ಕೋಲಾರ

ಬಾಗೇಪಲ್ಲಿ ಪುರಸಭೆ ಶಾಸಕರ ಬಣಕ್ಕೆ

Published On :

ಬಾಗೇಪಲ್ಲಿ: ತೀವ್ರ ಕುತೂಹಲ ಕೆರಳಿಸಿದ್ದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ನಿರೀಕ್ಷಿಸಿದಂತೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಬಣದ ಎಂ. ಉಷಾರಾಣಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಎ. ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.
ಸಿಪಿಎಂ ಪಕ್ಷದ ಬಿ. ಜ್ಯೋತಿ ಮತ್ತು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಬಣದ ಎಂ. ಉಷಾರಾಣಿ(ಕೆಜೆಪಿ) ನಡುವೆ ಕೊನೆ ಗಳಿಗೆವರೆಗೂ ತೀವ್ರ ಪೈಪೋಟಿ ಇತ್ತು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಆಗಮಿಸಿ ಮತ ಚಲಾಯಿಸಿದ ಪರಿಣಾಮ ಎಸ್.ಎನ್. ಸುಬ್ಬಾರೆಡ್ಡಿ ಬಣದ ಎಂ. ಉಷಾರಾಣಿ ಆಯ್ಕೆ ಸುಗಮವಾಯಿತು. ಇಲ್ಲವಾದಲ್ಲಿ ಟೈ ಆಗಿ ಅದೃಷ್ಟ ಪರೀಕ್ಷೆ ಎದುರಿಸಬೇಕಾಗಿತ್ತು.
ವಿಜೇತ ಉಷಾರಾಣಿ 13 ಮತ್ತು ಪರಾಜಿತ ಬಿ. ಜ್ಯೋತಿ 12 ಮತ ಪಡೆದರು. ವಿಜೇತರ ಪರ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮತ್ತು ಕೇಂದ್ರ ಸಚಿವ ಎಂ. ವೀರಪ್ಪಮೊಯ್ಲಿ ಮತ ಚಲಾಯಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಎ. ನರಸಿಂಹಮೂರ್ತಿ 13 ಮತ ಪಡೆದು ತನ್ನ ಸಮೀಪ ಸ್ಪರ್ಧಿ ಬಿ.ಎನ್.ಶ್ರೀನಿವಾಸರನ್ನು 1 ಮತದ ಅಂತರದಿಂದ ಪರಾಜಿತಗೊಳಿಸಿದರು. ಪುರಸಭೆಯಲ್ಲಿ ಕಾಂಗ್ರೆಸ್ 6, ಸಿಪಿಎಂ 6, ಜೆಡಿಎಸ್ 2, ಕೆಜೆಪಿ 3 ಹಾಗೂ ಪಕ್ಷೇತರರು 6 ಸದಸ್ಯರಿದ್ದು ಯಾವುದೇ ಪಕ್ಷಗಳಿಗೆ ಬಹುಮತವಿಲ್ಲದೆ ಗೊಂದಲದ ಗೂಡಾಗಿ ಪರಿವರ್ತನೆಯಾಗಿತ್ತು. 6 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ನ 3 ಸದಸ್ಯರು ಸಿಪಿಎಂ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇರುವುದು ಸಾಭೀತಾಯಿತು. ಅದೇ ರೀತಿ ಜೆಡಿಎಸ್ ಮತ್ತು ಕೆಜೆಪಿ ಪಕ್ಷಗಳು ಸೇರಿದಂತೆ ಪಕ್ಷೇತರ ಸದಸ್ಯರು ಆಯಾ ಪಕ್ಷಗಳ ನೀತಿ ನಿಯಮಗಳನ್ನು ಗಾಳಿಗೆ ತೂರಿದವು. ವೃತ್ತ ನಿರೀಕ್ಷಕ ವಸಂತ್, ಉಪನಿರೀಕ್ಷಕ ವಿ. ಮುನಿರೆಡ್ಡಿ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಚುನಾವಣಾಧಿಕಾರಿ ತಹಸೀಲ್ದಾರ್ ಎಂ.ಎ. ಪದ್ಮ ಚುನಾವಣೆ ನಡೆಸಿಕೊಟ್ಟರು.
ಬಾಗೇಪಲ್ಲಿ ಪುರಸಭೆ ಚುನಾವಣೆ ಇತಿಹಾಸದಲ್ಲಿ ಸಂಸದರು ಮತ ಚಲಾಯಿಸಲು ಬಂದದ್ದು ಇದು ಎರಡನೇ ಬಾರಿ. ಮೊದಲಿಗೆ ಆರ್.ಎಲ್. ಜಾಲಪ್ಪ ಸಂಸದರಾಗಿದ್ದಾಗ ಅಂದಿನ ಪಪಂ ಅಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.