ಕಸದ ತೊಟ್ಟಿಗಳಾಗುತ್ತಿರುವ ತೆರೆದ ಬಾವಿಗಳು
ಕೋಲಾರ: ಪೂರ್ವಜರು ನಿರ್ಮಿಸಿರುವ ತೆರೆದ ಬಾವಿಗಳು ಕಸದ ತೊಟ್ಟಿಗಳಾಗಿ ಮಾರ್ಪಡುತ್ತಿವೆ. ಅಂತರ್ಜಲ ಬತ್ತಿರುವುದರಿಂದ ರೈತರು ತಮ್ಮ ಜಮೀನುಗಳಲ್ಲಿನ ತೆರೆದ ಬಾವಿಗಳಲ್ಲಿ ಕಸ ತುಂಬಲು ಅನುಮತಿ ನೀಡುವ ಮೂಲಕ ಒಂದಿಷ್ಟು ಕಸನ್ನು ಜೇಬಿಗೇರಿಸಿಕೊಳ್ಳುತ್ತಿದ್ದಾರೆ.
ಅತಿ ಹೆಚ್ಚು ಕೆರೆ, ಕುಂಟೆ, ಬಾವಿ, ಕಲ್ಯಾಣಿಗಳನ್ನು ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಬತ್ತಿದ್ದರೂ ಕಸದ ಉತ್ಪಾದನೆಗೆ ಕೊರತೆ ಇಲ್ಲ. ಜನಸಂಖ್ಯೆಯ ಸ್ಫೋಟದಂತೆ ಕೋಲಾರ ಜಿಲ್ಲೆಯಲ್ಲಿ ಪ್ರತಿನಿತ್ಯ ಕಸದ ಉತ್ಪಾದನೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಹಾವಳಿಯಿಂದಾಗಿ ಕಸ ವಿಲೇವಾರಿ ಬಿಕ್ಕಟ್ಟಾಗಿರುವುದರಿಂದ ಕೋಲಾರ ನಗರಸಭೆಯವರು ನೀರಿಲ್ಲದ ಬಾವಿ, ಕೆರೆ, ಕಲ್ಯಾಣಿಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡಿಕೊಂಡು ಪೂರ್ವಿಕರ ಸದಾಶಯವನ್ನು ಸಮಾಧಿ ಮಾಡುತ್ತಿದ್ದಾರೆ.
ಕಗ್ಗಂಟು: ಕಳೆದ ಐದಾರು ವರ್ಷಗಳಿಂದ ಕೋಲಾರ ನಗರ ಸೇರಿದಂತೆ ಜಿಲ್ಲಾಯಾದ್ಯಂತ ಕಸ ವಿಲೇವಾರಿ ಸಮಸ್ಯೆ ಕಗ್ಗಂಟಾಗಿರುವುದರಿಂದ ಪ್ರತಿನಿತ್ಯ ಸಂಗ್ರಹಣೆ ಮಾಡುವ ಕಸವನ್ನು ಬಾವಿ, ಕುಂಟೆ, ಕೆರೆಗಳಿಗೆ ಸುರಿದು ದೊಡ್ಡ ಸಾಧನೆ ಮಾಡಿರುವವರಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೀಗುತ್ತಿದ್ದಾರೆ.
ಕೋಲಾರ ತಾಲೂಕಿನ ವೀರಾಪುರದಿಂದ ಯಡಹಳ್ಳಿಗೆ ಹೋಗುವ ಮಾರ್ಗ ಮದ್ಯೆ ಸಿಗುವ ದೊಡ್ಡದಾದ ತೆರೆದ ಬಾವಿಯಲ್ಲಿ ಕಸಕಡ್ಡಿಗಳನ್ನು ಸುರಿದು ಜಲದ ಕಣ್ಣುಗಳನ್ನು ಶಾಶ್ವತವಾಗಿ ಬತ್ತಿಸುವ ಪ್ರಯತ್ನ ನಡೆದಿದೆ. ಇದೇ ರೀತಿ ಕೋಲಾರ ನಗರದ ವ್ಯಾಪ್ತಿಯ ಹಳೇ ಬಾವಿಗಳನ್ನು ಕಸದಿಂದ ಮುಚ್ಚಲಾಗಿದೆ.
ಭವಿಷ್ಯ ಮರೆತರು: ಕೋಲಾರಕ್ಕೆ ಬರುತ್ತಿದ್ದ ಮಳೆ ಪ್ರಮಾಣ ಕುಸಿದಿರುವುದು ನಿಜ, ಕೆರೆಗಳು ಮರಳು ಮಾಫಿಯಾಗಳಿಂದ ವಿಕೃತವಾಗಿರುವುದು ನಿಜ. ಆದರೆ, ಮಳೆ ಬರುವುದೇ ಇಲ್ಲವೆಂಬ ನಿರ್ಧಾರಕ್ಕೆ ಬಂದಿರುವ ಕೆಲ ರೈತರು ತಮ್ಮ ಹೊಲಗಳಲ್ಲಿ ಮರಳು ಶೋಧನೆಗೆ ಅವಕಾಶ ಕಲ್ಪಿಸಿ ಮುಂದಿನ ಪೀಳಿಗೆಯ ಭವಿಷ್ಯ ಮರೆಯುತ್ತಿದ್ದಾರೆ, ಪೂರ್ವಿಕರು ಕಟ್ಟಿಸಿರುವ ಬಾವಿಗಳನ್ನು ಮುಚ್ಚಲು ಕಸವನ್ನು ತುಂಬುತ್ತಿದ್ದಾರೆ, ದೂರದೃಷ್ಟಿ ಇಲ್ಲದ ನಗರಸಭೆಯವರು ರೈತರಿಗೆ ಹಣದ ಆಸೆ ತೋರಿಸಿ ಬಾವಿಗಳನ್ನು ಮುಚ್ಚಿಸುವ ಮೂಲಕ ಕೋಲಾರ ನಗರ ಮುಂದೊಂದು ದಿನ ಕಸದ ಕಾಡಾಗುವಂತೆ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

