ಅನ್ಯಾಯವಾಗಿದೆ ಆದರೂ ಬಿಜೆಪಿ ಬಿಡಲ್ಲ: ಡಿ.ಎಸ್. ವೀರಯ್ಯ
ಕೋಲಾರ: ಪಕ್ಷದ ಸಿದ್ಧಾಂತಗಳ ಜೊತೆಗೆ ನನ್ನದೇ ಆದ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ನಾನು ಅವಕಾಶವಾದಿ ರಾಜಕಾರಣ ಮಾಡುವುದಿಲ್ಲ ಎಂದು ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ವಂಚಿತರಾಗಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಸ್ಪಷ್ಟಪಡಿಸಿದರು.
ದೂರವಾಣಿ ಮುಖೇನ ಭಾನುವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ, ವಿಧಾನ ಪರಿಷತ್ ಸದಸ್ಯನಾಗಿ ಸರ್ಕಾರದಿಂದ ಸಿಕ್ಕ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೇನೆ, ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತರೂ ಪಕ್ಷಾಂತರ ಮಾಡಲಿಲ್ಲ, ಈ ಬಾರಿ ನನಗೆ ಗೆಲ್ಲುವುದಕ್ಕೆ ಅವಕಾಶವಿದ್ದರೂ ಪಕ್ಷದ ವರಿಷ್ಠರು ಟಿಕೆಟ್ ನೀಡದಿರುವುದಕ್ಕೆ ಮನಸ್ಸಿಗೆ ನೋವಾಗಿದ್ದರೂ ಯಾವುದೇ ಕಾರಣಕ್ಕೂ ತಾವು ಬಿಜೆಪಿ ತೊರೆಯುವುದಿಲ್ಲವೆಂದು ಹೇಳಿದರು.
ಮಾ.26ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿರುವುದರಿಂದ ಕಾದು ನೋಡುತ್ತೇನೆ, ಪಕ್ಷದ ನಾಯಕರ ಮೇಲೆ ನನಗೆ ವಿಶ್ವಾಸವಿದೆ, ಹಾಗೊಂದು ವೇಳೆ ಸ್ಪರ್ಧಿಸಲು ಅವಕಾಶ ಸಿಗದಿದ್ದರೆ ಪಕ್ಷಾಂತರ ಮಾಡಿ ನನ್ನ ರಾಜಕೀಯ ಜೀವನಕ್ಕೆ ಕಪ್ಪು ಮಸಿ ಬಳಸಿಕೊಳ್ಳುವುದಕ್ಕೆ ಇಚ್ಚಿಸುವುದಿಲ್ಲವೆಂದು ಸ್ಪಷ್ಟಪಡಿಸಿದರಲ್ಲದೆ, ಕೆಲವರು ಬೇಕಾಗಿಯೇ ವೀರಯ್ಯ ಜೆಡಿಎಸ್ ಇಲ್ಲವೇ ಕಾಂಗ್ರೆಸ್ ಸೇರುತ್ತಾರೆಂದು ವದಂತಿಗಳನ್ನು ಹರಡುತ್ತಿದ್ದು ಇದಕ್ಕೆ ಬಿಜೆಪಿಯ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳು ಕಿವಿಗೊಡಬಾರದೆಂದು ಮನವಿ ಮಾಡಿದರು.
ನನಗೆ ಟಿಕೆಟ್ ಏಕೆ ತಪ್ಪಿತು ಎಂದು ಅರ್ಥವಾಗುತ್ತಿಲ್ಲ, ರಾಜ್ಯ ಕೆಲ ಮುಖಂಡರು ಮಾತ್ರ ವಿಧಾನ ಪರಿಷತ್ ಸದಸ್ಯರಾಗಿರುವುದರಿಂದ ತಮಗೆ ಟಿಕೆಟ್ ನೀಡಲಾಗಿಲ್ಲವೆಂದು ಹೇಳಿದ್ದಾರೆ. ಆದರೆ ಇದು ಸಕಾರಣಲ್ಲವೆಂಬುದು ನನ್ನ ಅಭಿಪ್ರಾಯ. ಎರಡು ಬಾರಿ ಸೋತಿರುವ ನನ್ನ ಮೇಲೆ ಮತದಾರರಿಗೆ ಅದರಲ್ಲೂ ಮುಖ್ಯವಾಗಿ ಬಲಗೈ ಜನಾಂಗದಲ್ಲಿ ಅನುಕಂಪವಿದೆ. ಜೊತೆಗೆ ಮೋದಿ ಅಲೆಯನ್ನು ಬಳಸಿಕೊಂಡು ಗೆಲ್ಲುವ ಅವಕಾಶವಿತ್ತು. ಕೊನೆಯ ತನಕ ಕಾಯುತ್ತೇನೆ, ಬಿ.ಫಾರಂ ಸಿಗದಿದ್ದಲ್ಲಿ ಮತ್ತೊಮ್ಮೆ ಅವಕಾಶ ನಿರೀಕ್ಷೆಯಿಟ್ಟುಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆಯೇ ಹೊರತು, ಪಕ್ಷಾಂತರ ಮಾಡುವುದಿಲ್ಲವೆಂದು ಪುನರುಚ್ಚರಿಸಿದರು. ಬಿಜೆಪಿಯಿಂದ ಟಿಕೆಟ್ ಪಡೆದಿರುವ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಪರವಾಗಿ ಕೆಲಸ ಮಾಡುವೀರಾ ಎಂಬ ಪ್ರಶ್ನೆಗೆ ಪಕ್ಷದ ವರಿಷ್ಠರು ಏನು ಹೇಳುತ್ತಾರೋ ಕಾದು ನೋಡುತ್ತೇನೆ, ಮಾ.26ರ ನಂತರವೇ ಮುಂದಿನ ನಿರ್ಧಾರ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

