ಉಪ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ
ಚಿಕ್ಕಬಳ್ಳಾಪುರ: ಭೂ ಪರಿಹಾರ ಧನದ ಚೆಕ್ ನೀಡಲು 50 ಸಾವಿರ ರು. ಲಂಚಕ್ಕಾಗಿ ಪೀಡಿಸಿದ ಉಪ ತಹಸೀಲ್ದಾರ್ ಸಾಕ್ಷಿ ಸಮೇತ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಆರೋಪಿ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಉಪ ತಹಸೀಲ್ದಾರ್ ವೆಂಕಟೇಶ ಮೂರ್ತಿ(42) ದೂರುದಾರ ಚಿಕ್ಕಬಳ್ಳಾಪುರ ನಗರದ ಕಾರ್ಖಾನೆ ಪೇಟೆ ನಿವಾಸಿ ಕೇಶವ. ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ಕೇಶವರವರ 12 ಗುಂಟೆ ಜಮೀನನ್ನು ರೈಲ್ವೆ ಇಲಾಖೆ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ 6.98 ಸಾವಿರ ರು.ಪರಿಹಾರ ಬಿಡುಗಡೆ ಮಾಡಲಾಗಿತ್ತು. ಈ ನಡುವೆ ಪರಿಹಾರದ ಚೆಕ್ ನೀಡಲು ಸತಾಯಿಸುತ್ತಿದ್ದ ವೆಂಕಟೇಶ್ ಮೂರ್ತಿ ಪರಿಹಾರದಲ್ಲಿ ಶೇ.8 ರಷ್ಟು ಕಮೀಷನ್ ನೀಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಕೊನೆಗೆ ಇದರಿಂದ ಬೇಸತ್ತ ಕೇಶವ ಸ್ಥಳೀಯ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತರು ದೂರುದಾರನಿಗೆ ಲಂಚ ನೀಡಲು ಹೇಳಿ ಹಣ ಕೊಟ್ಟು ಕಳುಹಿಸಿದ್ದಾರೆ. ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪೂರ್ವ ನಿರ್ಧಾರಿತ ಯೋಜನೆಯಂತೆ ಕೇಶವ ಆರೋಪಿ ಕೇಳಿದಂತೆ ಲಂಚದ ಹಣ ನೀಡಲು ಮುಂದಾಗಿದ್ದು ಮೊದಲೇ ಹಣಕ್ಕಾಗಿ ಕಾಯುತ್ತಿದ್ದ ವೆಂಕಟೇಶ್ ಮೂರ್ತಿ ಲಂಚ ಪಡೆದು ತೆರಳಲು ಮುಂದಾಗುತ್ತಿದ್ದಂತೆ ಲೋಕಾಯುಕ್ತರು ಆರೋಪಿಯನ್ನು ಸಾಕ್ಷಿ ಸಮೇತ ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಚಂದ್ರಶೇಖರ್, ಡಿವೈಎಸ್ಪಿ ಬೂಪಯ್ಯ, ಸಬ್ಇನ್ಸ್ಪೆಕ್ಟರ್ ಮಂಜೇಗೌಡ ಮತ್ತು ಸಿಬ್ಬಂದಿ ಆರೋಪಿಯನ್ನು ಕಾರ್ಯಾಚರಣೆಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗ್ರಾಪಂ ಚುನಾವಣೆ; ಜೆಡಿಎಸ್ ಮೇಲುಗೈ
ಚಿಂತಾಮಣಿ: ಗ್ರಾಪಂ ಮರು ಚುನಾವಣೆಯಲ್ಲಿ ಎರಡು ಗ್ರಾಪಂ ಸ್ಥಾನಗಳಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ತಾಲೂಕಿನ ನಂದಿಗಾನಹಳ್ಳಿ ಚುನಾವಣಾ ಕ್ಷೇತ್ರದಿಂದ ಆಂಜಮ್ಮ 567 ಮತ ಪಡೆದು ಹಾಗೂ ಪೆದ್ದೂರು ಗ್ರಾಪಂನ ಕುರಕೋನಪ್ಪಲ್ಲಿ ಗ್ರಾಮದ ಚೆಂಗಮ್ಮ 261 ಮತ ಪಡೆದು ಜಯಶೀಲರಾಗಿದ್ದಾರೆಂದು ಚುನಾವಣಾಧಿಕಾರಿ ವಿಕ್ರಮ್ ಘೋಷಿಸಿದರು.
