ಡಿವಿಜಿ ಶಾಲೆ, ರಂಗ ಮಂದಿರಕ್ಕೆ ಕಾಯಕಲ್ಪ ಅಗತ್ಯ
ಕೋಲಾರ: ಮಂಕುತಿಮ್ಮನ ಕಗ್ಗ ಕೃತಿಯ ರಚನೆ ಮೂಲಕ ಕನ್ನಡ ಸಾಹಿತ್ಯ ಲೋಕದ ಕೀರ್ತಿಯನ್ನು ಹೆಚ್ಚಿಸಿರುವ ದೇವನಹಳ್ಳಿ ವೆಂಕಟರಾಮಯ್ಯ ಗುಂಡಪ್ಪ(ಡಿವಿಜಿ)ನವರ 127ನೇ ಜಯಂತಿಯನ್ನು ಆಚರಿಸುವುದು ಕನ್ನಡಿಗರ ಸೌಭಾಗ್ಯವೆಂದರೆ ಅತಿಶಯೋಕ್ತಿ ಆಗಲಾರದು.
ಆದರೆ, ಡಿವಿಜಿ ಹುಟ್ಟಿದ ಮುಳಬಾಗಿಲು ಪಟ್ಟಣದಲ್ಲಿ ನಾಡಿನ ಸಾಹಿತ್ಯ ಲೋಕದ ದಿಗ್ಗಜ ಡಿವಿಜಿಯವರ ಜಯಂತಿಯನ್ನು ಸಡಗರ ಸಂಭ್ರಮ ಹಾಗೂ ನುಡಿ ಹಬ್ಬವನ್ನಾಗಿ ಆಚರಿಸಲು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವೀರಾವೇಷದಿಂದ ಮಾತನಾಡುವ ಸಂಘಟನೆಗಳ ಮುಖಂಡರು ನಿರಾಸಕ್ತಿ ತೋರುತ್ತಿರುವುದು ದುರ್ದೈವ.
ಮಂಕುತಿಮ್ಮನ ಕಗ್ಗ ಕನ್ನಡದ ಭಗವತ್ಗೇತೆ ಎಂದೇ ದೇಶ-ವಿದೇಶದಲ್ಲಿ ಪ್ರಖ್ಯಾತಿ ಗಳಿಸಿದೆ, ಡಿವಿಜಿಯು ಗಡಿನಾಡಿನ ತರ್ತ್ವಜ್ಞಾನಿ, ಸಾಹಿತಿ, ಪತ್ರಕರ್ತ, ಕವಿ ಎಂಬ ಕಾರಣಕ್ಕೆ ಮುಳಬಾಗಿಲು ತಾಲೂಕಿಗೆ ಭಾರತದ ಭೂಪಟದಲ್ಲಿ ಉನ್ನತ ಸ್ಥಾನವೂ ಸಿಕ್ಕಿದೆ. ಆದರೆ, ಈ ಮಹನೀಯನ ಸ್ಮರಣೆ, ಆರಾಧನೆಗೆ ಮಾತ್ರ ಏಕೆ ತಾತ್ಸಾರ ಎಂಬುದು ಅರ್ಥವಾಗುತ್ತಿಲ್ಲ.
