ಕೋಲಾರ

ಡಿಸಿಸಿ ಬ್ಯಾಂಕ್ ಅಧ್ಯಕ್ಷಗಾದಿ ಕಾಂಗ್ರೆಸ್‌ಗೆ

Published On :

ಕ.ಪ್ರ.ವಾರ್ತೆ ಕೋಲಾರ ಮಾ. 3
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್‌ನ ಎಚ್.ವಿ. ನಾಗರಾಜ್ ಆಯ್ಕೆಯಾಗಿದ್ದಾರೆ.
ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಚುನಾವಣಾ ಮತ ಎಣಿಕೆ ಸೋಮವಾರ ಬೆಳಗ್ಗೆ ಕೋಲಾರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿದ್ದ ಮತಪಟ್ಟೆಗೆಗಳನ್ನು ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಮಂಜುನಾಥ್ ಸಮಕ್ಷಮದಲ್ಲಿ ಬಿಗಿ ಭದ್ರತೆಯೊಂದಿಗೆ ತಂದು ಅಭ್ಯರ್ಥಿಗಳ ಮುಂದೆ ಮತ ಪೆಟ್ಟಿಗೆಯನ್ನು ತೆಗೆಯಲಾಯಿತು. ಮತದಾನ ಪ್ರಕ್ರಿಯೆಯಲ್ಲಿ ಹೈಕೋರ್ಟ್ ನಿರ್ದೇಶನದಂತೆ ಚುನಾಯಿತ 15 ನಿರ್ದೇಶಕರ ಮತಗಳನ್ನು ಒಂದು ಮತ ಪೆಟ್ಟಿಗೆಯಲ್ಲೂ ಮತ್ತು ಉಳಿದ ಸರ್ಕಾರಿ ನಾಮಿನಿ 3 ನಿರ್ದೇಶಕರ ಮತಗಳನ್ನು ಮತ್ತೊಂದು ಪೆಟ್ಟಿಗೆಯಲ್ಲೂ ಭದ್ರಪಡಿಸಲಾಗಿತ್ತು. ಪ್ರತ್ಯೇಕವಾಗಿ ಇದ್ದ ಮತಗಳ ಎಣಿಕೆ ಸಂದರ್ಭದಲ್ಲಿ ಸೇರಿಸಿ ಒಟ್ಟಿಗೆ ಮತ ಎಣಿಕೆ ಮಾಡಲಾಯಿತು.
ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಗೋವಿಂದಗೌಡ, ವಕೀಲ ಕೆ.ವಿ. ಶಂಕರಪ್ಪನವರಿಗೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಹನುಮಂತರೆಡ್ಡಿ ಹಾಗೂ ಜೆಡಿಎಸ್‌ನ ನಾಗರಾಜ್ ಅವರಿಗೂ ತಲಾ 9 ಮತಗಳು ಬಂದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಗಳು ಕಾನೂನಿನ ಪ್ರಕಾರ ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡವುದಾಗಿ ತಿಳಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹೆಸರನ್ನು ಒಂದು ಬಾಕ್ಸ್‌ನಲ್ಲಿ ಬರೆದು ಹಾಕಿ ಅಧಿಕಾರಿಗಳಿಂದ ಚೀಟಿಗಳನ್ನು ಎತ್ತಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ. ಬ್ಯಾಲಹಳ್ಳಿ ಗೋವಿಂದಗೌಡ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ವಿ. ನಾಗರಾಜ್ ಲಾಟರಿಯಲ್ಲಿ ಅದೃಷ್ಟಶಾಲಿಗಳಾದರು.
