ಕಸಮುಕ್ತ ಕೋಲಾರ ಜಿಲ್ಲಾಧಿಕಾರಿ ಡಿ.ಕೆ. ರವಿ ಚಾಲನೆ
ಕೋಲಾರ: ಕಸ ವಿಲೇವಾರಿ ಸಮಸ್ಯೆಯಿಂದ ಕಂಗೆಟ್ಟಿದ್ದ ಕೋಲಾರ ನಗರದ ಜನತೆಗೆ ಇನ್ನು ಮುಂದೆ ಕೊಂಚ ರಿಲೀಫ್ ಸಿಗುವ ಲಕ್ಷಣಗಳು ಕಾಣ ಬರುತ್ತಿವೆ.
ನಗರದಲ್ಲಿ ಪ್ರತಿದಿನ 60 ರಿಂದ 70 ಟನ್ ಕಸ ಸಂಗ್ರಹಣೆ ಆಗುತ್ತದೆ. ಇದನ್ನು ವಿಲೇವಾರಿ ಮಾಡಲು ಘಟಕವಿಲ್ಲದೆ ಕಸವನ್ನು ರಸ್ತೆ ಬದಿ, ಪಾಳು ಬಿದ್ದ ಬಾವಿ, ಕೆರೆ, ಕುಂಟೆ, ರೈತರ ಹೊಲಗದ್ದೆಗಳಲ್ಲಿ ಸುರಿಯುತ್ತಿರುವುದರಿಂದ ಕೋಲಾರ ಕಸದ ಊರು ಎಂಬ ಅಪಕೀರ್ತಿಗೆ ಒಳಗಾಗಿದೆ.
ಕೋಲಾರ ಮತ್ತೊಂದು ಮಂಡೂರು ಆಗಬಹುದೆಂದು ಕೆಲ ಪ್ರಜ್ಞಾವಂತ ನಾಗರಿಕರು ಆತಂಕ ವ್ಯಕ್ತಪಡಿಸಿದ ನಂತರ ಎಚ್ಚೆತ್ತ ನಗರಸಭೆ ಏನಾದರೂ ಮಾಡಿ ಕಸದ ಸಮಸ್ಯೆಗೆ ಪರಿಹಾರ ಹುಡುಕಬೇಕೆಂದು ನಿರ್ಧರಿಸಿತು. ಕಸ ವಿಲೇವಾರಿಗೆ ಜಾಗ ಇಲ್ಲದಿದ್ದರೂ ಕಡೆಗೂ ಧೈರ್ಯ ಮಾಡಿರುವ ನಗರಸಭೆ ಆಂಧ್ರ ಪ್ರದೇಶ ಸರ್ಕಾರದ ಅಧಿಕಾರಿ ಖಾದರ್ ಎಂಬುವರನ್ನು ಕೋಲಾರಕ್ಕೆ ಕರೆಸಿಕೊಂಡು ಕಸಮುಕ್ತ ನಗರವನ್ನಾಗಿಸಲು ಹೆಜ್ಜೆ ಇಟ್ಟಿದೆ. ಮನೆಗಳಿಂದ ವಿಂಗಡಿಸಿದ ಕಸವನ್ನು ಸಂಗ್ರಹಣೆ ಮಾಡುವುದು ಹೇಗೆ ಎಂಬ ಕುರಿತು ಖಾದರ್ ಪೌರ ಕಾರ್ಮಿಕರಿಗೆ ತರಬೇತಿ ನೀಡಿದ್ದಾರೆ. ಕಸ ವಿಂಗಡಣೆ ನಂತರ ಒಣ ಕಸ, ಗಟ್ಟಿಕಸ, ಕೊಳತೆ ತರಕಾರಿ, ಹಣ್ಣು, ಸೊಪ್ಪು ಇತ್ಯಾದಿಗಳನ್ನು ಯಾವ ರೀತಿ ವಿಂಗಡಿಸಬೇಕು, ಯಾವ ಬಕೆಟ್ಗಳಲ್ಲಿ ಸುರಿಯಬೇಕು, ಅನುಪಯುಕ್ತ ಪ್ಲಾಸ್ಟಿಕ್ ಅನ್ನು ಹೇಗೆ ವಿಲೇವಾರಿ ಮಾಡಬೇಕೆಂದು ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ.