ಕಳೆದ ಹಲವು ದಿನಗಳ ಹಿಂದೆ ನಂದಿಗಾನಹಳ್ಳಿ ಗ್ರಾಪಂನ ಸುಜಾತ, ಕುರಕೋನಪ್ಪಲ್ಲಿಯ ಚಿಕ್ಕ ಸುಬ್ಬಣ್ಣ ಮೃತಪಟ್ಟ ಕಾರಣ ಮಾ.2 ರಂದು ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ತಾಲೂಕು ದಂಡಾಧಿಕಾರಿಗಳಿಗೆ ಚುನಾವಣೆ ನಡೆಸಲು ಸೂಚಿಸಿದ್ದರು. ಬುಧವಾರ ನಗರದ ತಾಲೂಕು ಕಚೇರಿಯಲ್ಲಿ ಮತ ಎಣಿಕೆ ನಡೆಯಿತು. 2 ಸ್ಥಾನಗಳು ಜೆಡಿಎಸ್ ವಶವಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ನಗರದಲ್ಲಿ ವಿಜಯೋತ್ಸವ ಆಚರಿಸಿದರು.
'ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಪಣ'ಟೇಕಲ್: ಮಾಲೂರು ತಾಲೂಕಿನ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಪಣ ತೋಡುವುದಾಗಿ ಶಾಸಕ ಕೆ.ಎಸ್. ಮಂಜುನಾಥಗೌಡ ನುಡಿದರು.
ಅವರು ದೊಡ್ಡನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಉಚಿತ ಸೈಕಲ್ ವಿತರಿಸಿ ಮಾತನಾಡುತ್ತಿದ್ದರು.
ಹಲವಾರು ಶಾಲೆಗಳಲ್ಲಿ ಮಕ್ಕಳಿಗೆ ಮೂಲ ಸೌಕರ್ಯಗಳು ಕಡಿಮೆ ಇದ್ದು ಆದಷ್ಟೂ ಬೇಗ ಅದನ್ನು ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಮಾತನಾಡಿ ಗಡಿಭಾಗದ ಶಾಲೆ ಇದಾಗಿದ್ದು ಉತ್ತಮ ಫಲಿತಾಂಶ ನೀಡುತ್ತಾ ಬರುತ್ತಿದೆ ಎಂದರು.
ಮುಖಂಡರಾದ ಬಿ.ಜಿ. ಮುನಿಶಾಮಿಗೌಡ, ಕ್ಷೇತ್ರೇನಹಳ್ಳಿ ವೆಂಕಟೇಶ್, ಎಸ್.ಜಿ. ರಾಮಮೂರ್ತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಗೋವಿಂದಪ್ಪ, ಸದಸ್ಯರಾದ ನಂಜುಂಡಪ್ಪ, ವೆಂಕಟಸ್ವಾಮಿ, ಪ್ರಾಂಶುಪಾಲರಾದ ಬಾಲಾಜಿ ಸಿಂಗ್, ಸಹಶಿಕ್ಷಕರಾದ ವೆಂಕಟೇಶ್ ಎಂ. ಜಿ.ಟಿ. ರಾಮಚಂದ್ರಪ್ಪ, ಕಾರ್ತೀಕ್, ಅಮರಾವತಿ, ಚೈತ್ರ ಉಪಸ್ಥಿತರಿದ್ದರು.
ಪರಿಸರ ಉಳಿಸಿ, ಆರೋಗ್ಯ ಬೆಳೆಸಿ
ಗುಡಿಬಂಡೆ: ಜಾಗತೀಕರಣದ ಹೆಸರಿನಲ್ಲಿ ಮನುಷ್ಯ ಪರಿಸರ ನಾಶ ಮಾಡುತ್ತಿದ್ದಾನೆ. ಇದರಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಪರಿಸರ ಉಳಿಸುವುದರಿಂದ ಮುಂದಿನ ದಿನಗಳಲ್ಲಿ ಆರೋಗ್ಯಕರ ವಾತಾವರಣ ಲಭಿಸುತ್ತದೆ ಎಂದು ರಾಜ್ಯ ಪರಿಸರ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನೀರಜ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮನುಷ್ಯನಲ್ಲಿ ದುರಾಸೆ ಹೆಚ್ಚುತ್ತಿದ್ದು, ತನ್ನ ಸುತ್ತಮುತ್ತಲಿನ ಪರಿಸರ ನಾಶಮಾಡುತ್ತಿದ್ದಾನೆ. ಇದರಿಂದ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ಅನೇಕರು ಸಾವನ್ನಪ್ಪುತ್ತಿದ್ದಾರೆ ಎಂದರು.
