ಕೈ ತಪ್ಪಿದ ಟಿಕೆಟ್: ಬೆಂಬಲಿಗರ ಸಭೆ
ಕನ್ನಡಪ್ರಭ ವಾರ್ತೆ, ಕೋಲಾರ, ಮಾ.15
ನನಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡದಿರುವುದಕ್ಕೆ ಬೇಸರವಿಲ್ಲ. ಆದರೆ, ಟಿಕೆಟ್ ನೀಡದಿರುವುದಕ್ಕೆ ಕಾರಣವೇನು ಎಂಬುದನ್ನು ಪಕ್ಷದ ವರಿಷ್ಠರು ತಿಳಿಸದಿರುವುದಕ್ಕೆ ಅಸಮಾಧಾನ ಉಂಟಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ತಿಳಿಸಿದರು.
ನಗರದ ಸಿ. ಬೈರೇಗೌಡ ಬಡಾವಣೆಯ ಬಾಡಿಗೆ ಮನೆಯಲ್ಲಿ ಶನಿವಾರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಎರಡು ಬಾರಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇನೆ. ಇದಕ್ಕೆ ಆಗ ನಮ್ಮ ಪಕ್ಷದಲ್ಲಿದ್ದ ಕೆಲವು ಸ್ವಾರ್ಥ ರಾಜಕಾರಣಿಗಳು ಕಾರಣವೇ ಹೊರತು ಮತದಾರರು ಅಲ್ಲವೆಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದ್ದರೂ ನನಗೆ ಮತ್ತೊಂದು ಅವಕಾಶ ನೀಡಲು ವರಿಷ್ಠರು ಏಕೆ ಹಿಂದೇಟು ಹಾಕಿದ್ದಾರೆಂಬುದು ಅರ್ಥವಾಗುತ್ತಿಲ್ಲವೆಂದು ನೊಂದು ನುಡಿದರು.
ನಾನು ಯಾವುದೇ ರೀತಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ಎರಡು ಬಾರಿ ಸೋತರೂ ಕ್ಷೇತ್ರವನ್ನು ಮರೆಯದೆ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಈ ಬಾರಿ ಕ್ಷೇತ್ರದಲ್ಲಿ ಮತದಾರರು ಮೋದಿಯ ಮೇಲಿನ ವಿಶ್ವಾಸದಿಂದ ಬಿಜೆಪಿ ಕಡೆ ವಾಲುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಗೆಲ್ಲುವ ವ್ಯಕ್ತಿಗೆ ಟಿಕೆಟ್ ನೀಡುವುದನ್ನು ಬಿಟ್ಟು ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಸಂಪೂರ್ಣ ಪರಿಚಯವಿಲ್ಲದ ಬೇತಮಂಗಲ ನಾರಾಯಣಸ್ವಾಮಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವುದು ನನಗೆ ಮಾತ್ರವಲ್ಲ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಬಲಗೈ ಜನಾಂಗಕ್ಕೆ ಮಾಡಿದ ದ್ರೋಹವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಟಿಕೆಟ್ ಪಡೆಯಲು ನಾನು ಅರ್ಹನಲ್ಲವೇ, ಯಾತಕ್ಕಾಗಿ ಸ್ಪರ್ಧಿಸಲು ಅವಕಾಶ ನೀಡಿಲ್ಲವೆಂಬುದನ್ನು ವರಿಷ್ಠರು ತಿಳಿಸಲೇಬೇಕು ಎಂದು ವೀರಯ್ಯ ಆಗ್ರಹಿಸಿದರು. ಟಿಕೆಟ್ ಅಕಾಂಕ್ಷಿತರಲ್ಲಿ ಅರ್ಹರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಸೆ ಪಕ್ಷದ ಕಾರ್ಯಕರ್ತರದ್ದಾಗಿತ್ತು, ನನ್ನದು ಇದೇ ಅಭಿಪ್ರಾಯವೇ ಆಗಿದೆ, ಆದರೆ. ಟಿಕೆಟ್ಗಾಗಿ ಸಾಕಷ್ಟು ಲಾಬಿ ಮಾಡಿರುವ ಎಂ.