ಕೋಲಾರ

ಊರುಕೇರಿ ಗೊತ್ತಿಲ್ಲದವರಿಗೆ ಜೆಡಿಎಸ್ ಟಿಕೆಟ್: ಟೀಕೆ

Published On :

ಕೋಲಾರ: ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿರುವುದರಿಂದ ಚುನಾವಣೆಯನ್ನು ನಿರ್ಭಯವಾಗಿ ಎದುರಿಸುತ್ತೇನೆ. ಪ್ರತಿ ಬಾರಿಯೂ ವಿರೋಧಿಗಳು ಸೋಲಿಸುವುದಾಗಿ ಹೇಳುತ್ತಾ ಬಂದಿದ್ದಾರೆ. ಆದರೆ, ಧರ್ಮಕ್ಕೆ ಜಯ ಸಿಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹೇಳಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಯ ಬಳಿಕ ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನೇ ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇನೆ. ಖಂಡತ ಜನ ನನ್ನ ಕೈಬಿಡಲಾರರು ಎಂಬ ಆಶಾಭಾವನೆ ಇದೆ. ನಮ್ಮ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ನನ್ನನ್ನು ಗೆಲ್ಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್‌ಗೆ ಲೇವಡಿ: ಜೆಡಿಎಸ್‌ನವರು ಸ್ಥಳೀಯ ಪ್ರತಿಭಾವಂತರಿಗೆ ಟಿಕೆಟ್ ನೀಡದೆ ತಾರತಮ್ಯ ಮಾಡಿದ್ದಾರೆ. ಇದರಿಂದ ಆ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ. ಊರು ಕೇರಿ ತಿಳಿಯದ ಹಣವಂತನಿಗೆ ಟಿಕೆಟ್ ನೀಡಿ ಕೋಲಾರಕ್ಕೆ ತಂದು ಬಿಟ್ಟಿದ್ದಾರೆಂದು ಲೇವಡಿ ಮಾಡಿದರು.
ಜೆಡಿಎಸ್‌ನವರಿಗೆ ಬೇರೆ ಕಡೆಯಿಂದ ಅಭ್ಯರ್ಥಿಯನ್ನು ಕರೆದುಕೊಂಡು ಬರುವ ಅಗತ್ಯವೇನಿತ್ತು? ಲೋಕಲ್‌ನಲ್ಲೇ ಸಾಕಷ್ಟು ಪ್ರತಿಭಾವಂತರು ಇದ್ದರೂ ಕಡೆಗಣಿಸಿದ್ದಾರೆ. ಕ್ಷೇತ್ರದ ಜನರು ಹಣಕ್ಕೆ ಮಾರಿಕೊಳ್ಳುವವರಲ್ಲವೆಂಬುದು ಫಲಿತಾಂಶ ಬಂದ ನಂತರ ಗೊತ್ತಾಗುತ್ತದೆ ಎಂದರು.
ಬಿಜೆಪಿ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿರುವ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರ ವ್ಯಕ್ತಿಗತ ಚರಿತ್ರೆ ಏನೆಂಬುದು ಮತದಾರರಿಗೆ ಗೊತ್ತಾಗಿದೆ. ಸೋನಿಯಾ ಗಾಂಧಿ ಬಳಿ ಕರೆದುಕೊಂಡು ಹೋಗಿ ಟಿಕೆಟ್ ಕೊಡಿಸಿ ಶಾಸಕನನ್ನಾಗಿ ಮಾಡಲಾಯಿತು. ಹಣಕ್ಕಾಗಿ ಶಾಸಕ ಸ್ಥಾನವನ್ನು ಬಿಜೆಪಿಗೆ ಮಾರಿಕೊಂಡರು. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಹಾರಿದ ನಾರಾಯಣಸ್ವಾಮಿ ಹಣಕ್ಕೆ ಮತ್ತೊಂದು ಪಕ್ಷಕ್ಕೆ ಹಾರುವುದಿಲ್ಲವೆಂದು ಹೇಗೆ ಹೇಳಲು ಸಾಧ್ಯ? ಎಂದು ಪ್ರಶ್ನಿಸಿದರು.
ಎಕ್ಸ್‌ಪ್ರೆಸ್ ಕಾರಿಡಾರ್ ರದ್ದಾಗಲಿದೆ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವುದಿಲ್ಲ. ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ಬರುವುದು ಖಚಿತವಾಗಿದ್ದು, ಯೋಜನೆಗೆ ಆಗ ಖಂಡಿತ ಚಾಲನೆ ಸಿಗಲಿದೆ ಎಂದರು.
ಶಾಶ್ವತ ನೀರಾವರಿಗೆ ಬದ್ಧ: ಶಾಶ್ವತ ನೀರಾವರಿಗಾಗಿ ಎಸ್.ಎಂ.ಕೃಷ್ಣ ಕಾಲದಲ್ಲೇ ಯೋಜನೆ ರೂಪಿಸಲಾಗಿತ್ತು. ಪರಮಶಿವಯ್ಯ ವರದಿಯನ್ನು ತರಿಸಿಕೊಳ್ಳಲು ಬಜೆಟ್‌ನಲ್ಲಿ ಹಣ ನೀಡಲಾಗಿತ್ತು. ಆದರೆ, ನಂತರ ಬಂದ ಜೆಡಿಎಸ್ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರವಾಗಲೀ ಅಥವಾ ಬಿಜೆಪಿ ಸರ್ಕಾರವಾಗಲಿ ಆಸಕ್ತಿ ತೋರದೆ ನಿರ್ಲಕ್ಷಿಸಿದ್ದರಿಂದ ಯೋಜನೆ ಜಾರಿ ವಿಳಂಬವಾಗಿದೆ. ಎಲ್ಲರ ಹೋರಾಟದ ಫಲದಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ನೀರು ಕೊಡಲು ಬದ್ಧತೆ ಪ್ರದರ್ಶಿಸಿದೆ. ಎತ್ತಿನಹೊಳೆ ಯೋಜನೆಯ ಬಗ್ಗೆ ಇದ್ದ ಅಪನಂಬಿಕೆ, ಗೊಂದಲ ನಿವಾರಿಸಿ ಡಿಪಿಆರ್ ನಂತರ ಶಂಕುಸ್ಥಾಪನೆ ಮಾಡಲಾಗಿದೆ. ರಾಜ್ಯ ಸರ್ಕಾರ 12,500 ಕೋಟಿ ನಿಗದಿಪಡಿಸಿದ್ದು ಯಾವುದೇ ಕಾರಣಕ್ಕೂ ಯೋಜನೆ ನಿಲ್ಲದು. ಜನರಿಗೆ ನೀರು ಕೊಟ್ಟು ಪರಮಶಿವಯ್ಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತೇವೆಂದರು.
ಶಾಸಕ ಕೆ.ಎಂ.ನಾರಾಯಣಸ್ವಾಮಿ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ನಿಸಾರ್ ಅಹಮ್ಮದ್, ಅನಿಲ್‌ಕುಮಾರ್, ಬಿಸ್ಸೇಗೌಡ, ಬಾಲಾಜಿ ಚನ್ನಯ್ಯ, ವಾಣಿ ಕೃಷ್ಣಾರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.