ಸುದ್ದಿ ಸಂಕ್ಷೇಪ
ಜಿಯಾವುಲ್ಲಾಗೆ ಒಲಿದ ನಗರಸಭೆ ಅಧ್ಯಕ್ಷ ಸ್ಥಾನ
ಚಿಂತಾಮಣಿ: ನಗರದ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಶೀಘ್ರವೇ ನೆರೆಯ ಭಕ್ತರಹಳ್ಳಿ ಕೆರೆಗೆ ಪೈಪ್‌ಲೈನ್ ಮೂಲಕ ಚಿಂತಾಮಣಿಗೆ ಸಂಪರ್ಕ ಕಲ್ಪಿಸುವುದಾಗಿ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.
ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಮಾತನಾಡಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೆಡಿಎಸ್‌ನ ಜಿಯಾವುಲ್ಲಾ ರೆಹಮಾನ್ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಏಕೈಕ ಮಹಿಳಾ ನಗರಸಭೆ ಸದಸ್ಯರಾದ ಕಾಂಗ್ರೆಸ್‌ನ ಎನ್.ತುಳಸಿ ರವಿ ಅವರನ್ನು ಅಭಿನಂದಿಸಿದರು.
ಬಿಸಿಎಂ(ಎ) ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜಿಯಾವುಲ್ಲಾ ರೆಹಮಾನ್ ಹಾಗೂ ಅನ್ವರ್ ಅಲಿಯಾಸ್ ಅಣ್ಣು ನಾಮಪತ್ರ ಸಲ್ಲಿಸಿದ್ದರು. ಇಬ್ಬರು ಅಭ್ಯರ್ಥಿಗಳಿಗೂ 50-50 ಒಪ್ಪಂದದಂತೆ 15 ತಿಂಗಳ ಕಾಲ ಒಬ್ಬೊಬ್ಬರಿಗೂ ಆಡಳಿತ ನಡೆಸಲು ತೀರ್ಮಾನಿಸಲಾಯಿತು. ಚುನಾವಣಾಧಿಕಾರಿಯಾಗಿ ಚಿಕ್ಕಬಳ್ಳಾಪುರದ ನಾಗರಾಜಶೆಟ್ಟಿ ಕಾರ್ಯ ನಿರ್ವಹಿಸಿದರು.
ಅನಧಿಕೃತ ಕಸಾಯಿಖಾನೆ ತೆರವು
ಮುಳಬಾಗಲು: ತಾಲೂಕಿನ ನಂಗಲಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿದ್ದ ಅನಧಿಕೃತ ಕಸಾಯಿಖಾನೆಗಳನ್ನು ಬುಧವಾರ ಗ್ರಾಪಂ ವತಿಯಿಂದ ತಾಪಂ ಇಒ ಅರುಣಕುಮಾರ್ ತೆರವುಗೊಳಿಸಿದರು. ಮಾಂಸದ ಅಂಗಡಿಗಳಿಂದ ಗ್ರಾಮದಲ್ಲಿ ನೈರ್ಮಲ್ಯ ಹದಗೆಟ್ಟಿತ್ತು. ಹೀಗಾಗಿ ಅನಧಿಕೃತ ಮಾಂಸದ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಸಲ್ಲಿಸಿದ ಮನವಿ ಮೇರೆಗೆ ದಾಳಿ ನಡೆಸಲಾಯಿತು. ನಂಗಲಿ ಪಿಎಸ್‌ಐ ಕೆ.ವಿ.ಶ್ರೀಧರ್, ಪಿಡಿಒ ಸರಿತಾ, ಗ್ರಾಪಂ ಅಧ್ಯಕ್ಷೆ ಸವಿತಾ ಅಮರೇಂದ್ರ ದಾಳಿಯಲ್ಲಿ ಭಾಗವಹಿಸಿದ್ದರು.
ಹುಲ್ಲು ಮೆದೆಗೆ ಬೆಂಕಿ: ಹುಲ್ಲು ಭಸ್ಮ
ಮುಳಬಾಗಲು: ಆಕಸ್ಮಿಕ ಬೆಂಕಿ ತಗುಲಿ ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ 47 ಲೋಡ್ ಹುಲ್ಲು ಮೆದೆ ಮಂಗಳವಾರ ಸಂಜೆ ಭಸ್ಮವಾಗಿದೆ. ರೈತರಾದ ಬಾಲಕೃಷ್ಣ, ದೇವರಪ್ಪ, ಈಶ್ವರಮ್ಮ ರವರಿಗೆ ಸೇರಿದ ಮೆದೆ ಇದಾಗಿದ್ದು ಸುಮಾರು ಒಂದುವರೆ ಲಕ್ಷ ರುಪಾಯಿಗೂ ಅಧಿಕ ನಷ್ಟವಾಗಿದೆ. ಮುಳಬಾಗಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಮಾರಾಟ; ವ್ಯಕ್ತಿ ಬಂಧನ
ಮುಳಬಾಗಲು: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಪಳ್ಳಿಗರಪಾಳ್ಯದ ಸುಬ್ರಮಣಿ ಎಂಬುವನನ್ನು ಪಿಎಸ್‌ಐ ಮೇಲ್ವಿನ್ ಪ್ರಾನ್ಸಿಸ್ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಮದ್ಯದ ಬಾಟಲಿಯೊಂದಿಗೆ ನಗದು ವಶಪಡಿಸಿಕೊಳ್ಳಲಾಗಿದೆ.
