ಕೋಲಾರ

ಭ್ರಷ್ಟಾಚಾರವೇ ಕೇಂದ್ರದ ಕೊಡುಗೆ

Published On :

ಚಿಕ್ಕಬಳ್ಳಾಪುರ: ಕೇಂದ್ರ ಯುಪಿಎ ಸರ್ಕಾರ ಆಡಳಿತಾವಧಿಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ, ಹಗರಣಗಳಿಗೆ ರೋಸಿ ಹೋಗಿರುವ ದೇಶದ ಜನರು ರಾಷ್ಟ್ರದ ಅಭಿವೃದ್ಧಿಗೆ ನರೇಂದ್ರ ಮೋದಿರವರನ್ನು ಪ್ರಧಾನಿಯಾಗಿಸುವ ಹಂಬಲ ಹೊಂದಿದ್ದಾರೆ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬಾದಗನಹಳ್ಳಿಯಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆ ಮಹಾಯುದ್ದ ಹೊಸ ಇತಿಹಾಸವನ್ನು ಬರೆಯಲಿದೆ. ಗುಜರಾತ್ ರಾಷ್ಟ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಎಲ್ಲರ ಗಮನ ಸೆಳೆದಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿಸಲು ಬಿಜೆಪಿಗೆ ಹೆಚ್ಚಿಗೆ ಬೆಂಬಲ ವ್ಯಕ್ತವಾಗಲಿದ್ದು ಕೇಂದ್ರ ಯುಪಿಎ ಸರ್ಕಾರವನ್ನು ನಡುಗಿಸುವ ರೀತಿಯಲ್ಲಿ ದೇಶದೆಲ್ಲೆಡೆ ನರೇಂದ್ರ ಮೋದಿ ಅಲೆ ಇರುವುದು ದೃಢಪಡುತ್ತದೆ ಎಂದು ತಿಳಿಸಿದರು.
ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ, ಹಗರಣಗಳು ನಡೆದು ಕೋಟ್ಯಂತರ ರು. ಹಣ ಲೂಟಿಯಾಗಿದೆ. 2ಜಿ ಹಗರಣ, ಆದರ್ಶ ಕಟ್ಟಡ ಹಗರಣ, ಕಾಮನ್ ವೆಲ್ತ್ ಕ್ರೀಡಾಕೂಟ, ಕಲ್ಲಿದ್ದಲು ಹಗರಣ ಸೇರಿದಂತೆ ಅನೇಕ ಹಗರಣಗಳು ಕಾಂಗ್ರೆಸ್ ಸರ್ಕಾರದ ಬಹುಮುಖ್ಯವಾದ ಕೊಡುಗೆಗಳು ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಸ್ವಾರ್ಥ ರಾಜಕಾರಣ ಮುಂದುವರಿಸಿದ್ದಾರೆ. ಎತ್ತಿನಹೊಳೆ ಯೋಜನೆಯ ಮೂಲಕ ಈ ಭಾಗಕ್ಕೆ ಕುಡಿಯುವ ನೀರನ್ನು ದೊರಕಿಸಿಕೊಟ್ಟೇ ಸಾಯುವುದಾಗಿ ಹೇಳಿ ಜನರ ಗಮನ ಸೆಳೆಯುವ ಗಿಮಿಕ್ ಮಾಡುತ್ತಿದ್ದಾರೆ. ಇವರ ಕುತಂತ್ರಕ್ಕೆ ಜನ ಮಾರು ಹೋಗಬಾರದು ಎಂದ ಅವರು, ಇಲ್ಲಿ ಜನರು ಅಭಿವೃದ್ಧಿ ಭರವಸೆಯ ಹಿನ್ನೆಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೊಯ್ಲಿರನ್ನು ಗೆಲ್ಲಿಸಿದರು. ಆದರೆ, ಅವರು ಏನೂ ಮಾಡಿದರು. ಚುನಾವಣೆ ಬಂದಿರುವ ಕಾರಣ ಮತ್ತೆ ಎಚ್ಚೆತ್ತುಕೊಂಡಿದ್ದಾರಷ್ಟೇ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಕಾಂಗ್ರೆಸ್ ತೋರುವ ಸುಳ್ಳು ಆಮಿಷಗಳಿಗೆ ಜನ ತಕ್ಕ ಪಾಠ ಕಲಿಸಬೇಕೆಂದ ಅವರು, ಯುಪಿಎ ಸರ್ಕಾರದ ದುರಾಡಳಿತವನ್ನು ಮತ್ತು ನರೇಂದ್ರ ಮೋದಿಯವರ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಿ ಬಿಜೆಪಿಗೆ ಹೆಚ್ಚಿಗೆ ಮತ ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ರಾಜಣ್ಣ ಮಾತನಾಡಿ, ದೇಶದೆಲ್ಲೆಡೆ ನರೇಂದ್ರ ಮೋದಿ ಪರವಾಗಿಯೇ ಅಲೆ ಇದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ಮಾರೇಗೌಡ, ಶ್ರೀನಿವಾಸ್ ರೆಡ್ಡಿ, ಅಗಲಗುರ್ಕಿ ಚಂದ್ರಶೇಖರ್, ಆರ್. ಶ್ರೀನಿವಾಸ್, ನವೀನ್, ಭರತ್, ವರದರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.