ಕೋಲಾರ

ಜಾಹೀರಾತು ತೆರವುಗೊಳಿಸಲು ಡಿಸಿ ಸೂಚನೆ

Published On :

ಕೋಲಾರ: ಲೋಕಸಭಾ ಚುನಾವಣೆಗೆ ವೇಳಾ ಪಟ್ಟಿ ಹಾಗೂ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಧಿಕಾರಿ ವರ್ಗದವರು ಚುನಾವಣೆ ಪ್ರತ್ರಿಯೆ ಮುಗಿಯುವವರೆಗೆ ರಜೆ ಪಡೆಯಬಾರದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡಿ.ಕೆ. ರವಿ ತಾಕೀತು ಮಾಡಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಅವರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ತಹಸೀಲ್ದಾರ್‌ಗಳೊಂದಿಗೆ ಪ್ರಥಮ ಸಭೆ ನಡೆಸಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ (ಶೇ.90)ಕೋಲಾರ ಜಿಲ್ಲೆ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದು ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮೊದಲನೇ ಸ್ಥಾನಕ್ಕೆ ಜಿಲ್ಲೆಯನ್ನು ಕೊಂಡೊಯ್ಯಬೇಕೆಂದು ತಿಳಿಸಿದರು.
ಚುನಾವಣೆ ಮುಕ್ತವಾಗಿ,ಪಾದರ್ಶಕವಾಗಿ ಹಾಗೂ ಶಾಂತಿಯುತವಾಗಿ ನಡೆಯಲು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಗಮನ ಹರಿಸಬೇಕು. ಏನೇ ಸಮಸ್ಯೆ, ಗೊಂದಲ, ಅನುಮಾನಗಳು ಎದುರಾದರೂ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು.
ಚುನಾವಣಾ ವೀಕ್ಷಕರು, ಸಹಾಯಕ ಚುನಾವಣಾಧಿಕಾರಿಗಳು, ಮತಗಟ್ಟೆ ಮೇಲ್ವಿಚಾರಕರು, ಚುನಾವಣಾ ಸಿಬ್ಬಂದಿ ಹಾಗೂ ನೋಡೆಲ್ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು, ತುರ್ತು ಸರ್ಕಾರಿ ಕೆಲಸಗಳನ್ನು ಹೊರತುಪಡಿಸಿ ಇನ್ನುಳಿದ ಸಮಯವನ್ನು ಲೋಕಸಭಾ ಚುನಾವಣೆಗಾಗಿ ಮೀಸಲಿಟ್ಟು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು,ಅಕ್ರಮಗಳನ್ನು ನಡೆಯದಂತೆ ಎಚ್ಚರವಹಿಸಬೇಕೆಂದು ಹೇಳಿದರು.
ಅಗತ್ಯ ಸೌಕರ್ಯಗಳಿಗೆ ಸೂಚನೆ: ಮತಗಟ್ಟೆಗಳಲ್ಲಿ ಮತದಾನದಂದು ನೀರು, ವಿದ್ಯುತ್, ದೂರವಾಣಿ, ಮತಯಂತ್ರಗಳು ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು, ಅಂಗವಿಕಲರು, ಅಂಧರು ಮತದಾನ ಮಾಡುವುದಕ್ಕೆ ಸಹಾಯವಾಗುವ ರೀತಿಯಲ್ಲಿ ಮತಗಟ್ಟೆಗಳ ಬಳಿ ರ್ಯಾಂಪ್ ವ್ಯವಸ್ಥೆ ಮಾಡಬೇಕು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್, ಗೃಹರಕ್ಷಕ ದಳ ಹಾಗೂ ಚುನಾವಣಾ ಆಯೋಗದಿಂದ ವ್ಯವಸ್ಥೆಯಾಗುವ ಭದ್ರತಾ ಸಿಬ್ಬಂದಿಯನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡು ಯಾವುದೇ ಲೋಪವಿಲ್ಲದಂತೆ ಚುನಾವಣೆ ನಡೆಯುವುದಕ್ಕೆ ಅಧಿಕಾರಿಗಳು ವಿಶೇಷ ಗಮನ ನೀಡಬೇಕೆಂದು ತಿಳಿಸಿದರು.
