃತವಾಗಿದ್ದಲ್ಲಿ ಪ್ರಥಮ ಹಂತದಲ್ಲಿ ಶೇ.40ರಷ್ಟು ನಿವೇಶನಗಳನ್ನು ಮಾರಾಟ ಮಾಡಲು ಸದರಿ ಬಡಾವಣೆಯ ಮಾಲೀಕರಿಗೆ ಅವಕಾಶ ಕಲ್ಪಿಸಬೇಕು. ಆದರೆ, ಕೂಡಾ ಅಧಿಕಾರಿಗಳು ನಿಯಮಗಳನ್ನು ಗಾಳಿ ತೂರಿ ನಿವೇಶನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದಾರೆಂದರು.
ಟಮಕ ಬಳಿಯ ಆರ್.ಎಂ.ಸಿ ಲೇಔಟ್ನಲ್ಲಿ ಶೇ.40ರಷ್ಟು ನಿವೇಶನಗಳ ಮಾರಾಟಕ್ಕೆ ಕೂಡಾ ಅಧಿಕಾರಿಗಳು ಕೋಲಾರ ಉಪ ನೋಂದಣಾಧಿಕಾರಿಗಳ ಕಚೇರಿಗೆ ಪತ್ರ ನೀಡಿದ್ದಾರೆ. ಆದರೆ, ಇದು ತಮ್ಮಿಂದ ಸಲ್ಲಿಕೆಯಾದ ಪತ್ರವಲ್ಲ, ಬೋಗಸ್ ಮಾಡಲಾಗಿದೆ ಎಂದು ಆಯುಕ್ತರು ಸಮಜಾಯಿಶಿ ಹೇಳುತ್ತಿದ್ದಾರೆಯೇ ಹೊರತು ಬೋಗಸ್ ಮಾಡಿರುವವರ ಹೆಸರು ಬಹಿರಂಗಪಡಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಧೈರ್ಯ ಮಾಡುತ್ತಿಲ್ಲವೆಂದು ಹೇಳಿದರು.
ಬಡಾವಣೆಗಳಿಗೆ ಸಂಬಂಧಿಸಿದ ಬ್ಲೂಪ್ರಿಂಟ್ ಕಳೆದು ಹೋಗಿದಲ್ಲಿ ಪುನರ್ ಸಮೀಕ್ಷೆ ಮಾಡಿ ಮತ್ತೊಂದು ಬ್ಲೂ ಪ್ರಿಂಟ್ ಸಿದ್ಧಪಡಿಸುವಂತೆ ನೀಡಿದ ಸೂಚನೆಯನ್ನು ಸಹ ಆಯುಕ್ತರು ಪಾಲಿಸಿಲ್ಲ. ಕೆರೆ ಅಭಿವೃದ್ಧಿ ಶುಲ್ಕವನ್ನು ಸಹ ಪಾವತಿಸದೆ ಕೆಲವರು ಬಡಾವಣೆಗಳಲ್ಲಿ ಅನಧಿಕೃತವಾಗಿ ನಿವೇಶನಗಳನ್ನು ಪರಭಾರೆ ಮಾಡಿದ್ದಾರೆ. ಕಾನೂನು ಪ್ರಕಾರ ಕೆರೆ ಅಭಿವೃದ್ಧಿಗೆ 1 ಎಕರೆಗೆ 1 ಲಕ್ಷ ರು. ಶುಲ್ಕ ಪಾವತಿಸಬೇಕು. ನಿಯಮಗಳನ್ನು ಗಾಳಿ ತೂರಿರುವುದರಿಂದ ಕೂಡಾ ಕಚೇರಿಯಲ್ಲಿ ತನಿಖೆ ಮುಂದುವರೆದಿದ್ದು, ವರದಿ ಬಂದ ನಂತರ ಪರಿಶೀಲಿಸಿ ಆರೋಪ ಸಾಬೀತು ಆದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ಮಾಲೂರಿನಲ್ಲೂ ಇದೇ ಭೂಮಿ ಪರಭಾರೆಯಲ್ಲಿ ಅಕ್ರಮ ನಡೆದಿದ್ದರಿಂದ ಅಲ್ಲಿನ ತಹಸೀಲ್ದಾರ್ ಅವರನ್ನು ಅಮಾನತು ಮಾಡಲಾಗಿತ್ತು. ಸರದಿ ಪ್ರಕರಣ ಕೋರ್ಟಿನಲ್ಲಿ ಇರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ, ಅಲ್ಲಿನ ಅಕ್ರಮ ಬೆಳಕಿಗೆ ಬಂದಿದ್ದು ಭೂಮಿ ಯೋಜನೆಯ ಪರಿಶೀಲನೆ ಕಾಲದಲ್ಲಿ ಎಂದು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