ಸುಪ್ರೀಂ ಕೋರ್ಟ್ ಹೆದ್ದಾರಿಗಳ ಮಧ್ಯೆ ಯಾವುದೇ ಪ್ರತಿಮೆ, ಪುತ್ಥಳಿ ಸ್ಥಾಪಿಸಬಾರದೆಂದು ಆದೇಶ ನೀಡಿದ್ದರೂ ರಾಜಕಾರಣಿಗಳ ಪ್ರತಿಮೆ ಸ್ಥಾಪನೆಗೆ ಹಠ ಹಿಡಿದು ಒತ್ತಾಯಿಸಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವ ರೀತಿಯಲ್ಲಿ ಪ್ರತಿಭನೆಗಳನ್ನು ನಡೆಸುವ ಜನರು ಡಿವಿಜಿಯಂತಹ ಮಹಾನ್ಪುರುಷನ ಸ್ಮರಣೆಗೆ ಕನಿಷ್ಠ ಒಂದು ಗಂಟೆ ಮೀಸಲಿಡುತ್ತಿಲ್ಲ, ಕನ್ನಡಪರ ಸಂಘಟನೆಗಳು, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶಿಕ್ಷಣ ಇಲಾಖೆ ಕೂಡ ಕನಿಷ್ಠ ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಡಿವಿಜಿಯ ಸಾಹಿತ್ಯದ ಬಗ್ಗೆ,ಜೀವನ ಚರಿತ್ರೆಯ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾಳಜಿ ತೋರದಿರುವುದು ಜಿಜ್ಞಾಸೆಗೆ ಕಾರಣವಾಗಿದೆ.
ಡಿವಿಜಿ ಮನಸ್ಸು ಮಾಡಿದ್ದರೆ ತಾವು ಹುಟ್ಟಿದ ಮನೆಯನ್ನು ಯಾರಿದಾರೂ ಮಾರಾಟ ಮಾಡಿ ಹಣದ ಚೀಲದೊಂದಿಗೆ ಊರು ಖಾಲಿ ಮಾಡಬಹುದಿತ್ತು. ಆದರೆ, ಹುಟ್ಟಿದ ಊರಿನ ಋಣ ತೀರಿಸಲು ತಮ್ಮ ಮನೆಯನ್ನು ಸರ್ಕಾರಿ ಶಾಲೆಗೆ ಧಾನವಾಗಿ ನೀಡಿದ್ದಾರೆ. ಈ ಶಾಲೆಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡುವುದಿರಲಿ ಸರಿಯಾಗಿ ಸುಣ್ಣ ಬಣ್ಣ ಬಳಿಸುವುದಕ್ಕೂ ಆಸಕ್ತಿ ತೋರಿಲ್ಲವೆಂದರೆ ಇಲಾಖೆಯಲ್ಲಿ ಕನ್ನಡ ಪ್ರೇಮಿಗಳು ಇಲ್ಲವೆಂದೇ ಭಾವಿಸಬೇಕಾಗುತ್ತದೆ. ಇನ್ನು ಡಿವಿಜಿಯವರ ನೆನಪು ಉಳಿಸಲು ಹಲವು ವರ್ಷಗಳ ಹಿಂದೆ ನಿರ್ಮಿಸಿದ ಬಯಲು ರಂಗ ಮಂದಿರದ ಸ್ಥಿತಿ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ರಂಗಮಂದಿರದ ಮುಂದುವರೆದ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ, ನಿರ್ವಹಣೆ ಇಲ್ಲದೆ, ಭದ್ರತಾ ಸಿಬ್ಬಂದಿಯಿಲ್ಲದೆ ರಂಗಮಂದಿರ ಪಾಳು ಮಂಟಪದಂತಾಗಿದೆ, ಸೋಮಾರಿಗಳ ಅಡ್ಡೆಯಾಗಿದೆ, ಕನ್ನಡಪರ ಕಾರ್ಯಕ್ರಮಗಳಿಲ್ಲದೆ ಸೋರಗುತ್ತಿದೆ.
ರಂಗಮಂದಿರ ಪಕ್ಕದಲ್ಲೇ ಇರುವ ಗ್ರಂಥಾಲಯವನ್ನು ಸಹ ಅಭಿವೃದ್ಧಿಪಡಿಸಲಾಗಿಲ್ಲ, ಓದುಗರು ಇಲ್ಲಿಗೆ ಬರುವುದಕ್ಕೆ ಹಿಂದೇಟು ಹಾಕುತ್ತಾರೆ, ಗಬ್ಬುವಾಸನೆ, ದುರ್ನಾತ, ಮಲ-ಮೂತ್ರಗಳ ಹಾವಳಿಯಂದ ಗ್ರಂಥಾಲಯದ ಪಾವಿತ್ರ್ಯತೆ ಧಕ್ಕೆಯಾಗುತ್ತಿದೆ.
