ಕಾಲೇಜಿನ ಕಚೇರಿ ಸುಡಲು ಯತ್ನ
ಕೋಲಾರ: ನಗರದ ಅಂತರಗಂಗೆ ರಸ್ತೆಯಲ್ಲಿನ ನೂತನ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರ ಕೊಠಡಿಯನ್ನು ಸುಡಲು ದುಷ್ಕರ್ಮಿಗಳು ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ.
ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರ ಕೊಠಡಿಯ ಕಿಟಕಿ ಬಾಗಿಲೊಂದನ್ನು ಕಿತ್ತು ಹಾಕಿ, ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ಬೆಂಕಿಯಿಂದ ಕಿಟಕಿಯ ಸ್ವಲ್ಪ ಭಾಗ ಹಾಗೂ ಕಚೇರಿಯಲ್ಲಿದ್ದ ಕುರ್ಚಿಯೊಂದು ಮಾತ್ರ ಸುಟ್ಟಿದ್ದು ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ. ಇದೇ ಸಂದರ್ಭದಲ್ಲಿ ನೀರಿನ ಪೈಪುಗಳನ್ನು ಸಹಾ ತುಂಡರಿಸಿದ್ದು, ಕಚೇರಿಯ ಬಾಗಿಲಿಗೆ ಗ್ರಿಲ್ ಹಾಕಿದ್ದ ಕಾರಣ ದುಷ್ಕರ್ಮಿಗಳು ಒಳ ಪ್ರವೇಶಿಸುವ ಯತ್ನ ವಿಫಲವಾಗಿದೆ.
ಇದೇ ಕಟ್ಟಡದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯೂ ನಡೆಯುತ್ತಿದ್ದು, ಈ ಉದ್ದೇಶದಿಂದಾಗಿಯೇ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.
ಕಳೆದ ತಿಂಗಳು ನಗರದ ಬಾಲಕರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರ ಕೊಠಡಿ ಬೀಗ ಮುರಿದು ಅಲ್ಮೇರಕ್ಕೆ ಬೆಂಕಿ ಹಾಕಿ ಹಚ್ಚಿ ಪ್ರಮುಖ ದಾಖಲೆಗಳನ್ನು ಸುಟ್ಟು ಹಾಕಿದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಘಟನೆ ಬುಧವಾರ ರಾತ್ರಿ ನಡೆದಿರುವುದು ಶಿಕ್ಷಣ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.
ಈ ಸಂಬಂಧ ಪದವಿ ಪೂರ್ವ ಕಾಲೇಜುಗಳಿಗೆ ಗೃಹ ರಕ್ಷಕದಳದ ಸಿಬ್ಬಂದಿಯನ್ನು ಕಾವಲಿಗಾಗಿ ನೇಮಿಸಿಕೊಳ್ಳಲು ಅನುಮತಿ ನೀಡುವಂತೆಯೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಪ್ಪ ಡಿಸಿಯವರಲ್ಲಿ ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಜಗದೀಶ್, ನಗರ ಠಾಣೆ ವೃತ್ತ ನಿರೀಕ್ಷಕ ಸುಧಾಕರರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಸಂದರ್ಭದಲ್ಲಿ ಬಿಆರ್ಸಿ ಶ್ರೀನಿವಾಸ್, ಕಾಲೇಜಿನ ಪ್ರಾಂಶುಪಾಲರಾದ ಗಾಯತ್ರಿರೆಡ್ಡಿ, ಉಪಪ್ರಾಂಶುಪಾಲ ರುದ್ರಪ್ಪ, ಬಾಲಕರ ಪಿಯು ಕಾಲೇಜು ಉಪಪ್ರಾಂಶುಪಾಲ ಗೋವಿಂದಪ್ಪ, ಜಿ. ಶ್ರೀನಿವಾಸ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