ಮಾ.9ರಂದು ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ, ಕಡ್ಡಾಯ ಮತದಾನ, ಮಾದರಿ ನೀತಿ ಸಂಹಿತೆಯ ಜಾರಿಗೆ ಸಂಬಂಧಿಸಿದಂತೆ ವಿಶೇಷ ಪ್ರಚಾರಂದೋಲನ ಹಮ್ಮಿಕೊಳ್ಳಬೇಕೆಂದು ತಾಲೂಕು ಚುನಾವಣಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ಪ್ರತಿಯೊಬ್ಬ ಬಿಎಲ್‌ಒಗಳು ತಪ್ಪದೆ ತಮ್ಮ ವ್ಯಾಪ್ತಿಯ ಮನೆಗಳಿಗೆ ಕಡ್‌ಡಾಯವಾಗಿ ಭೇಟಿ ನೀಡಿ ಒಟ್ಟು ಮತದಾರರು ಸಂಖ್ಯೆ, ವರ್ಗಾವಣೆಯಾಗಿರುವವರು, ಬೇರೆಡೆಗೆ ಸ್ಥಳಾಂತರಗೊಂಡಿರುವವರು, ಮತದಾರರಪಟ್ಟಿಯಲ್ಲಿ ಹೆಸರು ಸೇರಿಸದವರ ಹಾಗೂ ಮೃತಪಟ್ಟಿರುವವರ ಸಮಗ್ರ ಮಾಹಿತಿ ಸಂಗ್ರಹಣೆ ಮಾಡಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಹೇಳಿದರು.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅನೇಕ ಮತದಾರರಿಗೆ ಮತಗಟ್ಟೆ ಇರುವ ಪ್ರದೇಶ ಹಾಗೂ ಹೇಗೆ ಮತ ಚಲಾವಣೆ ಮಾಡಬೇಕೆಂಬ ಮಾಹಿತಿ ಇರುವುದಿಲ್ಲ, ಅಧಿಕಾರಿಗಳು ಈ ಬಗ್ಗೆ ಅರಿವು ಮೂಡಿಸಬೇಕು, ಸ್ವೀಪ್ತ್‌ಂಡ, ಸಂಚಾರಿ ಜಾಗೃತ ದಳ, ಚುನಾವಣಾ ವೆಚ್ಚ ಪರಿಶೀನೆಗಾಗಿ ನಿಯೋಜಿಸಲ್ಪಡುವ ಲೆಕ್ಕ ಪರಿಶೋಧನೆ ಸಮಿತಿ, ಹಣಕ್ಕಾಗಿ ಸುದ್ಧಿ ಮಾಡುವವರ ಮೇಲೆ ನಿಗಾ ವಹಿಸಲು ಇರುವ ತಂಡ ಹಾಗೂ ವೀಕ್ಷಕರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಲೋಕಸಭಾ ಚುನಾವಣೆಯು ನ್ಯಾಯ ಸಮ್ಮತವಾಗಿ ನಡೆಯುವಂತೆ ಸಹಕರಿಸಬೇಕೆಂದರು.
ಡಿಸಿ ಹೇಳಿದ್ದು: ಮತದಾರನ್ನು ಒಲಿಸಿಕೊಳ್ಳುವುದಕ್ಕಾಗಿ ಮದ್ಯ, ಹಣ, ಗಿಫ್ಟ್ ಹಂಚಿಕೆ ಮಾಡುವುದನ್ನು ನಿಯಂತ್ರಿಸಬೇಕು. ಸರ್ಕಾರಿ ಜಾಹಿರಾತು ಫಲಕಗಳನ್ನು ಕೂಡಲೇ ತೆರವು ಮಾಡಿಸಬೇಕು. ರಾಜಕೀಯ ಪಕ್ಷಗಳಿಂದ, ಅಭ್ಯರ್ಥಿಗಳ ಕಡೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಪತ್ರ ಅಂಟಿಸುವುದನ್ನು, ಗೋಡೆ ಬರಹ ಬರೆಯುವುದನ್ನು ತಡೆಯಬೇಕು. ಈಗಾಗಲೇ ಯಾರಾದರೂ ಪ್ಲೆಕ್ಸ್, ಗೋಡೆ ಬರಹ, ವಾಲಲ್ಪೋಸ್ಟರ್ಗ್‌ಳನ್ನು ಅಂಟಿಸಿದ್ದಲ್ಲಿ ನಗರಸಭೆ,ಪುರಸಭೆ,ಪಂಚಾಯಿತಿ ಅಧಿಕಾರಿಗಳು ತಕ್ಷಣ ತೆರವು ಮಾಡಿಸಬೇಕು. ಚುನಾವಣಾ ಪ್ರಚಾರಕ್ಕೆ ಕಡ್ಡಾಯವಾಗಿ ಅಭ್ಯರ್ಥಿಗಳು ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕು.