ಹದಿಮೂರು ವರ್ಷಗಳ ನಂತರ ಕಳೆದ ನವೆಂಬರ್ 30ರಂದು ಚುನಾವಣಾ ಭಾಗ್ಯ ಕಂಡಿದ್ದರೂ, ಮತಗಳ ಎಣಿಕೆ ವಿಚಾರ ಹೈಕೋರ್ಟ್ ಮೆಟ್ಟಿಲು ಏರಿದ್ದರಿಂದಾಗಿ ಆಯ್ಕೆ ಪ್ರಕ್ರಿಯೆಗೆ ತಡೆ ಬಿದ್ದಿತ್ತು. ಡಿಸಿಸಿ ಬ್ಯಾಂಕ್ ಅಧಿಕಾರ ಪಡೆಯುವುದು ರಾಜಕೀಯ ಪಕ್ಷಗಳಿಗೆ ಪ್ರತಿಷ್ಟೆಯ ಸಂಕೇತವಾಗಿದ್ದರಿಂದ ಭಾರೀ ಪೈಪೋಟಿ ಎದುರಾಗಿತ್ತು.
ಡಿಸಿಸಿ ಬ್ಯಾಂಕ್‌ನ ಒಟ್ಟು 15ನಿರ್ದೇಶಕ ಸ್ಥಾನಗಳ ಪೈಕಿ 6 ಸ್ಥಾನಗಳನ್ನು ಜೆಡಿಎಸ್, ಬ್ಯಾಲಹಳ್ಳಿ ಗೋವಿಂದಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷ 6 ಮಂದಿ ನಿರ್ದೇಶಕರನ್ನು ಹೊಂದಿತು. ಬಿಜೆಪಿ ಬೆಂಬಲಿತ 3 ಮಂದಿ ನಿರ್ದೇಶಕರು ಇದ್ದರು. ಹದಿನೈದು ಮಂದಿ ನಿರ್ದೇಶಕರ ಜೊತೆಗೆ ಇಬ್ಬರು ಅಧಿಕಾರಿಗಳು ಹಾಗೂ ಓರ್ವ ನಾಮಕರಣ ಸದಸ್ಯರು ಸೇರಿದಂತೆ ಒಟ್ಟು ಆಡಳಿತ ಮಂಡಳಿ ಸದಸ್ಯರ ಬಲ 18 ಆಗಿತ್ತು.
ಕೋರ್ಟ್‌ನಲ್ಲಿ ಇತ್ಯರ್ಥ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನಾಮಕರಣ ಸದಸ್ಯರಿಗೆ ಮತದಾನ ನೀಡಬಾರದು ಎಂದು ಜೆಡಿಎಸ್ ಬೆಂಬಲಿತ ನಿರ್ದೇಶಕ ನಾಗನಾಳ ಸೋಮಣ್ಣ ನ್ಯಾಯಾಲಯವನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮತಗಳ ಎಣಿಕೆಗೆ ತಡೆ ನೀಡಿತ್ತು. ಆದರೆ ಮಾ.1ರಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ಮಾ.3ರಂದು ಮತ ಎಣಿಕೆ ಕಾರ್ಯ ನಡೆಸುವಂತೆ ಸೂಚನೆ ನೀಡಿತು.ಮತ ಎಣಿಕೆಯಲ್ಲಿ ಸಮಬಲ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಮಬಲ ಸಾಧಿಸಿದರೂ ಲಾಟರಿಯಲ್ಲಿ ಕೈಕೊಟ್ಟಿತು. ಇದರಿಂದ ಬೇಸರದಿಂದಲೇ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೆ.ವಿ. ಶಂಕರಪ್ಪ ಯೂನಿಯನ್ ಮತ ಎಣಿಕೆ ಕೇಂದ್ರದಿಂದ ಹೊರನಡೆದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ. ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷ ಸ್ಥಾನವನ್ನು ಪಡೆಯಲೇ ಬೇಕೆಂದು ಸಾಕಷ್ಟ ಕಸರತ್ತು ನಡೆಸಿದರು. ಮತ ಎಣಿಕೆಯಲ್ಲಿ ತಮಗೆ ಜೆಡಿಎಸ್ ಅಭ್ಯರ್ಥಿಗಿಂತ ಒಂದು ಮತ ಹೆಚ್ಚಾಗಿ ಬರಲಿದೆ ಎಂಬ ದೃಢ ವಿಶ್ವಾಸವನ್ನು ಹೊಂದಿದ್ದರು. ಆದರೆ ಎಣಿಕೆಯಲ್ಲಿ ಸಮಬಲ ಬಂದಾಗ ಆತಂಕ ಮನೆ ಮಾಡಿತು. ಆದರೂ ಅವರಿಗೆ ಅದೃಷ್ಟ ಕೈಬಿಡಲಿಲ್ಲ. ಲಾಟರಿಯಲ್ಲಿ ಹಾಕಿದ ಎರಡು ಹೆಸರುಗಳಲ್ಲಿ ಗೋವಿಂದಗೌಡ ಹೆಸರು ಬರುವುದು ಮೂಲಕ ಕಾಂಗ್ರೆಸ್ ಗೆಲುವಿನ ನಗೆ ಬೀರಿತು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಮಂಜುನಾಥ್ ಕಾರ್ಯನಿರ್ವಹಿಸಿದ್ದರು.
