ಬುನಾದಿ ಇಲ್ಲದ ಲೈಟ್ ಕಂಬ
ಕೋಲಾರ ನಗರದ ಮೆಕ್ಕೆ ವೃತ್ತದ ಬಳಿಯ ಲೋಕೋಪಯೋಗಿ ಇಲಾಖೆಯ ಇಇ ಮನೆಯ ಮುಂದೆ ಬೀದಿ ದೀಪಕ್ಕಾಗಿ ನೆಟ್ಟಿರುವ ಲೈಟ್ ಕಂಬಕ್ಕೆ ಬುನಾದಿ ಇಲ್ಲದೆ ಅಪಾಯದ ಸ್ಥಿತಿಯಲ್ಲಿದೆ. ನಗರಸಭೆಯಿಂದ ಗುತ್ತಿಗೆ ಪಡೆದಿರುವ ಅಸಾಮಿ ಬೇಕಾಬಿಟ್ಟಿಯಾಗಿ ಕಂಬ ನೆಟ್ಟಿರುವುದಲ್ಲದೆ, ಸಿಮೆಂಟ್ ಕಾಂಕ್ರಿಟ್ ಸರಿಯಾಗಿ ಹಾಕಿಲ್ಲ. ಜೋರಾಗಿ ಗಾಳಿ ಬಂದರೆ ಇಲ್ಲವೇ ದೊಡ್ಡ ವಾಹನವೊಂದು ಡಿಕ್ಕಿ ಹೊಡೆದರೆ ಕಂಬ ನೆಲಕ್ಕೆ ಉರುಳುವುದು ಗ್ಯಾರೆಂಟಿ. ಈ ದಾರಿಯಲ್ಲಿ ವಿಐಪಿಗಳು, ನೌಕರರು, ಶಾಲಾ ಮಕ್ಕಳು ಓಡಾಡುತ್ತಾರೆ, ಅಪಾಯದ ಅಂಚಿನಲ್ಲಿರುವ ಲೈಟ್ ಕಂಬ ಉರುಳಿ ಸಾವು-ನೋವು ಸಂಭವಿಸಿದರೆ ನಗರಸಭೆಯೇ ಜವಾಬ್ದಾರಿ ಆಗಬೇಕಾಗುತ್ತದೆ, ತಕ್ಷಣ ಸಂಬಂಧಪಟ್ಟವರು ಗಮನ ಹರಿಸಿ ಲೈಟ್ ಕಂಬಕ್ಕೆ ಭದ್ರತೆ ಒದಗಿಸಬೇಕು.
ಟಿ ಪ್ರಿಯಶಿವು, ವಿದ್ಯಾರ್ಥಿನಿ, ಪಾಲಸಂದ್ರ ಬಡಾವಣೆ, ಕೋಲಾರ.
ಗುಂಡಿ ಮುಚ್ಚಿ ಇಲ್ಲವೇ ಕಂಬ ನೆಡಿ
ಕೋಲಾರದ ಜಿಲ್ಲಾ ಆಸ್ಪತ್ರೆಯ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಮೂರು ವಾರಗಳ ಹಿಂದೆ ರಸ್ತೆಯಲ್ಲಿ ಗುಂಡಿ ಅಗೆದಿದ್ದು ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಲೋಕಸಭೆ ಚುನಾವಣೆ ಘೋಷಣೆಗೆ ಮುಂಚಿತವಾಗಿಯೇ ಬೀದಿ ದೀಪ ಅಳವಡಿಸಲು ಕಾಮಗಾರಿ ಆರಂಭಿಸಿದರೂ ನೀತಿ ಸಂಹಿತೆ ನೆಪದಲ್ಲಿ ಕೆಲಸ ನಿಲ್ಲಿಸಿರುವುದರಿಂದ ರಾತ್ರಿ ವೇಳೆ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚರಿಸಲು ಕಷ್ಟವಾಗುತ್ತಿದೆ. ನಗರಸಭೆಯ ಅಧಿಕಾರಿಗಳು ಕೂಡಲೇ ಗುತ್ತಿಗೆದಾರರಿಗೆ ಕೆಲಸ ಮುಗಿಸಲು ಆದೇಶ ನೀಡಬೇಕು, ಕೆಇಬಿ ಮುಂದೆ ಹಾಕಿರುವ ವಿದ್ಯುತ್ ಕಂಬಗಳನ್ನು ಜೋಪಾನ ಮಾಡದಿದ್ದರೆ ನಗರಸಭೆಗೆ ನಷ್ಟ ಉಂಟಾಗುವುದಲ್ಲದೆ ಸಾರ್ವಜನಿಕರ ತೆರಿಗೆ ಹಣ ಕಳ್ಳರ ಪಾಲಾಗುತ್ತದೆ.
ಟಿ ರಾಜೇಂದ್ರ ಸಿಂಹ, ಗೌರಿಪೇಟೆ, ಕೋಲಾರ
ಈ ದಾರಿ ಯಾವುದಯ್ಯ?