ನಾರಾಯಣಸ್ವಾಮಿ ಸೌಜನ್ಯಕ್ಕೂ ತಮ್ಮ ಜೊತೆ ಚರ್ಚಿಸಿಲ್ಲ, ಸಹಕಾರ ಕೇಳಿಲ್ಲ ಎಂದು ಅಕ್ಷೇಪಣೆ ಮಾಡಿದರಲ್ಲದೆ, ಪಕ್ಷದ ವರಿಷ್ಠರಿಗೆ ನಾರಾಯಣಸ್ವಾಮಿಯ ರಾಜಕೀಯ ನಡೆಗಳ ಬಗ್ಗೆ ಗೊತ್ತಿದ್ದರೂ ಕೋಲಾರ ಕ್ಷೇತ್ರವನ್ನು ಏಕೆ ಕಳೆದುಕೊಳ್ಳುವುದಕ್ಕೆ ಯತ್ನಿಸುತ್ತಾರೋ ಎಂದು ಅನುಮಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯನಾಗಿ ಸರ್ಕಾರದಿಂದ ಸಿಗುವ ಅನುದಾನವನ್ನು ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಬಳಕೆ ಮಾಡಿದ್ದೇನೆ, ಎಲ್ಲಾ ಜಾತಿಯ ಜನರೊಂದಿಗೆ ಒಡನಾಟವಿಟ್ಟುಕೊಂಡಿದ್ದೇನೆ, ಎಂ.ನಾರಾಯಣಸ್ವಾಮಿ ಲೋಕಸಭೆಗೆ ಸ್ಪರ್ಧಿಸಲು ಇಷ್ಟಪಟ್ಟಿರಲಿಲ್ಲ. ಆದರೆ ಕೆಲವರು ನನಗೆ ಟಿಕೆಟ್ ತಪ್ಪಿಸಲು ಈ ರೀತಿ ಅನ್ಯಾಯ ಮಾಡಿದ್ದಾರೆಂದು ದೂರಿದರು.
ಮಾ.26ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ, ಪಕ್ಷದ ನಾಯಕರು ಕಾರ್ಯಕರ್ತರ ಮನಸ್ಥಿತಿ ಅರಿತು ನನಗೆ ಟಿಕೆಟ್ ನೀಡುವರೆಂಬ ವಿಶ್ವಾಸವಿದೆ, ಒಂದು ವೇಳೆ ಸ್ಪರ್ಧಿಸಲು ಅವಕಾಶ ಸಿಗದಿದ್ದರೆ ಮಾ.26ರ ನಂತರ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು. ಲೋಕಸಭಾ ಕ್ಷೇತ್ರಕ್ಕೆ ಸೇರಿದ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಿದ ಬಳಿಕ ಪಕ್ಷದಲ್ಲಿ ಉಳಿಯಬೇಕೆ ಅಥವಾ ನಿರ್ಗಮಿಸಬೇಕೇ ಎಂಬುದನ್ನು ಪ್ರಕಟಿಸಲಿದ್ದು, ಯಾವುದೇ ಕಾರಣಕ್ಕೂ ದುಡುಕುವುದಿಲ್ಲ, ಕಾರ್ಯಕರ್ತರು ಹೇಳಿದಂತೆ ನಡೆದುಕೊಳ್ಳುತ್ತೇನೆಂದರು.
ಸಭೆಯಲ್ಲಿ ಭಾಗವಹಿಸಿದ್ದ ವೀರಯ್ಯನವರ ಅಪ್ತ ಬೆಂಬಲಿಗರು ಬಿಜೆಪಿ ಬಲಗೈ ಜನಾಂಗವನ್ನು ತಿರಸ್ಕಾರದಿಂದ ನೋಡುತ್ತಿರುವುದರಿಂದ ಪಕ್ಷ ತೊರೆದು ಪಕ್ಷೇತರರಾಗಿ ಸ್ಪರ್ಧಿ ಶಕ್ತಿ ತೋರಬೇಕು ಇಲ್ಲವೇ ಬೇರೆ ಯಾವುದಾದರೊಂದು ಪಕ್ಷದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿದ್ದ ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು ಪಕ್ಷ ತೊರೆಯುವುದು ಬೇಡ, ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿರುವ ತಾವು ಪಕ್ಷಾಂತರ ಮಾಡಿದಲ್ಲಿ ಸದಸ್ಯತ್ವಕ್ಕೆ ಕುತ್ತು ಬರುತ್ತದೆಯಲ್ಲದೆ ಜನತೆಗೆ ಕೆಟ್ಟ ಸಂದೇಶ ರವಾನೆ ಆಗುತ್ತದೆ, ವರಿಷ್ಠರ ಬಳಿ ಮತ್ತೊಮ್ಮೆ ಚರ್ಚಿಸಿ ನ್ಯಾಯ ಕೇಳುವುದರಲ್ಲಿ ತಪ್ಪೇನು ಇಲ್ಲ, ಯಾವುದೇ ಕಾರಣಕ್ಕೂ ಪಕ್ಷ ಬಿಡುವುದು ಬೇಡವೆಂದು ವೀರಯ್ಯನವರಿಗೆ ಮನವಿ ಮಾಡಿದರು.
