ಅಧ್ಯಕ್ಷ ಗಾದಿಗೆ ಕಾಂಗ್ರೆಸ್ - ಜೆಡಿಎಸ್ ಕದನ
ಕೋಲಾರ: ಅಂತೂ ಇಂತು ಕೋಲಾರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿ ಮಾ.10ರಂದು ಸೋಮವಾರ ಚುನಾವಣೆ ನಿಗದಿಪಡಿಸಲಾಗಿದೆ.
ಕಳೆದ ಒಂದು ವರ್ಷದ ಹಿಂದೆ ಅಂದರೆ 2013ರ ಮಾರ್ಚ್ ತಿಂಗಳಲ್ಲಿ ಕೋಲಾರ ನಗರಸಭೆಗೆ ಚುನಾವಣೆ ನಡೆದಿತ್ತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದ ಮೀಸಲು ಪ್ರಶ್ನಿಸಿ ಕೆಲವರು ಕೋರ್ಟಿಗೆ ಹೋಗಿದ್ದರಿಂದ ಚುನಾವಣೆಗೆ ಅಡ್ಡಿಯಾಗಿತ್ತು.
ಕೋಲಾರ ನಗರಸಭೆ ಸೇರಿದಂತೆ ರಾಜ್ಯದ ಕೆಲವು ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯದಿದ್ದರಿಂದ ಚುನಾಯಿತ ಸದಸ್ಯರಿಗೆ ತಮ್ಮ ವಾರ್ಡುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಷ್ಟವಾಗಿತ್ತು. ಪ್ರತಿಯೊಂದಕ್ಕೂ ಆಡಳಿತಾಧಿಕಾರಿಗಳ ಹಾಗೂ ನಗರಸಭೆ-ಪುರಸಭೆಗಳ ಅಧಿಕಾರಿಗಳ ಬಳಿ ಕೈಕಟ್ಟಿ ನಿಂತು ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೋಲಾರ ನಗರಸಭೆಯಲ್ಲಂತೂ ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಸಮರ್ಪಕವಾಗಿ ನಡೆಯಲು ಆಗಿರಲಿಲ್ಲ. ಹೈಕೋರ್ಟ್ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದಿರುವುದರಿಂದ ಈಗಾಗಲೇ ಪ್ರಕಟವಾಗಿರುವ ಮೀಸಲಿನಂತೆ ಚುನಾವಣೆ ನಡೆಯಲಿದೆ.
ಕೋಲಾರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ) ಮಹಿಳೆಗೆ ನಿಗದಿಯಾಗಿದ್ದು ಅಧಿಕಾರ ಹಿಡಿಯಲು ಅತಿ ಹೆಚ್ಚು ಸ್ಥಾನ ಗಳಿಸಿರುವ ಜೆಡಿಎಸ್ ಕಾರ್ಯತಂತ್ರ ರೂಪಿಸಲಾರಂಭಿಸಿದೆ.
ನಗರಸಭೆಯ ಚುನಾವಣಾಧಿಕಾರಿ ಆಗಿರುವ ಕೋಲಾರ ಉಪವಿಭಾಗಾದಿಕಾರಿ ಮಂಜುನಾಥ್ ಅವರು ಮಾ.10ರಂದು ಚುನಾವಣೆ ಘೋಷಣೆ ಮಾಡಿದ್ದಾರೆ. ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿಯಲು ಕನಿಷ್ಠ 19 ಸದಸ್ಯರ ಸರಳ ಬಹುಮತದ ಅವಶ್ಯಕತೆ ಇದೆ.
35 ಸದಸ್ಯರ ಬಲದ ಕೋಲಾರ ನಗರಸಭೆಯಲ್ಲಿ 16 ಮಂದಿ ಜೆಡಿಎಸ್, ಜೆಡಿಎಸ್ ಬೆಂಬಲಿತ ಸಿಪಿಎಂ-1 ಸದಸ್ಯರು ಸೇರಿ 17 ಮಂದಿ ಸದಸ್ಯರಿದ್ದು ಅಧಿಕಾರ ಹಿಡಿಯಲು ಇನ್ನು ಇಬ್ಬರು ಸದಸ್ಯರ ಬೆಂಬಲ ಬೇಕಾಗಿರುವುದರಿಂದ ಪಕ್ಷೇತರರಿಗೆ ಗಾಳ ಹಾಕಲು ಮುಖಂಡರು ಪ್ರಯತ್ನಿಸುತ್ತಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ಆಗಿರುವುದರಿಂದ ಜೆಡಿಎಸ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುವ ಸಂಭವವಿದೆ. ಪಕ್ಷದ ಹಿರಿಯ ಸದಸ್ಯ 12ನೇ ವಾರ್ಡಿನ ರವೀಂದ್ರ ಬಗ್ಗೆ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಕೆ. ಶ್ರೀನಿವಾಸಗೌಡರು ಹೆಚ್ಚಿನ ಒಲವು ಹೊಂದಿದ್ದಾರೆ. ಮಾಜಿ ಶಾಸಕ ವೆಂಕಟಗಿರಿಯಪ್ಪನವರ ಪುತ್ರರಾದ ರವೀಂದ್ರ ಎರಡನೇ ಬಾರಿಗೆ ಸದಸ್ಯರಾಗಿದ್ದಾರೆ.