ಅಭ್ಯರ್ಥಿಗಳು ಪ್ರಚಾರಕ್ಕೆ 70 ಲಕ್ಷ ರು.ವರೆಗೆ ಖರ್ಚು ಮಾಡಬಹುದಾಗಿದ್ದು ವಾಹನಗಳ ಬಳಕೆ ಹಾಗೂ ಪ್ರಚಾರ ಸಾಮಾಗ್ರಿಗಳ ಕುರಿತು ಕಡ್‌ಡಾಯವಾಗಿ ಮಾಹಿತಿ ನೀಡಿ ಅನುಮೋದನೆ ಪಡೆಯಬೇಕಾಗಿದ್ದು, ಅಧಿಕಾರಿಗಳು ಲೋಪವಿಲ್ಲದಂತೆ ಕೆಲಸ ನಿರ್ವಹಿಸಬೇಕು. ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಸೂಕ್ತವಾದ ಭದ್ರತಾ ವ್ಯವಸ್ಥೆ ಮಾಡಬೇಕು, ಧಾರ್ಮಿಕ ಸ್ಥಳ, ಸಂತೆ, ಜಾತ್ರೆ, ಮದುವೆ,ಮತ್ತಿತರ ಶುಭ ಕಾರ್ಯಗಳಲ್ಲಿ ರಾಜಕೀಯ ಚಟುವಟಿಕೆ ನಡೆಯದಂತೆ ನಿಗಾವಹಿಸಬೇಕೆಂದು ಆದೇಶಿಸಿದರು.
ಏ.17ಕ್ಕೆ ಚುನಾವಣೆ: ಕೋಲಾರ ಮೀಸಲು ಕ್ಷೇತ್ರ ಸೇರಿದಂತೆ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏ.17ಕ್ಕೆ ಮತದಾನ ನಡೆಯಲಿದ್ದು, ಮಾ.19ರಂದು ಆಧಿಸೂಚನೆ ಪ್ರಕಟವಾಗಲಿದೆ, ಮಾ.26ರಂದು ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದೆ, 27ರಂದು ನಾಮಪತ್ರಗಳ ಪರಿಶೀಲನೆ, ಮಾ.29ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕಡೆ ದಿನವಾಗಿರುವುದರಿಂದ ಅಧಿಕಾರಿಗಳು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಕೋಲಾರ ಮತ್ತು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ ಹಿಲೋರಿ ಮಾತನಾಡಿ, ಪೊಲೀಸ್ ಸಂಖ್ಯೆ ಕಡಿಮೆ ಇರುವುದರಿಂದ ಅಧಿಕಾರಿಗಳು ಪ್ರಾರಂಭದಿಂದಲೇ ಚುನಾವಣಾ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಕಾನೂನು ಸುವ್ಯವಸ್ಥೆಯಲ್ಲಿ ವ್ಯತ್ಯಾಸವಾಗದ ರೀತಿಯಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಜಿಪಂ ಸಿಇಒ ವಿನೋತ್ ಪ್ರಿಯಾ, ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜ್, ಜಿಲ್ಲಾ ಹೆಚ್ಚುವರಿ ಎಸ್ಪಿ ಜಮೀಲ್, ಉಪವಿಭಾಗಾಧಿಕಾರಿ ಮಂಜುನಾಥ್, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.