ಕೋಲಾರ

ನಮೋ ಗೆಲ್ಲಿಸಿ; ಬಚ್ಚೇಗೌಡ ಮನವಿ

Published On :

ಗೌರಿಬಿದನೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಬೆಂಬಲಿಸಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನಾನು ಅಭ್ಯರ್ಥಿಯಾಗಲಿದ್ದು, ಬಿಜೆಪಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಲು ಸಹಕರಿಸಬೇಕೆಂದು ಬಚ್ಚೇಗೌಡ ಮನವಿ ಮಾಡಿದರು.
ಸಮೀಪದ ಹಿರೇಬಿದನೂರು ಗ್ರಾಮದಲ್ಲಿ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಪ್ರಚಾರಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭ್ರಷ್ಟ ಸರ್ಕಾರ. ಲಕ್ಷಾಂತರ ಕೋಟಿ ಲೂಟಿ ಮಾಡಿ ದೇಶದ ಜನರಿಗೆ ಮೋಸ ಮಾಡಿರುವುದೇ ಈ ಸರ್ಕಾರದ ಸಾಧನೆ. ಆದ್ದರಿಂದ ದೇಶಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ನರೇಂದ್ರಮೋದಿ ಸ್ವಚ್ಛರಾಜಕಾರಣಿ, ಅವರ ನೇತೃತ್ವದ ಕೇಂದ್ರ ಸರ್ಕಾರ ಬಂದರೆ ಈ ದೇಶದ ಬಡವರಿಗೆ ದೀನದಲಿತರಿಗೆ ವರದಾನವಾಗಲಿದೆ ಎಂದರು.
60ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಏನೂ ಮಾಡಿಲ್ಲ. ಆದರೆ 60ತಿಂಗಳು ಮೋದಿಯನ್ನು ಪ್ರಧಾನಿ ಮಾಡಿದರೆ ಅಭಿವೃದ್ಧಿಯ ಹೊಳೆ ಹರಿಸಲಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದ ಪ್ರಭಾವಿ ಮಂತ್ರಿಯಾಗಿದ್ದ ವೀರಪ್ಪಮೊಯ್ಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಮಾಡದೇ ಎತ್ತಿನಹೊಳೆ ಹರಿಸುತ್ತೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ, ತಮ್ಮ ಸಂಸದರ ನಿಧಿಗೆ ಬಂದಿದ್ದ 25 ಕೋಟಿ ರು.ಗಳಲ್ಲಿ 13ಕೋಟಿ ಕೇಂದ್ರಕ್ಕೆ ವಾಪಸ್ ಹೋಗಿದೆ ಎಂದರೆ ಇವರ ಕಾರ್ಯವೈಖರಿ ಅರಿವಾಗುತ್ತದೆ. ಈ ಕ್ಷೇತ್ರದ ಜನತೆಗೆ ದ್ರೋಹಮಾಡಿರುವ ಮೊಯ್ಲಿ ಅವರಿಗೆ ತಕ್ಕ ಪಾಠಕಲಿಸಿ ಎಂದರು. ಯಲಹಂಕ ಶಾಸಕ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ವಿಶ್ವನಾಥ್ ಮಾತನಾಡಿ, ದೇಶದಲ್ಲಿ ಹುಟ್ಟಿದ ಯಾರೂ ಭರತ ಭೂಮಿಗೆ ದ್ರೋಹ ಮಾಡಬಾರದು. ಭಾರತಮಾತೆಗೆ ಗೌರವಿಸಬೇಕಾದರೆ ಉತ್ತಮ ಸೇವೆ ಸಲ್ಲಿಸಬೇಕು ಕೇಂದ್ರ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಹಗರಣಗಳ ಸರ್ಕಾರವಾಗಿದೆ. ಜನರೂ ಕಾಂಗ್ರೆಸ್ ಬಗ್ಗೆ ಬೇಸತ್ತಿದ್ದು ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಬೆಂಬಲಿಸಲಿದ್ದು ಬಚ್ಚೇಗೌಡರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ, ತಾಲೂಕು ಅಧ್ಯಕ್ಷ ಗೋಪಿನಾಥ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಚಿಕ್ಕಕುರುಗೋಡು ನಾಗರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ, ಮಂಜುಳ, ಜೆ.ವಿ. ಹನುಮೇಗೌಡ, ನಾರಾಯಣರೆಡ್ಡಿ, ರಮೇಶ್ ರಾವ್, ವೆಂಕಟೇಶ್, ಕಾಂತರಾಜು, ಎಚ್.ಎಸ್. ಮುರಳೀಧರ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.