ಬ್ಯಾಂಕ್ಗಳು ರೈತರನ್ನು ಉಳಿಸುವ ಕೆಲಸ ಮಾಡಬೇಕು
ಟೇಕಲ್: ಜಿಲ್ಲೆಯಲ್ಲಿರುವ ಸೇವಾ ಸಹಕಾರಿ ಬ್ಯಾಂಕ್ಗಳು ಸಮರ್ಪಕವಾಗಿ ಸಾಲ ಸೌಲಭ್ಯ ನೀಡುವುದರ ಮೂಲಕ ರೈತರನ್ನು ಉಳಿಸುವಂಥ ಕೆಲಸ ಮಾಡಬೇಕು ಎಂದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಡಿ.ಸಿ.ಸಿ. ಬ್ಯಾಂಕ್ನ ನೂತನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಅವರು ತಾಲ್ಲೂಕಿನ ಮಾಸ್ತಿ ಗ್ರಾಮದ ಸೇವಾ ಸಹಕಾರ ಸಂಘದ ಕಚೇರಿಯಲ್ಲಿ ಮಾಸ್ತಿ ಹೋಬಳಿಯ ಸೇವಾ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯದರ್ಶಿಗಳ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಸಹಕಾರ ಅಗತ್ಯ: ಜಿಲ್ಲೆಯಲ್ಲಿ ನೀರಿನ ಕೊರತೆಯ ನಡುವೆಯೂ ರೈತರು ಕೃಷಿಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿನ ಸೇವಾ ಸಹಕಾರ ಸಂಘಗಳಿಗೆ ಜೀವ ತುಂಬುವಂತಹ ಕೆಲಸ ಆಗಬೇಕಾಗಿದೆ. ಸಂಘಗಳನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಜಿಲ್ಲೆಯ ಸೇವಾ ಸಹಕಾರ ಸಂಘಗಳನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಪ್ರಾಮಾಣಿಕವಾಗಿ ಸ್ಪಂದಿಸಬೇಕು: ತಾಲೂಕಿನಲ್ಲಿರುವ ಸೇವಾ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ದಿ. ಎಸ್.ಪ್ರಕಾಶ್ ಹಾಗೂ ಆರ್. ಪ್ರಭಾಕರ್ ಅವರ ಸೇವೆ ಕಾರಣವಾಗಿದೆ. ಮಾಸ್ತಿ ಹೋಬಳಿಯಲ್ಲಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಅವಧಿಯಲ್ಲಿ ಪ್ರಾರಂಭವಾದ ಸೇವಾ ಸಹಕಾರ ಸಂಘ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು, ಈ ಸಂಘದ ಮೂಲಕ ಪ್ರತಿಯೊಬ್ಬ ರೈತರಿಗೂ ಸಾಲ ಸೌಲಭ್ಯ ಒದಗಿಸುವುದರ ಮೂಲಕ ರೈತರ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದರು.
ಸೌಲಭ್ಯ ನೀಡಬೇಕು: ತಾಲ್ಲೂಕು ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕ ಆರ್.ಪ್ರಭಾಕರ್ ಮಾತನಾಡಿ, ಮಾಸ್ತಿ ಗ್ರಾಮದಲ್ಲಿ 1913ರಲ್ಲಿ ವೆಂಕಟೇಶ ಅಯ್ಯಂಗಾರ್ ಅವರು ಈ ಭಾಗದ ರೈತರ ಅನುಕೂಲಕ್ಕಾಗಿ ಸೇವಾ ಸಹಕಾರ ಬ್ಯಾಂಕ್ ಅನ್ನು ಪ್ರಾರಂಭಿಸಿದ್ದಾಗಿನಿಂದ ಇಲ್ಲಿಯವರೆಗೂ ಬ್ಯಾಂಕ್ ಉತ್ತಮ ಸೇವೆ ಸಲ್ಲಿಸುತ್ತಿದೆ. ತಾಲ್ಲೂಕಿನಲ್ಲಿರುವ 13 ಸೇವಾ ಸಹಕಾರ ಸಂಘಗಳಲ್ಲಿ ಪ್ರಸ್ತುತ 8 ಸಂಘಗಳು ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಹಲವು ವರ್ಷಗಳಿಂದ ಜಿಲ್ಲಾ ಡಿ.ಸಿ.ಸಿ. ಬ್ಯಾಂಕಿಗೆ ಚುನಾವಣೆ ನಡೆಯದ ಕಾರಣ ರೈತರಿಗೆ ಸಾಲ ನೀಡಲು ಸಾಧ್ಯವಾಗಿಲ್ಲ. ಈಗ ಚುನಾವಣೆ ಮುಗಿದು ಅಧ್ಯಕ್ಷರಾಗಿ ಬ್ಯಾಲಹಳ್ಳಿ ಗೋವಿಂದಗೌಡರು ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚು ಹೆಚ್ಚಾಗಿ ಸಾಲ ಸೌಲಭ್ಯ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾದ ದಯಾನಂಧ್, ಕೃಷ್ಣಪ್ಪ, ಮಾಸ್ತಿ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಿ.ಸಿ. ನಾರಾಯಣಸ್ವಾಮಿ, ಕಾರ್ಯದರ್ಶಿ ಮಾಸ್ತಿ ರೆಹಮಾನ್, ತೃಣಸಿ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ, ಬಾಳಿಗಾನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ನಾರಾಯಣಗೌಡ, ಅಬಣಿ ಶಂಕರ್ ಇನ್ನಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

