ಹೋರಾಟಗಾರರ ದಮನಕ್ಕೆ ಡಿಸಿ ಹುನ್ನಾರ
ಶಿಡ್ಲಘಟ್ಟ: ಪೊಲೀಸರನ್ನು ಛೂ ಬಿಟ್ಟು ಹೋರಾಟಗಾರರನ್ನು ಮಣಿಸಲು ಜಿಲ್ಲಾಧಿಕಾರಿಗಳು ಯತ್ನಿಸುತ್ತಿದ್ದಾರೆಂದು ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಆರೋಪಿಸಿದರು.
ನ್ಯಾಯ ಒದಗಿಸುವಂತೆ ಕೋರಿದವರ ಮೇಲೆಯೇ ಸುಳ್ಳು ಮೊಕದ್ದಮೆ ದಾಖಲಿಸಿರುವ ಪುರಠಾಣೆ ಪಿಎಸೈ ಪುರುಶೋತ್ತಮ್ ವಿರುದ್ಧ ಸಿಐಟಿಯು, ಜೆಎಂಎಸ್, ಕೆಪಿಆರ್ಎಸ್, ಡಿವೈಎಫ್ಐ, ಎಸ್ಎಫ್ಐ, ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ವೃತ್ತ ನಿರೀಕ್ಷಕರ ಕಚೇರಿ ಮುಂಭಾಗ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಜಿಲ್ಲೆಯಾದ್ಯಂತ ಹೋರಾಟಗಾರರ ಹಾಗೂ ವಿವಿಧ ಸಂಘಟನೆಗಳ ಮುಖಂಡರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಸಂಸ್ಕೃತಿ ಆರಂಭವಾಗಿದ್ದು ಇದಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಡಾ. ವಿಶಾಲ್ ನಡೆಸುತ್ತಿರುವ ತುಘಲಕ್ ದರ್ಬಾರ್ ಕಾರಣ ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಿಂದಿನಿಂದಲೂ ಹೋರಾಟಗಳಿಗೆ ಹೆಸರುವಾಸಿಯಾಗಿದ್ದು, ಈ ನೆಲದ ಚರಿತ್ರೆಯನ್ನು ಜಿಲ್ಲಾಧಿಕಾರಿಗಳು ಮೊದಲು ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಕೇಳುವ ಹಕ್ಕಿದೆ. ನಾಗರಿಕರು ಹಕ್ಕನ್ನು ಕಸಿಯಲು ಹಾಗೂ ಹೋರಾಟಗಳನ್ನು ದಮನ ಮಾಡಲು ಪೊಲೀಸರನ್ನು ಛೂ ಬಿಟ್ಟು ಸುಳ್ಳು ಮೊಕದ್ದಮೆ ದಾಖಲಿಸಿದ ಮಾತ್ರಕ್ಕೆ ಹೋರಾಟಗಳನ್ನು ಮಟ್ಟ ಹಾಕಲಾಗುವುದಿಲ್ಲ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷೆ ಸಾವಿತ್ರಮ್ಮ ಮಾತನಾಡಿ, ಪಟ್ಟಣದ ರೇವತಿ ಎಂಬರ ಸಾವಿನ ಹಿನ್ನೆಲೆಯಲ್ಲಿ ಕಳೆದ ಫೆ.13 ರಂದು ವಿವಿಧ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಪುರ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವ ಪುರಠಾಣೆ ಪಿಎಸೈ ಪುರುಶೋತ್ತಮ್ ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕೆಂದರು.
ಮಳ್ಳೂರು ಶಿವಣ್ಣ ಮಾತನಾಡಿ, ನ್ಯಾಯ ಕೇಳಿದವರ ವಿರುದ್ಧವೇ ಪೊಲೀಸರು ಮೊಕದ್ದಮೆ ದಾಖಲಿಸಿದರೆ ಯಾರ ಬಳಿ ನ್ಯಾಯ ಕೇಳಬೇಕು. ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ಅವರೊಡನೆ ಶಾಮೀಲಾಗಿ ನೊಂದವರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗುವ ಪೊಲೀಸರಿಂದ ಸಾಮಾನ್ಯ ಜನತೆ ಏನನ್ನು ನಿರೀಕ್ಷಿಸಬಲ್ಲರು ಎಂದು ಪ್ರಶ್ನಿಸಿದರು.
ಪುರಠಾಣೆ ಪಿಎಸೈ ಪುರುಶೋತ್ತಮ್ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವಿವಿಧ ಸಂಘಟನೆಗಳ ಮುಖಂಡರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದು, ನಾಗರಿಕರ ಹೋರಾಟದ ಹಕ್ಕನ್ನು ದಮನ ಮಾಡಲು ಹೊರಟಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಡಿವೈಎಸ್ಪಿ ಸಣ್ಣತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಸಣ್ಣತಿಮ್ಮಪ್ಪ, ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿರುವ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