ಗಡಿ ಭಾಗವಾದ ಹಾಗೂ ಕರ್ನಾಟಕದ ಮುಡಣ ಬಾಗಿಲು ಎಂದೇ ಪ್ರಸಿದ್ಧಿ ಹೊಂದಿರುವ ಮುಳಬಾಗಿಲು ಪಟ್ಟಣದಲ್ಲಿ ಡಿವಿಜಿಯು ಶಾಲೆಗಾಗಿ ನೀಡಿರುವ ಮನೆ, ಪುರಸಭೆಯಿಂದ ನಿರ್ಮಿಸಿರುವ ಡಿವಿಜಿ ರಂಗ ಮಂದಿರಕ್ಕೆ ಕಾಯಕಲ್ಪ ನೀಡುವ ಮೂಲಕ ನಾಡಿನ ಶ್ರೇಷ್ಠ ದಾರ್ಶನಿಕರಾದ ಡಿವಿಜಿಯವರಿಗೆ ಜನ್ಮದಿನದ ಕೊಡುಗೆ ನೀಡುವುದು ಎಲ್ಲರ ಕರ್ತವ್ಯವಾಗಿದೆ.
ಡಿವಿಜಿ ಪ್ರತಿಷ್ಠಾನದ ಮೂಲಕ ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್ ತಮ್ಮ ಶಕ್ತಾನುಸಾರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯಿಂದ ಹೆಚ್ಚಿನ ಕಾರ್ಯಕ್ರಮಗಳಾಗಬೇಕಾಗಿದೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ರಚನಾತ್ಮಕ ವಿಚಾರಗೋಷ್ಠಿಗಳು ನಡೆಸುವ ಮೂಲಕ ಡಿವಿಜಿಯ ಮಂಕುತಿಮ್ಮನ ಕಗ್ಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ.
ಡಿವಿಜಿ ತಮ್ಮ ಮನೆಯನ್ನು ಶಾಲೆಗಾಗಿ ನೀಡಿದ್ದಾರೆ, ತಮಗೆ ಸರ್ಕಾರದಿಂದ ಲಭಿಸಿದ 90 ಸಾವಿರ ರುಪಾಯಿಗಳನ್ನು ತಾವೇ ಸ್ಥಾಪಿಸಿದ ಗೋಕುಲ್ ಇನ್ಸ್ಟ್ಯೂಟ್ಗೆ ನೀಡುವ ಮೂಲಕ ಔದಾರ್ಯ ತೋರಿದ್ದಾರೆ, ಇಂತಹ ಶ್ರೇಷ್ಠ ಸಾಹಿತಿ, ಪತ್ರಕರ್ತ, ತತ್ವಜ್ಞಾನಿಯಾದ ಡಿವಿಜಿಯವರನ್ನು ಪ್ರತಿನಿತ್ಯ ಸ್ಮರಣೆ ಮಾಡಬೇಕಾದ್ದು ಎಲ್ಲರ ಕರ್ತವ್ಯ. ಕನಿಷ್ಠ ಪ್ರತಿವರ್ಷ ಮಾ.17 ರಂದು ಮುಳಬಾಗಿಲು ಸೇರಿದಂತೆ ನಾಡಿನ ಉದ್ದಗಲ್ಲಕ್ಕೂ ಡಿವಿಜಿಯ ಸಾಹಿತ್ಯ ಪರಿಚಯ, ವಿಚಾರ ವಿನಿಮಯ ಕಾರ್ಯಕ್ರಮಗಳು ನಡೆದರೆ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಸೋಮವಾರ(ಮಾ.17)ಉಪನ್ಯಾಸ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ.
-ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