ಇದೇ ಪಕ್ಷದ 14ನೇ ವಾರ್ಡಿನ ಸದಸ್ಯ ಮುರಳಿಗೌಡ 2ಬಾರಿ ಗೆದ್ದಿದ್ದು ಈ ಹಿಂದೆ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ತಮಗೆ ಅವಕಾಶ ನೀಡಿದಲ್ಲಿ ನಗರದ ಅಭಿವೃದ್ಧಿಯ ಜೊತೆಗೆ ಪಕ್ಷದ ಸಂಘಟನೆಗೆ ಶಕ್ತಿ ನೀಡುವುದಾಗಿ ಪಕ್ಷದ ಮುಖಂಡರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ 17ನೇ ವಾರ್ಡಿನ ಅಪ್ರೋಜ್ಪಾಷ ಅವರು ಶಾಸಕ ವರ್ತೂರ್ ಬಣದಿಂದ ಜೆಡಿಎಸ್ಗೆ ಬಂದವರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗುವುದರಿಂದ ತಮಗೆ ಅಧ್ಯಕ್ಷ ಸ್ಥಾನ ನೀಡುವುದು ಸೂಕ್ತವೆಂದು ಹೇಳಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಗರಸಭೆಗೆ ಆಯ್ಕೆಯಾಗಿರುವ ಕ್ರಿಯಾಶೀಲ ಯುವಕ, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ 3ನೇ ವಾರ್ಡಿನ ಮುಬಾರಕ್ ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿದ್ದಾರೆ. ಅವಕಾಶ ನೀಡಿದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದಾಗಿ ಪಕ್ಷದ ಹಿರಿಯ ಮುಖಂಡರಿಗೆ ಭರವಸೆ ನೀಡಿದ್ದಾರೆ.
11ನೇ ವಾರ್ಡಿನ ಸಿ.ಎ. ಸುಕುಮಾರ್ ಪ್ರಬಲ ಅಕಾಂಕ್ಷಿಯಾಗಿದ್ದಾರೆ, ಜೆಡಿಎಸ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇರುವುದರಿಂದ ಒಮ್ಮತದ ಆಯ್ಕೆಗಾಗಿ ಮಾ.10ರಂದು ಬೆಳಿಗ್ಗೆ ಸಭೆ ಸೇರಿ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಸಚಿವ ಕೆ. ಶ್ರೀನಿವಾಸಗೌಡರು ತಮ್ಮ ಬಳಿ ಬರುತ್ತಿರುವ ಅಕಾಂಕ್ಷಿಗಳಿಗೆ ಮತ್ತು ಪಕ್ಷದ ಸದಸ್ಯರಿಗೆ ಹೇಳಿ ಕಳುಹಿಸುತ್ತಿದ್ದಾರೆ.
ಕಾಂಗ್ರೆಸ್ ಪ್ರಸ್ತುತ ಸದಸ್ಯರ ಬಲ ಕೇವಲ 8 ಅಧಿಕಾರ ಹಿಡಿಯಲು ಇನ್ನು 11 ಮಂದಿ ಸದಸ್ಯರ ಬೆಂಬಲ ಇದಕ್ಕೆ ಬೇಕಾಗಿದೆ. ಶಾಸಕ ವರ್ತೂರ್ ಪ್ರಕಾಶ್ ಬಣದ 5 ಹಾಗೂ ಐದು ಮಂದಿ ಪಕ್ಷೇತರರು ಮಾತ್ರವಲ್ಲದೆ ಜೆಡಿಎಸ್ನ ಅತೃಪ್ತರನ್ನು ಸೆಳೆಯಲು ಕಾಂಗ್ರೆಸ್ ಮುಖಂಡರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಬಿಜೆಪಿಯ ಜೊತೆ ಗುರುತಿಸಿಕೊಂಡಿರುವ ಇಬ್ಬರು ಪಕ್ಷೇತರ ಸದಸ್ಯರು ಎತ್ತ ವಾಲುತ್ತಾರೆಂಬುದು ಕುತೂಹಲ ಮೂಡಿಸಿದೆ. ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಶಕ್ತಿ ತುಂಬಿದ್ದ ಬ್ಯಾಲಹಳ್ಳಿಗೋವಿಂದಗೌಡರು ಈಗ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ಬೆಂಬಲದಿಂದ ಗೆದ್ದಿರುವ ಜೆಡಿಎಸ್ ಸದಸ್ಯರು ಕೆಲವರು ಎತ್ತ ಹೊರಳುತ್ತಾರೋ ನೋಡಬೇಕಾಗಿದೆ.
ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ
ಕೋಲಾರ ನಗರಸಭೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಪ್ರಯತ್ನಿಸಬಹುದು,
ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಪರಿಣಾಮಕಾರಿಯಾರಿ ಕಾರ್ಯಾಚರಣೆ ನಡೆಸಿದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೊಂಚ ಮಟ್ಟಿಗೆ ವರದಾನವಾಗಬಹುದು, ಜೊತೆಗೆ ಮುನಿಯಪ್ಪನವರು ಶಾಸಕ ವರ್ತೂರ್ ಪ್ರಕಾಶ್ ಜೊತೆ ರಾಜಿ ಮಾಡಿಕೊಂಡಲ್ಲಿ ಜೆಡಿಎಸ್ ಜೊತೆ ಪ್ರಬಲ ಹೋರಾಟ ನೀಡುವುದಕ್ಕೆ ಸುಲಭವಾಗಬಹುದು.
ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