ಸ್ವಚ್ಛತೆಗೆ ಗಮನ ನೀಡದ ಚಿಂತಾಮಣಿ ನಗರಸಭೆ: ಸಾರ್ವಜನಿಕರ ಆರೋಪ
ಚಿಂತಾಮಣಿ: ನಗರ ಸ್ವಚ್ಛವಾಗಿಡಲು ಸರ್ಕಾರ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕಂಟೈನರ್ಗಳನ್ನು ಇಟ್ಟಿದ್ದರೂ ಹಲವು ಪುಟ್ಪಾತ್ ವ್ಯಾಪಾರಿಗಳು ಅವನ್ನು ಉಪಯೋಗಿಸದೆ ರಸ್ತೆಬದಿಯಲ್ಲೇ ಕಸ ಹಾಕುತ್ತಿರುವುದರಿಂದ ಗೊಬ್ಬುನಾತ ಹೊಡೆಯುತ್ತಿದೆ. ಇದರಿಂದ ಜನರು ಸುಗಮವಾಗಿ ಸಂಚರಿಸಲು ತೊಂದರೆ ಆಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಮೌನವಾಗಿದ್ದಾರೆ. ನಗರದ ಹಳೇ ಸಂತೆ ಮೈದಾನ, ಹರಿಹರೇಶ್ವರಸ್ವಾಮಿ ದೇವಸ್ಥಾನ ಹಿಂಭಾಗ, ಗಜಾನನ ವೃತ್ತ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ನಗಸಭೆ ವತಿಯಿಂದ ಕಂಟೈನರ್ಗಳನ್ನು ಇಟ್ಟಿದ್ದರೂ ಇದನ್ನು ಬಳಿಸದ ಜನರು ರಸ್ತೆಯಲ್ಲಿಯೇ ಕಸ ಹಾಕುತ್ತಿರುವುದರಿಂದ ಹಂದಿ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ ಕಂಟೈನರ್ಗಳು ನಾಶವಾಗುತ್ತಿವೆ. ನಗರಸಭೆ ಪರಿಸರ ಅಧಿಕಾರಿಗಳು ಸ್ವಚ್ಛತೆ ಪಾಲನೆ ಮಾಡುವಲ್ಲಿ ವಿಫಲಗೊಂಡಿದ್ದಾರೆಂದು ನಾಗರಿಕರು ಆರೋಪಿಸಿದ್ದಾರೆ.
ರಾಮಲಿಂಗೇಶ್ವರ ರಥೋತ್ಸವ
ಕೆಜಿಎಫ್: ಯಾದವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಸ್ಥಾನದ 51ನೇ ಬ್ರಹ್ಮರಥೋತ್ಸವ ವಿಜೃಂಭಣೆಯಂದ ಆಚರಿಸಲಾಯಿತು.ವಸಂತೋತ್ಸವ ಹಾಗೂ ಚಂದ್ರಪ್ರಭೋತ್ಸವ ಪ್ರಯುಕ್ತ ಶ್ರೀ ರಾಧಕೃಷ್ಣ ಮತ್ತು ರಾಮಲಿಂಗೇಶ್ವರಸ್ವಾಮಿ ದೇವರ ಪಲ್ಲಕಿಯ ಮೆರವಣಿಗೆ ಉತ್ಸವ ನಡೆಸಲಾಯಿತು. ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ, ಭಕ್ತಿ ಸಂಕೀರ್ತನೆ, ಗಣಪತಿಹೋಮ, ತೀರ್ಥಪ್ರಸಾದ ವಿನಿಯೋಗ, ಅನ್ನಸಂತಾರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ಯಾದವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿತ್ತು.ಬ್ರಹ್ಮರಥೋತ್ಸವದಲ್ಲಿ ಯಾದವ ಸಂಘದ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಗೋಕುಲ ನಾರಾಯಣಸ್ವಾಮಿ, ಜಿಪಂ ಸದಸ್ಯೆ ಸೀಮೋಲ್ ಮೋಹನ್ಮೂರ್ತಿ, ಬೆಂಗಳೂರಿನ ಅಂತರಿಕ ಭದ್ರತೆ ರಕ್ಷಣಾಧಿಕಾರಿ ರಾಮಕೃಷ್ಣಪ್ರಸಾದ್, ಸರ್ಕಾರಿ ದಂತ ಕಾಲೇಜಿನ ವೈದ್ಯ ಡಾ. ರಾಮಚಂದ್ರಪ್ರಸಾದ್, ಬೌರಿಂಗ್ ಆಸ್ಪತ್ರೆಯ ಡಾ. ಪ್ರಸನ್ನಕುಮಾರ್, ದೇವರಾಜ್ ಅರಸ್ವೆ, ಡಾ.ಹರೀಶ್ ಇದ್ದರು.