ಯುವಕ ನೇಣಿಗೆ ಶರಣು
ಮುಳಬಾಗಲು: ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ತಾಲೂಕಿನ ಕಮ್ಮದಟ್ಟಿ ಗ್ರಾಮದ ಶಂಕರ್(32) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಬೈಕ್, ಬಸ್ ಡಿಕ್ಕಿ: ಇಬ್ಬರ ಸಾವು
ಮುಳಬಾಗಲು: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಲ್ಲಿ ಚೆನ್ತೈನಿಂದ ಮಡಕೇರಿಗೆ ಹೋಗುತ್ತಿದ್ದ ರಾಜಹಂಸ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮೃತರನ್ನು ಮುಳಬಾಗಲು ಗುಣಗಂಟೆ ಪಾಳ್ಯದ ಮಧು(23) ಮತ್ತು ಕುರುಬರಪಾಳ್ಯದ ಅಜಯ್( 23) ಎನ್ನಲಾಗಿದೆ. ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಮತ್ತು ಸಬ್‌ಇನ್ಸ್‌ಪೆಕ್ಟರ್ ಮೇಲ್ವಿನ್ ಪ್ರಾನ್ಸಿಸ್ ಸ್ಥಳಕ್ಕೆ ಭೇಟಿ ನೀಡಿ ಚಾಲಕರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜೃಂಭಣೆಯ ಹಂಸವಾಹನೋತ್ಸವ
ಕೆಜಿಎಫ್: ಕ್ಷೇತ್ರದ ಸುಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದ 79ನೇ ಬ್ರಹ್ಮರಥೋತ್ಸವ ಪ್ರಯುಕ್ತ ಕೇರಳ ಶೈಲಿಯಲ್ಲಿ ಮಲಯಾಳಿ ಉತ್ಸವ ಸಮಿತಿ ವತಿಯಿಂದ ಹಂಸವಾಹನೋತ್ಸವವು ವಿಜೃಂಭಣೆಯಿಂದ ನಡೆಯಿತು.
ಕನ್ನಡ ತಾಯಿ ಭುವನೇಶ್ವರಿ ರಥ, ಸ್ತಬ್ದಚಿತ್ರ, ಹೂಕಾವಡಿ, ಗೋಪುರಕಾವಡಿ, ಪ್ರಾಚೀನ ಕಲಾರೂಪಂ, ವನಿತಾ ಸಿಂಗಾರಿ ಮೇಳ, ಭೂತನುರಿತ, ಪಂಚವಾದ್ಯ, ಚಂಡಮೇಳ, ಮಹಿಳಾ ಸಿಂಗಾರಿ ಮೇಳದೊಂದಿಗೆ ಸ್ವರ್ಣನಗರ, ಗೀತಾರಸ್ತೆ, ಸೂರಜ್‌ಮುಲ್ ವೃತ್ತ, ಗಾಂಧಿ ವೃತ್ತ, ಪ್ರಿಚರ್ಡ್‌ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ರಥೋತ್ಸವದಲ್ಲಿ ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶಗಳು ಸೇರಿದಂತೆ ರಾಜ್ಯದ ವಿವಿಧ ತಾಲೂಕುಗಳಿಂದ ಮತ್ತು ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದ ಲಕ್ಷಾಂತರ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಹಂಸವಾಹನೋತ್ಸವ ಪ್ರಯುಕ್ತ ಗುಲಾಬಿ, ಮಲ್ಲಿಗೆ ಮುಂತಾದ ಪುಷ್ಪಗಳಿಂದ ಅಲಂಕೃತಗೊಂಡ ಶ್ರೀದೇವಿ ಹಾಗೂ ಭೂದೇವಿಯರೊಂದಿಗೆ ವಿವಿಧ ಪೂಜೆಗಳ ಆರಾಧನೆ, ಸಂಗೀತ ಕಾರ್ಯಕ್ರಮ, ವನಿತಾ ಶಿಂಗಾರಿ ಮೇಳ, ದೇವಿ ರಕ್ಷಾ, ಪಗಲ್‌ಪುರಂ, ಭರತ ನಾಟ್ಯ, ಏರ್‌ಟೆಲ್ ಸೂಪರ್ ಸಿಂಗರ್ಸ್ ವತಿಯಿಂದ ರಸಮಂಜರಿ, ಮನಮೋಹಕ ವರ್ಣರಂಜಿತ ಬಾಣ ಬಿರುಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

