ಜನಪ್ರತಿನಿಧಿಗಳಿಗಿಲ್ಲ ಶಾಶ್ವತ ನೀರಾವರಿ!
ಕೋಲಾರ: ಬಯಲು ಸೀಮೆಯ ಜನರ ದಾಹ ತೀರಿಸುವುದೇ ನಮ್ಮ ಆದ್ಯತೆ ಎಂದು ಚುನಾವಣೆಯ ಸಂದರ್ಭದಲ್ಲಿ ವೀರಾ ವೇಷದಿಂದ ಮಾತನಾಡಿದ ರಾಜಕಾರಣಿಗಳು, ಜನಪ್ರತಿನಿಧಿಗಳು ಇದೀಗ ಮೌನಕ್ಕೆ ಶರಣಾಗಿರುವುದು ಅನುಮಾನಕ್ಕೆ ಎಡೆ ಮಾಡಿದೆ.
ಲೋಕಸಭಾ ಚುನಾವಣೆಗೆ ಮುಂಚೆ ಎತ್ತಿನಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರ ಕೈಯಿಂದ ಶಿಲಾನ್ಯಾಸ ಮಾಡಿಸಿದ ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಆಡಳಿತ ಪಕ್ಷದ ಶಾಸಕರು, ಈ ಯೋಜನೆಯ ಕೆಲಸ ಚಾಲನೆಗೊಳ್ಳದಿರುವ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಅಥವಾ ಹೊರಗಡೆ ಕೂಗು ಹಾಕಿಲ್ಲ.
ಬಯಲು ಸೀಮೆ ಜಿಲ್ಲೆಗಳ ಶಾಸಕರನ್ನು ಒಗ್ಗೂಡಿಸಿ ಸಿಎಂ ಬಳಿ ನಿಯೋಗ ಕರೆದೊಯ್ದು ಶಾಶ್ವತ ನೀರಾವರಿಗಾಗಿ ಹಕ್ಕು ಮಂಡಿಸುವುದಾಗಿ ಮಾಧ್ಯಮಗಳ ಮುಂದೆ ಬಡಾಯಿಕೊಚ್ಚಿಕೊಂಡಿದ್ದ ಎರಡೂ ಜಿಲ್ಲೆಯ ಸಂಸದರು, ಶಾಸಕರನ್ನು ಒಗ್ಗೂಡಿಸಲು ಏಕೆ ಸಾಧ್ಯವಾಗುತ್ತಿಲ್ಲವೆಂಬುದುನ್ನು ತಿಳಿಯಲು ಜನತೆ ಕಾತುರಾಗಿದ್ದಾರೆ.
ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಹಾಗೂ ರೈತ ಸಂಘಟನೆಗಳ ಮುಖಂಡರನ್ನು ಸಂಘಟಿಸಿ ಸಿಎಂ ಬಳಿ ನಿಯೋಗ ಕರೆದೊಯ್ಯಲು ಮಾತು ಕೊಟ್ಟಿದ್ದ ವೀರಪ್ಪ ಮೊಯ್ಲಿ ಹಾಗೂ ಕೆ.ಎಚ್.ಮುನಿಯಪ್ಪ ಅವರಿಗೆ ಮುಹೂರ್ತ ಕೂಡಿ ಬರುತ್ತಿಲ್ಲವೇ? ಇಚ್ಛಾಶಕ್ತಿಯ ಕೊರತೆಯೇ? ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ನಂತರ ಸಿಎಂ ಅವರನ್ನು ಭೇಟಿ ಆಗುವುದಾಗಿ ಕೆ.ಎಚ್.ಮುನಿಯಪ್ಪ ಹೇಳಿದ್ದರು. ಆದರೆ, ಈವರೆಗೆ ಅನೇಕ ಬಾರಿ ತಮ್ಮ ಕೆಲಸಕ್ಕೆ ಸಿಎಂ ಅವರನ್ನು ಭೇಟಿ ಆಗಿರುವ ಅವರು, ಶಾಶ್ವತ ನೀರಾವರಿ ವಿಚಾರವಾಗಿ ಬಯಲು ಸೀಮೆಯ ಶಾಸಕರೊಂದಿಗೆ ಸಭೆ ನಡೆಸುವಂತೆ ಆಗ್ರಹಿಸಿಲ್ಲ. ಇನ್ನು ವೀರಪ್ಪ ಮೊಯ್ಲಿ ಅವರು ನೀರು ಕೊಟ್ಟೇ ಸಾಯುತ್ತೇನೆಂದು ಹೇಳಿ ಮತ ಗಿಟ್ಟಿಸಿಕೊಂಡು ನಿಜವಾದ ಅರ್ಥದಲ್ಲಿ ನಂಬಿದ ಜನರಿಗೆ ನೀರು ಕುಡಿಸುತ್ತಿದ್ದಾರೆ!