ಮಾದಿಗ ಸಮುದಾಯ ವಿದ್ಯಾವಂತರಾಗಬೇಕು
ಶ್ರೀನಿವಾಸಪುರ: ಸರ್ಕಾರದದಿಂದ ದೊರೆಯುವ ಎಲ್ಲಾ ಸೌವಲತ್ತುಗಳ ಬಗ್ಗೆ ಮಾಹಿತಿ ತಿಳಿಯಲು ಮತ್ತು ಸಂಘಟಿತರಾಗಲು ಮಾದಿಗ ಸಮುದಾಯ ಮಹಿಳೆಯರು ವಿದ್ಯಾವಂತರಾಗಬೇಕೆಂದು ಕರ್ನಾಟಕ ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಎಚ್. ವೆಂಕಟೇಶ್ ಕರೆ ನೀಡಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಾದಿಗ ದಂಡೋರದ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಸಮಿತಿ ಸಮಾರಂಭದಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರತ್ಯೇಕ ಮಾದಿಗರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎ.ಜೆ. ಸದಾಶಿವಆಯೋಗ ವರದಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಸಾಹುಕಾರ್ ಶಂಕರಪ್ಪ, ಪದ್ಮಮ್ಮ, ಅವಲಕುಪ್ಪ, ಶಂಕರಪ್ಪ ಮಾತನಾಡಿದರು. ಹೂಹಳ್ಳಿ ಕೃಷ್ಣಪ್ಪ, ಗುರುಮೂರ್ತಿ, ಕದಿರಪ್ಪ ಇದ್ದರು.
ವಿದ್ಯಾರ್ಥಿಗಳು ಜ್ಞಾನದ ಹಕ್ಕಿಗಳಾಗಿ
ಚಿಂತಾಮಣಿ: ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾಗದೆ ಜ್ಞಾನದ ಹಕ್ಕಿಗಳಾಗಬೇಕೆಂದು ಬೆಸ್ಟ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಸೈಯದ್ ನೂರುದ್ದೀನ್ ತಿಳಿಸಿದರು. ನಗರದ ಗಜಾನನ ವೃತ್ತದಲ್ಲಿರುವ ನ್ಯೂ ಯುವಶಕ್ತಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜೀವನ ಕೌಶಲ್ಯ ಕಾರ್ಯಗಾರದಲ್ಲಿ ಮಾತನಾಡಿ, ಜನರು ಧನಾತ್ಮಕವಾಗಿ ಚಿಂತನೆ ಮಾಡಿದರೆ ಯಶಸ್ಸು ಗಳಿಸಲು ಸಾಧ್ಯ ಎಂದರು.ಉತ್ತಮ ಆಲೋಚನೆಗಳಿಂದ ಮನಸ್ಸು ಪ್ರಶಾಂತವಾಗುವುದು. ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಪೂರ್ವ ಸಿದ್ಧತೆ ಅವಶ್ಯಕವಾಗಿದ್ದು, ಎಲ್ಲರೂ ಸಮಯ ಸದುಪಯೋಗ ಪಡಿಸಿಕೊಂಡು ಕ್ರಿಯಾಶೀಲಾರಾಗಿರಬೇಕೆಂದು ಸಲಹೆ ನೀಡಿದರು. ಲೇಖಕ ಕೆ.ಎಸ್. ನೂರುಲ್ಲಾ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಮೂಡಿರುವ ಆತಂಕಗಳು ದೂರವಾಗಿ ಆತ್ಮವಿಶ್ವಾಸ ಮೂಡುವುದು. ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಟ್ಟು ಓದಿದರೆ ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವೆಂದು ತಿಳಿಸಿದರು. ಕಂಪ್ಯೂಟರ್ ಕೇಂದ್ರದ ವ್ಯವಸ್ಥಾಪಕ ಎನ್. ಕೃಷ್ಣ ಹಾಗೂ ಕಂಪ್ಯೂಟರ್ ಶಿಕ್ಷಕಿ ರಶ್ಮಿ ಉಪಸ್ಥಿತರಿದ್ದರು.