ಸಾರ್ವಜನಿಕರಿಗೆ ಊರುಗಳನ್ನು ಗುರುತಿಸಲು ಸುಲಭವಾಗಲಿ ಎಂದು ರಸ್ತೆ ಬದಿಯಲ್ಲಿ ಅಳವಡಿಸಿರುವ ನಾಮಫಲಕಗಳು ಅಳಿಸಿ ಹೋಗಿವೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಾಮಫಲಕಗಳ ಕಡೆ ಗಮನ ಹರಿಸದಿರುವುದೇ ಇದಕ್ಕೆ ಕಾರಣ. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವಾಗ ಜನರಿಗೆ ಗ್ರಾಮಗಳ ಹಾಗೂ ಸ್ಥಳಗಳ ಮಾಹಿತಿ ಇರಲಿ ಎಂದು ರಸ್ತೆ ಬದಿಗಳಲ್ಲಿ ನಾಮಫಲಕಗಳನ್ನು ಹಾಕಲಾಗಿದ್ದು ಅದನ್ನು ಸರಿಯಾಗಿ ನಿರ್ವಹಿಸದ ಕಾರಣ ನಾಮಫಲಕಗಳು ಬೋಳಾಗಿ ಕಾಣುವಂತಾಗಿದೆ. ಈ ಸಂಬಂಧ ಇನ್ನಾದರೂ ಪಿಡಬ್ಯೂಡಿ ಅಕಾರಿಗಳು ಎಚ್ಚೆತ್ತುಕೊಂಡು ಅವೈಜ್ಞಾನಿಕ ರೀತಿಯಲ್ಲಿರುವ ನಾಮಫಲಕಗಳನ್ನು ಸ್ವಚ್ಛಗೊಳಿಸಿ ಅವಕ್ಕೆ ಹೊಸ ರೂಪ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಫಲಕಗಳನ್ನಾಗಿಸಲು ಕ್ರಮ ಜರುಗಿಸಲಿ.
ಟಿ ಸಾಕ್ಷಿ ಮಂಜುನಾಥ್, ಕೀಲುಕೋಟೆ, ಕೋಲಾರ
ರಸ್ತೆಗಳಲ್ಲಿ ಸುಡುವುದು ನ್ಯಾಯವೇ
ತಮ್ಮ ಹಕ್ಕುಗಳಿಗಾಗಿ ಧರಣಿ, ಉಪವಾಸ, ಮಾನವ ಸರಪಳಿ, ಸರ್ಕಾರಿ ಕಚೇರಿಗಳ ಮುತ್ತಿಗೆ ಇತ್ಯಾದಿ ಪ್ರತಿಭಟನೆ ನಡೆಸುವುದು ಸರಿಯೇ. ಆದರೆ, ಜನರ ತೆರಿಗೆ ಹಣದಲ್ಲಿ ನಿರ್ಮಿಸುವ ಡಾಂಬರು ರಸ್ತೆಗಳ ಮೇಲೆ ಪ್ರತಿಕೃತಿಗಳನ್ನು ದಹನ ಮಾಡುವುದರಿಂದ ರಸ್ತೆಗಳು ಹಾಳಾದಲ್ಲಿ ಮತ್ತೆ ನಮ್ಮ ಹಣವೇ ಪೋಲಾಗುತ್ತದೆ ಎಂಬುದನ್ನು ಪ್ರತಿಭಟನಾಕಾರರು ಅರ್ಥ ಮಾಡಿಕೊಳ್ಳದಿರುವುದು ವಿಷಾಧನೀಯ. ಕಮಿಷನ್ಗಾಗಿ ಆಸೆ ಪಡುವ ರಾಜಕಾರಣಿಗಳು, ಅಧಿಕಾರಿಗಳಿಗೆ ನಾವೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ, ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರನಿಗೆ ನಾವೇ ದಾರಿ ಮಾಡಿಕೊಟ್ಟಂತೆ ಆಗುತ್ತದೆ, ಜೊತೆಗೆ ರಸ್ತೆಗಳ ಮೇಲೆ ಟೈರು, ಟ್ಯೂಬು,ಪ್ಲಾಸ್ಟಿಕ್ ಸುಡುವುದರಿಂದ ಪರಿಸರಕ್ಕೂ ಹಾನಿ ಆಗುವುದರಿಂದ ಸಂಘಟನೆಗಳು ರಸ್ತೆಗಳನ್ನು ಹಾಳು ಮಾಡುವ ಬದಲು ತಮ್ಮ ಹಕ್ಕುಗಳಿಗಾಗಿ ಬೇರೆ ರೀತಿಯ ಕಾರ್ಯಕ್ರಮ ಹಾಕಿಕೊಳ್ಳುವುದು ಲೇಸು.
ಟಿ ಜಯಸಿಂಹ, ಚಿಂತಕ, ಬ್ರಾಹ್ಮಣರ ಬೀದಿ, ಕೋಲಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

