ಕೋಲಾರ

ರಾಷ್ಟ್ರೀಯ ಬಂಡವಾಳ ಉತ್ಪಾದನಾ ವಲಯ ಸ್ಥಾಪನೆ: ಮುಖ್ಯಮಂತ್ರಿ

Published On :

ಕೋಲಾರ: ಲೋಕಸಭಾ ಚುನಾವಣೆ ವೇಳಾ ಪಟ್ಟಿ ಪ್ರಕಟಣೆಗೆ ಅರ್ಧ ಗಂಟೆ ಮುಂಚಿತವಾಗಿ ಶ್ರೀನಿವಾಸಪುರದಲ್ಲಿ ರೇಲ್ವೆ ಕೋಚ್ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮೂರು ಹೊಸ ಯೋಜನೆಗಳನ್ನು ಪ್ರಕಟಿಸುವ ಮೂಲಕ ಮತದಾರರನ್ನು ಓಲೈಸುವುದಕ್ಕೆ ಮುಂದಾಗಿದ್ದಾರೆ.
ಶ್ರೀನಿವಾಸಪುರ ತಾಲೂಕಿನಲ್ಲಿ ಪ್ರಸ್ಥಾಪಿತ ರೇಲ್ವೆ ಕೋಚ್ ಕಾರ್ಖಾನೆ ಆವರಣದಲ್ಲಿ ರೇಲ್ವೆ ಕೋಚ್ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಲು ಬುಧವಾರ ಬೆಳಿಗ್ಗೆ 9.56 ಗಂಟೆಗೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್‌ನಲ್ಲಿ ಆಗಮಿಸಿದ್ದ ಅವರು, ಮುಳಬಾಗಿಲು, ಶಿಡ್ಲಘಟ್ಟ ಹಾಗೂ ಚಿಂತಾಮಣಿಗೆ ಮೂರು ಯೋಜನೆಗಳನ್ನು ಪ್ರಕಟಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆಯಿಂದ ಬಚಾವ್ ಆಗಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ವಿ.ಎಸ್. ಸಂಪತ್ ಅವರು ಲೋಕಸಭಾ ಚುನಾವಣೆಗೆ ವೇಳಾ ಪಟ್ಟಿ ಪ್ರಕಟಿಸಲು 10.30ಕ್ಕೆ ಪತ್ರಿಕಾಗೋಷ್ಠಿ ಏರ್ಪಡಿಸಿರುವುದನ್ನು ಅರಿತ ಮುಖ್ಯಮಂತ್ರಿಗಳು ತರಾತುರಿಯಲ್ಲಿ ರೇಲ್ವೆ ಕೋಚ್‌ಗೆ ಶಂಕುಸ್ಥಾಪನೆ ನೆರವೇರಿಸಿ ಯೋಜನೆಯ ಉದ್ದೇಶದ ಬಗ್ಗೆ ವಿವರಿಸಿದರಲ್ಲದೆ, ಮುಳಬಾಗಿಲು ತಾಲೂಕಿನಲ್ಲಿ ರಾಷ್ಟ್ರೀಯ ಬಂಡವಾಳ ಉತ್ಪಾದನಾ ವಲಯ ಸ್ಥಾಪನೆಗ ಕೇಂದ್ರ ಸರ್ಕಾರ ಮಂಗಳವಾರ ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಪ್ರಕಟಿಸಿದರು.
ಈ ಯೋಜನೆಗೆ 12,500 ಎಕರೆ ಭೂಮಿ ಬೇಕಾಗಿದ್ದು ರಾಜ್ಯ ಸರ್ಕಾರ ಉದ್ದೇಶಿತ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಮುಳಬಾಗಿಲು ತಾಲೂಕಿನಲ್ಲಿ ರಾಷ್ಟ್ರೀಯ ಬಂಡವಾಳ ಉತ್ಪಾದನಾ ವಲಯ ಸ್ಥಾಪನೆಯಾದಲ್ಲಿ ಕೋಲಾರ ಜಿಲ್ಲೆಯು ಕೈಗಾರಿಕೆ ಕೇಂದ್ರವಾಗಿ ಬೆಳೆಯಲು ಅನುಕೂಲವಾಗುತ್ತದೆ, ಆರ್ಥಿಕವಾಗಿಯೂ ಜಿಲ್ಲೆ ಅಭಿವೃದ್ಧಿಯಾಗುವುದರಿಂದ ಈ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ತಾತ್ವಿಕವಾಗಿ ನೀಡಿದ್ದು ಅದಷ್ಟು ಬೇಗನೆ ಮುಂದಿನ ಕಾರ್ಯಕ್ರಮ ರೂಪಿಸುವುದಾಗಿ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ 100 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಹಾಗೂ ಚಿಂತಾಮಣಿಯಲ್ಲಿ 50 ಎಕರೆ ಪ್ರದೇಶದಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗುವುದು, ಬೆಂಗಳೂರು-ಚೆನ್ನೈ ನಡುವೆ ಎಕ್ಸ್‌ಪ್ರೆಸ್ ಕಾರಿಡಾರ್ ಆಗುವುದರಿಂದ ಬಂಗಾರಪೇಟೆ, ಮಾಲೂರು, ಕೆಜಿಎಫ್ ಸೇರಿದಂತೆ ಅನೇಕ ರಡೆ, ಕೈಗಾರಿಕೆಗಳು, ವಸತಿ ಸಮುಚ್ಚಯಗಳು ತಲೆ ಎತ್ತುವುದರಿಂದ ಮುಂದಿನ ದಿನಗಳಲ್ಲಿ ಕೋಲಾರದ ಚಿತ್ರಣ ಸಂಪೂರ್ಣ ಬದಲಾವಣೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಮುಳಬಾಗಿಲು, ಚಿಂತಾಮಣಿ, ಶಿಡ್ಲಘಟ್ಟ ಈ ಮೂರು ವಿಧಾನಸಭಾ ಕ್ಷೇತ್ರಗಳು ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಮೂರು ಪ್ರಮುಖ ಯೋಜನೆಗಳು ಏ.17ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ ವರದಾನವಾಗುತ್ತದೋ ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.