ವಿಜ್ಞಾನ ಮೇಳ
ಗೌರಿಬಿದನೂರು: ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರು, ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೃಹತ್ ವಿಜ್ಞಾನ ಮೇಳ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ರವರು ನೆರವೇರಿಸಿದರು. ನಂತರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕುರಿತು ಮಾಹಿತಿ ನೀಡಿದರು. ಅಗ್ನಿ ಶಾಮಕದಳದ ಠಾಣಾಧಿಕಾರಿ ಮಂಜುನಾಥ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಬಗ್ಗೆ ಜಾಗೃತಿ ಮೂಡಿಸಿದರು. 24 ಶಾಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳು ಭಾಗವಹಿಸಿ ವಿಜ್ಞಾನದ ಮಾದರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಗ್ರಾಪಂ ಮರು ಚುನಾವಣೆ; ಕಾಂಗ್ರೆಸ್ ಗೆಲುವು
ಬಂಗಾರಪೇಟೆ: ತಾಲೂಕಿನ ಎರಡು ಪಂಚಾಯ್ತಿಗಳಲ್ಲಿ ತೆರವಾಗಿದ್ದ ಮೂರು ಸ್ಥಾನಗಳಿಗೆ ಭಾನುವಾರ ನಡೆದ ಮರು ಚುನಾವಣೆ ಫಲಿತಾಂಶ ಬುಧವಾರ ಪ್ರಕಟಿತವಾಗಿದ್ದು ಮೂರು ಸ್ಥಾನಗಳೂ ಕಾಂಗ್ರೆಸ್ ಪಾಲಾಗಿವೆ.
ಸೂಲಿಕುಂಟೆ ಪಂಚಾಯಿತಿ ಸಿದ್ದನಹಳ್ಳಿ ಕ್ಷೇತ್ರದ ಎರಡು ಸ್ಥಾನ, ಹುಲಿಬೆಲೆ ಪಂಚಾಯಿತಿ ತೊರಗನದೊಡ್ಡಿ ಕ್ಷೇತ್ರದ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕ್ರಮವಾಗಿ ಆರ್. ಸುರೇಶ್, ಎಸ್. ಮಂಜುನಾಥ, ಮುನಿವೆಂಕಟಪ್ಪ ಆಯ್ಕೆಯಾಗಿದ್ದಾರೆ. ಸೂಲಿಕುಂಟೆ ಪಂಚಾಯಿತಿಯ ಸಿದ್ದನಹಳ್ಳಿ ಕ್ಷೇತ್ರದ ಎಸ್. ಮಂಜುನಾಥ 225 ಮತ ಪಡೆದು ಪ್ರತಿಸ್ಪರ್ಧಿ ಮುನಿವೆಂಕಟಪ್ಪ ಅವರ ವಿರುದ್ಧ 15 ಮತ ಅಂತರದಲ್ಲಿ ಜಯಗಳಿಸಿದರು. ಮತ್ತೊಬ್ಬ ಸದಸ್ಯ ಆರ್. ಸುರೇಶ್ ಅವಿರೋಧವಾಗಿ ಆಯ್ಕೆಯಾದರು.
ಹುಲಿಬೆಲೆ ಪಂಚಾಯಿತಿಯ ತೊರಗನ ದೊಡ್ಡಿ ಕ್ಷೇತ್ರದ ಮುನಿವೆಂಕಟಪ್ಪ 185 ಮತ ಪಡೆದು ಪ್ರತಿಸ್ಪರ್ಧಿ ವೆಂಕಟೇಶಪ್ಪ ಅವರನ್ನು 42 ಮತಗಳ ಅಂತರದಿಂದ ಪರಾಭವಗೊಳಿಸಿದರು. ಕಳೆದ ಭಾನುವಾರ ಚುನಾವಣೆ ನಡೆದಿದ್ದು, ಬುಧವಾರ ಫಲಿತಾಶ ಪ್ರಕಟಿಸಲಾಯಿತು. ಚುನಾವಣಾಧಿಕಾರಿಗಳಾಗಿ ಕೆ.ಬಿ. ಮೋಹನ್, ಕೆ. ನಾಗಾನಂದ, ಹನುಮಂತ ವಗ್ಗರ್, ಮೃತ್ಯಂಜಯಪ್ಪ ಕಾರ್ಯ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

