ಕುಡಿವ ನೀರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ
ಕನ್ನಡಪ್ರಭ ವಾರ್ತೆ , ಕೋಲಾರ , ಮಾ.14
ನಗರ,ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸಂಬಂದಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಸದ್ಬಳಕೆ ಮಾಡಿ ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಎಚ್ಚರವಹಿಸಬೇಕೆಂದು ಜಿಲ್ಲಾಧಿಕಾರಿ ಡಿ.ಕೆ ರವಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬರಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರವು ಕುಡಿಯುವ ನೀರಿಗಾಗಿ 2 ಕೋಟಿ ರು. ನೀಡಿದೆ, ಬೇರೆ ಜಿಲ್ಲೆಗೆ ಹೊಲಿಕೆ ಮಾಡಿದರೆ 1 ಕೋಟಿ ರು. ಹೆಚ್ಚಾಗಿ ಅನುದಾನ ನೀಡಿದ್ದು ನಮ್ಮಲ್ಲಿ ಉಳಿದಿರುವ 1.50 ಕೋಟಿ ರು. ಸೇರಿ 4 ಕೋಟಿ ರು. ಲಭ್ಯವಿರುವುದರಿಂದ ಅಧಿಕಾರಿಗಳು ಜನರಿಗೆ ಸಮರ್ಪಕವಾಗಿ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗದಿದ್ದಲ್ಲಿ ಬೇರೆ ಕಡೆಯಿಂದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು, ಇನ್ನು ನಗರ ಪ್ರದೇಶಗಳು ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಖಾಸಗಿ ಬೋರ್‌ವೆಲ್ ಗಳಿಂದ ನೀರನ್ನು ಖರೀದಿಸಿ, ಸಾರ್ವಜನಿಕರಿಗೆ ನೀರು ಒದಗಿಸಲು ಅಧಿಕಾರಿಗಳು ಸಮರೋಪಾದಿಯಯಲ್ಲಿ ಕೆಲಸ ಮಾಡುವಂತೆ ತಿಳಿಸಿದರು.
ಶ್ರೀನಿವಾಸಪುರದಲ್ಲಿ ಖಾಸಗಿ ಬೋರ್‌ವೆಲ್‌ನಿಂದ ನೀರು ಪೂರೈಸಲಾಗುತ್ತಿದೆ ಈ ಮೊದಲು ಎಸ್.ಎಫ್.ಸಿ ಯಲ್ಲಿ ಹಾಕಲಾಗಿದ್ದ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿವೆ, ಮಾಲೂರಿನಲ್ಲಿ ಈ ಹಿಂದಿನ 15 ಲಕ್ಷ ರು ಬಾಕಿ ಇದೆ ಹಾಗಾಗಿ ನೀರು ಪೂರೈಸಲು ಟ್ಯಾಂಕರ್ ಮಾಲೀಕರು ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಎಸ್.ಎಫ್.ಸಿ ಯಲ್ಲಿ 20 ಬೋರ್‌ವೆಲ್‌ಗಳು ಕೊರೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದಾಗ ಟಾಸ್ಕ್‌ಪೋರ್ಸ್‌ನಲ್ಲಿ ಅನುಮೋದನೆ ಪಡೆದು ವರದಿ ಕಳುಹಿಸಿದಲ್ಲಿ ಹೊಸ ಕೊಳವೆಬಾವಿಗೆ ಮಂಜೂರು ಮಾಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಕೋಲಾರ ನಗರಸಭೆ ವ್ಯಾಪ್ತಿಯ ವಾರ್ಡುಗಳಿಗೆ ಖಾಸಗಿ ಕೊಳವೆಬಾವಿಗಳ ನೀರನ್ನು ಟ್ಯಾಂಕರ್‌ಗಳಿಂದ ಸಂಪುಗೆ ತುಂಬಿಸಿ ಪೂರೈಸಬೇಕು, ಇದಕ್ಕೆ ಅಳವಡಿಸಿದ್ದ ಸಿ.ಸಿ. ಕ್ಯಾಮೆರಗಳನ್ನು ಹಾಳು ಮಾಡಲಾಗಿದೆ ಇದನ್ನು ಕನಿಷ್ಠ ದುರಸ್ತಿ ಮಾಡಲು ನಿಮ್ಮಂದ ಆಗಲಿಲ್ಲ ಎಂದು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಗರಸಭೆಯಲ್ಲಿ ತೆರಿಗೆ ಸಂಗ್ರಹ ಸರಿಯಾಗಿ ಆಗುತ್ತಿಲ್ಲ,ಕೇವಲ 20 ಲಕ್ಷ ರು. ಸಂಗ್ರಹಣೆ ಸಾಕೇ, ಸರ್ಕಾರ ನಿಗದಿ ಮಾಡಿರುವಷ್ಟು ತೆರಿಗೆ ಸಂಗ್ರಹಣೆ ಏಕೆ ಆಗುತ್ತಿಲ್ಲವೆಂದು ಪ್ರಶ್ನಿಸಿದರು.