ಡಿಸಿ ಚಾಲನೆ: ಕ್ಲೀನ್ ಸಿಟಿ ಕಾರ್ಯಕ್ರಮದಡಿ ಸೋಮವಾರ ನಗರದ 10ನೇ ವಾರ್ಡಿಗೆ ಸೇರಿದ ಗೌರಿಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಿ.ಕೆ. ರವಿ ಚಾಲನೆ ನೀಡಿದರು. ಕಸ ಸಂಗ್ರಹಣೆಗಾಗಿ ಖರೀದಿ ಮಾಡಿರುವ ಕೈಗಾಡಿಗಳಲ್ಲಿ ಗಟ್ಟಿ ಕಸ, ಒಣ ಕಸ, ಪ್ಲಾಸ್ಟಿಕ್ ಇತ್ಯಾಧಿ ಕಸವನ್ನು ಪ್ರತ್ಯೇಕವಾಗಿ ಹೇಗೆ ಹಾಕಬೇಕೆಂದು ಪೌರ ಕಾರ್ಮಿಕರು ಹಾಗೂ ಆಂಧ್ರದಿಂದ ಬಂದಿರುವ ಅಧಿಕಾರಿ ಜನರಿಗೆ ತಿಳಿಸಿಕೊಟ್ಟರು. ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಕಸ ವಿಲೇವಾರಿಗೆ ಚಾಲನೆ ನೀಡಿ ಮಾತನಾಡಿ, ಪ್ರತಿದಿನ ಮನೆಗಳಿಂದ ಸಂಗ್ರಹಣೆ ಮಾಡುವ ಕಸವನ್ನು ಸೂಕ್ತವಾದ ಜಾಗದಲ್ಲಿ ವಿಲೇವಾರಿ ಮಾಡಬೇಕು, ಜನರಿಗೆ ಕಸವನ್ನು ವಿಂಗಡಿಸಿ ಕೊಡುವಂತೆ ಮನವಿ ಮಾಡಬೇಕು, ಕಸ ವಿಂಗಡಣೆಗೆ ಸಂಬಂಧಿಸಿದಂತೆ ಸಿಬ್ಬಂದಿ ಜನತೆಯಲ್ಲಿ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.
ಪೌರ ಕಾರ್ಮಿಕರು, ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಜೊತೆ ನಗರದ ಕೆಲ ಬೀದಿಗಳಲ್ಲಿ ಸಂಚರಿಸಿ ವಿಂಗಡಿಸಿ ಕಸ ನೀಡದರೆ ಕೈ ಮುಗಿವೆ. ಸಹಕರಿಸಿ ಸೇವೆ ಮಾಡುವೆ ಮಾಡುವೆ ಎಂಬ ಸಂದೇಶವನ್ನು ಹೊಂದಿರುವ ಹಸಿರು ಬಣ್ಣದ ಕೈಗಾಡಿಗಳ ಮೂಲಕ ಗಮನ ಸೆಳೆದರು.
ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್ ಕಸವನ್ನು ಚರಂಡಿಗಳಿಗೆ ಎಸೆಯಬೇಡಿ, ಕೈಗಾಡಿಗಳಲ್ಲಿನ ಬಕೆಟ್ಗಳಿಗೆ ಕಸ ವಿಂಗಡಿಸಿ ಸುರಿದು ಸಹಕರಿಸಿ ಎಂದು ಮನವಿ ಮಾಡಿದರು. ನಗರಸಭೆ ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ಪ್ರಸಾದ್ ಬಾಬು, ರೌತ್ ಶಂಕರಪ್ಪ, ಮುರಳಿಗೌಡ, ಸೋಮಶೇಖರ್, ಗಾಂಧಿನಗರ ನಾರಾಯಣಸ್ವಾಮಿ, ಆಯುಕ್ತ ಜಗದೀಶ್, ಮ್ಯಾನೇಜರ್ ಶಿವಪ್ರಕಾಶ್, ಆರೋಗ್ಯ ನಿರೀಕ್ಷಕ ರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

