ನಗರ ಸ್ವಚ್ಛತೆಗೆ ಆಂಧ್ರ ಅಧಿಕಾರಿ ಸಂಕಲ್ಪ
ಕೋಲಾರ: ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಿದಲ್ಲಿ ಒಂದು ತಿಂಗಳಲ್ಲಿ ಕೋಲಾರ ನಗರವನ್ನು ಕಸಮುಕ್ತ ನಗರವನ್ನಾಗಿ ಮಾರ್ಪಡಿಸುವುದಾಗಿ ಆಂಧ್ರ ಪ್ರದೇಶದ ನಗರಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಖಾದರ್ ಭರವಸೆ ನೀಡಿದರು.
ನಗರಸಭೆಯಲ್ಲಿ ಶನಿವಾರ ಸಂಜೆ ಕರೆದಿದ್ದ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಯೋಜನೆ ಜಾರಿಗೊಳಿಸಬೇಕಾದರೆ ನಗರದ ಪುರಪಿತೃಗಳ ಸಹಕಾರವಿದ್ದಾಗ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯವೆಂದರು.
ಸೂಚನೆ ಪಾಲಿಸಿ: ನಮ್ಮ ತಂಡ ನೀಡುವ ಸೂಚನೆಗಳನ್ನು ಸ್ಥಳೀಯ ಸದಸ್ಯರು ಗಮನಿಸಿ ಸಹಕಾರ ನೀಡಿದಲ್ಲಿ ಒಂದು ವಾರದಲ್ಲಿ ಕಸ ಸಮಸ್ಯೆ ನಿವಾರಣೆಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಕೈಗೊಂಡು ಒಂದು ತಿಂಗಳೊಳಗೆ ಕೋಲಾರವನ್ನು ರಾಜ್ಯದಲ್ಲಿ ನಂ.1 ಕಸ ಮುಕ್ತ ನಗರವನ್ನಾಗಿ ಮಾಡುವುದಾಗಿ ಹೇಳಿದರು.
ಕಸವನ್ನು ಪಡೆಯುವಾಗಲೇ ಒಣ, ಹಸಿ ಮತ್ತು ಪ್ಲಾಸ್ಟಿಕ್ ಕಸವನ್ನು ವಿಂಗಡಿಸಿ ಇದನ್ನು ಘಟಕಗಳಿಗೆ ತಂದು ಹಾಕುವುದರಿಂದ ಸಮಸ್ಯೆ ಇಲ್ಲ. ಕಸ ಶೇಖರಣೆ ಮಾಡುವ ಸಿಬ್ಬಂದಿಗೆ ಜನತೆಯ ಸಹಕಾರ ಮುಖ್ಯ ಅದೇ ರೀತಿ ಜನಪ್ರತಿನಿಧಿಗಳು ಕಸದ ವಿಂಗಡಣೆ ಕುರಿತು ಜನರಿಗೆ ತಿಳುವಳಿಕೆ ನೀಡಬೇಕೆಂದರು.
ಸಿಬ್ಬಂದಿಗೆ ತರಬೇತಿ: ಕಸವಿಲೇವಾರಿ ಮಾಡಲು ಜಾಗವನ್ನು ಹುಡುಕಬೇಕಾಗಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿರುವ 5 ಪ್ರದೇಶಗಳನ್ನು ಗುರ್ತಿಸಿ, ನಾಲ್ಕೈದು ವಾರ್ಡ್ಗಳಿಗೆ ಒಂದರಂತೆ ಕಸ ಶೇಖರಣೆ ಘಟಕಗಳನ್ನು ಮಾಡಬಹುದು. ಇಲ್ಲಿಯೇ ಕಸವನ್ನು ಹಾಕಿಕೊಂಡು ನಗರವನ್ನು ಕಸದ ಮುಕ್ತ ನಗರವನ್ನಾಗಿ ಮಾಡಲು ಸಾಧ್ಯವಿದೆ. ಇಲ್ಲಿನ ಸಿಬ್ಬಂದಿಗೆ ಅನುಗುಣವಾಗಿ ಯೋಜನೆಯನ್ನು ರೂಪಿಸಲಾಗಿದ್ದು, ನಾಲ್ಕು ದಿನಗಳು ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗುವುದೆಂದರು.
ರಂಜಾನ್ ಉಪವಾಸ ದಿನಗಳು ನಾಳೆಯಿಂದ ಪ್ರಾರಂಭವಾಗಲಿದ್ದು, ನಾಳೆಯಿಂದಲೇ ಕಸ ಶೇಖರಣೆ ಮಾಡುವ ಕೆಲಸ ಪ್ರಾರಂಭವಾಗಲಿದೆ ಎಂದ ಅವರು, ಈ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸದಸ್ಯ ಪ್ರಸಾದ ಬಾಬು, ನಾರಾಯಸ್ವಾಮಿ ಮಾತನಾಡಿ, ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿದೆ, ನಾವು ಹೇಳುವಂತಹ ಕೆಲಸಗಳೇ ನಡೆಯುತ್ತಿಲ್ಲ, ಈಗಿರುವಾಗ ಈ ಯೋಜನೆ ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ ಎಂದು ಪ್ರಶ್ನಿಸಿದರು. ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾರಕ್, ಉಪಾಧ್ಯಕ್ಷೆ ಸಾಕಮ್ಮ, ಆಯುಕ್ತ ಜಗದೀಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