ಅಂತರಗಂಗೆ ಕಾಲುವೆ ಹಾಗೂ ಕೋಲಾರಮ್ಮನ ಕೆರೆಬಳಿ ಸರ್ವೆ ಕಾರ್ಯ ನಡೆಸಿ ಅಗತ್ಯವಾದ ನೀರು ಲಭ್ಯವಾದಲ್ಲಿ ಕೊಳವೆ ಬಾವಿ ಕೊರಿಸಿ ಇದಕ್ಕೂ ಮುನ್ನ ಕ್ರಿಯಾ ಯೋಜನೆ ಹಾಗೂ ನಕ್ಷೆ ರಚಿಸಿ ವರದಿ ಸಲ್ಲಿಸಬೇಕೆಂದರು.
ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆಗಳಲ್ಲಿ ಹಣವಿಲ್ಲ ಎಂದು ಹೇಳುತ್ತಿರಿ ಆದರೆ ಈಗಾಗಲೇ ನೀಡಿರುವ ಹಣದ ಖರ್ಚು ವೆಚ್ಚ ನೀಡದೆ ಮುಂದೆ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ, ಮೊದಲು ಖರ್ಚು ವೆಚ್ಚದ ಬಿಲ್‌ಗಳು ಹಾಗೂ ವರದಿ ನೀಡಿ ಮುಂದೆ ಅಗತ್ಯವಿರುವ ಹಣಕ್ಕೆ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಬೇಕೆಂದು ಸೂಚಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಸರ್ಕಾರವು 6.75 ಕೋಟಿ ಬಿಡುಗಡೆ ಮಾಡಿದೆ, ಈ ಹಣವನ್ನು ತಾಲೂಕು ಪಂಚಾಯತ್ ಸಿ.ಇ.ಓಗಳು ಸಾರ್ವಜನಿಕರಿಗೆ ಶಾಶ್ವತವಾದ ನೀರು ಪೂರೈಕೆಗೆ ಸದ್ಬಳಕೆ ಮಾಡಬೇಕೆಂದು ಜಿಪಂ ಸಿಇಒ ವಿನೋತ್ ಪ್ರಿಯಾ ತಿಳಿಸಿದರು.
ಖಾಸಗಿ ಬೋರ್‌ವೆಲ್: ಜಿಲ್ಲಾಧಿಕಾರಿಗಳು ಮಾತನಾಡಿ ಖಾಸಗಿ ಬೋರ್‌ವೆಲ್‌ಗಳನ್ನು ಕೊರೆಸಲು ಜಿಲ್ಲಾ ಸಮಿತಿಯಿಂದ ಅನುಮತಿ ಪಡೆಯಬೇಕು, ಕುಡಿಯುವ ನೀರಿಗಾಗಿ ಮಾತ್ರ ಬೋರ್‌ವೆಲ್ ಕೊರೆಸಲು ಅನುಮತಿ ನೀಡಲಾಗುವುದು, ಈಗಾಗಲೇ ಅಂತರ್ಜಲ ಮಟ್ಟ 1400 ರಿಂದ 1500 ಅಡಿಗೆ ಹೋಗಿರುವುದರಿಂದ ನೀರಾವರಿಗೆ ಬೋರ್‌ವೆಲ್ ಕೊರೆಯಲು ಸರ್ಕಾರದಿಂದ ಅಕ್ಷೇಪಣೆ ಇದೆ ಎಂದರು.
ಕೊಳವೆ ಬಾವಿ ಕೊರೆಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕೆಂದರು. ಟಾಸ್ಕ್‌ಪೋರ್ಸ್ ಬೋರ್‌ವೆಲ್‌ಗಳಿಗೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಅನುಮತಿ ಪಡೆಯಬೇಕೆಂದರು.
ಕ್ವಾರಿಯಲ್ಲಿ ನೀರು ಲಭ್ಯವಾಗುವುದು ಒಂದು ಸಾವಿರ ಕ್ಯೂಬಿಕ್ ಲೀಟರ್ ಖರೀದಿಸಲು 750ರು ಅಗತ್ಯವಿದೆ. ಆದರೆ ಈ ನೀರನ್ನು ಅಮ್ಮೇಹಳ್ಳಿಗೆ ಹರಿಸಲು, ಸುಮಾರು 70 ಲಕ್ಷ ವೆಚ್ಚವಾಗುವುದರಿಂದ ಕ್ವಾರಿಯಿಂದ ನೀರನ್ನು ಪಂಪ್‌ಸೆಟ್ ಬಳಸಿ ಕಾಲುವೆಗಳ ಮೂಲಕ ಅಮ್ಮೇರಹಳ್ಳಿ ಕೆರೆಗೆ ನೀರು ಹರಿಸಬಹುದಾಗಿದೆ ಎಂದರು.
ಈ ನೀರನ್ನು ಕೈಗಾರಿಕೆಯವರು ಕೇಳುತ್ತಿದ್ದಾರೆ. ಆದರೆ ಅದಕ್ಕೆ ಇನ್ನು ಅನುಮತಿ ನೀಡಿಲ್ಲ, ದುಬಾರಿ ವೆಚ್ಚ ಮಾಡಿ ನೀರು ಪೂರೈಕೆ ಮಾಡಿದರೂ ಕುಡಿಯಲು ಸೂಕ್ತವಿಲ್ಲದ ಕಾರಣ ಯೋಜನೆ ಕೈಬಿಟ್ಟು ಇದೇ ನೀರನ್ನು ಕೈಗಾರಿಕೆಗಳಿಗೆ ನೀಡಿದರೆ ಉತ್ತಮವೆಂದರು. ಸಭೆಯಲ್ಲಿ ಜಿ.ಪಂ ಸಿಇಒ ವಿನೋತ್‌ಪ್ರಿಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

