ಕೃತಿಗಳಲ್ಲಿ ಡಿವಿಜಿ ಈಗಲೂ ಅಮರ
ಚಿಂತಾಮಣಿ: ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಪದ್ಯಗಳು ಸರ್ವಜನಮಾನ್ಯವಾಗಿದ್ದು, ಅವರು ತಮ್ಮ ಅನೇಕ ಕೃತಿಗಳಿಂದ ಅಮರರಾಗಿದ್ದಾರೆ. ಉತ್ತಮ ಸಮಾಜ, ಉತ್ತಮ ಜನಜೀವನ ನಿರ್ಮಿತವಾಗಬೇಕೆಂದು ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಆಶಯವಾಗಿದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.
ಚಿಂತಾಮಣಿಯ ವ್ಯಾಸಂಗ ಗೋಷ್ಠಿಯಾದ ಸಾಹಿತ್ಯ ಕೂಟದಲ್ಲಿ 2981ನೇ ವಾರದ ಕಾರ್ಯಕ್ರಮದಲ್ಲಿ ಡಿವಿಜಿ ಜನ್ಮದಿನಾಚರಣೆ ಅಂಗವಾಗಿ ಮಂಕುತಿಮ್ಮನ ಕಗ್ಗ ವಾಚನ ಮತ್ತು ವ್ಯಾಖ್ಯಾನದ ವಿಶೇಷ ಉಪನ್ಯಾಸ ನೀಡಿದರು.
ಡಿವಿಜಿ ಶಾಲೆಯ ಓದು ಬಹಳ ಕಡಿಮೆ, ಚಿಕ್ಕ ವಯಸ್ಸಿನಿಂದಲೂ ಲೋಕಾನುಭವ ಪಡೆದು ತಮ್ಮ 59ನೇ ವರ್ಷದಲ್ಲಿ ಮಂಕುತಿಮ್ಮನ ಕಗ್ಗ ಎಂಬ ಉನ್ನತ ಮಟ್ಟದ ಶಾಸ್ತ್ರಕಾವ್ಯ ರಚಿಸಿದ್ದಾರೆ. ಒಂದೊಂದು ಪದ್ಯದಲ್ಲಿ ಕೇವಲ ನಾಲ್ಕೇ ನಾಲ್ಕು ಸಾಲುಗಳು. ಅದರಲ್ಲೇ ಅವರು ಭಾರತೀಯ ಸಂಸ್ಕೃತಿಯ ಆಧಾರವಾಗಿರುವ ಜೀವನ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ತಮ್ಮ ಜೀವಮಾನದಲ್ಲಿ ಅನೇಕ ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ಅತ್ಯಂತ ಅದ್ಭುತವಾದಂತಹ ಕೃತಿ ಮಂಕುತಿಮ್ಮನ ಕಗ್ಗ ಎಂದರು.
ಡಿವಿಜಿ ತಮ್ಮ ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದರು. ಅವುಗಳನ್ನು ಸಂತೋಷದಿಂದ, ಧೈರ್ಯದಿಂದ ಸ್ವೀಕರಿಸಿದವರು. ತಮ್ಮ ದುಃಖವನ್ನು ನುಂಗಿಕೊಂಡು ನಗಿಸುವುದು ಪರಧರ್ಮ ಎಂದು ಇನ್ನೊಬ್ಬರಿಗೆ ಸಂತೋಷವನ್ನುಂಟು ಮಾಡಿ ತಾವೂ ನಕ್ಕವರು. ಅವರ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ದೊರೆತ ಗೌರವಧನ ಮತ್ತು 1970ರಲ್ಲಿ ನಾಗರಿಕ ಸನ್ಮಾನದ ಒಂದು ಲಕ್ಷ ರುಪಾಯಿಯನ್ನು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಗೆ ಕೊಟ್ಟುಬಿಟ್ಟರು. ತಾನು ನೀಡಿದ್ದೇನೆ ಎಂಬ ಅಹಂಭಾವವು ಅವರಿಗಿರಲಿಲ್ಲ ಎಂದು ವಿವರಿಸಿದರು.
ಕಾಲೇಜು ಮೆಟ್ಟಲು ಹತ್ತಲಿಲ್ಲ: ಡಿವಿಜಿ ಕಾಲೇಜು ಮೆಟ್ಟಿಲು ಹತ್ತಲಿಲ್ಲ. ಡಿಗ್ರಿ, ಡಿಪ್ಲೊಮಾ ಪಡೆಯಲಿಲ್ಲ. ಆದರೆ ಕನ್ನಡ ಸಾಹಿತ್ಯದಲ್ಲಿ ಅವರು ಮಾಡಿರುವ ಕೆಲಸ ಅಸಾಧಾರಣವಾದುದು. ಅವರು ಬರೆದ ಕೃತಿಗಳು ಪದವಿ ಪರೀಕ್ಷೆಗೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕ ಶ್ರೀರಾಮಮೂರ್ತಿ, ಮಂಕುತಿಮ್ಮನ ಕಗ್ಗದಲ್ಲಿ ತತ್ವವಿದೆ. ಜ್ಞಾನವಿದೆ ಮತ್ತು ಬದುಕಿನ ಬಗ್ಗೆ ವಿಮರ್ಶೆಗಳಿವೆ. ಜೀವನದ ಕ್ಲಿಷ್ಟ ಕ್ಷಣಗಳಲ್ಲಿ ಕಗ್ಗದ ಅಧ್ಯಯನ ಮಾಡಿದರೆ ಮನಸ್ಸಿಗೆ ಹತ್ತಿರ ಬಂದು ಸಾಂತ್ವನ ನೀಡುತ್ತದೆ. ಕಗ್ಗ ಬದುಕಿನ ಹಲವಾರು ದೃಷ್ಟಿಕೋನಗಳನ್ನು ಮನಸ್ಸಿಗೆ ನಾಟುವಂತೆ ಹೇಳುತ್ತದೆ ಎಂದರು.
ಸಾಹಿತ್ಯಕೂಟದ ಕಾರ್ಯದರ್ಶಿ ಜಿ.ಜಯರಾಂ, ಕೆನರಾ ಬ್ಯಾಂಕ್ ಅಶ್ವಥ್, ಹಿರಿಯ ಸಾಹಿತಿ ಕೋಟಗಲ್ ನಾಗಸುಬ್ರಮಣ್ಯಂ, ಸುಬ್ಬರಾಮಶಾಸ್ತ್ರಿ, ನಾಗೇಶ್, ಕಲ್ಯಾಣಕುಮಾರ್, ನಾಗೇಂದ್ರ ಪ್ರಸಾದ್, ವೆಂಕಟಕೃಷ್ಣಯ್ಯ ಶೆಟ್ಟಿ, ರಮೇಶ್, ಕೃಷ್ಣಮೂರ್ತಿ, ವೀಣಾ, ಸತ್ಯಭಾಮ, ರೂಪಶ್ರೀ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