ಬೆಂಬಲಿಗರಿಂದ ವಿಜಯೋತ್ಸವ: ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ. ಬ್ಯಾಲಹಳ್ಳಿ ಗೋವಿಂದಗೌಡ ಜಯಗಳಿಸಿದ ಸುದ್ದಿ ಕೇಳಿ ಯೂನಿಯನ್ ಕೇಂದ್ರದ ಮುಂದೆ ಜಮಾಯಿಸಿದ ಅಪಾರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವಆಚರಿಸಿದರು.

ರೈತರ ಪರವಾಗಿ ಕೆಲಸ ಮಾಡುವೆ: ನೂತನ ಅಧ್ಯಕ್ಷರ ಭರವಸೆ
ಕೋಲಾರ: ರೈತರ ಪರವಾಗಿ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿದೆ, ಈ ಅವಕಾಶವನ್ನು ಬಳಸಿಕೊಂಡು ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರಿಗೆ ಸಲ್ಲಬೇಕಾದ ಸವಲತ್ತುಗಳನ್ನು ತಲುಪಿಸಲು ರೈತ ಸೇವಕನಾಗಿ ಕಾರ್ಯನಿರ್ವಹಿಸುವುದಾಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಸ್ ನಿಯಮಿತದ ನೂತನ ಅಧ್ಯಕ್ಷ ಎಂ.ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಸಿ ಬ್ಯಾಂಕ್ ರೈತರ ಬ್ಯಾಂಕ್ ಆಗಿದ್ದರೂ ಸಹ ರೈತರಿಗೆ ಯಾವುದೇ ರೀತಿಯ ಸಹಕಾರಿಯಾಗಿರಲಿಲ್ಲ, ಮುಂದಿನ ದಿನಗಳಲ್ಲಿ ರೈತರಿಗೆ ಸರ್ಕಾರದಿಂದ ದೊರೆಯುತ್ತಿರುವ ಶೂನ್ಯ ಮತ್ತು ಶೇ.3ರ ಬಡ್ಡಿ ದರದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರಿಗೆ ಸಾಲ ದೊರೆಯುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು. 13 ವರ್ಷಗಳ ನಂತರ ಡಿಸಿಸಿ ಬ್ಯಾಂಕ್‌ಗೆ ಚುನಾವಣೆ ನಡೆದಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ರೀತಿಯ ಕಳಂಕ ಬಾರದಂತೆ ಶಕ್ತಿಮೀರಿ ರೈತರಿಗೆ ಅನುಕೂಲವಾಗುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದ ಅವರು, ತಮ್ಮ ಆಯ್ಕೆಗೆ ಸಹಕರಿಸಿದ ಕೇಂದ್ರ ಸಚಿವರಾದ ಕೆ.ಎಚ್. ಮುನಿಯಪ್ಪ, ವೀರಪ್ಪ ಮೊಯ್ಲಿ, ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಅನಿಲ್ ಕುಮಾರ್ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.