ವೀರಯ್ಯನವರ ಕೆಲ ಬೆಂಬಲಿಗರು ಬೇತಮಂಗಲ ನಾರಾಯಣಸ್ವಾಮಿ ವಿರುದ್ಧ ಆಕ್ರೋಶಭರಿತವಾಗಿ ಮಾತನಾಡಿದರು. ಹಣಕ್ಕಾಗಿ ಪಕ್ಷಾಂತರ ಮಾಡುವ ನಾರಾಯಣಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಗೆದ್ದ ನಂತರ ನೂರು ಕೋಟಿಗೆ ಮಾರಾಟ ಮಾಡಿಕೊಳ್ಳುವುದಿಲ್ಲವೆಂಬುದಕ್ಕೆ ಏನು ಗ್ಯಾರೆಂಟಿ ಎಂದು ಪ್ರಶ್ನಿಸಿದರಲ್ಲದೆ, ವೀರಯ್ಯನವರಿಗೆ ಅವಕಾಶ ಸಿಗದಿದ್ದರೆ ಪಕ್ಷದಿಂದ ಹೊರ ಹೋಗುವುದಾಗಿ ಎಚ್ಚರಿಕೆ ನೀಡಿದರು.
ಅಂತಿಮವಾಗಿ ಮಾತನಾಡಿದ ಡಿ.ಎಸ್. ವೀರಯ್ಯ, ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ, ಪಕ್ಷಕ್ಕೆ ದ್ರೋಹ ಮಾಡುವ ಉದ್ದೇಶವಿಲ್ಲ, ಆಗಿರುವ ಅನ್ಯಾಯ ಸರಿಪಡಿಸಬೇಕೆಂಬುದು ನನ್ನ ಉದ್ದೇಶ, ಕ್ಷೇತ್ರ ಪ್ರವಾಸ ನಂತರ ಮತ್ತೊಮ್ಮೆ ಎಲ್ಲಾ ಕಾರ್ಯಕರ್ತರನ್ನು ಸೇರಿಸಿ ಮುಂದಿನ ನಿರ್ಧಾರ ತಿಳಿಸುತ್ತೇನೆಂದು ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದರು.
ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ತಾಲೂಕು ಅಧ್ಯಕ್ಷ ಚಿನ್ನಾಪುರ ನಾರಾಯಣಸ್ವಾಮಿ, ನಗರಾಧ್ಯಕ್ಷ ಜಯಂತಿಲಾಲ್, ರಾಜೇಂದ್ರ, ಡಿ.ಆರ್. ನಾಗರಾಜ್, ಡಾ. ಮುನಿಯಪ್ಪ,ಚಲಪತಿ, ಹನುಮಂತು, ಕೆಂಬೇಡಿ ನಾರಾಯಣಗೌಡ, ಜಗದೀಶಾಚಾರಿ, ಕೆಂಪಣ್ಣ, ಜಾವೀದ್, ರಾಜಕುಮಾರ್ ಇದ್ದರು.
ಎರಡು ಬಾರಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇನೆ. ಇದಕ್ಕೆ ಆಗ ನಮ್ಮ ಪಕ್ಷದಲ್ಲಿದ್ದ ಕೆಲವು ಸ್ವಾರ್ಥ ರಾಜಕಾರಣಿಗಳು ಕಾರಣವೇ ಹೊರತು ಮತದಾರರು ಅಲ್ಲವೆಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದ್ದರೂ ನನಗೆ ಮತ್ತೊಂದು ಅವಕಾಶ ನೀಡಲು ವರಿಷ್ಠರು ಏಕೆ ಹಿಂದೇಟು ಹಾಕಿದ್ದಾರೆಂಬುದು ಅರ್ಥವಾಗುತ್ತಿಲ್ಲ
-ಡಿ.ಎಸ್. ವೀರಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