ಈ ಇಬ್ಬರು ಸಂಸದರ ಹೇಳಿಕೆಗಳನ್ನು ಗಮನಿಸಿರುವ ಶಾಸಕರು ಸಹ ಪ್ರಶ್ನೆ ಮಾಡಲು ಏಕೆ ಧೈರ್ಯ ಮಾಡುತ್ತಿಲ್ಲವೆಂಬುದು ಅರ್ಥವಾಗದ ಜಟಿಲ ಪ್ರಶ್ನೆ. ಎರಡೂ ಜಿಲ್ಲೆಯ ಶಾಸಕರು ಸಹ ವಿಧಾನಮಂಡಲದ ಉಭಯ ಸದನಗಳಲ್ಲಿ ಶಾಶ್ವತ ನೀರಾವರಿಯ ಬಗ್ಗೆ ಚಕಾರ ಎತ್ತಲು ಧೈರ್ಯ ತೋರದಿರುವುದು ಜನತೆಯಲ್ಲಿ ಅನುಮಾನಕ್ಕೆ ಎಡೆ ಮಾಡಿದೆ.
ಕೋರಮಂಗಲ-ಚಲಘಟ್ಟ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಕೋಲಾರ ಜಿಲ್ಲೆಯ 47ಕ್ಕೂ ಹೆಚ್ಚು ಕೆರೆಗಳಿಗೆ 150 ಎಂಎಲ್ಡಿ ನೀರು ಹರಿಸಬಹುದಾದ ಯೋಜನೆಯ ವಿಚಾರವಾಗಿಯೂ ಸದನದಲ್ಲಿ ಪ್ರಸ್ತಾಪಿಸಬಹುದಿತ್ತು. ಆದರೆ, ಇಂಥ ಪ್ರಯತ್ನ ಸಹ ಶಾಸಕರಿಂದ ಆಗದಿರುವುದು ಗಮನಿಸಿದರೆ ನೀರಿನ ವಿಚಾರದಲ್ಲಿ ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲವೇನೋ ಎಂಬ ಅನುಮಾನ ಕಾಡುತ್ತಿದೆ.
ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ನಂತರ ಸಿಎಂ ಅವರನ್ನು ಭೇಟಿ ಆಗುವುದಾಗಿ ಕೆ.ಎಚ್.ಮುನಿಯಪ್ಪ ಹೇಳಿದ್ದರು. ಆದರೆ, ಈವರೆಗೆ ಅನೇಕ ಬಾರಿ ತಮ್ಮ ಕೆಲಸಕ್ಕೆ ಸಿಎಂ ಅವರನ್ನು ಭೇಟಿ ಆಗಿರುವ ಅವರು, ಶಾಶ್ವತ ನೀರಾವರಿ ವಿಚಾರವಾಗಿ ಬಯಲು ಸೀಮೆಯ ಶಾಸಕರೊಂದಿಗೆ ಸಭೆ ನಡೆಸುವಂತೆ ಆಗ್ರಹಿಸಿಲ್ಲ.
-ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

